ಜನಸಾಮಾನ್ಯರಿಗೆ ನೈತಿಕ ಮಾದರಿಗಳನ್ನು ಹಾಕಿಕೊಡಬೇಕಾದ ಜನಪ್ರತಿನಿಧಿಗಳು, ತಮ್ಮ ಬಾಯ್ತುರಿಕೆಯ ಮಾತುಗಳಿಂದ ಲಿಂಗಸಂವೇದನೆಯನ್ನು ನಿರಂತರವಾಗಿ ಗಾಸಿಗೊಳಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಡಿದ್ದಾರೆ ಎನ್ನಲಾದ ಅವಹೇಳನಕಾರಿ ಮಾತುಗಳು.

ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ; ರವಿಕುಮಾರ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿ ಬಗ್ಗೆಯೂ ರವಿಕುಮಾರ್ ಅವಹೇಳನಕಾರಿ ಪದ ಬಳಸಿದ್ದು, ಅವರಿಗೆ ‘ಅಪರಾಧಿಕ ಚಾಳಿ’ ಇದೆ ಎಂದು ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಪ್ರಾಸಿಕ್ಯೂಟರ್ ಹೇಳಿರುವುದು ವ್ಯಕ್ತಿಸಂಬಂಧ ಹೇಳಿಕೆ ಮಾತ್ರವಾಗಿರದೆ, ಸಮಕಾಲೀನ ರಾಜಕಾರಣದ ನೈತಿಕ ಅಧಃಪತನವನ್ನೂ ಸೂಚಿಸುವಂತಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಅನೇಕ ರಾಜಕಾರಣಿಗಳು ಒಡಕುಬಾಯಿ ಹೊಂದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕಳೆದ ಡಿಸೆಂಬರ್ನಲ್ಲಿ, ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕುರಿತು ಬಳಸಿದ ಪದವೊಂದು ಸದನದ ಒಳಹೊರಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ನಾಲಿಗೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವ ರಾಜಕಾರಣಿಗಳು ಪರಸ್ಪರ ದೂಷಿಸಿಕೊಳ್ಳುವ ಸಂದರ್ಭದಲ್ಲಿ ಮಹಿಳೆಯರ ಸೀರೆ, ಹೂವು, ಕುಂಕುಮ, ಬಳೆಗಳ ಬಗ್ಗೆ ನಿಕೃಷ್ಟವಾಗಿ ಮಾತನಾಡುವುದು ಎಷ್ಟು ಸಹಜವಾಗಿದೆ ಎಂದರೆ, ಆ ಮಾತುಗಳನ್ನು ಮಹಿಳಾ ಜನಪ್ರತಿನಿಧಿಗಳೂ ಆಕ್ಷೇಪಿಸದೆ ಮೌನವಾಗಿಯೇ ಒಪ್ಪಿಕೊಳ್ಳುತ್ತಿರುವಂತಿದೆ. ಅಸೂಕ್ಷ್ಮವಾಗಿ ಮಾತನಾಡುವ ರಾಜಕಾರಣಿಗಳ ಕಣ್ಣಿಗೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಗಳ ತಾಯಂದಿರು ದಾರಿ ತಪ್ಪಿರುವಂತೆ ಕಾಣಿಸಿದ್ದಾರೆ.

ಮಹಿಳೆಯರು ಅಡುಗೆ ಮನೆಗೆ ಸೀಮಿತ ವಾಗಿರಬೇಕು ಎಂದೊಬ್ಬರು ಅಪ್ಪಣೆ ಕೊಡಿಸಿದರೆ, ಮಹಿಳೆಯೊಬ್ಬರು ಹಣೆಗೆ ಬೊಟ್ಟಿಡದಿರುವುದು ಮತ್ತೊಬ್ಬರಿಗೆ ಅಪರಾಧವಾಗಿ ಕಾಣಿಸಿರುವುದಿದೆ. ಹೀಗೆ, ಲಿಂಗಸಂವೇದನೆಯ ಸೂಕ್ಷ್ಮಗಳನ್ನು ಮರೆತು ನಿರ್ಲಜ್ಜೆಯಿಂದ ಮಾತನಾಡುವ ಜನಪ್ರತಿನಿಧಿಗಳು, ಜನರ ಮೂಲಕ ತಮಗೆ ದೊರೆತ ಅಧಿಕಾರದಿಂದ ಏನನ್ನು ಬೇಕಾದರೂ ಮಾತನಾಡಿ ದಕ್ಕಿಸಿಕೊಳ್ಳಬಲ್ಲೆವು ಎನ್ನುವ ಭಂಡತನ ಹೊಂದಿರುವಂತಿದೆ. ಜನಪ್ರತಿನಿಧಿಗಳ ನಿರ್ಲಜ್ಜ ಮಾತುಗಳ ಹಿಂದೆ ಪುರುಷ ಅಹಂಕಾರ ಹಾಗೂ ಹೆಣ್ಣನ್ನು ಭೋಗದ ದೃಷ್ಟಿಕೋನದಿಂದಷ್ಟೇ ನೋಡುವ ಕೊಳಕು ಮನಃಸ್ಥಿತಿಯ ಜೊತೆಗೆ ಅಧಿಕಾರದ ಮದವೂ ಇರುತ್ತದೆ. ಮೊದಲ ಸಲದ ದುಡುಕಿನ ಮಾತನ್ನು ಬಾಯ್ತಪ್ಪಿನ ಅಪ್ರಜ್ಞಾಪೂರ್ವಕ ಹೇಳಿಕೆಯೆಂದು ಭಾವಿಸಲಿಕ್ಕೆ ಸಾಧ್ಯವಿದೆ. ಆದರೆ, ತಪ್ಪನ್ನು ತಿದ್ದಿಕೊಳ್ಳದೆ, ಅವಹೇಳನಕಾರಿ ಮಾತುಗಳನ್ನು ಮತ್ತೆ ಮತ್ತೆ ಆಡುವುದನ್ನು ಚಾಳಿ ಎಂದೇ ಪರಿಗಣಿಸಬೇಕಾಗುತ್ತದೆ. ಅಂಥ ಚಾಳಿಗೆ ಕಾನೂನು ಕ್ರಮದ ಜೊತೆಗೆ ಮಾನಸಿಕ ತಜ್ಞರಿಂದ ಚಿಕಿತ್ಸೆಯ ಅಗತ್ಯವೂ ಇದೆ.

ತುಟಿ ಮೀರಿ ಮಾತನಾಡುವವರನ್ನು ಸರಿಪಡಿಸುವ ಪ್ರಾಥಮಿಕ ಹೊಣೆಗಾರಿಕೆ ಆಯಾ ಪಕ್ಷದ ಹಿರಿಯರದಾಗಿರುತ್ತದೆ. ಆದರೆ, ರವಿಕುಮಾರ್ ಅವರು ಮಾತನಾಡಿದ್ದು ಸರಿಯಲ್ಲವೆಂದು ಹೇಳುವ ನೈತಿಕತೆಯನ್ನು ಬಿಜೆಪಿಯ ಹಿರಿಯ ನಾಯಕರು ಪ್ರದರ್ಶಿಸದಿರುವುದು ದುರದೃಷ್ಟಕರ. ತಪ್ಪು ಮಾಡಿದವರ ಕಿವಿಹಿಂಡುವ ಬದಲು, ಅಧಿಕಾರಿಗಳ ಬಗ್ಗೆ ಹಲವು ಬಾರಿ ಅವಹೇಳನಕಾರಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ. ಹೀಗೆ ಪ್ರಶ್ನಿಸುವ ಅವರು, ಇನ್ನೊಬ್ಬರು ಮಾಡಿರಬಹುದಾದ ತಪ್ಪು ನಮ್ಮ ತಪ್ಪಿಗೆ ಸಮರ್ಥನೆಯಾಗುವುದಿಲ್ಲ ಎನ್ನುವುದನ್ನು ಮರೆತಿರುವಂತಿದೆ.

ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಡಬೇಕಾದ ಜನಪ್ರತಿನಿಧಿಗಳು ಸಾರ್ವಜನಿಕ ಸಭ್ಯತೆಯನ್ನು ರೂಢಿಸಿಕೊಳ್ಳುವುದು ಅಗತ್ಯ. ಆಡುವ ಮಾತಿನ ಅರ್ಥ ಮತ್ತು ಪರಿಣಾಮದ ಅರಿವು ಅವರಿಗೆ ಇರಲೇಬೇಕಾಗುತ್ತದೆ. ಜನಪ್ರತಿನಿಧಿಗಳ ಮಾತುಗಳು ಅವರು ಪ್ರತಿನಿಧಿಸುವ ಶಾಸನಸಭೆ ಹಾಗೂ ಪಕ್ಷದ ಘನತೆಗೂ ಸಂಬಂಧಿಸಿದ್ದಾಗಿರುತ್ತವೆ. ಆಡಿದ ಮಾತಿಗೆ ಕ್ಷಮೆ ಕೇಳುವ ಸೌಜನ್ಯವೂ ಇಲ್ಲದೆ ಹೋದರೆ, ಅಂಥ ರಾಜಕಾರಣಿಗಳ ಸಾಮಾಜಿಕ ಬದ್ಧತೆ ಪ್ರಶ್ನಾರ್ಹವಾಗುತ್ತದೆ. ರವಿಕುಮಾರ್ ಅವರ ವಿವಾದ, ಲಿಂಗಸಂವೇದನೆಗೆ ಸಂಬಂಧಿಸಿದಂತೆ ಎಲ್ಲ ರಾಜಕಾರಣಿಗಳಿಗೆ ಪಾಠವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.