ಮಂಗಳವಾರ, ಮೇ 26, 2020
27 °C

ಸಂಪಾದಕೀಯ|‘ಅಂಪನ್‌’ ಚಂಡಮಾರುತ ನಷ್ಟ ತುಂಬಿಕೊಡುವ ಕೆಲಸ ಆಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕಳೆದ ಎರಡು ದಶಕಗಳಲ್ಲಿಯೇ ಅತ್ಯಂತ ಭೀಕರ ಮತ್ತು ವೇಗದ ಚಂಡಮಾರುತ ‘ಅಂಪನ್‌’, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ವಿನಾಶಕ್ಕೆ ಕಾರಣವಾಗಿದೆ. ನಂತರ ಇದು ಬಾಂಗ್ಲಾದೇಶವನ್ನು ಪ್ರವೇಶಿಸಿದೆ. ಚಂಡಮಾರುತದ ರೌದ್ರಾವತಾರಕ್ಕೆ 84ಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೇ 72 ಜನರು ಮೃತಪಟ್ಟಿದ್ದಾರೆ. 5,500ಕ್ಕೂ ಹೆಚ್ಚು ಮನೆಗಳು ನೆಲಕ್ಕೆ ಉರುಳಿವೆ. ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಎಲ್ಲೆಲ್ಲಿಯೂ ವಿನಾಶವೇ ಕಾಣಿಸುತ್ತಿದೆ. ಸಾವಿರಾರು ಮರಗಳು ಬುಡಮೇಲಾಗಿವೆ. ರಾಜ್ಯದ ರಾಜಧಾನಿ ಕೋಲ್ಕತ್ತದಲ್ಲಿ ಆಗಿರುವ ಹಾನಿಯೂ ಅಪಾರ. ವಿದ್ಯುತ್‌ ಮತ್ತು ದೂರವಾಣಿ ಸಂಪರ್ಕದ ಕಂಬಗಳು ಎಲ್ಲೆಂದರಲ್ಲಿ ಮಗುಚಿ ಬಿದ್ದಿವೆ. ಸಂಪರ್ಕ ವ್ಯವಸ್ಥೆ ಇನ್ನಷ್ಟೇ ಮರುಸ್ಥಾಪನೆಗೊಳ್ಳಬೇಕಿದೆ. ಹಾಗಾಗಿ, ನಿಜವಾಗಿಯೂ ಎಷ್ಟು ಹಾನಿಯಾಗಿದೆ ಎಂಬುದು ಇನ್ನಷ್ಟೇ ಅಂದಾಜಿಗೆ ನಿಲುಕಬೇಕಿದೆ. ₹1 ಲಕ್ಷ ಕೋಟಿಯ ಸೊತ್ತು ನಾಶವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಬಾರಿ ಬೀಸಿರುವುದು ಸೂಪರ್‌ ಸೈಕ್ಲೋನ್‌ (ಅತಿ ವೇಗದ ಮಾರುತ) ಎಂಬ ವರ್ಗದ ಚಂಡಮಾರುತ. ಗಂಟೆಗೆ 220 ಕಿ.ಮೀ.ಗಿಂತ ಹೆಚ್ಚು ವೇಗದ ಮಾರುತಗಳನ್ನು ಈ ವರ್ಗಕ್ಕೆ ಸೇರಿಸುತ್ತಾರೆ. 1999ರಲ್ಲಿ ಒಡಿಶಾವನ್ನು ಕಂಗೆಡಿಸಿದ್ದ ಚಂಡಮಾರುತವು ತಾಸಿಗೆ 300 ಕಿ.ಮೀ. ವೇಗದಲ್ಲಿ ಬೀಸಿತ್ತು. ಈ ದುರಂತದಲ್ಲಿ ಮೃತಪಟ್ಟವರು 9,985 ಮಂದಿ ಎಂದು ಸರ್ಕಾರ ಹೇಳಿತ್ತು. ಆದರೆ, ಇತರ ಕೆಲವು ಅಂದಾಜುಗಳ ಪ್ರಕಾರ, ಸತ್ತವರ ಸಂಖ್ಯೆ ಸುಮಾರು 50 ಸಾವಿರ. ‘ಅಂಪನ್‌’ ಕೂಡ ಭಾರಿ ಭೀತಿ ಸೃಷ್ಟಿಸಿತ್ತು. ಹವಾಮಾನ ಇಲಾಖೆ ನೀಡಿದ್ದ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಿಂದ ಸಾವು ನೋವನ್ನು ಕಡಿಮೆ ಮಾಡುವುದು ಸಾಧ್ಯವಾಗಿದೆ ಎಂಬುದಷ್ಟೇ ಸಮಾಧಾನದ ಸಂಗತಿ. 

ನಾಲ್ಕು ದಶಕಗಳಿದೀಚೆಗೆ ಚಂಡಮಾರುತಗಳು ಅತಿ ವಿನಾಶಕಾರಿಯಾಗಿ ಪರಿವರ್ತಿತವಾಗುತ್ತಿವೆ ಎಂದು ಕಾಮನ್‌ವೆಲ್ತ್‌ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಘಟನೆಯ ವಿಜ್ಞಾನಿಗಳ ಅಧ್ಯಯನ ಹೇಳಿದೆ. ಸಾಗರದ ತಾಪಮಾನ ಹೆಚ್ಚಳವು ಅಪಾಯಕಾರಿಯಾದ ಇನ್ನಷ್ಟು ಚಂಡಮಾರುತಗಳಿಗೆ ಕಾರಣವಾಗಬಹುದು ಎಂದೂ ಈ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಚಂಡಮಾರುತಗಳಲ್ಲಿ ಶೇ 30ರಷ್ಟು ಮಾತ್ರ 1980ರ ದಶಕದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದವು. ಈಗ ಈ ಪ್ರಮಾಣ ಶೇ 40ಕ್ಕೆ ಏರಿದೆ. ಅಷ್ಟೇ ಅಲ್ಲದೆ, ಹಿಂದೆ ಬರುತ್ತಿದ್ದ ಚಂಡಮಾರುತಗಳು ಹೆಚ್ಚು ಮಳೆ ತರುತ್ತಿದ್ದವು ಮತ್ತು ವೇಗ ಕಡಿಮೆ ಇರುತ್ತಿತ್ತು. ಈಗ ಚಂಡಮಾರುತಗಳ ವೇಗ ಹೆಚ್ಚುತ್ತಿದೆ. ಪರಿಣಾಮವಾಗಿ ಅದರಿಂದಾಗುವ ವಿಧ್ವಂಸವೂ ಹೆಚ್ಚು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚಂಡಮಾರುತಗಳು ಹೆಚ್ಚು ಭೀಕರವಾಗಲು ಮನುಷ್ಯನೂ ಕಾರಣ ಎಂಬುದರತ್ತ ಇದು ಬೊಟ್ಟು ಮಾಡುತ್ತಿದೆ. ಹಾಗಾಗಿ, ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಪ್ರಕೃತಿಯನ್ನು ರಕ್ಷಿಸುವ ಮೂಲಕ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯ ಈಗ ಎದುರಾಗಿದೆ. ‘ಅಂಪನ್‌’ನಿಂದಾಗಿ ಮನೆಗಳು, ಬೆಳೆ, ಜಮೀನು ನಾಶವಾಗಿವೆ. ಇದರ ನಷ್ಟವನ್ನು ಸರ್ಕಾರವು ತುಂಬಿಕೊಡಬೇಕಿದೆ. ಕೊರೊನಾ ವೈರಾಣು ಸಂಕಷ್ಟದ ನಡುವೆಯೇ ಮತ್ತೊಂದು ಆಘಾತ ಎರಗಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ವಿವಿಧ ರಾಜ್ಯಗಳಿಂದ ಕೆಲಸ ಕಳೆದುಕೊಂಡು ಊರಿಗೆ ಮರಳಿರುವವರಲ್ಲಿ ಹಲವು ಮಂದಿ ‘ಅಂಪನ್‌’ನಿಂದಾಗಿ ಮನೆ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಂಥವರಿಗೆ ಇದು ದುಪ್ಟಟ್ಟು ದುರಂತ. ಹಾಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಷ್ಟ ತುಂಬಿಕೊಡುವ ದಿಸೆಯಲ್ಲಿ ಹೆಚ್ಚಿನ ಕಾಳಜಿ ತೋರಬೇಕಿದೆ. ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಡುವೆ ಬಾಂಧವ್ಯ ಉತ್ತಮವಾಗಿಲ್ಲ ಎಂಬುದು, ಕೊರೊನಾ ತಡೆ ವಿಚಾರದಲ್ಲಿ ಈ ಸರ್ಕಾರಗಳ ನಡುವಣ ವಾಗ್ವಾದದಿಂದ ಬಯಲಾಗಿದೆ. ಅದಲ್ಲದೆ, ಮುಂದಿನ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಇಲ್ಲಿ ಅಧಿಕಾರ ಹಿಡಿಯಬೇಕು ಎಂದು ಬಿಜೆ‍ಪಿ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಮುಖಂಡರು ಪರಸ್ಪರರನ್ನು ಸಿಕ್ಕ ಎಲ್ಲ
ಸಂದರ್ಭಗಳಲ್ಲಿಯೂ ಹಣಿಯಲು ಯತ್ನಿಸಿದ್ದಾರೆ. ಆದರೆ ಈಗ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳ ಮರುನಿರ್ಮಾಣದ ಕೆಲಸ ಆಗಬೇಕು. ಆ ಕೆಲಸದಲ್ಲಿ ಅಧಿಕಾರ ರಾಜಕಾರಣದ ಪಟ್ಟುಗಳು ಮೇಲುಗೈ ಪಡೆಯಬಾರದು. ನೊಂದ ಜನರ ಕಣ್ಣೀರು ಒರೆಸುವುದೇ ಮುಖ್ಯವಾಗಬೇಕು. ಅವರ ಬದುಕನ್ನು ಹಸನಾಗಿಸಬೇಕು. ಎಂತಹ ಸುಳಿಗಾಳಿಯಲ್ಲಿಯೂ ತಮ್ಮ ಬದುಕು ಹಾರಿಹೋಗದಂತೆ ಸರ್ಕಾರಗಳು ನೋಡಿಕೊಳ್ಳುತ್ತವೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು