ಶುಕ್ರವಾರ, ಜುಲೈ 30, 2021
23 °C

ಸಂಪಾದಕೀಯ | ಕೋವಿಡ್‌ ನಿಯಂತ್ರಣ; ಇನ್ನಷ್ಟು‌ ವ್ಯವಸ್ಥಿತ ನಡೆ ಇಂದಿನ ತುರ್ತು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ಬಹುಪಾಲು ರಾಷ್ಟ್ರಗಳಿಗೆ ವ್ಯಾಪಿಸಿರುವ ಕೋವಿಡ್‌–19 ಸಾಂಕ್ರಾಮಿಕದ ಮೊದಲ ಪ್ರಕರಣ ಮಾರ್ಚ್‌ 8ರಂದು ಕರ್ನಾಟಕದಲ್ಲಿ ಪತ್ತೆಯಾಯಿತು. ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸಿರುವ ಸೋಂಕು, ಬೆಂಗಳೂರು ಹಾಗೂ ಇತರ ಹಲವು ನಗರ ಪ್ರದೇಶಗಳಲ್ಲಿ ಅಂಕೆಗೆ ಸಿಗದಂತೆ ವ್ಯಾಪಿಸುತ್ತಿದೆ.

ಲಾಕ್‌ಡೌನ್‌ ಜಾರಿ ಸೇರಿದಂತೆ ಆರಂಭದ ಎರಡು ತಿಂಗಳ ಕಾಲ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು. ಸೋಂಕಿನ ಪ್ರಕರಣಗಳು ಹೆಚ್ಚದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದುದಕ್ಕೆ ರಾಜ್ಯ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘನೆಯನ್ನೂ ಪಡೆದಿತ್ತು. ಆದರೆ, ಒಂದು ತಿಂಗಳಿಂದ ಈಚೆಗೆ ಸೋಂಕು ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಹತೋಟಿ ಕಳೆದುಕೊಂಡಂತೆ ಕಾಣುತ್ತಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16 ಸಾವಿರದ ಗಡಿ ದಾಟಿರುವ ಸಂದರ್ಭದಲ್ಲೇ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು, ಚಿಕಿತ್ಸೆ, ಹಾಸಿಗೆಗಳು ಮತ್ತು ಅಗತ್ಯ ವೈದ್ಯಕೀಯ ಸಾಧನಗಳನ್ನು ಹೊಂದಿಸಲು ರಾಜ್ಯ ಸರ್ಕಾರ ಏದುಸಿರುಬಿಡುತ್ತಿದೆ. ಸುಮಾರು 1.2 ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿಯಲ್ಲಿರುವಾಗಲೇ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಹಾಸಿಗೆಗಳ ಕೊರತೆ ಎದುರಾಗಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಇತರ ಜಿಲ್ಲೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿ ಇಲ್ಲ.

ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗೆ ಸಜ್ಜುಗೊಳ್ಳುವ ವಿಚಾರದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಯೋಜನಾ ಬದ್ಧವಾಗಿ ಕೆಲಸ ಮಾಡದಿರುವುದೇ ಈ ಸ್ಥಿತಿಗೆ ಕಾರಣ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಸರ್ಕಾರಿ ಆಸ್ಪತ್ರೆಗಳು ಬಹುತೇಕ ಭರ್ತಿಯಾಗಿವೆ. ಖಾಸಗಿ ಆಸ್ಪತ್ರೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಳಸಿ ಕೊಳ್ಳುವ ವಿಷಯದಲ್ಲಿ ಸರ್ಕಾರ ಈ ಹಂತದಲ್ಲಿ ಕಸರತ್ತು ನಡೆಸಿರುವುದು ಈ ಆರೋಪವನ್ನು ಪುಷ್ಟೀಕರಿಸುವಂತಿದೆ.

ಕೋವಿಡ್‌–19 ನಿಯಂತ್ರಣದ ವಿಚಾರದಲ್ಲಿ ರಾಜ್ಯದ ಸಚಿವರ ನಡುವೆಯೇ ಸಮನ್ವಯ ಇಲ್ಲ ದಿರುವುದು ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮುಗ್ಗರಿಸಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೋವಿಡ್‌ ನಿಯಂತ್ರಣ ಮತ್ತು ರೋಗಿಗಳ ಚಿಕಿತ್ಸೆಯ ನಿರ್ವಹಣೆಯ ವಿಷಯದಲ್ಲಿ ಪದೇ ಪದೇ ಉಸ್ತುವಾರಿಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌, ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಲಾಯಿತು. ಆದರೆ, ಈ ಕಾರ್ಯಪಡೆಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ನಿಗದಿಗೊಳಿಸಲಿಲ್ಲ.

ಬಹುಮಟ್ಟಿಗೆ ಸಲಹೆ ನೀಡುವುದಕ್ಕಷ್ಟೇ ಸೀಮಿತಗೊಳಿಸಲಾಯಿತು. ಅದಾದ ಬಳಿಕ, ಕೋವಿಡ್‌ ನಿರ್ವಹಣೆಯ ಪೂರ್ಣ ಉಸ್ತುವಾರಿಯನ್ನು ಸುಧಾಕರ್‌ ಅವರಿಗೆ ವಹಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದರು. ಇದರಿಂದ ಶ್ರೀರಾಮುಲು ಮುನಿಸಿಕೊಂಡಿದ್ದಾರೆ ಎಂಬ ಮಾತು ಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಲೇ ಬೆಂಗಳೂರು ನಗರದ ಉಸ್ತುವಾರಿಯನ್ನು ಸುಧಾಕರ್‌ ಅವರಿಗೆ ಒಪ್ಪಿಸಿ, ಉಳಿದ ಜಿಲ್ಲೆಗಳನ್ನು ಶ್ರೀರಾಮುಲು ಅವರ ಉಸ್ತುವಾರಿಗೆ ನೀಡುವ ತೀರ್ಮಾನ ಹೊರಬಿತ್ತು. ಅದರ ಬೆನ್ನಲ್ಲೇ ಕೋವಿಡ್‌ ಸಂಬಂಧಿ ವಿಚಾರಗಳಲ್ಲಿ ಸರ್ಕಾರದ ವಕ್ತಾರ ರನ್ನಾಗಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರನ್ನು ನಿಯೋಜಿಸಲಾಯಿತು.

ತಮ್ಮ ಕುಟುಂಬದ ಸದಸ್ಯರಲ್ಲಿ ಕೊರೊನಾ‌ ಸೋಂಕು ಪತ್ತೆಯಾದ ಕಾರಣದಿಂದ ಸಚಿವ ಸುಧಾಕರ್‌ ಕ್ವಾರಂಟೈನ್‌ಗೆ ಒಳಗಾಗಿದ್ದರು. ಈ ಅವಧಿಯಲ್ಲಿ ಬೆಂಗಳೂರು ನಗರದ ಕೋವಿಡ್‌ ಉಸ್ತುವಾರಿ ಹೊಣೆಯನ್ನು ಕಂದಾಯ ಸಚಿವ ಆರ್‌.ಅಶೋಕ ಅವರಿಗೆ ವಹಿಸಲಾಯಿತು. ಈಗ ಸುಧಾಕರ್‌ ಕೆಲಸಕ್ಕೆ ಮರಳಿದ್ದಾರೆ. ಹೊಣೆಗಾರಿಕೆಯು ಹೀಗೆ ಪದೇ ಪದೇ ಪಲ್ಲಟಗೊಂಡಿದ್ದರ ನಡುವೆಯೂ ಯಡಿಯೂರಪ್ಪ ಅವರೇ ಸರಣಿ ಸಭೆಗಳನ್ನು ನಡೆಸುತ್ತಾ, ಪರಿಸ್ಥಿತಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.

‘ಸರ್ಕಾರದ ಮಟ್ಟದಲ್ಲಿ ಇರುವ ಗೊಂದಲವು ಆಡಳಿತ ಯಂತ್ರವನ್ನೂ ಆವರಿಸಿದಂತೆ ಕಾಣಿಸುತ್ತಿದೆ. ಯಾರ ಮಾತನ್ನು ಕೇಳ ಬೇಕು ಎಂಬ ಗೊಂದಲ ಅಧಿಕಾರಿಗಳಲ್ಲಿ ಇದೆ’ ಎಂಬ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಮನದಟ್ಟು ಮಾಡಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಕೋವಿಡ್‌ನಂತಹ ಪಿಡುಗನ್ನು ನಿಯಂತ್ರಿಸುವ ಹಾಗೂ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ದೊರಕಿಸುವ ವಿಚಾರದಲ್ಲಿ ಸಚಿವರು ಸಮನ್ವಯ ದಿಂದ ಕೆಲಸ ಮಾಡಬೇಕಾದುದು ಅಗತ್ಯ. ಇಂತಹ ವಿಚಾರದಲ್ಲಿ ಪ್ರತಿಷ್ಠೆ, ರಾಜಕೀಯ ಮೇಲಾಟ ಸಲ್ಲದು.

ಗೊಂದಲಗಳ ನಿವಾರಣೆಗೆ ಮುಖ್ಯಮಂತ್ರಿ ದೃಢವಾದ ಕ್ರಮ ಕೈಗೊಳ್ಳಬೇಕಾಗಿದೆ. ಎಲ್ಲ ಸಚಿ ವರ ನಡುವೆ ಸಮನ್ವಯ ಸಾಧಿಸುವ ಮೂಲಕ ಕೋವಿಡ್‌ ನಿಯಂತ್ರಣ ಹಾಗೂ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಶರವೇಗದಲ್ಲಿ ಸಜ್ಜುಗೊಳಿಸಬೇಕಾದ ಸವಾಲು ಅವರ ಮುಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು