ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣು–ತರಕಾರಿ: ರೈತರಿಂದಗ್ರಾಹಕರಿಗೆ ತಲುಪಿಸುವ ಕೆಲಸ ಆಗಲಿ

Last Updated 1 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೊರೊನಾ–2 ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರವು ಈ ತಿಂಗಳ 14ರವರೆಗೆ ದೇಶದಾದ್ಯಂತ ದಿಗ್ಬಂಧನ ವಿಧಿಸಿದೆ. ಈ ಕಾರಣಕ್ಕಾಗಿ, ಏಳು ದಿನಗಳಿಂದ ರಾಜ್ಯದಾದ್ಯಂತ ವ್ಯಾಪಾರ–ವಹಿವಾಟು ಬಹುಮಟ್ಟಿಗೆ ಸ್ಥಗಿತಗೊಂಡಿದೆ.ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ರೈತರು ಕಂಗಾಲಾಗಿದ್ದಾರೆ. ಇದೇ ಕಾರಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೊಬ್ಬರು ಟ್ರ್ಯಾಕ್ಟರ್‌ ಲೋಡ್‌ನಷ್ಟು ದ್ರಾಕ್ಷಿಯನ್ನು ತಿಪ್ಪೆಗೆ ಸುರಿದು, ಆಕ್ರೋಶ ಹೊರಹಾಕಿದ್ದಾರೆ.

ಪಾಂಡವಪುರದಲ್ಲಿ ಕೆರೆಗೆ ಟೊಮೆಟೊ,ಕ್ಯಾಪ್ಸಿಕಂ ಸುರಿದು ರೈತರು ನೋವು ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಕ್ಯಾನ್‌ಗಟ್ಟಲೆ ಹಾಲನ್ನು ಕಾಲುವೆಗೆ ಚೆಲ್ಲಿದ್ದಾರೆ. ಕೋಲಾರ, ರಾಮನಗರದ ಕಡೆ ತರಕಾರಿ ಕೊಯ್ಲು ಮಾಡದೆ ಹೊಲದಲ್ಲೇ ಬಿಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ಯಂತ್ರಗಳು ಬಾರದೇ ಭತ್ತ ಕೊಯ್ಲಾಗಿಲ್ಲ. ಶಿರಸಿಯಲ್ಲಿ ಅನಾನಸ್‌; ತರೀಕೆರೆ, ಬಾಳೆಹೊನ್ನೂರು, ಕೊಪ್ಪ ಭಾಗಗಳಲ್ಲಿ ಬಾಳೆ, ಮಾವು ಖರೀದಿಸಲು ಗುತ್ತಿಗೆದಾರರು ಬರುತ್ತಿಲ್ಲ ಎಂದು ವರದಿಯಾಗಿದೆ.

ವರ್ಷವಿಡೀ ಈ ಫಸಲಿಗಾಗಿಯೇ ಲಕ್ಷಾಂತರ ರೂಪಾಯಿ ಬಂಡವಾಳ ವ್ಯಯಿಸಿ, ಶ್ರಮವಹಿಸಿ ದುಡಿದ ರೈತರು ಹತಾಶರಾಗಿದ್ದಾರೆ. ಇವೆಲ್ಲ ಬೆಳಕಿಗೆ ಬಂದ ಪ್ರಕರಣಗಳು. ಬೆಳಕಿಗೆ ಬಾರದ ಸಮಸ್ಯೆಗಳು ಇನ್ನೆಷ್ಟಿವೆಯೋ ಗೊತ್ತಿಲ್ಲ. ರೈತರ ಆಕ್ರೋಶದಿಂದ ಎಚ್ಚೆತ್ತ ರಾಜ್ಯ ಸರ್ಕಾರ ಈಗ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುಮತಿ ನೀಡಲು ಮುಂದಾಗಿದೆ.‘ಅಗ್ರಿ ವಾರ್‌ರೂಂ’ ಆರಂಭಿಸಿದೆ.

ಸಂಸ್ಕರಣಾ ಘಟಕಗಳ ಮೂಲಕ ಟೊಮೆಟೊ ಕೆಚಪ್ ತಯಾರಿಕೆಗೆ ಸೂಚನೆ,ಹಾಪ್‍ಕಾಮ್ಸ್ ಮೂಲಕ ತರಕಾರಿ ಪೂರೈಕೆಗೆ ಅವಕಾಶ ಕಲ್ಪಿಸಿದೆ. ಹೊರ ರಾಜ್ಯಗಳಿಗೆ ಹಣ್ಣು– ತರಕಾರಿ ಸಾಗಣೆಗೆ ಅನುವು ಮಾಡಿಕೊಡುವುದಾಗಿ ಹೇಳಿದೆ. ವೈನರಿಗಳಲ್ಲಿ ಉತ್ಪಾದನೆ ಮುಂದುವರಿಸಲು ಸೂಚಿಸಿದೆ. ಈ ಬಗೆಯ ಉಪಕ್ರಮಗಳು ಸ್ವಾಗತಾರ್ಹ.

ಆದರೆ, ಸರ್ಕಾರದ ಈ ಘೋಷಣೆಗಳು ತ್ವರಿತಗತಿಯಲ್ಲಿ ಹಾಗೂ ಸಮರ್ಪಕವಾಗಿ ಅನುಷ್ಠಾನವಾಗಬೇಕು. ಕೃಷಿ ಉತ್ಪನ್ನ ಮಾರಾಟಗಾರರಿಗೆ ಪಾಸ್‌ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳಿವೆ. ಹಾಗಾಗಿ, ಈಗ ತುರ್ತಾಗಿ ಆಗಬೇಕಾಗಿರುವುದು ಕೊಯ್ಲಾಗಿರುವ ಹಣ್ಣು, ತರಕಾರಿಗಳನ್ನು ಕಾಪಿಡುವ ಕೆಲಸ. ಇದಕ್ಕಾಗಿ ಆಯಾ ಪ್ರದೇಶದಲ್ಲಿರುವ ಶೈತ್ಯಾಗಾರಗಳನ್ನು ಗುರುತಿಸಬೇಕು. ಕೊಯ್ಲಾಗಿರುವ ಉತ್ಪನ್ನಗಳನ್ನು ಅಲ್ಲಿಟ್ಟು ಕಾಪಿಡಬೇಕು.

ಈ ಪ್ರಕ್ರಿಯೆಗೆ ಫುಡ್‌ಪಾರ್ಕ್‌ಗಳನ್ನು ಬಳಸಬಹುದು. ಇದು ಸವಾಲಿನ ಕೆಲಸವಾದರೂ ಅನಿವಾರ್ಯ. ನಂತರ, ಹಾಪ್‌ಕಾಮ್ಸ್‌ ಬಳಸಿಕೊಂಡು ಹಳ್ಳಿ ಹಳ್ಳಿಗಳಿಂದ ವಾಹನಗಳ ಮೂಲಕ ರೈತರಿಂದ ಹಣ್ಣು– ತರಕಾರಿ ಖರೀದಿಸಿ, ಆಯಾ ಜಿಲ್ಲೆಯ ಗ್ರಾಹಕರಿಗೆ ಪೂರೈಸಬೇಕು. ಅಸ್ಸಾಂನ ಜೋಹ್ರಾತ್‌ನಲ್ಲಿ ಅಲ್ಲಿನ ಜಿಲ್ಲಾಡಳಿತ ಈ ವಿಧಾನ ಅನುಸರಿಸುತ್ತಿದೆ. ಬೆಂಗಳೂರಿನ ಕಾರ್ಪೊರೇಟರ್ ಒಬ್ಬರು ಇಂಥದ್ದೇ ಪ್ರಯೋಗ ಮಾಡುತ್ತಿದ್ದಾರೆ. ಮೈಸೂರಿನಲ್ಲೂ ಈ ಪ್ರಯತ್ನ ಯಶಸ್ವಿಯಾಗಿದೆ.

ಕೊಪ್ಪಳದಲ್ಲಿ ರೈತ ಉತ್ಪಾದಕ ಸಂಸ್ಥೆಯು ಬೆಳೆಗಾರರಿಂದ ಗ್ರಾಹಕರಿಗೆ ನೇರವಾಗಿ ಹಣ್ಣು– ತರಕಾರಿ ತಲುಪಿಸುತ್ತಿದೆ. ಹಣ್ಣು- ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ‘ರೈತ ಸಂತೆ’ಗಳಂತಹ ಹಲವು ಮಾದರಿಗಳಿವೆ. ಈ ಸಂದರ್ಭದಲ್ಲಿ ಅವುಗಳನ್ನು ಪುನಶ್ಚೇತನಗೊಳಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಬೇಕು. ಇದಕ್ಕೆ ಆಂಧ್ರಪ್ರದೇಶದ ‘ರೈತು ಬಜಾರ್‌’ ಮಾದರಿಯನ್ನು ಅನುಸರಿಸಬಹುದು.

ಅಲ್ಲಿ ಸರ್ಕಾರವೇ ಹಳ್ಳಿಗಳಿಂದ ರೈತರ ಉತ್ಪನ್ನಗಳನ್ನು ಖರೀದಿಸಿ ತಂದು ಬಜಾರ್‌ ಮೂಲಕ ಗ್ರಾಹಕರಿಗೆ ತಲುಪಿಸುತ್ತದೆ. ನಮ್ಮ ರಾಜ್ಯದಲ್ಲಿ ಹದಿನೈದು ಪ್ರಾಂತೀಯ ಸಾವಯವ ಕೃಷಿಕರ ಸಹಕಾರ ಸಂಘಗಳಿವೆ. ಜತೆಗೆ, ಹಾಪ್‌ಕಾಮ್ಸ್‌ ಮಳಿಗೆಗಳು ಇವೆ. ನಬಾರ್ಡ್‌, ತೋಟಗಾರಿಕೆ ಇಲಾಖೆಯಿಂದ ಆರಂಭವಾಗಿರುವ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಇವೆ.

ಎಫ್‌ಪಿಒಗಳು ಈಗಾಗಲೇ ಹಣ್ಣು–ತರಕಾರಿ, ದವಸ–ಧಾನ್ಯಗಳನ್ನು ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳನ್ನು ಬಳಸಿಕೊಂಡರೆ, ರೈತರು– ಗ್ರಾಹಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇಂತಹ ಯಾವುದೇ ಪ್ರಯತ್ನ ನಡೆಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯವನ್ನು ಕಡೆಗಣಿಸಬಾರದು.

ಹಾಲಿನಿಂದ ಪೌಡರ್‌; ಹಣ್ಣಿನಿಂದ ಜಾಮ್‌, ಜೆಲ್ಲಿ, ಸಾಸ್‌, ಕೆಚಪ್‌, ಉಪ್ಪಿನಕಾಯಿ ತಯಾರಿಕೆ, ಡಿಹೈಡ್ರೇಟೆಡ್ ಉತ್ಪನ್ನಗಳನ್ನು ಸಿದ್ಧಪಡಿಸುವಂತಹ ಪ್ರಯತ್ನಗಳಿಗೆ ಸರ್ಕಾರ ಇನ್ನಷ್ಟು ಬಲ ತುಂಬಬೇಕು. ಕೃಷಿ ಉತ್ಪನ್ನಗಳು ವ್ಯರ್ಥವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸರ್ಕಾರವೇ ಹೊರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT