ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ದೆಹಲಿಯಲ್ಲಿ ಕೊರೊನಾ‌ ನಿಯಂತ್ರಣಕ್ಕೆ ಸಮನ್ವಯದ ನಡೆ ಸ್ವಾಗತಾರ್ಹ

Last Updated 18 ಜೂನ್ 2020, 19:30 IST
ಅಕ್ಷರ ಗಾತ್ರ

ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಆತಂಕದ ವಿಷಯ. ಕೊರೊನಾ ಸೋಂಕಿತರ ಸಂಖ್ಯೆ ಅಲ್ಲಿ 45 ಸಾವಿರದ ಗಡಿ ದಾಟಿದೆ. ಈ ಸೋಂಕಿನಿಂದ 1,900ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಪ್ರತಿದಿನ ವರದಿಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ 1000ಕ್ಕಿಂತ ಹೆಚ್ಚು. ಶವ ಸಾಗಿಸಲು ಬೇಕಾದ ವ್ಯವಸ್ಥೆಯೂ ಸಮರ್ಪಕವಾಗಿ ಇಲ್ಲದಂತಾಗಿದೆ. ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು ಪರಿಸ್ಥಿತಿ
ಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ.

ತಡವಾಗಿಯಾದರೂ ಈಗ ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ನೆರವಿಗೆ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಕೇಜ್ರಿವಾಲ್‌ ಮತ್ತು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಒಂದೆಡೆ ಕುಳಿತು ದೆಹಲಿಯ ಆರೋಗ್ಯ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿರುವುದು ಸ್ವಾಗತಾರ್ಹ. ಕೊರೊನಾ ಸೋಂಕು ಇದೇ ರೀತಿ ಹರಡುತ್ತಾ ಹೋದರೆ ಜುಲೈ ತಿಂಗಳ ಕೊನೆಗೆ ಸೋಂಕಿತರ ಸಂಖ್ಯೆ 5.5 ಲಕ್ಷ ದಾಟುವ ಸಂಭವವಿದೆ ಎಂದು ದೆಹಲಿ ಸರ್ಕಾರ ಅಂದಾಜಿಸಿರುವುದು ಪರಿಸ್ಥಿತಿಯ ಗಾಂಭೀರ್ಯವನ್ನು ತೋರಿಸುತ್ತದೆ. ದೆಹಲಿ ಸರ್ಕಾರವು ಆಮ್‌ ಆದ್ಮಿ ಪಕ್ಷದ ಕೈಯಲ್ಲಿದ್ದರೂ, ಕೇಂದ್ರ ಸರ್ಕಾರದಿಂದ ನೇಮಕವಾಗಿರುವ ಲೆಫ್ಟಿನೆಂಟ್‌ ಗವರ್ನರ್‌ ಹಿಡಿತದಲ್ಲಿ ಹಲವು ನಿಯಂತ್ರಣಗಳು ಕೇಂದ್ರೀಕೃತವಾಗಿವೆ.

ದೆಹಲಿ ವಿಕೋಪ‌ ನಿರ್ವಹಣಾ‌ ಪ್ರಾಧಿಕಾರದ (ಡಿಡಿಎಂಎ) ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್‌ ಗವರ್ನರ್‌, ರಾಜ್ಯ ಸರ್ಕಾರದ ಕೆಲವು ನಿರ್ಧಾರಗಳಿಗೆ ತಡೆಯೊಡ್ಡಿದ್ದರು. ಕೇಂದ್ರ ಸರ್ಕಾರ ಕೂಡ ರಾಷ್ಟ್ರ ರಾಜಧಾನಿಯ ಬಗ್ಗೆ ಹೆಚ್ಚು ಮುತುವರ್ಜಿ ತೋರಲಿಲ್ಲ. ಮೂರು ಅಧಿಕಾರ ಕೇಂದ್ರಗಳ ನಡುವಣ ಸಮನ್ವಯದ ಕೊರತೆಯೇ ದೆಹಲಿಯ ಈಗಿನ ಸ್ಥಿತಿಗೆ ಕಾರಣ ಎನ್ನಬಹುದು. ಬಿಜೆಪಿ ನಿಯಂತ್ರಣದಲ್ಲಿರುವ ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಸರ್ಕಾರದ ನಡುವೆಯೂ ಸಮನ್ವಯ ಸಾಧ್ಯವಾಗಿರಲಿಲ್ಲ ಎಂಬ ಮಾತು ಇದೆ. ಕೊರೊನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕೀಯ ಮೇಲಾಟ ತರವಲ್ಲ.

ಪರಿಸ್ಥಿತಿ ಕೈಮೀರುವ ಮೊದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು, ಸಮನ್ವಯದಿಂದ ಕಾರ್ಯನಿರ್ವಹಿಸಲು ನಿರ್ಧರಿಸಿರುವುದು ಅಲ್ಲಿನ ಜನರಲ್ಲಿ ನಿರಾಳ ಭಾವ ಮೂಡಿಸಿರಬಹುದು. ಈಗಿನ ಪರಿಸ್ಥಿತಿಯಲ್ಲಿ ರೋಗಿಗಳ ಚಿಕಿತ್ಸೆಗೆ 1.5 ಲಕ್ಷದಷ್ಟು ಹಾಸಿಗೆಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಈಗಿರುವ ಹಾಸಿಗೆಗಳ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚು. ಚಿಕಿತ್ಸೆಗೆ ನೆರವಾಗಲು ಹೆಚ್ಚು ಹಾಸಿಗೆಗಳನ್ನು ಒದಗಿಸಲು ಮತ್ತು ಅದಕ್ಕಾಗಿ ರೈಲು ಬೋಗಿಗಳನ್ನು ಬಳಸಲು ಕೇಂದ್ರ ಸರ್ಕಾರವು ಸಮ್ಮತಿಸಿದೆ. ತಪಾಸಣೆಯ ಪ್ರಮಾಣವನ್ನು ದುಪ್ಪಟ್ಟು ಗೊಳಿಸಲು, ಆಸ್ಪತ್ರೆಯ ಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ರೋಗಪ್ರಸರಣ ನಿಯಂತ್ರಣ ಸಾಧ್ಯವಾಗುವಂತೆ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ದುಬಾರಿ ದರ ವಿಧಿಸದಂತೆ ಕೇಜ್ರಿವಾಲ್ ನೇತೃತ್ವದ‌ ಸರ್ಕಾರ ನಿಯಮ ರೂಪಿಸಿದೆ.

ಆದರೆ ಖಾಸಗಿ ಆಸ್ಪತ್ರೆಗಳು ಈ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಶುಲ್ಕ ವಿಧಿಸಿದ ದೂರುಗಳಿವೆ. ಇದರತ್ತ ಸಮನ್ವಯ ಸಮಿತಿಯು ಗಮನ ಹರಿಸಬೇಕು. ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷ ರಾಜಕಾರಣವನ್ನು ಪಕ್ಕಕ್ಕೆ ಸರಿಸಿ ಎಲ್ಲ ಪಕ್ಷಗಳ ನಾಯಕರು ಕೋವಿಡ್‌ ನಿಯಂತ್ರಣಕ್ಕೆ ಕೈಜೋಡಿಸಬೇಕು. ಆರೋಗ್ಯ ತುರ್ತುಸ್ಥಿತಿಯಲ್ಲಿ ರಾಜಕೀಯ ಸಿದ್ಧಾಂತಗಳಿಗಿಂತ ಜನರ ಆರೋಗ್ಯವೇ ಮುಖ್ಯ ಎನ್ನುವುದನ್ನು ಎಲ್ಲರೂ ಮನಗಾಣಬೇಕು. ಕೇಂದ್ರ ಸರ್ಕಾರವು ದೆಹಲಿ ಸರ್ಕಾರಕ್ಕೆ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿ, ಕೋವಿಡ್‌ ವಿರುದ್ಧದ ಸಮರಕ್ಕೆ ಪೂರ್ಣ ಸಹಕಾರ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT