ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ಕಲ್ಪಿಸುವ ನಿರ್ಧಾರದ ಮೂಲಕ, ‘ಪರಿಸರಸ್ನೇಹಿ ದೀಪಾವಳಿ’ ಆಚರಣೆಯ ದಾರಿಯಲ್ಲಿ ಕರ್ನಾಟಕ ಒಂದು ಮಹತ್ವದ ಹೆಜ್ಜೆಯಿಟ್ಟಿದೆ. ಹೆಚ್ಚು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವ ಸಾಂಪ್ರದಾಯಿಕ ಪಟಾಕಿಗಳ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಸಾಂಪ್ರದಾಯಿಕ ಪಟಾಕಿಗಳಿಗಿಂಥ ಶೇ 30ರಷ್ಟು ಕಡಿಮೆ ಅಪಾಯಕರ ಎಂದು ಹೇಳಲಾಗುತ್ತಿರುವ ಹಸಿರು ಪಟಾಕಿಗಳ ಬಳಕೆಯಿಂದ ಪರಿಸರದ ಮೇಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆ ಆದಂತಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿನ ವಾಯು ಮಾದರಿಗಳಲ್ಲಿ ಮಾಲಿನ್ಯ ಕಣಗಳ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿರುವುದರ ಹಿನ್ನೆಲೆಯಲ್ಲಿ, ಪಟಾಕಿ ಬಳಕೆಗೆ ಕಡಿವಾಣ ಹಾಕುವ ಅಗತ್ಯದ ಮಾತುಕತೆ ಇತ್ತೀಚಿನ ವರ್ಷಗಳಲ್ಲಿ ಪ್ರತಿ ದೀಪಾವಳಿ ಸಂದರ್ಭದಲ್ಲೂ ನಡೆಯುತ್ತದೆ. ಪಟಾಕಿಗಳಿಂದ ವಾಯುಮಾಲಿನ್ಯ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. ಪರಿಸರ ಕಾಳಜಿಗೆ ಸ್ಪಂದಿಸುವ ರೂಪದಲ್ಲಿ, ರಾಜ್ಯದಲ್ಲಿ ಹಸಿರು ಪಟಾಕಿಗಳಿಗಷ್ಟೇ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ’ ತಾಕೀತು ಮಾಡಿದೆ. ಆದರೆ, ಈ ಎಲ್ಲ ಆಶಯವನ್ನು ಮಣ್ಣುಗೂಡಿಸುವಂತೆ ನಕಲಿ ಹಸಿರು ಪಟಾಕಿಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಸಾಂಪ್ರದಾಯಿಕ ಪಟಾಕಿ ಪೊಟ್ಟಣಗಳ ಮೇಲೆ ‘ಹಸಿರಿನ ಗುರುತು’ ಹಚ್ಚಿ ವಂಚಿಸಲಾಗುತ್ತಿದೆ; ನಕಲಿ ಲೋಗೊ, ಕ್ಯುಆರ್ ಕೋಡ್ ಬಳಸಿ ಅಪಾಯಕಾರಿ ಪಟಾಕಿಗಳನ್ನು ಮಾರಲಾಗುತ್ತಿದೆ ಎನ್ನಲಾಗುತ್ತಿದೆ. ಸರ್ಕಾರಿ ಆದೇಶವನ್ನು ಉಲ್ಲಂಘಿಸಿರುವ ನಕಲಿ ಹಸಿರು ಪಟಾಕಿಗಳ ತಯಾರಕರು ಮತ್ತು ಮಾರಾಟಗಾರರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಹಸಿರು ಪಟಾಕಿಗಳ ಮೂಲಕ ‘ಪರಿಸರಸ್ನೇಹಿ ದೀಪಾವಳಿ’ ಎನ್ನುವುದು ಆಂಶಿಕ ಸತ್ಯವನ್ನು ಒಳಗೊಂಡಿರುವ ಪರಿಕಲ್ಪನೆ. ಪಟಾಕಿ ಬಳಕೆಯನ್ನು ಹಂತಹಂತವಾಗಿ ಕಡಿಮೆಗೊಳಿಸುತ್ತ, ಅಂತಿಮವಾಗಿ ಸಂಪೂರ್ಣವಾಗಿ ನಿಲ್ಲಿಸುವ ಮೂಲಕವಷ್ಟೇ ದೀಪಾವಳಿಯನ್ನು ಪರಿಸರಸ್ನೇಹಿ ಆಗಿಸುವುದು ಸಾಧ್ಯವಿದೆ. ಹಬ್ಬದ ಸಂದರ್ಭದಲ್ಲಿ ವಾಯುಮಾಲಿನ್ಯ ತೀವ್ರಗೊಳ್ಳದಂತೆ ತಡೆಯುವುದು ಕಾನೂನು ಕ್ರಮಗಳಿಂದಷ್ಟೇ ಸಾಧ್ಯವಿಲ್ಲ; ಸಾರ್ವಜನಿಕರ ಸಹಕಾರ ಇದ್ದಾಗಷ್ಟೇ ಪಟಾಕಿ ಬಳಕೆಗೆ ಕಡಿವಾಣ ಹಾಕಬಹುದು. ಮಕ್ಕಳು ಪಟಾಕಿ ಸಿಡಿಸುವ ಮೂಲಕ ದೀಪಾವಳಿಯನ್ನು ಸಂಭ್ರಮಿಸುವುದರಲ್ಲಿ ತಪ್ಪೇನೂ ಇಲ್ಲ. ಎಳೆಯರೊಂದಿಗೆ ಹಿರಿಯರೂ ಪಟಾಕಿ ಸುಡುವುದನ್ನು ವ್ಯಸನದಂತೆ ಹಚ್ಚಿಕೊಂಡಾಗ ಪರಿಸರದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ; ವಾಯುಮಂಡಲಕ್ಕೆ ಮಾತ್ರವಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ. ಹಿರಿಯ ನಾಗರಿಕರು, ಎಳೆಯರು ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಪಟಾಕಿಗಳ ವಿಷಾನಿಲ ಹಾಗೂ ಕಿವಿಗಡಚಿಕ್ಕುವ ಸದ್ದಿನಿಂದ ಅಸಹನೀಯ ತೊಂದರೆ ಅನುಭವಿಸುತ್ತಾರೆ. ಪಟಾಕಿಗಳ ಬೆಳಕು ಮತ್ತು ಸದ್ದಿಗೆ ಪ್ರಾಣಿಪಕ್ಷಿಗಳು ಕೂಡ ದಿಕ್ಕೆಡುತ್ತವೆ. ಪ್ರತಿ ದೀಪಾವಳಿಯ ಸಂದರ್ಭದಲ್ಲೂ ಪಟಾಕಿಗಳ ಸಿಡಿತದಿಂದ ಗಾಯಗೊಳ್ಳುವವರು, ದೃಷ್ಟಿಗೆ ಹಾನಿ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಈ ಅವಘಡಗಳನ್ನು ತಪ್ಪಿಸುವುದಕ್ಕೆ ಪಟಾಕಿಗಳಿಂದ ದೂರ ಇರುವುದೊಂದೇ ಮಾರ್ಗ.

ಬೆಳಕಿನ ಹಬ್ಬವಾದ ದೀಪಾವಳಿ ಇಡೀ ದೇಶವನ್ನು ಆವರಿಸಿಕೊಂಡಿರುವ ಬಹು ದೊಡ್ಡ ಹಬ್ಬ. ಎಲ್ಲರ ಮನಸ್ಸುಗಳಲ್ಲಿ ಅರಿವಿನ ಹಣತೆ ಬೆಳಗುವ ಹಾಗೂ ಅಜ್ಞಾನದ ಅಂಧಕಾರವನ್ನು ನೀಗುವ ಆಶಯ ದೀಪಾವಳಿಯ ಹಿಂದಿದೆ. ಈ ಮಹತ್ತರ ಆಶಯಕ್ಕೂ ಪಟಾಕಿಗಳು ಪೂರಕವಾಗಿಲ್ಲ. ಪಟಾಕಿಗಳನ್ನು ಸುಡುವುದರಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ ಎನ್ನುವುದನ್ನು ತಳ್ಳಿಹಾಕಲಾಗದು. ಆದರೆ, ಗಂಭೀರ ಅಪಾಯಗಳಿಗೆ ಹೋಲಿಸಿದರೆ ಪಟಾಕಿಗಳು ನೀಡುವ ಸಂತೋಷ ನಗಣ್ಯವಾದುದು. ಮಣ್ಣು, ನೀರು ಮತ್ತು ಗಾಳಿಯನ್ನು ಮಲಿನಗೊಳಿಸುವ ಆಚರಣೆಯಿಂದ ದೂರ ಉಳಿಯುವುದು ದೀಪಾವಳಿ ಆಚರಣೆಯನ್ನು ಅರ್ಥಪೂರ್ಣಗೊಳಿಸುವ ಮತ್ತು ಹಬ್ಬದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕ್ರಮವಾಗಿದೆ. ಸುರಕ್ಷಿತ ಮತ್ತು ಪರಿಸರಸ್ನೇಹಿ ದೀಪಾವಳಿ ಆಚರಣೆಯ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸರ್ಕಾರ ಹಾಗೂ ಸಂಘಸಂಸ್ಥೆಗಳ ಪ್ರಯತ್ನಗಳು, ಹಬ್ಬದ ಸಂದರ್ಭಕ್ಕೆ ಸೀಮಿತವಾಗದೆ ವರ್ಷಪೂರ್ತಿ ನಿರಂತರವಾಗಿ ನಡೆಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.