ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ; ಗೊಂದಲ ತಿಳಿಯಾಗಬೇಕಿದೆ

Last Updated 23 ಸೆಪ್ಟೆಂಬರ್ 2021, 22:51 IST
ಅಕ್ಷರ ಗಾತ್ರ

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಅನುಸರಿಸಬೇಕಾದ ಮಾರ್ಗಸೂಚಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕೊನೆಗೂ ಸಿದ್ಧಪಡಿಸಿದೆ.ಮೃತರ ಕುಟುಂಬಕ್ಕೆ ₹50,000 ಪರಿಹಾರ ನೀಡುವ ಅಂಶವು ಇದರಲ್ಲಿ ಒಳಗೊಂಡಿದೆ. ಸುಪ್ರೀಂ ಕೋರ್ಟ್ ಜೂನ್ 30ರಂದು ನೀಡಿದ ನಿರ್ದೇಶನಕ್ಕೆ ಅನುಗುಣವಾಗಿ ಈ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆಕೇಂದ್ರ ಸರ್ಕಾರ ತಿಳಿಸಿದೆ. ಕೋವಿಡ್‌ ಅನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಕಳೆದ ವರ್ಷ ಮಾರ್ಚ್‌ ತಿಂಗಳಲ್ಲೇ ಘೋಷಿಸಿತ್ತು.

ಕೇಂದ್ರ ಸರ್ಕಾರ ಆಗಲೇ ನಿರ್ಧಾರ ಕೈಗೊಂಡು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಒದಗಿಸುವ ಕುರಿತು ಮಾರ್ಗಸೂಚಿಯನ್ನು ರೂಪಿಸಬೇಕಿತ್ತು. ಹಾಗೆ ಮಾಡಿದ್ದರೆ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಪ್ರಮೇಯ ಬರುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿತು. ಮಾರ್ಗಸೂಚಿ ರೂಪಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆರು ವಾರಗಳ ಗಡುವು ನೀಡಿತ್ತು. ಕಾಲಾವಕಾಶವನ್ನು ಆಗಸ್ಟ್ 16ರಂದು ಮತ್ತೆ ನಾಲ್ಕು ವಾರ ವಿಸ್ತರಿಸಿತ್ತು. ಇಷ್ಟೆಲ್ಲ ಒತ್ತಡದ ಬಳಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಈಗ ಮಾರ್ಗಸೂಚಿ ರೂಪಿಸಿದೆ. ಪರಿಹಾರದ ಮೊತ್ತವನ್ನು ನಿಗದಿಪಡಿಸಿದೆ. ಆದರೆ, ಪರಿಹಾರ ನೀಡುವ ಹೊಣೆ ರಾಜ್ಯ ಸರ್ಕಾರಗಳ ಹೆಗಲೇರಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಈ ಪರಿಹಾರ ಮೊತ್ತವನ್ನು ಭರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಆಧಾರ್ ಜೋಡಣೆ ಇರುವ ನೇರ ನಗದು ವರ್ಗಾವಣೆ ಮೂಲಕ ನಗದು ಸಂದಾಯವಾಗಬೇಕು, ದೂರುಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು, ಕೋರಿಕೆ ಸಲ್ಲಿಕೆಯಾದ 30 ದಿನಗಳ ಒಳಗೆ ಅರ್ಜಿ ವಿಲೇವಾರಿ ಆಗಬೇಕು ಮುಂತಾಗಿ ಹಲವು ನಿಬಂಧನೆಗಳನ್ನು ಪ್ರಕಟಿಸಲಾಗಿದೆ.

ಕೊರೊನಾದಿಂದ ಉಂಟಾದ ದುರಂತವು ಇತರ ವಿಕೋಪಗಳಂತೆ ಅಲ್ಲ. ಹಾಗಾಗಿ ಅಲ್ಪ ಅವಧಿಯ ವಿಕೋಪಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನಿಗದಿ ಮಾಡಿದ್ದನ್ನು ಕೋವಿಡ್‌ ಸಂತ್ರಸ್ತರಿಗೆ ಅನ್ವಯಿಸುವುದು ಆಗದ ಕೆಲಸ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ವಿವರಿಸಿತ್ತು. ಈಗ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಮೊತ್ತವನ್ನು ₹50,000 ಎಂದು ನಿಗದಿ ಮಾಡಿದೆ. ಆದರೆ, ಈ ಮೊತ್ತವು ತೀರಾ ಕಡಿಮೆಯಾಯಿತು ಎಂಬ ಆಕ್ಷೇಪ ಇದೆ. ಮೇಲಾಗಿ, ರಾಜ್ಯಗಳ ಹಣಕಾಸು ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕೇಂದ್ರದಿಂದ ಬರಬೇಕಾಗಿರುವ ಜಿಎಸ್‌ಟಿ ಪರಿಹಾರ ಮೊತ್ತವೂ ಸಕಾಲಕ್ಕೆ ಬಿಡುಗಡೆ ಆಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಕೋವಿಡ್‌ ಪರಿಹಾರದ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಅಥವಾ ಅರ್ಧದಷ್ಟು ಭಾರವನ್ನಾದರೂ ಹಂಚಿಕೊಳ್ಳಬೇಕು ಎಂಬ ಮಾತಿದೆ. ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ರಾಜ್ಯಗಳಿಗೆ ನೆರವು ಒದಗಿಸುವ ಕುರಿತು ಗಂಭೀರವಾಗಿ ಚಿಂತಿಸಬೇಕು. ಅದಾಗದಿದ್ದಲ್ಲಿ ಕೋವಿಡ್‌ನ ಸಂಕಷ್ಟಗಳನ್ನು ಎದುರಿಸಲೆಂದೇ ಪ್ರತ್ಯೇಕವಾಗಿ ರೂಪಿಸಲಾದ ‘ಪಿಎಂ ಕೇರ್ಸ್’ ನಿಧಿಯಿಂದಲಾದರೂ ರಾಜ್ಯಗಳಿಗೆ ನೆರವು ನೀಡಬೇಕು. ಏನೇ ಆಗಲಿ, ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳದೆ ಹಣಕಾಸಿನ ಕಷ್ಟವನ್ನು ಹಂಚಿಕೊಳ್ಳಬೇಕು. ಕೋವಿಡ್ ಮಹಾಮಾರಿಯನ್ನು ಎದುರಿಸಲು ರಾಜ್ಯಗಳಿಗೆ ಆಮ್ಲಜನಕ ಮತ್ತು ಲಸಿಕೆ ಒದಗಿಸುವ ಹೊಣೆಗಾರಿಕೆಯನ್ನು ಸಕಾಲದಲ್ಲಿ ಸಮರ್ಪಕವಾಗಿ ನಿರ್ವಹಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಕರ್ನಾಟಕವು ಬೇಡಿಕೆಗೆ ತಕ್ಕಂತೆ ಕೇಂದ್ರ ಸರ್ಕಾರದಿಂದ ಆಮ್ಲಜನಕ ಪಡೆಯಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೆರವಿಗೆ ಬರಬೇಕಾಯಿತು. ಪರಿಹಾರ ಹಂಚಿಕೆಯಲ್ಲಿ ಈ ರೀತಿಯ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯಗಳ ಮೇಲಿದೆ.

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ₹50,000 ಎಂದು ನಿಗದಿಪಡಿಸಿರುವುದು ಗೊಂದಲಗಳಿಗೆ ಕಾರಣವಾಗಬಾರದು. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೆಲವು ರಾಜ್ಯಗಳು ಈಗಾಗಲೇ ಪರಿಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಿವೆ. ಕೆಲವು ರಾಜ್ಯಗಳು ಘೋಷಿಸಿರುವ ಪರಿಹಾರ ಮೊತ್ತ ಈಗ ಕೇಂದ್ರ ಸೂಚಿಸಿರುವುದಕ್ಕಿಂತ ಹೆಚ್ಚು. ಬಿಹಾರದಲ್ಲಿ ಪರಿಹಾರದ ಮೊತ್ತವನ್ನು ₹4 ಲಕ್ಷ ಎಂದು ನಿಗದಿ ಮಾಡಲಾಗಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ₹1 ಲಕ್ಷ, ದೆಹಲಿಯಲ್ಲಿ ₹50,000 ನಿಗದಿಪಡಿಸಲಾಗಿದೆ. ರಾಜ್ಯಗಳು ಘೋಷಿಸಿರುವ ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ ಕೇಂದ್ರ ಈಗ ಸೂಚಿಸಿರುವ ಪರಿಹಾರ ಮೊತ್ತ ದೊರೆಯಲಿದೆಯೇ ಎಂಬ ಪ್ರಶ್ನೆ ಇದೆ. ರಾಜ್ಯಗಳಿಂದಈಗಾಗಲೇ ಪರಿಹಾರ ಪಡೆದವರು ಕೇಂದ್ರ ನಿಗದಿ ಮಾಡಿರುವ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆಯೇ ಎಂಬ ಪ್ರಶ್ನೆಯೂ ಕಾಡದೇ ಇರದು. ಈ ಬಗೆಯ ಅಂಶಗಳು ಸ್ಪಷ್ಟಗೊಳ್ಳಬೇಕು. ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಅನುಸರಿಸಿದ ಎಡಬಿಡಂಗಿ ನೀತಿಯು ಪರಿಹಾರದ ವಿಷಯದಲ್ಲೂ ಮುಂದುವರಿಯದಂತೆ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಈ ಮಾರ್ಗಸೂಚಿಯ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಏನು ಹೇಳುತ್ತದೆ ಎನ್ನುವುದನ್ನೂ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT