ಶುಕ್ರವಾರ, ಅಕ್ಟೋಬರ್ 23, 2020
22 °C
ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳ ಮೂಲಕ ಆಸ್ಪತ್ರೆಗಳಿಗೆ ರೋಗಿಗಳು ನಿರಾತಂಕವಾಗಿ ಬರುವಂತೆ ಮಾಡಬೇಕಾದ ಹೊಣೆ ಸರ್ಕಾರದ ಮೇಲಿದೆ

ಸಂಪಾದಕೀಯ | ಕೋವಿಡ್‌ ಮತ್ತು ಹೃದಯಾಘಾತ ಇನ್ನಷ್ಟು ಎಚ್ಚರಿಕೆ ಇರಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ಅವಧಿಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ವೈರಸ್‌, ಕೋವಿಡ್‌– 19 ರೋಗಕ್ಕೆ ಕಾರಣವಾಗುತ್ತಿದ್ದರೂ ಪರೋಕ್ಷವಾಗಿ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳನ್ನೂ ತಂದೊಡ್ಡುತ್ತಿದೆ. ಮಾನಸಿಕ ಒತ್ತಡ, ದೈಹಿಕ ಚಟುವಟಿಕೆ ಕೊರತೆ ಹಾಗೂ ಆರೋಗ್ಯಕರವಲ್ಲದ ಆಹಾರ ಸೇವನೆಯು ಹೃದ್ರೋಗ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂಬುದು ತಜ್ಞರು ಹೇಳಿರುವ ಮಾತು. ಕಳೆದ ವರ್ಷದ ಆಗಸ್ಟ್‌ ಮತ್ತು ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಅದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ಹೃದಯಾಘಾತ ಪ್ರಕರಣಗಳ ಪ್ರಮಾಣ ಶೇಕಡ 30ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಇದು ಕಳವಳಕಾರಿ ಸಂಗತಿ.

ದೇಶದಲ್ಲಿ  ರೋಗರುಜಿನಗಳಿಂದ ಮೃತಪಡುತ್ತಿರುವವರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಶೇ 63ರಷ್ಟು ಸಾವುಗಳು ಸಂಭವಿಸುತ್ತಿವೆ. ಇವುಗಳಲ್ಲಿ ಹೃದಯದ ಕಾಯಿಲೆಗಳಿಂದ ಸಾವಿಗೀಡಾಗುವವರ ಪ್ರಮಾಣ ಶೇ 26ರಷ್ಟು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ವಿಶ್ವ ಹೃದಯ ದಿನದ ಅಂಗವಾಗಿ ಇಲಾಖೆ ಈ ಮಾಹಿತಿ ಪ್ರಕಟಿಸಿದೆ.

ಆದರೆ, ಪ್ರತಿವರ್ಷದ ಹೃದಯ ದಿನದಂತಲ್ಲದೆ ಆರೋಗ್ಯ ಸಮಸ್ಯೆಗಳನ್ನು ಬೇರೆಯದೇ ಆಯಾಮದಿಂದ ವಿಶ್ಲೇಷಿಸಿ, ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯವನ್ನು ಕೊರೊನಾ ವೈರಾಣು ಸೃಷ್ಟಿಸಿದೆ. ಲಾಕ್‌ಡೌನ್‌ ಪರಿಣಾಮವಾಗಿ ಉಂಟಾದ ಉದ್ಯೋಗ ನಷ್ಟ, ವೇತನ ಕಡಿತ, ಕೆಲಸದ ಅವಧಿಯಲ್ಲಿನ ಹೆಚ್ಚಳದಂತಹ ಕಾರಣಗಳಿಂದ ಜನರಲ್ಲಿ ಉದ್ವೇಗ, ಅಭದ್ರತೆ, ಮಾನಸಿಕ ಒತ್ತಡ ಹೆಚ್ಚುತ್ತಿದೆ. ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಉದ್ಯೋಗಿಗಳಲ್ಲಿ ತೀವ್ರ ಉದ್ವೇಗ ಕಾಣಿಸಿಕೊಳ್ಳುವುದಕ್ಕೆ ಕೆಲಸದ ಅವಧಿ ಹೆಚ್ಚಳವೂ ಪ್ರಮುಖ ಕಾರಣ ಎಂಬ ವರದಿ ಇದೆ.

ಜಿಮ್‌ನಲ್ಲಿ ಕಸರತ್ತು ನಡೆಸುವ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳು ಕಡಿಮೆಯಾಗಿದ್ದುದು ಇದಕ್ಕೆ ಇನ್ನೊಂದು ಕಾರಣ. ನಿತ್ಯ ವ್ಯಾಯಾಮ ಮಾಡುತ್ತಾ ದೃಢ ಆರೋಗ್ಯ ಹೊಂದಿದ್ದ ಕೆಲವು ಯುವಕರೂ ಹೃದಯ ಸಮಸ್ಯೆಗೆ ಗುರಿಯಾಗಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಲಭಿಸದಿರುವುದೂ ಹೃದ್ರೋಗಿಗಳ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿರಬಹುದು. ಆದರೆ, ಕೋವಿಡ್‌ ಕಾಣಿಸಿಕೊಳ್ಳುವುದಕ್ಕಿಂತ ಮುಂಚಿನ ಪರಿಸ್ಥಿತಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿದ್ದು, ಸಾಯುವ ರೋಗಿಗಳ ಪ್ರಮಾಣ ಹೆಚ್ಚಳವಾಗಿದೆ ಎಂಬ ತಜ್ಞರ ಹೇಳಿಕೆಯು ಸಮಸ್ಯೆಯ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತದೆ.

ಕೋವಿಡ್‌ ಹೊರತಾದ ರೋಗಿಗಳ ಚಿಕಿತ್ಸೆಗೆ ಆದ್ಯತೆ ಸಿಗುತ್ತಿಲ್ಲ. ಆಸ್ಪತ್ರೆಯೇ ಕೊರೊನಾ‌ ಸೋಂಕು ವಾಹಕವಾಗಬಹುದಾದ ಆತಂಕವೂ ಚಿಕಿತ್ಸೆಯ ಅಗತ್ಯವಿದ್ದವರು ಸಹ ಆಸ್ಪತ್ರೆಗಳ ಕಡೆ ಮುಖ ಮಾಡದಿರುವುದಕ್ಕೆ ಕಾರಣವಾಗಿರಬಹುದು. ಹೀಗಾಗಿ, ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳ ಮೂಲಕ ಆಸ್ಪತ್ರೆಗಳಿಗೆ ರೋಗಿಗಳು ನಿರಾತಂಕವಾಗಿ ಬರುವಂತೆ ಮಾಡಬೇಕಾದ ಹೊಣೆ ಸರ್ಕಾರದ ಮೇಲಿದೆ.

ಕೋವಿಡ್‌ನಿಂದ ಗುಣಮುಖರಾದ ಕೆಲವು ರೋಗಿಗಳಲ್ಲಿ ಹೃದಯಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡ ವರದಿಗಳು ಇವೆ. ಇವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಶ್ವಾಸಕೋಶ, ಮೆದುಳು, ಮೂತ್ರಪಿಂಡದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗಿ ಆಯಾ ಅಂಗಗಳಿಗೆ ಗಾಸಿಯಾಗುತ್ತಿರುವುದು, ಕೋವಿಡ್‌ನಿಂದ ಗುಣಮುಖರಾದವರ ಮೇಲೆ ಜರ್ಮನಿಯಲ್ಲಿ ನಡೆಸಿದ ಪರೀಕ್ಷೆಯಿಂದ ಪತ್ತೆಯಾಗಿದೆ ಎಂಬ ವರದಿಗಳಿವೆ. ಹೀಗಾಗಿ, ಕೋವಿಡ್ ರೋಗಿಗಳು ಸೂಕ್ತ ಚಿಕಿತ್ಸೆ ಪಡೆಯಬೇಕಾದುದು ಅವಶ್ಯಕ. ವಿಕಿರಣ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್‌ ರೋಗಿಗಳು, ಮಧುಮೇಹ, ರಕ್ತದೊತ್ತಡ ಇರುವ 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಇಂತಹ ವ್ಯಕ್ತಿಗಳಿಗೆ ಕೊರೊನಾ‌ ಸೋಂಕು ತಗುಲಿದರೆ ಹೃದಯ ಹಾಗೂ ರಕ್ತದ ಸಂಚಲನದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞವೈದ್ಯರು ಹೇಳುತ್ತಾರೆ. 

ಕೋವಿಡ್‌ನಿಂದ ಗುಣಮುಖರಾದವರು ಕೂಡ ವೈದ್ಯರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಜೊತೆಗೆ, ದೇಹಕ್ಕೆ ವ್ಯಾಯಾಮ, ಪೌಷ್ಟಿಕ ಆಹಾರ ಹಾಗೂ ಆರೇಳು ಗಂಟೆ ನಿದ್ರೆಯು ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ಕೋವಿಡ್‌ ಕಾಲದಲ್ಲೂ ಇವನ್ನು ಯಾವುದೇ ತೊಂದರೆ ಇಲ್ಲದೆ ಮನೆಯಲ್ಲೇ ಪಾಲಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು