ಗುರುವಾರ , ಮಾರ್ಚ್ 4, 2021
26 °C

ಸಂಪಾದಕೀಯ: ಅಧಿವೇಶನ ನಡೆಸಲು ಮಾರ್ಗ ಹುಡುಕಿ; ಕೋವಿಡ್‌ ನೆಪ ಬದಿಗೆ ಸರಿಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಸಾಂಕ್ರಾಮಿಕವು ನಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಜೀವ ಮತ್ತು ಜೀವನೋಪಾಯಗಳನ್ನು ಅಪಾಯಕ್ಕೆ ತಳ್ಳಿದೆ. ಅರ್ಥ ವ್ಯವಸ್ಥೆಯು ಇನ್ನಿಲ್ಲದ ರೀತಿಯಲ್ಲಿ ಒತ್ತಡಕ್ಕೆ ಒಳಗಾಗಿದೆ. ಉದ್ಯೋಗಗಳು ನಷ್ಟವಾಗಿವೆ. ಹಲವು ಮಹತ್ವದ ವಿಚಾರಗಳು ಮತ್ತು ಸಮಸ್ಯೆಗಳು ದೇಶದ ಮುಂದೆ ಈಗ ಇವೆ. ಕೇಂದ್ರ ಸರ್ಕಾರವು ‘ಕೃಷಿ ಸುಧಾರಣೆ’ಗಾಗಿ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕಾಯ್ದೆಗಳು ರೈತರ ಅತೃಪ್ತಿಗೆ ಕಾರಣವಾಗಿವೆ.

ಈ ಕಾಯ್ದೆಗಳನ್ನು ರದ್ದು ಮಾಡಲೇಬೇಕು ಎಂದು ಆಗ್ರಹಿಸಿ ಪಂಜಾಬ್‌, ಹರಿಯಾಣ ಮತ್ತು ಇತರ ರಾಜ್ಯಗಳ ಸಾವಿರಾರು ರೈತರು ದೆಹಲಿಯ ಗಡಿಯಲ್ಲಿ ಬೀಡುಬಿಟ್ಟು ಹತ್ತಿರ ಹತ್ತಿರ ಒಂದು ತಿಂಗಳಾಯಿತು. ದೆಹಲಿಯಲ್ಲಿ ಈಗಿನ ಉಷ್ಣತೆ ನಾಲ್ಕು ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ. ಅಂತಃಕರಣ ಇರುವ ಯಾವುದೇ ಸರ್ಕಾರವು ವೃದ್ಧರು, ಮಹಿಳೆಯರನ್ನು ಒಳಗೊಂಡ ಪ್ರತಿಭಟನಕಾರರು ಇಂತಹ ಚಳಿಯಲ್ಲಿ ಬೀದಿಯಲ್ಲಿ ಇರಲು ಬಿಡಬಾರದು. ಇದು ಆಂತರಿಕ ಸಮಸ್ಯೆ. ಅತ್ತ ಚೀನಾ ಜತೆಗಿನ ಗಡಿಯಲ್ಲಿ ಉಂಟಾದ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ವಿಚಾರಗಳು ಚರ್ಚೆಯಾಗಬೇಕಾದ, ನಿರ್ಧಾರ ಕೈಗೊಳ್ಳಬೇಕಾದ ಸ್ಥಳವೇ ಸಂಸತ್ತು. ಈ ಬಾರಿಯ ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು. ಚಳಿಗಾಲದ ಅಧಿವೇಶನವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಕೋವಿಡ್‌ನ ಕಾರಣಕ್ಕೆ ಅಧಿವೇಶನ ಕೈಬಿಡಲಾಗಿದೆ ಎಂದು ಸರ್ಕಾರ ಹೇಳಿದೆ. ದೇಶದ ಮುಂದೆ ಇರುವ ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿರೋಧ ಪಕ್ಷಗಳಲ್ಲಿ ಹಲವು ಒತ್ತಾಯಿಸಿದ್ದವು. ಆದರೆ, ಕೋವಿಡ್‌ ಕಾರಣದಿಂದ ಅಧಿವೇಶನಕ್ಕೆ ಹಾಜರಾಗಲು ಕೆಲವು ಪಕ್ಷಗಳು ಹಿಂದೇಟು ಹಾಕಿದ ಕಾರಣಕ್ಕೆ ಚಳಿಗಾಲದ ಅಧಿವೇಶನ ರದ್ದು ಮಾಡಲಾಗಿದೆ; ವಿರೋಧ ಪಕ್ಷಗಳ ಜತೆಗೆ ಸಮಾಲೋಚನೆಯನ್ನೂ ನಡೆಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ತನ್ನ ಜತೆಗೆ ಚರ್ಚೆಯೇ ಮಾಡಿಲ್ಲ ಎಂದು ಪ‍್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಹೇಳಿದೆ. 

ಅಧಿವೇಶನ ನಡೆಸುವ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುವ ರೀತಿಯಲ್ಲಿ ಸರ್ಕಾರದ ವರ್ತನೆ ಇದೆ. ಏಕೆಂದರೆ, ದಿನಕ್ಕೆ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಸಂದರ್ಭದಲ್ಲಿ ಮುಂಗಾರು ಅಧಿವೇಶನ ನಡೆದು, ಸರ್ಕಾರವು ತನಗೆ ಬೇಕಿದ್ದ ಮಸೂದೆಗಳಿಗೆ ಅಂಗೀಕಾರ ಪಡೆದುಕೊಂಡಿತ್ತು. ಈಗ, ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ದಿನವೊಂದಕ್ಕೆ ವರದಿಯಾದ ಪ್ರಕರಣಗಳ ಸಂಖ್ಯೆ 20 ಸಾವಿರದ ಒಳಗೆ ಬಂದಿದೆ. ದೇಶದ ಬಹುತೇಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುವ ಹುಮ್ಮಸ್ಸಿನಲ್ಲಿವೆ.

ಹಲವು ರಾಜ್ಯಗಳಲ್ಲಿ ಕಾಲೇಜುಗಳು ಆರಂಭವಾಗಿವೆ, ಶಾಲೆ ಶುರು ಮಾಡುವ ಬಗ್ಗೆ ಗಂಭೀರ ಚಿಂತನೆಗಳು ನಡೆದಿವೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ, ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿವೆ. ಬಿಹಾರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕೇಂದ್ರದ ಆಡಳಿತಾರೂಢ ಬಿಜೆಪಿಯು ಸಾವಿರಾರು ಜನರನ್ನು ಸೇರಿಸಿ ಭಾರಿ ಸಮಾವೇಶಗಳನ್ನು ನಡೆಸಿದೆ. ಎಲ್ಲ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿರುವಾಗ ಸಂಸತ್‌ ಅಧಿವೇಶನ ಮಾತ್ರ ಬೇಡ ಎನ್ನುವುದಕ್ಕೆ ಅರ್ಥವೇ ಇಲ್ಲ.

ಪ್ರಜಾಪ್ರಭುತ್ವ ಎಂದರೆ ಚುನಾವಣೆ ಅಷ್ಟೇ ಅಲ್ಲ, ಸಂಸತ್ತಿನಲ್ಲಿ ಚರ್ಚೆ ನಡೆಸುವುದು ಈ ವ್ಯವಸ್ಥೆಯ ಬಹುಮುಖ್ಯ ಅಂಶ. ಸಂಸತ್ ಅಧಿವೇಶನವನ್ನೇ ರದ್ದು ಮಾಡಬೇಕಾದಂತಹ ಪ್ರತಿಕೂಲ ಸನ್ನಿವೇಶ ಈಗಂತೂ ಕಾಣುತ್ತಿಲ್ಲ. ಸರ್ಕಾರವು ಅಧಿವೇಶನ ನಡೆಸುವುದಕ್ಕೆ ಇರುವ ದಾರಿಗಳನ್ನು ಹುಡುಕಬೇಕೇ ವಿನಾ, ಅದನ್ನು ನಡೆಸದೇ ಇರುವುದಕ್ಕೆ ಅಲ್ಲ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ ಎಂಬ ಆರೋಪ ಕೇಳಿ ಬಂದರೆ ಅದನ್ನು ಅಲ್ಲಗಳೆಯುವುದು ಸುಲಭವಲ್ಲ.

ಕೃಷಿ ಕ್ಷೇತ್ರದ ಕಾಯ್ದೆಗಳು, ಚೀನಾದ ಅತಿಕ್ರಮಣಕಾರಿ ನಡೆ, ಆರ್ಥಿಕ ಕುಸಿತದಂತಹ ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಲು ಸರ್ಕಾರಕ್ಕೆ ಇಷ್ಟ ಇಲ್ಲದಿರುವುದರಿಂದಲೇ ಚಳಿಗಾಲದ ಅಧಿವೇಶನ ರದ್ದು ಮಾಡಲಾಗಿದೆ; ಕೋವಿಡ್‌ ಎಂಬುದು ನೆಪ ಮಾತ್ರ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಯಾರು ಕೂಡ ಈ ಆರೋಪಗಳು ಸತ್ಯಕ್ಕೆ ದೂರ ಎಂದು ಹೇಳುವುದು ಕಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು