ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕ್ರಿಪ್ಟೊ ಜಾಹೀರಾತಿಗೆ ಮಾರ್ಗಸೂಚಿ; ಅರಿವು ಹೆಚ್ಚಿಸುವ ಕೆಲಸವಾಗಲಿ

Last Updated 24 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಕ್ರಿಪ್ಟೊ ಕರೆನ್ಸಿಗಳನ್ನು ಆಸ್ತಿ ಎಂದು ಭಾವಿಸಿ, ಅದರ ಮೇಲೆ ಹಣ ಹೂಡಿಕೆ ಮಾಡುವ ಪ್ರವೃತ್ತಿಯು ದೇಶದಲ್ಲಿ ವ್ಯಾಪಕವಾಗುತ್ತಿದೆ. ಕ್ರಿಪ್ಟೊ ಕರೆನ್ಸಿಗಳ ಮಾರುಕಟ್ಟೆಯು ಈಗಿನ ಸಂದರ್ಭದಲ್ಲಿ ಕಾನೂನಿನ ನಿಯಂತ್ರಣದಿಂದ ಹೊರಗಿರುವ ಕಾರಣ, ಅಲ್ಲಿ ಹೂಡಿಕೆ ಆಗಿರುವ ಹಣದ ಒಟ್ಟು ಮೊತ್ತ ಎಷ್ಟು ಎಂಬುದು ಖಚಿತವಿಲ್ಲ. ಪ್ರಭುತ್ವದ ಬೆಂಬಲ ಇಲ್ಲದ ಕ್ರಿಪ್ಟೊ ಕರೆನ್ಸಿಗಳ ಮೇಲೆ ಹೂಡಿಕೆ ಮಾಡಿ ಲಾಭ ಮಾಡಿಕೊಂಡವರು ಎಷ್ಟು, ನಷ್ಟಕ್ಕೆ ಗುರಿಯಾದವರು ಎಷ್ಟು ಎಂಬುದರ ಲೆಕ್ಕ ಕೂಡ ಖಚಿತವಾಗಿ ಇಲ್ಲ. ಇಂತಹ ಸಂದರ್ಭದಲ್ಲಿ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಯು (ಎಎಸ್‌ಸಿಐ) ಸ್ವಾಗತಾರ್ಹ ಹೆಜ್ಜೆಯೊಂದನ್ನು ಇರಿಸಿದೆ. ಇನ್ನು ಮುಂದೆ ಕ್ರಿಪ್ಟೊ ಕರೆನ್ಸಿಗಳಿಗೆ ಸಂಬಂಧಿಸಿದ ಜಾಹೀರಾತುಗಳ ಜೊತೆಯಲ್ಲಿ, ‘ಕ್ರಿಪ್ಟೊ ಉತ್ಪನ್ನಗಳು ಕಾನೂನು ನಿಯಂತ್ರಣಕ್ಕೆ ಒಳಪಟ್ಟಿಲ್ಲ ಹಾಗೂ ಇಲ್ಲಿ ಮಾಡುವ ಹೂಡಿಕೆಗಳಲ್ಲಿ ಅಪಾಯ ಇದ್ದೇ ಇರುತ್ತದೆ’ ಎಂಬ ಸಂದೇಶವನ್ನು ಪ್ರಕಟಿಸಬೇಕು, ಪ್ರಸಾರ ಮಾಡಬೇಕು ಎಂದು ಎಎಸ್‌ಸಿಐ ತಾಕೀತು ಮಾಡಿದೆ. ಎಲ್ಲ ರೀತಿಯಿಂದಲೂ ಕಾನೂನಿನ ಚೌಕಟ್ಟಿಗೆ ಒಳಪಟ್ಟಿರುವ ಮ್ಯೂಚುವಲ್‌ ಫಂಡ್, ಈಕ್ವಿಟಿ ಹೂಡಿಕೆಗಳ ಬಗ್ಗೆಯೇ ಸಂಪೂರ್ಣ ಅರಿವು ನಮ್ಮಲ್ಲಿ ಎಲ್ಲರಲ್ಲಿ ಇಲ್ಲ. ಇಂತಹ ಕಾನೂನುಬದ್ಧ ಹೂಡಿಕೆಗಳ ವಿಚಾರದಲ್ಲಿಯೂ ಭಯ, ಆತಂಕ, ತಪ್ಪು ಕಲ್ಪನೆಗಳು ಜನರಲ್ಲಿ ಇವೆ. ಹೀಗಿರುವಾಗ, ಸಂಪೂರ್ಣವಾಗಿ ಊಹೆಗಳ ಆಧಾರದಲ್ಲಿ ನಡೆಯುವ ಕ್ರಿಪ್ಟೊ ಕರೆನ್ಸಿ ಹೂಡಿಕೆ ವಹಿವಾಟುಗಳ ವಿಚಾರದಲ್ಲಿ ಜನರು ಸಾಕ್ಷರರಾಗಲು ಬಹಳ ಕಾಲ ಬೇಕು. ಹೀಗಾಗಿ, ಜಾರಿಗೆ ಬರಲಿರುವ ನಿಯಮಗಳು, ಇಂತಹ ‘ಆಸ್ತಿ’ಗಳಲ್ಲಿ ಹೂಡಿಕೆ ಮಾಡುವ ಮೊದಲು ಅವುಗಳನ್ನು ಪರಿಪೂರ್ಣವಾಗಿ ಅರಿಯಬೇಕಿರುವುದರ ಅಗತ್ಯವನ್ನು ಕೂಡ ಹೇಳುತ್ತಿವೆ.

ಕ್ರಿಪ್ಟೊ ಕರೆನ್ಸಿಗಳು ಅಥವಾ ಇತರ ವರ್ಚುವಲ್ ಡಿಜಿಟಲ್ ಆಸ್ತಿಗಳ (ವಿಡಿಎ) ವಹಿವಾಟಿನಲ್ಲಿ ನಷ್ಟ ಉಂಟಾದರೆ ಕಾನೂನಿನ ಮೂಲಕ ಪರಿಹಾರ ಸಿಗದೇ ಇರಬಹುದು ಎಂಬ ಸಂದೇಶವನ್ನು ಕೂಡ ಈ ಜಾಹೀರಾತುಗಳು ಒಳಗೊಂಡಿರಬೇಕು. ಈ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರುತ್ತವೆ. ಕ್ರಿಪ್ಟೊ ಕರೆನ್ಸಿಗಳ ಮೇಲಿನ ಹೂಡಿಕೆಯಿಂದ ಬರುವ ಲಾಭಕ್ಕೆ ಶೇಕಡ 30ರಷ್ಟು ತೆರಿಗೆ ವಿಧಿಸುವ ಕೇಂದ್ರ ಬಜೆಟ್ ಪ್ರಸ್ತಾವ ಕೂಡ ಅಂದಿನಿಂದಲೇ ಜಾರಿಗೆ ಬರಲಿದೆ. ತೆರಿಗೆ ವಿಧಿಸಲಾಗಿದೆ ಎಂದಮಾತ್ರಕ್ಕೆ ಕ್ರಿಪ್ಟೊ ಕರೆನ್ಸಿಗಳಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ ಎಂದು ಭಾವಿಸಬಾರದು ಎಂಬ ಎಚ್ಚರಿಕೆಯ ಕಿವಿಮಾತನ್ನು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಕೇಂದ್ರ ಸರ್ಕಾರದ ಕಿವಿಮಾತು ಹಾಗೂ ಏಪ್ರಿಲ್‌ 1ರಿಂದ ಜಾರಿಗೆ ಬರಲಿರುವ ಜಾಹೀರಾತು ನಿಯಮಗಳನ್ನು ಒಟ್ಟಿಗೆ ಓದಿಕೊಂಡರೆ, ಕ್ರಿಪ್ಟೊ ಕರೆನ್ಸಿಗಳ ಮೇಲಿನ ಹೂಡಿಕೆಯಲ್ಲಿ ಇರುವ ಅಪಾಯಗಳ ಬಗ್ಗೆ ಜನಸಾಮಾನ್ಯರಿಗೆ ಪ್ರಾಥಮಿಕ ಹಂತದ ಅರಿವು ಮೂಡಬಹುದು. ಸ್ಮಾರ್ಟ್‌ಫೋನ್‌ ಮೂಲಕವೂ ಡಿಜಿಟಲ್ ಆಸ್ತಿಗಳ ಮೇಲೆ ಸುಲಭವಾಗಿ ಹೂಡಿಕೆ ಮಾಡಲು ಸಾಧ್ಯವಾಗಿರುವ ಇಂದಿನ ಸಂದರ್ಭದಲ್ಲಿ, ಇಲ್ಲಿ ವಂಚನೆ ನಡೆದಲ್ಲಿ ಕಾನೂನು ಜಾರಿ ಸಂಸ್ಥೆಗಳ ಮೂಲಕ ನ್ಯಾಯ ಕೇಳಬಹುದು ಎಂದು ಜನಸಾಮಾನ್ಯರು ಭಾವಿಸಿರುವ ಸಾಧ್ಯತೆ ಇದೆ. ಆದರೆ, ಅಂತಹ ಯಾವುದೇ ಭರವಸೆಯನ್ನು ಪ್ರಭುತ್ವವು ವಿಡಿಎ ವಿಚಾರದಲ್ಲಿ ನೀಡಿಲ್ಲ ಎಂಬುದು ಇನ್ನು ಮುಂದೆ ಇವುಗಳಲ್ಲಿ ಹೂಡಿಕೆಗೆ ಮುಂದಾಗುವವರಿಗೆ ಸಿಗಲಿದೆ. ಕ್ರಿಪ್ಟೊ ಕರೆನ್ಸಿಗಳಲ್ಲಿನ ಹೂಡಿಕೆ ಅಪಾಯಕಾರಿ ಎಂಬ ಸಂದೇಶ ಹಾಗೂ ವಂಚನೆ ನಡೆದ ಸಂದರ್ಭದಲ್ಲಿ ಕಾನೂನಿನ ನೆರವು ಸಿಗದೆ ಇರಬಹುದು ಎಂಬ ಮಾಹಿತಿಯು ಜನರಿಗೆ ಪ್ರಾದೇಶಿಕ ಭಾಷೆಗಳಲ್ಲಿಯೇ ಲಭ್ಯವಾಗುವಂತೆ ಆದರೆ ಹೆಚ್ಚು ಪ್ರಯೋಜನಕಾರಿ.

ಕೆಲವು ಕ್ರಿ‍ಪ್ಟೊ ಕರೆನ್ಸಿ ವಿನಿಮಯ ವೇದಿಕೆಗಳು ಸೆಲೆಬ್ರಿಟಿಗಳ ಜೊತೆ ಒಪ್ಪಂದ ಮಾಡಿಕೊಂಡು, ಅವರ ಮೂಲಕ ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಪ್ರಚಾರ ಮಾಡುತ್ತಿವೆ. ಯಾವುದೇ ವಿಡಿಎ ಪರ ರಾಯಭಾರಿ ಆಗುವ ಮೊದಲು ಸೆಲೆಬ್ರಿಟಿಗಳು ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕು ಎಂದು ಮಾರ್ಗಸೂಚಿಯು ತಾಕೀತು ಮಾಡಿದೆ. ಇದು ಕೂಡ ಸಾಮಾನ್ಯ ಹೂಡಿಕೆದಾರರ ಹಿತವನ್ನು ಒಂದಿಷ್ಟು ಮಟ್ಟಿಗೆ ಕಾಯಬಹುದು. ವಿಡಿಎ ಮೇಲಿನ ಹೂಡಿಕೆಗಳು ಮುಂದಿನ ದಿನಗಳಲ್ಲಿ ಯಾವ ಪ್ರಮಾಣದಲ್ಲಿ ಆಗಬಹುದು ಎಂಬುದನ್ನು ಈಗಲೇ ಊಹಿಸಲು ಆಗದು. ಹೂಡಿಕೆಗಳು ಹೆಚ್ಚಳ ಕಾಣುವ ಸಾಧ್ಯತೆ ಜಾಸ್ತಿಯೇ ಇದೆ. ಹೀಗಾಗಿ, ಕ್ರಿಪ್ಟೊ ಕರೆನ್ಸಿಗಳ ವಿಚಾರವಾಗಿ ಸ್ಪಷ್ಟ ಕಾನೂನನ್ನು ಆದಷ್ಟು ಬೇಗ ತರಬೇಕು. ಭಾರತದ ಮಟ್ಟಿಗೆ ಕ್ರಿಪ್ಟೊ ಕರೆನ್ಸಿಗಳು ಹಾಗೂ ಇತರ ವಿಡಿಎಗಳು ಕಾನೂನುಬದ್ಧ ಹೂಡಿಕೆ ವರ್ಗ ಹೌದೋ ಅಲ್ಲವೋ ಎಂಬುದನ್ನು ಸರ್ಕಾರವೊಂದೇ ಖಚಿತಪಡಿಸಬಲ್ಲದು. ಕಾನೂನಿನ ಮೂಲಕ ಆ ಕೆಲಸ ಬಹಳ ಬೇಗ ಆಗಬೇಕು. ಇದು ಸಣ್ಣ ಹೂಡಿಕೆದಾರರ ಹಿತ ಕಾಯುವ ತುರ್ತು ಕೆಲಸ ಎಂದು ಸರ್ಕಾರ ಭಾವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT