ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ: ಅಗ್ರಸ್ಥಾನಕ್ಕೆ ತಕ್ಕ ಸೌಕರ್ಯವೂ ಸಿಗಲಿ

Last Updated 6 ಮಾರ್ಚ್ 2021, 1:25 IST
ಅಕ್ಷರ ಗಾತ್ರ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಗುರುವಾರ ಬಿಡುಗಡೆ ಮಾಡಿರುವ ‘ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ– 2020’ರಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿರುವ ಬೆಂಗಳೂರು ಹೆಮ್ಮೆಯಿಂದ ಬೀಗುತ್ತಿದೆ. ಕಳೆದ ಸಾಲಿನ ಸೂಚ್ಯಂಕ ಪಟ್ಟಿಯಲ್ಲಿ 58ನೇ ಸ್ಥಾನದಲ್ಲಿದ್ದ ನಗರವು ಮರುವರ್ಷವೇಅಗ್ರಸ್ಥಾನಕ್ಕೇರಿರುವುದುಗಮನಾರ್ಹಸಾಧನೆಯೇಸರಿ.ನಗರಾಭಿವೃದ್ಧಿಗಾಗಿಜಾರಿಗೊಳಿಸಲಾದ ವಿವಿಧ ಕಾರ್ಯಕ್ರಮಗಳಿಂದ ಜನರ ಜೀವನದ ಗುಣಮಟ್ಟ ಎಷ್ಟು ಸುಧಾರಣೆ ಆಗಿದೆ ಎಂಬ ಕುರಿತು ಸಮೀಕ್ಷೆ ನಡೆಸಿ, ನಗರದ ವ್ಯವಸ್ಥೆಗಳ ಕುರಿತು ಜನಾಭಿಪ್ರಾಯವನ್ನೂ ಸಂಗ್ರಹಿಸಿ ಈ ಸೂಚ್ಯಂಕವನ್ನು ಪ್ರತಿವರ್ಷ ಬಿಡುಗಡೆ ಮಾಡಲಾಗುತ್ತದೆ. ನಗರದ ಆರ್ಥಿಕ ಸಾಮರ್ಥ್ಯ, ಜನರ ಜೀವನ ಗುಣಮಟ್ಟ ಹಾಗೂ ಸುಸ್ಥಿರ ಪರಿಸರ ನಿರ್ವಹಣೆಗೆ ಸಂಬಂಧಿಸಿದ ಅಂಶಗಳು ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕವನ್ನು ನಿರ್ಧರಿಸುವ ಪ್ರಮುಖ ಅಂಶಗಳು. ಸೂಚ್ಯಂಕ ನಿರ್ಧರಿಸಲು ಸಮೀಕ್ಷೆ ನಡೆಸಲಾಗಿರುವ ನಗರಗಳಲ್ಲಿ ಆರ್ಥಿಕ ಸಾಮರ್ಥ್ಯದ ಮಾನದಂಡದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಸೂಚ್ಯಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಹಜವಾಗಿಯೇ ಈ ಅಂಶ ನೆರವಾಗಿದೆ. ಜೀವನ ಗುಣಮಟ್ಟದಲ್ಲಿ ಈ ನಗರ 12ನೇ ಸ್ಥಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಅಂಶಗಳಲ್ಲಿ ಸುಸ್ಥಿರತೆ ಕಾಪಾಡುವುದರಲ್ಲಿ 13ನೇ ಸ್ಥಾನ ಪಡೆದಿದೆ. ಒಟ್ಟಾರೆ ಅಂಕ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ ಜನರ ಜೀವನ ಗುಣಮಟ್ಟ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅಂಶಗಳಲ್ಲಿ ಸುಧಾರಿಸಬೇಕಾದುದು ಬಹಳಷ್ಟಿದೆ ಎಂಬುದನ್ನು ಬೆಂಗಳೂರಿನ ಆಡಳಿತವನ್ನು ನಿರ್ವಹಿಸುವವರು ಗಮನದಲ್ಲಿಟ್ಟುಕೊಳ್ಳಬೇಕು.

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದ ಜೊತೆಯಲ್ಲೇ ನಗರಾಡಳಿತ ನಿರ್ವಹಣೆ ಸೂಚ್ಯಂಕವನ್ನೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು 31ನೇ ಸ್ಥಾನ ಪಡೆದಿದೆ. ಸೇವೆಗಳು, ಹಣಕಾಸು ನಿರ್ವಹಣೆ, ತಂತ್ರಜ್ಞಾನ ಅಳವಡಿಕೆ, ಯೋಜನೆ, ಆಡಳಿತಕ್ಕೆ ಸಂಬಂಧಿಸಿದ ಅಂಶಗಳನ್ನು ಆಧರಿಸಿ ನಗರಾಡಳಿತ ನಿರ್ವಹಣೆ ಸೂಚ್ಯಂಕವನ್ನು ನೀಡಲಾಗುತ್ತದೆ. ಈ ಸೂಚ್ಯಂಕವನ್ನು ನಿರ್ಧರಿಸುವ ಪ್ರಮುಖ ಐದು ವಿಭಾಗಗಳಲ್ಲಿ ಬಿಬಿಎಂಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅಂಕಗಳು ಬಂದಿಲ್ಲ. ನಗರಾಡಳಿತವು ಸೇವಾ ಕ್ಷೇತ್ರದಲ್ಲಿ 25ನೇ ಸ್ಥಾನ, ಹಣಕಾಸು ನಿರ್ವಹಣೆಯಲ್ಲಿ 40ನೇ ಸ್ಥಾನ, ತಂತ್ರಜ್ಞಾನ ಅಳವಡಿಕೆಯಲ್ಲಿ 25ನೇ ಸ್ಥಾನ, ಯೋಜನೆ ರೂಪಿಸುವಿಕೆಯಲ್ಲಿ 36ನೇ ಸ್ಥಾನ ಮತ್ತು ಆಡಳಿತ ನಿರ್ವಹಣೆಯಲ್ಲಿ 18ನೇ ಸ್ಥಾನದಲ್ಲಿದೆ. ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರು ರಸ್ತೆ ಮೂಲಸೌಕರ್ಯ, ಉದ್ಯಾನಗಳ ನಿರ್ವಹಣೆ, ಶಿಕ್ಷಣ ಮುಂತಾದ ವಿಚಾರಗಳಲ್ಲಿ ತೀರಾ ಹಿಂದೆ ಉಳಿದಿಲ್ಲ ಎಂಬುದು ಒಪ್ಪತಕ್ಕದ್ದೇ. ಆದರೆ, ಆಡಳಿತದ ನಿರ್ವಹಣೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಇಷ್ಟೊಂದು ಕೆಳಹಂತದಲ್ಲಿದ್ದರೂ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ಈ ನಗರ ಅಗ್ರಸ್ಥಾನಕ್ಕೆ ಏರಿರುವುದು ತಬ್ಬಿಬ್ಬುಗೊಳಿಸುತ್ತದೆ. ಯಾವುದೇ ನಗರದ ಜೀವನ ಸಹನೀಯವಾಗುವುದು ಅಲ್ಲಿ ದೊರೆಯುವ ಸೌಲಭ್ಯ ಮತ್ತು ಸೇವೆಗಳಿಂದ. ಈ ಎರಡೂ ವಿಷಯಗಳಲ್ಲಿ ಬೆಂಗಳೂರು ಹಿಂದೆ ಬಿದ್ದಿದ್ದರೂ ಇಲ್ಲಿ ಸುಲಲಿತವಾಗಿ ಜೀವನ ನಿರ್ವಹಣೆ ಮಾಡಬಹುದು ಎನ್ನುತ್ತದೆ ಸಮೀಕ್ಷೆ! ಅಗ್ರಸ್ಥಾನ ಪಡೆದ ನಗರದ ಕಥೆಯೇ ಹೀಗಿರುವಾಗ ಉಳಿದ ನಗರಗಳ ಸ್ಥಿತಿ ಹೇಗಿರಬೇಡ? ಇರಲಿ, ಎಲ್ಲೆಲ್ಲಿ ಲೋಪಗಳು ಇವೆಯೆಂದು ಸಮೀಕ್ಷಾ ವರದಿ ಪಟ್ಟಿ ಮಾಡಿದೆಯೋ ಅಲ್ಲೆಲ್ಲ ಸುಧಾರಣೆ ಮಾಡಿಕೊಳ್ಳುವತ್ತ ಬಿಬಿಎಂಪಿ ಆಡಳಿತ ಗಮನಹರಿಸಬೇಕು. ಸಾರಿಗೆ ವ್ಯವಸ್ಥೆ, ಸಂಚಾರ ದಟ್ಟಣೆ, ವಾಹನ ನಿಲುಗಡೆಗೆ ಸಂಬಂಧಿಸಿದ ಗೊಂದಲ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ವಸತಿ ಸಮಸ್ಯೆ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ಜನರ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿರುವ ಅಂಶಗಳು ಹತ್ತುಹಲವು ಸಿಕ್ಕುತ್ತವೆ. ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯಲ್ಲಂತೂ ನಮ್ಮ ಆಡಳಿತವು ಸಂಪೂರ್ಣ ಸೋತಿದೆ ಎಂದೇ ಹೇಳಬೇಕು. ತಲೆಗೊಂದು ಅಗ್ರಸ್ಥಾನದ ತುರಾಯಿ ಸಿಕ್ಕಿಸಿಕೊಂಡು ಕುಳಿತರೆ ಸಾಲದು, ಜನ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬದ್ಧತೆಯನ್ನೂ ಪ್ರದರ್ಶಿಸಬೇಕು. ‘ಬೆಂಗಳೂರು ನಿಜಕ್ಕೂ ಈ ಮನ್ನಣೆಗೆ ಅರ್ಹವಾಗಿದೆ’ ಎಂದು ಜನರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಳ್ಳುವ ರೀತಿಯಲ್ಲಿ ಆಡಳಿತದ ಹೊಣೆ ಹೊತ್ತವರು ನಗರವನ್ನು ಕಟ್ಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT