ದೇವದಾಸಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮಗ್ರ ಸಮೀಕ್ಷೆಯನ್ನು ನಡೆಸುವ ರಾಜ್ಯ ಸರ್ಕಾರದ ತೀರ್ಮಾನವು, ಬಹುಕಾಲದ ಆಗ್ರಹವೊಂದಕ್ಕೆ ಸ್ಪಂದಿಸುವಂತಿದೆ. ಎಲ್ಲರನ್ನೂ ಒಳಗೊಳ್ಳುವ ಆಡಳಿತ ಹಾಗೂ ಸಾಮಾಜಿಕ ನ್ಯಾಯದ ಕಣ್ಣಿನಿಂದ ನೋಡಿದಾಗ ಈ ಸಮೀಕ್ಷೆಯು ಸ್ವಾಗತಾರ್ಹವಾಗಿ ಕಾಣುತ್ತದೆ. ಸೆಪ್ಟೆಂಬರ್ 15ರಿಂದ ಶುರುವಾಗಲಿರುವ ಸಮೀಕ್ಷೆಯು ಈ ವರ್ಗಗಳಿಗೆ ಸೇರಿದವರ ಸಾಮಾಜಿಕ–ಆರ್ಥಿಕ ಸ್ಥಿತಿಯ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕುವ ಉದ್ದೇಶ ಹೊಂದಿದೆ; ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಿಂದ ಅವರು ಹೊರಗುಳಿಯದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಎರಡೂ ಸಮುದಾಯಗಳು ಬಹುಕಾಲದಿಂದ ಸಮಾಜದ ಅಂಚಿನಲ್ಲಿ ಬದುಕುತ್ತಿವೆ, ನೀತಿ ನಿರೂಪಕರು ಈ ಸಮುದಾಯಗಳನ್ನು ನಿರ್ಲಕ್ಷಿಸಿದ್ದಾರೆ, ಸಾಮಾಜಿಕ ಸಂರಚನೆಗಳು ಇವರನ್ನು ಶೋಷಣೆಗೆ ಒಳಪಡಿಸಿವೆ. ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸುವ ಹಾಗೂ ಅವರಿಗೆ ಬಲ ತುಂಬುವ ಕೆಲಸಕ್ಕೆ ಬಲಿಷ್ಠ ನೆಲೆಗಟ್ಟು ನಿರ್ಮಿಸಿಕೊಡುವ ಕೆಲಸವನ್ನು ವೈಜ್ಞಾನಿಕ ಸಮೀಕ್ಷೆಯೊಂದು ಮಾಡಬಲ್ಲದು.

ಸಮೀಕ್ಷೆಯು ಮಹತ್ವದ್ದಾಗುವುದು ಏಕೆ ಮತ್ತು ಅದನ್ನು ತ್ವರಿತವಾಗಿ ಏಕೆ ನಡೆಸಬೇಕಿದೆ ಎಂಬುದನ್ನು ದೇವದಾಸಿ ಪದ್ಧತಿಯ ಇತಿಹಾಸವೇ ಹೇಳುತ್ತದೆ. ದೇವದಾಸಿಯರನ್ನು ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಸಂರಕ್ಷಕರು ಎಂದು ಹಿಂದೊಂದು ಕಾಲಘಟ್ಟದಲ್ಲಿ ಗೌರವದಿಂದ ಕಾಣಲಾಗುತ್ತಿತ್ತು ಎಂದು ಹೇಳಲಾಗುತ್ತ ದಾದರೂ, ಅವರು ಸಾಮಾಜಿಕ ಗೌರವ ವನ್ನು ನಿಧಾನವಾಗಿ ಕಳೆದುಕೊಂಡರು. ದೇವದಾಸಿ ಪದ್ಧತಿಯು ಶೋಷಣೆ, ದೌರ್ಜನ್ಯ ಮತ್ತು ಮಾನವಹಕ್ಕುಗಳ ಉಲ್ಲಂಘನೆಯ ರೂಪವಾಗಿ ಮಾರ್ಪಾಡಾಯಿತು. ‘ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಕಾಯ್ದೆ–1982’ರ ಪ್ರಕಾರ, ಈ ಪದ್ಧತಿಯು ನಿಷೇಧಕ್ಕೆ ಒಳಗಾಗಿದ್ದರೂ ರಾಜ್ಯದ ಉತ್ತರ ಭಾಗ ಹಾಗೂ ಮಧ್ಯ ಭಾಗದ ಕೆಲವೆಡೆ ಇನ್ನೂ ಆಚರಣೆಯಲ್ಲಿದೆ. ಕುಟುಂಬ ಹಾಗೂ ಸಮಾಜದಿಂದ ದೂರವಾದ ಹಲವಾರು ಮಹಿಳೆಯರು ಇಂದಿಗೂ ಬಡತನದಲ್ಲಿ ಕಾಲ ತಳ್ಳುತ್ತಿದ್ದಾರೆ. ಈ ಪದ್ಧತಿಯ ಹಿಡಿತಕ್ಕೆ ಸಿಲುಕಿರುವವರನ್ನು ಗುರುತಿಸಲು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಘನತೆಯ ಬದುಕನ್ನು ನೀಡಲು 15 ಜಿಲ್ಲೆಗಳಲ್ಲಿ ನಡೆಯಲಿರುವ ಸಮೀಕ್ಷೆಯು ನೆರವಾಗಬಹುದು. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳು ಕೂಡ ಬಹಳ ತೀವ್ರವಾದುವೇ ಆಗಿವೆ. ಸಾಮಾಜಿಕ ಬಹಿಷ್ಕಾರ, ಆರ್ಥಿಕ ತಾರತಮ್ಯ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವಲ್ಲಿ ವ್ಯವಸ್ಥೆಯು ಸೃಷ್ಟಿಸಿರುವ ಅಡ್ಡಿ ಆತಂಕಗಳು ಇವರನ್ನು ಕಾಡುತ್ತಿವೆ. ಈ ಸಮುದಾಯವು ನೆಲೆ ಕಳೆದುಕೊಂಡಿದೆ, ನಿರುದ್ಯೋಗಕ್ಕೆ ತುತ್ತಾಗಿದೆ, ಹಿಂಸೆಗೆ ಗುರಿಯಾಗಿದೆ. ‘ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2019’ ಕಡತಗಳಲ್ಲಿ ಇದೆಯಾದರೂ, ಅನುಷ್ಠಾನದಲ್ಲಿನ ಲೋಪಗಳ ಕಾರಣದಿಂದಾಗಿ ಕಾಯ್ದೆಯು ಪರಿಣಾಮಕಾರಿ ಆಗಿ ಉಳಿದಿಲ್ಲ.

ವಿಶ್ವಾಸಾರ್ಹವಾದ ದತ್ತಾಂಶದ ಕೊರತೆಯು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಈ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಪರಿಹಾರ ಕಾರ್ಯಕ್ರಮಗಳನ್ನು ರೂಪಿಸುವುದು ಕಷ್ಟಸಾಧ್ಯವಾಗಿದೆ. ಈಗ ನಡೆಯಲಿರುವ ಸಮೀಕ್ಷೆಯು ಲೈಂಗಿಕ ಅಲ್ಪಸಂಖ್ಯಾತರ ಮೊದಲ ಎಣಿಕೆ ಕಾರ್ಯದಂತೆ ಇರಲಿದೆ. ಇದೊಂದು ಮೈಲಿಗಲ್ಲು. ತಂತ್ರಜ್ಞಾನದ ನೆರವು ಪಡೆದು, ಮನೆ ಮನೆಗೆ ಭೇಟಿ ನೀಡಿ ನಡೆಸಲಿರುವ ಸಮೀಕ್ಷೆಯು ಈ ಸಮುದಾಯಗಳ ನಿಖರ ಸಂಖ್ಯೆಯನ್ನು ಗುರುತಿಸಬಹುದು. ಅಲ್ಲದೆ, ಈ ಸಮುದಾಯಗಳನ್ನು ನೆಚ್ಚಿಕೊಂಡಿರುವವರ ಸಮಸ್ಯೆಗಳೂ ನೀತಿ ನಿರೂಪಕರ ಗಮನಕ್ಕೆ ಬರುವಂತೆ ಆಗಬಹುದು. ಇದೆಲ್ಲಕ್ಕೂ ಮಿಗಿಲಾಗಿ, ಅಭಿವೃದ್ಧಿ ಕಾರ್ಯಕ್ರಮಗಳು ಅರ್ಹರನ್ನು ಸರಿಯಾಗಿ ತಲಪುವಂತೆ ಮಾಡಲು ಸಮೀಕ್ಷೆಯು ಸರ್ಕಾರಕ್ಕೆ ನೆರವಾಗಲಿದೆ. ಸಮೀಕ್ಷೆಯು ಆರಂಭಿಕ ಹೆಜ್ಜೆ ಮಾತ್ರ. ಸಮೀಕ್ಷೆಯ ಮೂಲಕ ಸಂಗ್ರಹ ಆಗುವ ದತ್ತಾಂಶವನ್ನು ಬಳಸಿಕೊಂಡು ಅರ್ಥಪೂರ್ಣವಾದ ಕಾರ್ಯಗಳನ್ನು ಕೈಗೊಳ್ಳಬೇಕು. ಅದು ಅರ್ಹರಿಗೆ ಪಿಂಚಣಿ ನೀಡುವುದಾಗಿರಬಹುದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವು ನೀಡುವುದಾಗಿರಬಹುದು ಅಥವಾ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿರಬಹುದು. ಸರ್ಕಾರವು ಈ ಸಮುದಾಯಗಳ ನಾಯಕರ ಜೊತೆ ಸಮಾಲೋಚನೆ ನಡೆಸಿ, ಸಮೀಕ್ಷೆಯಲ್ಲಿ ಎಲ್ಲರೂ ಭಾಗಿಯಾಗುವಂತೆ ಮಾಡಬೇಕು. ಸಮಾಜದ ಅಂಚಿಗೆ ತಳ್ಳಲಾಗಿರುವ ಸಮುದಾಯಗಳ ಸ್ಥಿತಿ–ಗತಿಯ ಮೇಲೆ ಬೆಳಕು ಚೆಲ್ಲಲು ಮುಂದಾಗುವ ಮೂಲಕ ರಾಜ್ಯ ಸರ್ಕಾರವು ಪ್ರಗತಿಪರವಾದ ಹೆಜ್ಜೆಯೊಂದನ್ನು ಇರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.