ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಮಾಲಿನ್ಯ ನಿಯಂತ್ರಣ ಕಾಳಜಿ ಡೀಸೆಲ್‌ಚಾಲಿತ ಕಾರಿಗೆ ಕೊಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತು ಟಾಟಾ ಮೋಟರ್ಸ್‌ ದೊಡ್ಡ ಹೆಸರುಗಳು. 2018ರ ಕೊನೆಯಲ್ಲಿ ದೇಶದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಪಾಲು ಶೇಕಡ 51ರಷ್ಟು ಇತ್ತು. ಟಾಟಾ ಮೋಟರ್ಸ್‌ ಕಂಪನಿಯ ಪಾಲು ಶೇಕಡ 7ರಷ್ಟಿತ್ತು ಎಂದು ವರದಿಯೊಂದು ಹೇಳಿದೆ. ದೇಶದಲ್ಲಿ ಡೀಸೆಲ್‌ ಕಾರು ತಯಾರಿಕೆ ಮತ್ತು ಮಾರಾಟವನ್ನು 2020ರ ಏಪ್ರಿಲ್‌ನಿಂದ ನಿಲ್ಲಿಸುವುದಾಗಿ ಮಾರುತಿ ಸುಜುಕಿ ಹೇಳಿದೆ. ಈ ಕಂಪನಿ ಈಗ ಭಾರತದಲ್ಲಿ ಮಾರಾಟ ಮಾಡುತ್ತಿರುವ ಕಾರುಗಳ ಒಟ್ಟು ಪ್ರಮಾಣದಲ್ಲಿ ಶೇಕಡ 23ರಷ್ಟು ಡೀಸೆಲ್‌ ಕಾರುಗಳು.

2018–19ನೇ ಸಾಲಿನಲ್ಲಿ ಕಂಪನಿಯು ಒಟ್ಟು 4.63 ಲಕ್ಷ ಡೀಸೆಲ್‌ ಕಾರುಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಈ ತೀರ್ಮಾನ ಕೈಗೊಂಡ ಕೆಲವೇ ದಿನಗಳಲ್ಲಿ ಟಾಟಾ ಮೋಟರ್ಸ್‌ ಕಂಪನಿ ಇದೇ ಬಗೆಯ ಮಾತು ಆಡಿದೆ. ಡೀಸೆಲ್‌ಚಾಲಿತ ಸಣ್ಣ ಕಾರುಗಳ ತಯಾರಿಕೆಯನ್ನು ಟಾಟಾ ಮೋಟರ್ಸ್‌ ಸ್ಥಗಿತಗೊಳಿಸಬಹುದು ಎಂದು ಕಂಪನಿಯ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಟಾಟಾ ಮೋಟರ್ಸ್‌ನ ಅಧಿಕಾರಿಯೊಬ್ಬರ ಪ್ರಕಾರ, ಸಣ್ಣ ಕಾರುಗಳ ಪೈಕಿ ಪೆಟ್ರೋಲ್‌ಚಾಲಿತ ಕಾರುಗಳಿಗಿರುವ ಬೇಡಿಕೆ ಪ್ರಮಾಣ ಶೇಕಡ 80ರಷ್ಟು. ಇನ್ನುಳಿದ ಶೇಕಡ 20ರಷ್ಟು ಮಾತ್ರ ಡೀಸೆಲ್‌ಚಾಲಿತ ಕಾರುಗಳಿಗೆ ಇರುವ ಬೇಡಿಕೆ. ಮಾರುತಿ ಸುಜುಕಿಯ ತೀರ್ಮಾನ ಹಾಗೂ ಟಾಟಾ ಮೋಟರ್ಸ್‌ ಕಂಪನಿಯ ಇಂಗಿತದ ಹಿಂದೆ ಇರುವ ಒಂದು ಕಾರಣವನ್ನು ಗಮನಿಸಬೇಕು.

ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ಕಡಿಮೆ ಮಾಡುವ ಉದ್ದೇಶದ ಭಾರತ್ ಸ್ಟೇಜ್–6 (ಬಿಎಸ್‌–6) ಮಾನದಂಡಗಳು 2020ರ ಏಪ್ರಿಲ್‌ 1ರಿಂದ ಅನ್ವಯ ಆಗಲಿವೆ. ಈ ಮಾನದಂಡಗಳಿಗೆ ಅನುಗುಣವಾಗಿ ಡೀಸೆಲ್‌ ಎಂಜಿನ್‌ ತಯಾರಿಸಲು ಹೆಚ್ಚಿನ ಹಣ ಬೇಕು. ಇದರ ಪರಿಣಾಮವಾಗಿ ಗ್ರಾಹಕರು ಡೀಸೆಲ್‌ ಕಾರು ಕೊಳ್ಳಲು ಹೆಚ್ಚಿನ ಹಣ ತೆರಬೇಕಾಗುತ್ತದೆ. ಆದರೆ ಸಣ್ಣ ಕಾರು ಖರೀದಿಸುವ ಗ್ರಾಹಕರು ಹೆಚ್ಚಿನ ಹಣ ಪಾವತಿಸಿ ಡೀಸೆಲ್‌ ಕಾರು ಖರೀದಿ ಮಾಡಲು ಮುಂದಾಗಲಿಕ್ಕಿಲ್ಲ ಎಂಬ ಲೆಕ್ಕಾಚಾರವೂ ಈ ತೀರ್ಮಾನ ಹಾಗೂ ಇಂಗಿತದ ಹಿಂದೆ ಇದ್ದಿರಬಹುದು.

ಮಾರುಕಟ್ಟೆ ಹಾಗೂ ಲಾಭ–ನಷ್ಟದ ಲೆಕ್ಕಾಚಾರವನ್ನು ಆಧರಿಸಿಯೇ ಕಂಪನಿಗಳು ಈ ತೀರ್ಮಾನವನ್ನು ಕೈಗೊಂಡಿರಬಹುದು. ಹಾಗಿದ್ದರೂ ಇಂಥದ್ದೊಂದು ತೀರ್ಮಾನವನ್ನು ಸ್ವಾಗತಿಸಲು ಅಡ್ಡಿಯಿಲ್ಲ. ಏಕೆಂದರೆ, ಈ ತೀರ್ಮಾನದಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ತುಸುವಾದರೂ ಸಹಾಯ ಆಗಬಹುದು ಎಂಬ ನಿರೀಕ್ಷೆ ಇದೆ. ವಿಶ್ವದಲ್ಲಿ ಡೀಸೆಲ್‌ ಕಾರುಗಳಿಗೆ ದೊಡ್ಡ ಮಾರುಕಟ್ಟೆ ಇರುವುದು ಯುರೋಪಿನಲ್ಲಿ. ಆದರೆ ಈಗ ಅಲ್ಲಿ ಕೂಡ ಇವುಗಳ ಜನಪ್ರಿಯತೆ ಕುಸಿಯುತ್ತಿದೆ. 2018ರಲ್ಲಿ ಯುರೋಪಿನಲ್ಲಿ ಡೀಸೆಲ್‌ ಕಾರುಗಳ ಮಾರಾಟ ಪ್ರಮಾಣ ಶೇಕಡ 20ರಷ್ಟು ಕಡಿಮೆ ಆಗಿದೆ ಎಂದು ಹೇಳಲಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಡೀಸೆಲ್‌ ಬೆಲೆಯನ್ನು ಸರ್ಕಾರದ ನಿಯಂತ್ರಣದಿಂದ ಹೊರತಂದ ನಂತರದಲ್ಲಿ, ಡೀಸೆಲ್‌ ಹಾಗೂ ಪೆಟ್ರೋಲ್‌ ಬೆಲೆಗಳ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಉಳಿದಿಲ್ಲ. ಈಗಿನ ಮಾರುಕಟ್ಟೆ ದರದ ಅನುಸಾರ ಒಂದು ಲೀಟರ್‌ ಪೆಟ್ರೋಲ್‌ ಹಾಗೂ ಒಂದು ಲೀಟರ್‌ ಡೀಸೆಲ್‌ ದರದ ನಡುವಣ ವ್ಯತ್ಯಾಸ ಆರೂವರೆ ರೂಪಾಯಿಗಳ ಆಸುಪಾಸಿನಲ್ಲಿ ಇದೆ. ಪೆಟ್ರೋಲ್ ಹಾಗೂ ಡೀಸೆಲ್‌ ದರಗಳ ನಡುವೆ ವ್ಯತ್ಯಾಸ ಕಡಿಮೆ ಆಗಿರುವುದು ಕಾರುಗಳ ಮಾರಾಟದಲ್ಲೂ ಪ್ರತಿಫಲಿಸಿದೆ.

ಹ್ಯಾಚ್‌ಬ್ಯಾಕ್‌ ಹಾಗೂ ಸೆಡಾನ್‌ ಕಾರುಗಳ ಮಾರಾಟದಲ್ಲಿ ಡೀಸೆಲ್‌ ಕಾರುಗಳ ಪ್ರಮಾಣ 2012–13ರ ಸಾಲಿನಲ್ಲಿ ಶೇಕಡ 40ಕ್ಕಿಂತ ಹೆಚ್ಚಿತ್ತು. ಆದರೆ ಅದರ ಪ್ರಮಾಣ 2018–19ರಲ್ಲಿ ಶೇಕಡ 23ಕ್ಕೆ ಕುಸಿದಿದೆ ಎಂದು ವರದಿಯಾಗಿದೆ. ಕಾರು ತಯಾರಿಕಾ ಕಂಪನಿಗಳು ಡೀಸೆಲ್‌ಚಾಲಿತ ಕಾರುಗಳ ವಿಚಾರವಾಗಿ ಈಗಿನ ತೀರ್ಮಾನ ಕೈಗೊಳ್ಳುವುದರ ಹಿಂದೆ ಈ ಅಂಕಿ–ಅಂಶಗಳ ಪ್ರಭಾವವೂ ಇದ್ದಿರಲಿಕ್ಕೆ ಸಾಕು. ಇದರ ಜೊತೆಯಲ್ಲೇ, ಡೀಸೆಲ್‌ ‘ಕೊಳಕು ಇಂಧನ’ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡಿರುವುದರಿಂದ ‘ಡೀಸೆಲ್‌ ಕಾರು ಬೇಡ, ಪೆಟ್ರೋಲ್‌ ಕಾರೇ ಬೇಕು’ ಎನ್ನುವ ವರ್ಗ ಕೂಡ ಇದ್ದೇ ಇದೆ. ಇವೆಲ್ಲವೂ ಕಂಪನಿಗಳ ಈ ನಡೆಯ ಹಿಂದೆ ಕೆಲಸ ಮಾಡಿರುವಂತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು