ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಮರುಪರಿಶೀಲನೆಯೇ ಏಕೈಕ ಮಾರ್ಗ

Last Updated 23 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹಲವು ವರ್ಷಗಳಿಂದ ಬೇಕು- ಬೇಡಗಳ ಹಗ್ಗ ಜಗ್ಗಾಟದಲ್ಲಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ನಿರ್ಮಾಣ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ. ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆಗೆ ಒತ್ತಾಯಿಸುತ್ತಿದ್ದವರು ಮತ್ತೊಮ್ಮೆ ಧಿಗ್ಗನೆದ್ದು ಕೂರುವಂತಾಗಿದೆ. ಈ ಯೋಜನೆ ಅಸ್ತಿತ್ವಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೂ ಕರಾವಳಿಗೂ ನೇರ ಸಂಪರ್ಕ ಏರ್ಪಟ್ಟು, ಸರಕು ಸಾಗಣೆ ಹಾಗೂ ಪ್ರಯಾಣಿಕರ ಓಡಾಟಕ್ಕೆ ಅನುಕೂಲ ಆಗುತ್ತದೆಂದು ಅಭಿವೃದ್ಧಿಪರ ನಾಯಕರು 1995ರಿಂದಲೂ ಈ ರೈಲುಮಾರ್ಗದ ನಿರ್ಮಾಣಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು.

ಆದರೆ, 162 ಕಿಲೊಮೀಟರ್‌ನ ಈ ಮಾರ್ಗವನ್ನು ಬಹುಪಾಲು ದಟ್ಟ ಅರಣ್ಯದಲ್ಲೇ ಅದೂ ಕಾಳಿಕಣಿವೆಯ ಎರಡು ಪ್ರಮುಖ ವನ್ಯಧಾಮಗಳ ನಡುವೆಯೇ ನಿರ್ಮಿಸಬೇಕಾಗಿದ್ದು, ಅದಕ್ಕೆಂದು ಸುಮಾರು ಎರಡು ಲಕ್ಷ ಮರಗಳನ್ನು ಉರುಳಿಸಬೇಕಾಗಿರುವುದರಿಂದ, ಪರಿಸರ ಕಾಳಜಿಯುಳ್ಳವರು ಸಹಜವಾಗಿ ಆತಂಕಿತರಾಗಿ ಸುಪ್ರೀಂ ಕೋರ್ಟಿಗೂ ದೂರು ಸಲ್ಲಿಸಿದ್ದರು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ಒಂದಲ್ಲ, ಎರಡು ಬಾರಿ ಸ್ಥಳ ಪರಿಶೀಲನೆ ಮಾಡಿ, ಎರಡೂ ಬಾರಿ ಈ ಮಾರ್ಗವನ್ನು ನಿರ್ಮಿಸಕೂಡದೆಂದು ವರದಿ ಸಲ್ಲಿಸಿತ್ತು. ಆದರೆ, ಅಭಿವೃದ್ಧಿಪರ ಒತ್ತಡಗಳು ಹೆಚ್ಚಿದ್ದರಿಂದ ರೈಲ್ವೆ ಇಲಾಖೆಯ ಅನುದಾನ ಪಡೆದ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು 2012ರಲ್ಲಿ ಸ್ಥಳ ಪರಿಶೀಲನೆ ಮಾಡಿದರು.

ಅಲ್ಲಿ ನಾಶವಾಗಬ ಹುದಾದ ಮರಗಳಿಗೆ ಪರಿಹಾರದ ರೂಪದಲ್ಲಿ ಹೆಚ್ಚುವರಿ ಗಿಡಗಳನ್ನು ಬೆಳೆಸಿದರೆ ಯೋಜನೆಯನ್ನು ಕೈಗೊಳ್ಳಬಹುದೆಂದು ಈ ತಜ್ಞರು ಹೇಳಿದ್ದು ಯೋಜನಾಪರ ಉತ್ಸಾಹಿಗಳಿಗೆ ಬಲ ಕೊಟ್ಟಿತ್ತು. ಅಲ್ಲಿಗೂ ಪರಿಸರವಾದಿಗಳು ಸೋಲೊಪ್ಪಿಕೊಳ್ಳಲಿಲ್ಲ. ರೈಲುಮಾರ್ಗ ನಿರ್ಮಾಣಕ್ಕೆ ಹೊಸದಾಗಿ ಅನುಮತಿ ಕೋರಬೇಕೆಂದು 2016ರಲ್ಲಿ ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿದ್ದರಿಂದ, ವಿಜ್ಞಾನ ಸಂಸ್ಥೆಯ ವರದಿಯ ಬದಲಿಗೆ ಹೊಸ ಸಮೀಕ್ಷೆಗೆ ಒತ್ತಾಯಿ ಸಿದ್ದರು. ಅವರ ವಾದ ಅಲ್ಲಗಳೆಯುವಂಥದ್ದೇನಲ್ಲ. ಎಂಟು ವರ್ಷಗಳ ಹಿಂದಿನ ಸಮೀಕ್ಷೆಯ ನಂತರ ಪರಿಸ್ಥಿತಿ ಬಹಳಷ್ಟು ಬದಲಾಗಿದೆ.

ಯಲ್ಲಾಪುರದಿಂದ ಘಟ್ಟದ ಕೆಳಗಿನ ಸುಂಕಸಾಲದವರೆಗೆ ಭೂಸ್ವರೂಪ ತೀರ ಕಡಿದಾಗಿದ್ದು, 2,500 ಮಿಲಿಮೀಟರಿನಷ್ಟು ಭಾರಿ ಮಳೆ ಬೀಳುವ ಪ್ರದೇಶವಾಗಿದೆ. ಈಗೀಗ ಹವಾಗುಣ ಬದಲಾವಣೆಯ ಲಕ್ಷಣಗಳು ತೀವ್ರವಾಗುತ್ತಿದ್ದು, ಅತಿವೃಷ್ಟಿ, ಮೇಘಸ್ಫೋಟ
ಗಳಂಥ ಪ್ರಕೋಪಗಳು ಘಟ್ಟಪ್ರದೇಶಗಳಲ್ಲಿ ಹೆಚ್ಚುತ್ತಿವೆ. ರೈಲುಮಾರ್ಗಕ್ಕೆಂದು ಕಣಿವೆಗಳ ಸ್ವರೂಪವನ್ನು ಬದಲಿಸುತ್ತ, ಹತ್ತೆಂಟು ವರ್ಷಗಳ ಕಾಲ ಈ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣ ಕೆಲಸ ನಡೆಯುತ್ತಿದ್ದರೆ ವನ್ಯಜೀವಿಗಳ ಮರುವಸತಿ ಸಾಧ್ಯವೇ?

ಪಶ್ಚಿಮಘಟ್ಟಗಳನ್ನು ಸೀಳುವ ಮಹಾಯೋಜನೆಗಳು ಈಚಿನ ವರ್ಷಗಳಲ್ಲಿ ಸರಮಾಲೆಯಂತೆ ಬರುತ್ತಿವೆ. ಬೆಳಗಾವಿ-ಗೋವಾ ನಡುವಣ ‘ರಾಷ್ಟ್ರೀಯ ಹೆದ್ದಾರಿ 4ಎ’ಯ ವಿಸ್ತರಣೆಗೆ ಅನುಮತಿ ಸಿಗುವ ಮುನ್ನವೇ ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿದುರುಳಿಸಲಾಗಿದೆ. ಕಳಸಾ- ಬಂಡೂರಿ ಯೋಜನೆಗೆಂದು ಭೀಮಗಡ ವನ್ಯಧಾಮದ ಮೂಲಕವೇ ಅರಣ್ಯವನ್ನು ಸೀಳಬೇಕಿದೆ; ಕರ್ನಾಟಕ– ಗೋವಾ ನಡುವಣ 177 ಹೆಕ್ಟೇರ್ ಅರಣ್ಯವನ್ನು ಸೀಳಿ ಛತ್ತೀಸಗಡದಿಂದ ವಿದ್ಯುತ್ ಮಾರ್ಗವನ್ನು ಹಾಕುವ ‘ತಾಮ್ನಾರ್’ ಯೋಜನೆಯ ಪ್ರಸ್ತಾವ ಮುನ್ನೆಲೆಗೆ ಬಂದಿದೆ. ಶರಾವತಿ ಮರುಭರ್ತಿ ಯೋಜನೆ, ರಾಜ್ಯ ಹೆದ್ದಾರಿಗಳ ವಿಸ್ತರಣೆ, ಶಿಶಿಲ-ಭೈರಾಪುರ ಹೊಸಮಾರ್ಗ- ಎಲ್ಲವೂ ಅರಣ್ಯಗಳ ಬಲಿಯನ್ನು ಕೇಳುತ್ತಿವೆ. ಜಗತ್ತಿನ ಜೀವಿವೈವಿಧ್ಯದ ಎಂಟು ಮಹಾತಾಣಗಳಲ್ಲಿ ಒಂದೆನಿಸಿದ ಪಶ್ಚಿಮಘಟ್ಟಗಳನ್ನು ಹತ್ತೆಂಟು ಕಡೆ ಅವಸರದಲ್ಲಿ ಛಿದ್ರಿಸಿ, ಜೀವಲೋಕದ ಶವಪೆಟ್ಟಿಗೆಯ ಮೇಲೆ ಯಾರ ಅಭಿವೃದ್ಧಿ? ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಈ ಹಿಂದೆ ನಿಸರ್ಗದ ಪರವಾಗಿ ಅಷ್ಟಿಷ್ಟು ಸಂವೇದನೆಯನ್ನು ಪ್ರದರ್ಶಿಸಿದವರು.

ಪಶ್ಚಿಮಘಟ್ಟ ಕಾರ್ಯಪಡೆಯನ್ನು ರಚಿಸಿದವರು. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರನ್ನು ತರುವ ಯೋಜನೆಯನ್ನು ಬದಿಗೊತ್ತಿದವರು. ಈಗಲೂ ಯಾರ ಒತ್ತಡಕ್ಕೂ ಮಣಿಯದೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯ ‘ಪರಿಸರ ಪರಿಣಾಮ ವರದಿ’ಯನ್ನು ತರಿಸಿಕೊಂಡು, ವನ್ಯಜೀವಿ ಮಂಡಳಿಯ ನಿರ್ಣಯವನ್ನು ಅವರು ಮರುಪರಿಶೀಲಿಸಬೇಕು. ಪಟ್ಟಭದ್ರರ ದಟ್ಟಣೆಯ ನಡುವೆ ದೂರದರ್ಶಿತ್ವದ ಮುತ್ಸದ್ದಿಗಳು ಈಗಲೂ ಇದ್ದಾರೆ ಎಂಬುದನ್ನು ತೋರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT