ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವ್ಯವಸ್ಥೆ: ದುಷ್ಪರಿಣಾಮ ತಗ್ಗಿಸಲು ದಾರಿದೀಪವಾಗಲಿ ಕುಸಿತದ ಅಂದಾಜು

Last Updated 11 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ರೆಪೊ ದರದಲ್ಲಿ ಯಾವ ಬದಲಾವಣೆಯೂ ಈ ಹಂತದಲ್ಲಿ ಬೇಡ ಎಂಬ ತೀರ್ಮಾನವನ್ನು ಶುಕ್ರವಾರ ಒಕ್ಕೊರಲಿನಿಂದ ಕೈಗೊಂಡಿದೆ. ಆದರೆ, ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಪಯಣ ಹೇಗಿರಲಿದೆ ಎಂಬ ವಿಚಾರವಾಗಿ ಆರ್‌ಬಿಐ ಒಂದೆರಡು ವಿಚಾರಗಳನ್ನು ಸ್ಪಷ್ಟಪಡಿಸಿದೆ. ಅದು ಹೇಳಿದ್ದರಲ್ಲಿ ಬಹಳ ಮುಖ್ಯವಾದುದು, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಡುಬಂದ ಭಾರಿ ಪ್ರಮಾಣದ ಕುಸಿತವು ಮತ್ತೊಮ್ಮೆ ಎದುರಾಗಲಿಕ್ಕಿಲ್ಲ ಎಂಬುದು. ಏಪ್ರಿಲ್–ಜೂನ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಕಂಡುಬಂದ ಶೇಕಡ (–)23.9ರ ಚಾರಿತ್ರಿಕ ಕುಸಿತವು ಎಂಥವರನ್ನೂ ಅಧೀರಗೊಳಿಸಬಲ್ಲದ್ದಾಗಿತ್ತು. ಆದರೆ, ಅಂತಹ ಸ್ಥಿತಿ ಇನ್ನು ಬಾರದು ಎಂಬ ಅರ್ಥದಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾತನಾಡಿದ್ದಾರೆ. ಹಾಗಂದ ಮಾತ್ರಕ್ಕೆ ಅರ್ಥವ್ಯವಸ್ಥೆಯ ಪಾಲಿಗೆ ಒಳ್ಳೆಯ ದಿನಗಳು ಬಂದೇಬಿಟ್ಟವು ಎಂದೇನೂ ಅಲ್ಲ. ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯು ಶೇಕಡ (–)9.8ರಷ್ಟು, ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ (–)5.6ರಷ್ಟು ಕುಸಿಯುವ ಅಂದಾಜು ಇದೆ ಎಂದು ಕೂಡ ಆರ್‌ಬಿಐ ಹೇಳಿದೆ. ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ ದೇಶದ ಮೇಲೆ ಆರ್ಥಿಕ ಏಟುಗಳು ಬಿದ್ದ ನಂತರ ಆರ್‌ಬಿಐ ಮಾಡಿರುವ ಮೊದಲ ಅಂದಾಜು ಇದು. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕೆಲವು ಸಂಸ್ಥೆಗಳು ಮಾಡಿರುವ ಅಂದಾಜಿಗೆ ಹತ್ತಿರವಾಗಿಯೇ ಇದೆ ಈ ಅಂದಾಜು. ಜಿಡಿಪಿ ದರದಲ್ಲಿನ ಕುಸಿತವು ಈಗಿನ ಸಂದರ್ಭದಲ್ಲಿ ನೇರವಾಗಿ ಉದ್ಯೋಗ ನಷ್ಟ, ವೇತನ ಕಡಿತ, ಉದ್ದಿಮೆಗಳಿಗೆ ಹಣಕಾಸಿನ ಸಂಕಷ್ಟದ ರೂಪದಲ್ಲಿ ಅನುಭವಕ್ಕೆ ಬರುತ್ತಿದೆ. ಡಿಸೆಂಬರ್‌ ತ್ರೈಮಾಸಿಕದವರೆಗೂ ಅರ್ಥವ್ಯವಸ್ಥೆಯು ಕುಸಿತದ ಹಾದಿಯಲ್ಲೇ ಮುಂದುವರಿಯಲಿದೆ ಎಂಬ ಅಂದಾಜು, ಉದ್ದಿಮೆಗಳು ಹಾಗೂ ಜನಸಾಮಾನ್ಯರ ಮೇಲೆ ಆಗಬಹುದಾದ ದುಷ್ಪರಿಣಾಮಗಳನ್ನು ಕನಿಷ್ಠಗೊಳಿಸಲು ಆಳುವ ವರ್ಗಕ್ಕೆ ಒಂದು ದಾರಿದೀಪದಂತೆ ನೆರವಿಗೆ ಬಂದರೆ ಚೆನ್ನ.

ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ತೀರ್ಮಾನ ಕೂಡ ಬಹಳ ಮಹತ್ವದ್ದು. ರೆಪೊ ದರದಲ್ಲಿ ಆರ್‌ಬಿಐ ಈಗಾಗಲೇ ಗಣನೀಯ ಕಡಿತ ಮಾಡಿದೆ. ಸಾಲವು ಕಡಿಮೆ ಬಡ್ಡಿದರದಲ್ಲಿ ಸಿಗುವಂತೆ ಮಾಡಿ, ಆ ಮೂಲಕ ವ್ಯವಸ್ಥೆಯಲ್ಲಿ ನಗದು ಚಲಾವಣೆ ಹೆಚ್ಚುವಂತೆ ಮಾಡಿ, ಅರ್ಥ
ವ್ಯವಸ್ಥೆಗೆ ಚೈತನ್ಯ ನೀಡುವ ಯತ್ನ ಒಳ್ಳೆಯದೇ. ಆದರೆ, ಬಡ್ಡಿ ದರ ಕಡಿತಕ್ಕೆ ಕೂಡ ಒಂದು ಮಿತಿ ಇದೆ. ಚಿಲ್ಲರೆ ಹಣದುಬ್ಬರ ದರವು ಶೇಕಡ 6ಕ್ಕಿಂತ ಹೆಚ್ಚು ಇರುವಾಗ, ರೆಪೊ ದರದಲ್ಲಿ ಇನ್ನಷ್ಟು ಕಡಿತವನ್ನು ಒಳ್ಳೆಯ ಉದ್ದೇಶದಿಂದಲೇ ಮಾಡಿದರೂ ಅದರ ಪರಿಣಾಮವು ಸಮಾಜದ ಒಂದು ವರ್ಗದ ಮೇಲೆ ಕೆಟ್ಟದ್ದಾಗಿಯೇ ಇರುತ್ತದೆ. ರೆಪೊ ದರದಲ್ಲಿ ಒಂದಿಷ್ಟು ಇಳಿಕೆ ಮಾಡುವ ಅವಕಾಶವನ್ನು ಆರ್‌ಬಿಐ ಮುಕ್ತವಾಗಿ ಇರಿಸಿಕೊಂಡಂತೆ ಕಾಣುತ್ತಿದೆ. ಆದರೆ, ಆರ್‌ಬಿಐ ತಾನೇ ವಿಧಿಸಿಕೊಂಡ ಮಟ್ಟಕ್ಕೆ (ಶೇಕಡ 4ರ ಆಸುಪಾಸಿಗೆ) ಹಣದುಬ್ಬರವನ್ನು ತಗ್ಗಿಸದೆ, ರೆಪೊ ದರ ಇಳಿಕೆ ಮಾಡುವುದು ಉಚಿತವಾಗಲಾರದು. ವಿಶ್ವ ಬ್ಯಾಂಕ್ ಸರಿಯಾಗಿಯೇ ಗುರುತಿಸಿರುವಂತೆ, ದೇಶದ ಅರ್ಥವ್ಯವಸ್ಥೆಯು ಕೋವಿಡ್–19 ಪೂರ್ವದಲ್ಲಿಯೇ ಕುಸಿತದ ಹಾದಿಯನ್ನು ಹಿಡಿದಿತ್ತು. ಆ ಕುಸಿತಕ್ಕೆ ಈ ಸಾಂಕ್ರಾಮಿಕವು ವೇಗವರ್ಧಕದಂತೆ ಆಯಿತು. ಹಿಂದಿನ ಕುಸಿತವು ಗ್ರಾಹಕರ ಕೊಳ್ಳುವ ಶಕ್ತಿ ಕುಂದಿದ್ದರಿಂದ ಆಗಿತ್ತು. ಈಗ ಆಗಿರುವ ಕುಸಿತಕ್ಕೆ ಲಾಕ್‌ಡೌನ್‌ನ ಪರಿಣಾಮವಾಗಿ ತಯಾರಿಕೆ ಮತ್ತು ಪೂರೈಕೆ ವ್ಯವಸ್ಥೆಯ ಮೇಲೆ ಬಿದ್ದ ಬಲವಾದ ಪೆಟ್ಟು, ಜನರ ಸಂಚಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧದಿಂದಾಗಿ ಬೇಡಿಕೆ ಕೂಡ ಕುಸಿತವಾಗಿದ್ದು ಮುಖ್ಯ ಕಾರಣಗಳಲ್ಲಿ ಒಂದು. ಈ ಬಿಕ್ಕಟ್ಟನ್ನು ಪರಿಹರಿಸಲು ರೆಪೊ ದರ ತಗ್ಗಿಸುವುದೊಂದೇ ಪರಿಹಾರ ಆಗಲಾರದು. ತಯಾರಿಕೆ, ಪೂರೈಕೆ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಬೇಡಿಕೆಯನ್ನು ಹೆಚ್ಚಿಸಬೇಕಾದ ತುರ್ತು ಅಗತ್ಯ ಈಗ ಇದೆ. ಹೀಗೆ ಮಾಡುವುದರಲ್ಲಿ ಕೇಂದ್ರೀಯ ಬ್ಯಾಂಕಿಗಿಂತಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯತ್ನ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT