ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಅನಾದರ: ಒಕ್ಕೂಟ ವ್ಯವಸ್ಥೆಗೆ ಮಾಡಿದ ಅಪಚಾರ

Last Updated 19 ಜನವರಿ 2021, 19:30 IST
ಅಕ್ಷರ ಗಾತ್ರ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದಲ್ಲಿ ಭಾಗವಹಿಸಿದ ಎರಡು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಸಂಪೂರ್ಣ ಅನಾದರಕ್ಕೆ ಒಳಗಾಗಿದೆ. ಬೆಂಗಳೂರಿನಲ್ಲಿ ನಡೆದ ತುರ್ತು ಸ್ಪಂದನ ಸಹಾಯ ಘಟಕದ (ಇಆರ್‌ಎಸ್‌ಎಸ್‌) ಉದ್ಘಾಟನೆ ಹಾಗೂ ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌) ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಸ್ಥಳವೇ ಇರಲಿಲ್ಲ. ಇದು, ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ರಾಜ್ಯದ ಆಡಳಿತ ಭಾಷೆಗೆ ಆದ ಅಪಮಾನ. ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಬಗೆದ ಅಪಚಾರವೂ ಹೌದು. ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ತದ್ವಿರುದ್ಧವಾದ ಈ ನಡೆ ಸಹಜವಾಗಿಯೇ ಕನ್ನಡಿಗರಲ್ಲಿ ಆಕ್ರೋಶ ಉಕ್ಕಿಸಿದೆ. ‘ಹಿಂದಿ ಹೇರಿಕೆ’ಗೆ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಮುಂಚಿನಿಂದಲೂ ಪ್ರಬಲವಾದ ವಿರೋಧವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ದೇಶದಾದ್ಯಂತ ಹಿಂದಿಯನ್ನು ತೂರಿಸಲು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಹೀಗಿದ್ದೂ ಹಿಂದಿ ಹೇರಿಕೆ ಹುನ್ನಾರಗಳು ನಿಂತಿಲ್ಲ. ರಾಜ್ಯದಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕು ಎಂಬ ನಿಯಮ ಇದೆ. ಅಲ್ಲದೆ, ಆಯಾ ರಾಜ್ಯದಲ್ಲಿ ಸಭೆ ನಡೆಸುವಾಗ ಅಲ್ಲಿನ ಸ್ಥಳೀಯ ಭಾಷೆಗೆ ಜಾಗ ಇರಬೇಕಾದುದು ನೈತಿಕವಾಗಿ ಅಪೇಕ್ಷಣೀಯ ಕೂಡ. ಸಮಾರಂಭದ ಸಂಘಟನೆಯ ಹೊಣೆ ಹೊತ್ತವರು ಕನ್ನಡವನ್ನು ಅನಾದರದಿಂದ ಕಾಣುವ ಮಟ್ಟಕ್ಕೆ ಇಳಿಯಬಾರದಿತ್ತು.

ಭಾರತಕ್ಕೆ ಒಂದು ರಾಷ್ಟ್ರಭಾಷೆ ಬೇಕು ಎಂದು ಪ್ರತಿಪಾದಿಸುತ್ತಾ, ಹಿಂದಿ ಬಗ್ಗೆ ಭಾವನಾತ್ಮಕವಾಗಿ ಸಂಕಥನಗಳನ್ನು ಕಟ್ಟಲಾಗಿದೆ. ಬೇರೆ ಪ್ರಾದೇಶಿಕ ಭಾಷೆಗಳಿಗೆ ಇಲ್ಲದ ಮನ್ನಣೆಯನ್ನು ಹಿಂದಿಗೆ ಹಿಂದಿನಿಂದಲೂ ನೀಡಲಾಗುತ್ತಿದೆ. ಸಂವಿಧಾನದಲ್ಲಿ ಆಡಳಿತ ಭಾಷೆಯ ಕುರಿತು ಪ್ರಸ್ತಾಪ ಇದೆ. ಹಿಂದಿ ಹಾಗೂ ಇಂಗ್ಲಿಷ್‌ ಎರಡನ್ನೂ ಕೇಂದ್ರ ಸರ್ಕಾರದ ಆಡಳಿತ ಭಾಷೆಗಳನ್ನಾಗಿ ಅಲ್ಲಿ ಗುರ್ತಿಸಲಾಗಿದೆಯೇ ವಿನಾ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ನೋಡಿಲ್ಲ. ಆಯಾ ರಾಜ್ಯವು ತನ್ನ ಪ್ರಾದೇಶಿಕ ಭಾಷೆಯನ್ನು ಆಡಳಿತ ಭಾಷೆಯಾಗಿ ಹೊಂದಲು ಸಂವಿಧಾನವು ಅವಕಾಶ ಮಾಡಿಕೊಟ್ಟಿದೆ. ಪ್ರಜೆಗಳು ಹೇಳುವುದು ಆಡಳಿತಗಾರರಿಗೂ ಆಡಳಿತಗಾರರು ಹೇಳುವುದು ಪ್ರಜೆಗಳಿಗೂ ಅರ್ಥವಾಗಬೇಕು. ಅದಕ್ಕೆ ಪ್ರಾದೇಶಿಕ ಭಾಷೆಯೇ ಸಮರ್ಥ ಸಾಧನ. ಹೀಗಾಗಿ ಆಯಾ ರಾಜ್ಯದಲ್ಲಿ ಸ್ಥಳೀಯ ಭಾಷೆಗೆ ಅಗ್ರಮಣೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ‘ತ್ರಿಭಾಷಾ’ ಸೂತ್ರವನ್ನು ದೇಶ ಒಪ್ಪಿಕೊಂಡಿದ್ದೇ ಈ ಕಾರಣದಿಂದ. ಯಾವ ಭಾಷೆಯೂ ಮೇಲಲ್ಲ, ಯಾವುದೂ ಕೀಳಲ್ಲ. ಭಾಷೆಯಾಗಿ ಹಿಂದಿ ಕುರಿತು ಯಾರಿಗೂ ದ್ವೇಷ ಇಲ್ಲ. ಅದರ ಹೇರಿಕೆ ವಿರುದ್ಧವಷ್ಟೇ ಎಲ್ಲರ ಆಕ್ಷೇಪ. ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕೆ ಸುದೀರ್ಘ ಇತಿಹಾಸವೇ ಇದೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗಲೂ ಇಂತಹ ಪ್ರಯತ್ನಗಳು ನಡೆದಿದ್ದವು. ಈಗ ಬಿಜೆಪಿ ಸರದಿ. ಸೋಜಿಗವೆಂದರೆ ತಮಿಳುನಾಡಿನಲ್ಲಿ ಶಾ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ ಜತೆಗೆ ತಮಿಳಿಗೂ ಸ್ಥಾನ ಇತ್ತು. ‘ಹಿಂದಿ ಹೇರಿಕೆ’ ವಿರುದ್ಧದ ತಮಿಳು ಭಾಷಿಕರ ಹೋರಾಟ ಬಿಸಿ ಮುಟ್ಟಿಸಿದರೆ, ಕನ್ನಡಿಗರ ಔದಾರ್ಯವು ಕನ್ನಡವನ್ನು ಕಡೆಗಣಿಸುವಂತೆ ಮಾಡಿದೆ. ಬಹುತ್ವವನ್ನು ಕಾಪಾಡಿಕೊಳ್ಳುವ ಕುರಿತು ಬಿಜೆಪಿಯ ಕೆಲ ಮುಖಂಡರಿಗೆ ಒಲವು ಇದ್ದಂತಿಲ್ಲ. ‘ಹಿಂದಿಗೆ ನೀಡಿದ ವಿಶೇಷ ಸ್ಥಾನಮಾನವನ್ನೇ, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಗುರ್ತಿಸಿದ ಎಲ್ಲ ಭಾಷೆಗಳಿಗೂ ನೀಡಬೇಕು’ ಎಂದು ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ಹೇರಬೇಕು. ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಯಥೋಚಿತ ಆದ್ಯತೆ ಸಿಗುವಂತೆ ನೋಡಿಕೊಳ್ಳಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ. ರಾಜ್ಯದ ಭಾಷೆಯ ಪರವಾಗಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳೂ ಒಕ್ಕೊರಲಿನಿಂದ ಮಾತನಾಡಬೇಕು. ಈ ವಿಚಾರಕ್ಕೆ ಪಕ್ಷ ಅಥವಾ ಸಿದ್ಧಾಂತದ ನೆಲೆಯಲ್ಲಿ ಸ್ಪಂದಿಸಬೇಕಾದ ಅಗತ್ಯ ಖಂಡಿತ ಇಲ್ಲ. ಕನ್ನಡವನ್ನೂ ಒಳಗೊಂಡಂತೆ ದೇಶದ ಎಲ್ಲ ಭಾಷೆಗಳಿಗೂ ಸಮಾನ ಗೌರವ ಸಿಗಬೇಕು; ಯಾವುದೋ ಒಂದು ಭಾಷೆಯನ್ನು ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಆ ಭಾಷೆಗೆ ವಿಶೇಷ ಮನ್ನಣೆ ಕೊಡುವುದು ಸರ್ವಥಾ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT