ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪರಿಸರ ಸಂರಕ್ಷಣೆ ಕಾಯ್ದೆ ಅಳ್ಳಕಗೊಳಿಸುವುದು ಬೇಡ

Last Updated 12 ಜುಲೈ 2022, 19:30 IST
ಅಕ್ಷರ ಗಾತ್ರ

ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಮೂರು ಮಹತ್ವದ ಕಾಯ್ದೆಗಳಲ್ಲಿ ಶಿಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕೈಬಿಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ಆ ಕಾಯ್ದೆಗಳೇ ದುರ್ಬಲಗೊಳ್ಳುವ ಆತಂಕ ಎದುರಾಗಿದೆ. ಕಾಯ್ದೆಗಳನ್ನು ಹೀಗೆ ಅಳ್ಳಕಗೊಳಿಸುವುದರಿಂದ ಪರಿಸರ ಸಂರಕ್ಷಣೆಯ ಮೂಲ ಉದ್ದೇಶವೇ ಈಡೇರದೆ ಹೋಗುತ್ತದೆ ಎಂಬ ಸಂಗತಿಯು ನೀತಿ ನಿರೂಪಕರ ತಲೆಗೆ ಹೋಗದಿರುವುದು ಆಶ್ಚರ್ಯ. ಪರಿಸರ ಸಂರಕ್ಷಣಾ ಕಾಯ್ದೆ–1986, ಜಲ ಮತ್ತು ವಾಯು ಕಾಯ್ದೆಗಳಿಂದ ಶಿಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ತಪ್ಪು ಎಸಗಿದರೂ ಶಿಕ್ಷೆಯೇ ಇಲ್ಲ ಎಂದಾದರೆ ಪರಿಸರಕ್ಕೆ ಹಾನಿ ಮಾಡಬಾರದು ಎಂಬ ಭೀತಿ ಅಂಥವರಲ್ಲಿ ಮೂಡುವುದಾದರೂ ಹೇಗೆ? ನಿಯಮಗಳ ಉಲ್ಲಂಘನೆ ಮಾಡಿದರೆಹಾಲಿ ಕಾಯ್ದೆಗಳ ಪ್ರಕಾರ ದಂಡ ಇಲ್ಲವೇ ಐದು ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಪದೇ ಪದೇ ಅದೇ ತಪ್ಪನ್ನು ಮಾಡಿದವರು ಇನ್ನೂ ದೊಡ್ಡ ಮೊತ್ತದ ದಂಡ ಹಾಗೂ ಅಧಿಕ ಅವಧಿಯ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದರೆ, ಈ ನಿಯಮಗಳಲ್ಲಿ ಬದಲಾವಣೆ ತರುವ ಪ್ರಸ್ತಾವವನ್ನು ಸರ್ಕಾರ ಈಗ ಮುಂದಿಟ್ಟಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಸಹ ಆಹ್ವಾನಿಸಿದೆ. ಸಲಹೆ ಆಹ್ವಾನಿಸಲು ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿ ಸದ್ಯದ ಕಠಿಣ ನಿಯಮಗಳ ಕುರಿತು ಸರ್ಕಾರವೇ ಆತಂಕ ವ್ಯಕ್ತಪಡಿಸಿದೆ. ‘ಸಣ್ಣಪುಟ್ಟ ಉಲ್ಲಂಘನೆಗಳಿಗೆ ಜೈಲು ಶಿಕ್ಷೆಯ ಭಯವನ್ನು ಹೋಗಲಾಡಿಸಲು’ ಕಾಯ್ದೆಗಳಲ್ಲಿ ಅಗತ್ಯ ಬದಲಾವಣೆ ತರಲು ಉದ್ದೇಶಿಸಲಾಗಿದೆ ಎಂದೂ ಅದು ತಿಳಿಸಿದೆ.

ಕಾಯ್ದೆಗಳ ಸ್ವರೂಪದಲ್ಲಿ ಒಂದುವೇಳೆ ಏನಾದರೂ ಬದಲಾವಣೆಯಾದರೆ ಕೆಲವು ನಿಯಮಗಳ ಉಲ್ಲಂಘನೆಗೆ ಕೇವಲ ದಂಡವನ್ನು ವಿಧಿಸಲಾಗುತ್ತದೆಯೇ ವಿನಾ ಜೈಲು ಶಿಕ್ಷೆಯ ಭೀತಿ ಇರುವುದಿಲ್ಲ. ಆದರೆ, ಪರಿಸರ ನಿಯಮಗಳ ಉಲ್ಲಂಘನೆಯ ಪರಿಣಾಮವಾಗಿ ಸಾವು ಸಂಭವಿಸಿದರೆ ಇಲ್ಲವೇ ಗಂಭೀರವಾಗಿ ಗಾಯಗೊಂಡರೆ ಅಂತಹ ಅಪರಾಧಗಳಿಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಅವಕಾಶ ಈಗಿನಂತೆಯೇ ಮುಂದುವರಿಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಅಧಿಕಾರಿಯೇ ದಂಡದ ಪ್ರಮಾಣವನ್ನೂ ನಿರ್ಧರಿಸುತ್ತಾನೆ ಮತ್ತು ದಂಡದ ರೂಪದಲ್ಲಿ ಬಂದ ಮೊತ್ತ ‘ಪರಿಸರ ಸಂರಕ್ಷಣಾ ನಿಧಿ’ಗೆ ಹೋಗುತ್ತದೆ. ಬಾಧಿತರಿಗೆ ಆ ನಿಧಿಯಿಂದಲೇ ಪರಿಹಾರವನ್ನು ನೀಡಲಾಗುತ್ತದೆ. ಅಲ್ಲದೆ, ದಂಡದ ಗರಿಷ್ಠ ಮಿತಿಯನ್ನು ₹ 5 ಕೋಟಿಗೆ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಒಂದುವೇಳೆ ಪರಿಸರಕ್ಕೆ ಉಂಟಾದ ಹಾನಿಯ ಪ್ರಮಾಣವು ದಂಡದ ಗರಿಷ್ಠ ಮಿತಿಗಿಂತಲೂ ಹೆಚ್ಚಾಗಿದ್ದರೆ ಹಾನಿಯಾದ ಪ್ರಮಾಣಕ್ಕೆ ಅನುಗುಣವಾಗಿಯೇ ದಂಡದ ಮೊತ್ತವನ್ನು ವಸೂಲಿ ಮಾಡಲು ಪ್ರಸ್ತಾವಿತ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪರಿಸರ ಕಾಯ್ದೆಗಳ ಈ ಪ್ರಸ್ತಾವಿತ ತಿದ್ದುಪಡಿಗಳಲ್ಲಿ ಅಪರಾಧಗಳ ವರ್ಗೀಕರಣದ ಕುರಿತು ಯಾವುದೇ ವಿವರ ಇಲ್ಲ. ಆದರೆ, ಕೆಲವು ನಿಯಮಗಳ ಉಲ್ಲಂಘನೆಗೆ ಜೈಲು ಶಿಕ್ಷೆಯನ್ನೇ ಕೈಬಿಡುವುದರಿಂದ ಉಲ್ಲಂಘನೆಗಳ ಕುರಿತು ಹೆಚ್ಚು ಉದಾರವಾಗಿ ಮತ್ತು ಅಷ್ಟೇ ಸಹನೆಯಿಂದ ನಡೆದುಕೊಂಡಂತೆ ಆಗುತ್ತದೆ. ‘ಪರಿಸರಕ್ಕೆ ಸಂಬಂಧಿಸಿದ ಈ ಕಾಯ್ದೆಗಳ ಅಡಿಯಲ್ಲಿ ದಾಖಲಾಗುವ ಮೊಕದ್ದಮೆಗಳಲ್ಲಿ ಜೈಲು ಶಿಕ್ಷೆಯಾಗುವ ಪ್ರಮಾಣ ತುಂಬಾ ಕಡಿಮೆ. ಹೀಗಾಗಿ ಶಿಕ್ಷೆಯ ಕೆಲವು ನಿಯಮಗಳನ್ನು ಕೈಬಿಡುವುದರಿಂದ ಒಟ್ಟಾರೆ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ’ ಎಂದು ವಾದಿಸಲಾಗಿದೆ. ಆದರೆ, ಎಷ್ಟೋ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟಲು ಜೈಲು ಶಿಕ್ಷೆಯ ಭೀತಿಯೊಂದೇ ಸಾಕು. ಆದ್ದರಿಂದಲೇ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಶಿಕ್ಷೆಗೆ ಅವಕಾಶ ಇರುವ ನಿಯಮಗಳಿಗೆ ವಿಶೇಷ ಮಹತ್ವ. ತಪ್ಪಿತಸ್ಥರಲ್ಲಿ ಹೆಚ್ಚಿನವರು ದಂಡವನ್ನು ಪಾವತಿಸಲು ಸಿದ್ಧರಾಗಿಯೇ ಇರುತ್ತಾರೆ. ದಂಡ ಪಾವತಿಸಿದರೆ ಆಯಿತು, ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಬೆಳೆಯುವ ಅಪಾಯವೂ ಇದರ ಹಿಂದಿದೆ. ಹಲವು ಪ್ರಕರಣಗಳಲ್ಲಿ ದಂಡವನ್ನು ವಸೂಲಿ ಮಾಡಿದ ಮಾತ್ರಕ್ಕೆ ಪರಿಸರ ಅನುಭವಿಸಿದ ಹಾನಿಯನ್ನು ಸರಿದೂಗಿಸಲು ಅಥವಾ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಪರಿಸರ ನಿಯಮಗಳನ್ನುದೊಡ್ಡ ಸಂಸ್ಥೆಗಳು ಉಲ್ಲಂಘಿಸುವುದನ್ನು ದಂಡ ವಿಧಿಸುವುದರಿಂದ ಮಾತ್ರ ತಡೆಯಲು ಸಾಧ್ಯವಿಲ್ಲ. ಪರಿಸರಕ್ಕೆ ಸಂಬಂಧಿಸಿದ ಪ್ರಕರಣಗಳ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ಆಗುವ ವಿಳಂಬವು ಸಮಸ್ಯೆಯನ್ನು ಉಲ್ಬಣ
ಗೊಳಿಸುತ್ತದೆ. ಪ್ರಸ್ತಾವಿತ ತಿದ್ದುಪಡಿಗಳು ಪರಿಸರದ ಸಂರಕ್ಷಣೆಯನ್ನು ಹೇಗೆ ಉತ್ತೇಜಿಸುತ್ತವೆ ಎಂಬ ಪ್ರಶ್ನೆ ಈಗ ಬಹಳ ಪ್ರಸ್ತುತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT