ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ಕಸ್ಟಡಿ ಸಾವು; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ

Last Updated 29 ಜೂನ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌–19 ಲಾಕ್‌ಡೌನ್‌ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದ ಮೇಲೆ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಸತ್ತಾನ್‌ಕುಲಂ ಠಾಣೆಯ ಪೊಲೀಸರು ಬಂಧಿಸಿದ್ದ ಅಪ್ಪ, ಮಗ ನ್ಯಾಯಾಂಗ ಬಂಧನದಲ್ಲಿದ್ದಾಗ ಮೃತಪಟ್ಟಿದ್ದಾರೆ. ಈ ಇಬ್ಬರಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಆಕ್ರೋಶ ಭುಗಿಲೆದ್ದಿರುವಾಗಲೇ ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ಪೊಲೀಸ್‌ ವಶದಲ್ಲಿದ್ದಾಗ ಹಲ್ಲೆಗೊಳಗಾಗಿ, ಗಾಯಗೊಂಡಿದ್ದರು ಎನ್ನಲಾದ ಕುಮರೇಶನ್‌ ಶನಿವಾರ (ಜೂನ್‌ 27) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪೊಲೀಸರ ವರ್ತನೆ ಬಗ್ಗೆ ಈ ಎರಡೂ ಪ್ರಕರಣಗಳು ಹಲವಾರು ಪ್ರಶ್ನೆಗಳನ್ನು ಎತ್ತಿವೆ. ಲಾಕ್‌ಡೌನ್‌ ಮಾರ್ಗಸೂಚಿ ಪ್ರಕಾರ, ತಮಿಳುನಾಡಿ ನಾದ್ಯಂತ ರಾತ್ರಿ 8ರವರೆಗೆ ಮಾತ್ರ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗಿದೆ. ಜೂನ್‌ 19ರಂದು ರಾತ್ರಿ 8.15ರವರೆಗೂ ಮಳಿಗೆಯನ್ನು ತೆರೆದಿದ್ದ ಆರೋಪದ ಮೇಲೆ, ಮರದ ವ್ಯಾಪಾರಿ ಯಾಗಿದ್ದ ಜಯರಾಜ್‌ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದರು.

ಮೊಬೈಲ್‌ ಫೋನ್‌ಗಳ ಮಾರಾಟ ಮಳಿಗೆ ಹೊಂದಿರುವ ಮಗ ಬೆನಿಕ್ಸ್‌ ಠಾಣೆಗೆ ತೆರಳಿ, ತಂದೆಯ ಬಿಡುಗಡೆಗೆ ಮನವಿ ಮಾಡಿದ್ದರು. ಅವರನ್ನೂ ಬಂಧಿಸಿದ್ದ ಪೊಲೀಸರು, ಇಬ್ಬರಿಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು ಎನ್ನಲಾಗಿದೆ. ಬಂಧಿತರಿಗೆ ಜಾಮೀನು ದೊರಕಬಾರದು ಎಂಬ ಉದ್ದೇಶದಿಂದ ಅವರ ವಿರುದ್ಧ ಹಣಕ್ಕಾಗಿ ಬೆದರಿಕೆ ಒಡ್ಡಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಿರುವುದು ಬಹಿರಂಗಗೊಂಡಿದೆ. ಈ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕೋವಿಲಪಟ್ಟಿ ಉಪ ಕಾರಾಗೃಹದಲ್ಲಿ ಇದ್ದಾಗಲೇ ತೀವ್ರವಾಗಿ ಅಸ್ವಸ್ಥಗೊಂಡ ತಂದೆ, ಮಗ ಜೂನ್‌ 23ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದು ಅತ್ಯಂತ ನೋವಿನ ಸಂಗತಿ.

ತೂತ್ತುಕುಡಿ ಜಿಲ್ಲೆಯ ಪ್ರಕರಣದಲ್ಲಿ ಒಬ್ಬ ಇನ್‌ಸ್ಪೆಕ್ಟರ್‌ ಮತ್ತು ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ಅಮಾನತು ಮಾಡಿರುವ ತಮಿಳುನಾಡು ಸರ್ಕಾರವು ಮೃತರ ಕುಟುಂಬಕ್ಕೆ ₹ 20 ಲಕ್ಷ ಪರಿಹಾರವನ್ನೂ ಘೋಷಿಸಿದೆ. ಆಪಾದಿತ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುವ ಕ್ರಮಕ್ಕೆ ಸರ್ಕಾರ ಮುಂದಾಗಿರಲಿಲ್ಲ. ಘಟನೆಯ ಕುರಿತು ಮದ್ರಾಸ್‌ ಹೈಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ ಬಳಿಕ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.

ಈಗ ನಿಷ್ಪಕ್ಷಪಾತ ತನಿಖೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು ಮತ್ತು ಈ ಸಾವಿಗೆ ಕಾರಣರಾದ ಎಲ್ಲರನ್ನೂ ಪತ್ತೆಹಚ್ಚಿ, ಶಿಕ್ಷೆಯಾಗುವಂತೆ ಮಾಡುವುದು ಸರ್ಕಾರದ ಮೇಲಿರುವ ಹೊಣೆಗಾರಿಕೆ. ಕಸ್ಟಡಿಯಲ್ಲಿರುವಾಗಲೇ ಪೊಲೀಸ್‌ ದೌರ್ಜನ್ಯದಿಂದ ಸಾವು ಸಂಭವಿಸುವುದು ಭಾರತದಲ್ಲಿ ಹೆಚ್ಚುತ್ತಲೇ ಇದೆ. ದೌರ್ಜನ್ಯ ವಿರುದ್ಧದ ರಾಷ್ಟ್ರೀಯ ಅಭಿಯಾನ (ಎನ್‌ಸಿಎಟಿ) ಎಂಬ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭಾರತದಲ್ಲಿ 2019ರಲ್ಲಿ ಪೊಲೀಸ್‌ ದೌರ್ಜನ್ಯದಿಂದ 1,731 ಮಂದಿ ಸಾವಿಗೀಡಾಗಿದ್ದಾರೆ.

125 ಜನರು ಪೊಲೀಸ್‌ ವಶದಲ್ಲಿರುವಾಗಲೇ ಸತ್ತಿದ್ದರೆ, 1,606 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾಗ ಮೃತಪಟ್ಟಿದ್ದಾರೆ. ಉತ್ತರಪ್ರದೇಶ, ತಮಿಳುನಾಡು, ಪಂಜಾಬ್‌ನಲ್ಲಿಕಸ್ಟಡಿ ಸಾವುಗಳ ಸಂಖ್ಯೆ ಹೆಚ್ಚು. ಪೊಲೀಸ್‌ ಹಿಂಸೆಗೆ ಒಳಗಾಗಿ ಬಿಡುಗಡೆಯಾಗಿ ಹೊರಬಂದ ಹಲವರು ಭಯದಿಂದ ಮೌನಕ್ಕೆ ಶರಣಾಗುತ್ತಾರೆ. ತನಿಖೆಯ ನೆಪವೊಡ್ಡಿ ಹಿಂಸೆಯನ್ನು ಸಮರ್ಥಿಸಿಕೊಳ್ಳುವ ರೂಢಿ ನಮ್ಮ ಪೊಲೀಸ್‌ ವ್ಯವಸ್ಥೆಯಲ್ಲಿ ಇದೆ.

ಇಂತಹ ದೌರ್ಜನ್ಯವನ್ನು ತಡೆಯಲೆಂದೇ ಸುಪ್ರೀಂ ಕೋರ್ಟ್‌ 2006ರಲ್ಲಿ ಪೊಲೀಸ್‌ ಸುಧಾರಣಾ ಮಾರ್ಗಸೂಚಿಯನ್ನು ಹೊರಡಿಸಿತ್ತು. ಆದರೆ, ಆ ಬಳಿಕವೂ ಪೊಲೀಸರ ವರ್ತನೆ ಬದಲಾಗಿಲ್ಲ. ಬಂಧಿತರ ಮೇಲೆ ದೌರ್ಜನ್ಯ ನಡೆಸುವ ಅಧಿಕಾರ ತಮಗೆ ಇದೆ ಎಂಬಂತೆ ಹಲವು ಪೊಲೀಸರು ವರ್ತಿಸುತ್ತಾರೆ.

ಕಸ್ಟಡಿಯಲ್ಲಿ ಇರುವವರನ್ನು ನಡೆಸಿಕೊಳ್ಳಬೇಕಾದ ರೀತಿ ಕುರಿತು ಪೊಲೀಸರಿಗೆ ಸರಿಯಾದ ತರಬೇತಿ ನೀಡುವ ಮತ್ತು ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮದ ಅಸ್ತ್ರ ಪ್ರಯೋಗಿಸುವ ಮೂಲಕ ಇಂತಹ ಪ್ರಕರಣಗಳಿಗೆ ಅಂತ್ಯ ಹಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT