ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ವಿಜಯ‌ ಭಾರತ ಯುವ ಕ್ರಿಕೆಟಿಗರ ಜಾದೂ

Last Updated 20 ಜನವರಿ 2021, 19:46 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌– ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಹೆಜ್ಜೆ ಹೆಜ್ಜೆಗೂ ಆತಂಕ ಕಾಡಿತ್ತು. ಆದರೆ ಅದೆಲ್ಲವನ್ನೂ ದಾಟಿದ ಅಜಿಂಕ್ಯ ರಹಾನೆ ನಾಯಕತ್ವದ ಬಳಗಕ್ಕೆ ಜಯ ಒಲಿಯಿತು. ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ಸೋಲಿಸಿ, ಟ್ರೋಫಿ ಗೆದ್ದಿದ್ದು ಇದು ಎರಡನೇ ಬಾರಿ. ಆದರೆ ಈ ಜಯವು 2018–19ರಲ್ಲಿ ಮೊದಲ ಸಲ ಗೆದ್ದಿದ್ದಕ್ಕಿಂತಲೂ ಶ್ರೇಷ್ಠವಾದದ್ದು. ಆಗ ತಂಡದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರಿದ್ದರು. ಆಸ್ಟ್ರೇಲಿಯಾ ಬಳಗದಲ್ಲಿ ಪ್ರಮುಖರಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಇರಲಿಲ್ಲ. ಆದರೆ ಈ ಸಲ ಅವರಿಬ್ಬರೂ ಆತಿಥೇಯ ತಂಡದಲ್ಲಿದ್ದರು. ಆದರೆ, ಭಾರತದ ಸ್ಥಿತಿ ತದ್ವಿರುದ್ಧವಾಗಿತ್ತು. ಅಡಿಲೇಡ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಆಗ ಟೀಕಾಕಾರರು ಎಸೆದ ಕಲ್ಲುಗಳಿಂದಲೇ ಭಾರತದ ಯುವಪಡೆಯು ಗೆಲುವಿನ ಗೋಪುರ ಕಟ್ಟಿತು. ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದು ತವರಿಗೆ ಮರಳಿದಾಗ, ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಮುಂದೆ ಕಠಿಣ ಹಾದಿಯಿತ್ತು. ಫಾರ್ಮ್‌ನಲ್ಲಿಲ್ಲದ ಆಟಗಾರರು ಮತ್ತು ಗಾಯಗೊಂಡವರ ಸಾಲು ಅವರ ಮುಂದಿತ್ತು. ಮುಖ್ಯ ಕೋಚ್ ರವಿಶಾಸ್ತ್ರಿಯವರ ಅನುಭವ ರಹಾನೆಗೆ ಶ್ರೀರಕ್ಷೆಯಾಯಿತು. ತಂಡದ ಸಂಘಟಿತ ಆಟ, ತೆಗೆದುಕೊಂಡ ನಿರ್ಧಾರಗಳು ಫಲ ನೀಡಿದವು. ಆಸ್ಟ್ರೇಲಿಯಾದ ಕಠಿಣ ಪಿಚ್‌ಗಳಲ್ಲಿ ಆತಿಥೇಯ ಬೌಲರ್‌ಗಳು ಮಾಡಿದ ಬಾಡಿಲೈನ್ ಮಾದರಿಯ ಬೌಲಿಂಗ್‌ಗೆ ಬಹುತೇಕ ಎಲ್ಲ ಆಟಗಾರರು ಪೆಟ್ಟು ತಿಂದರು. ಹೆಚ್ಚು ಗಾಯಗೊಂಡವರು ಚಿಕಿತ್ಸೆಗೆ ತೆರಳಿದರು. ಅದರಿಂದಾಗಿ ಬೆಂಚ್‌ ಕಾಯುತ್ತಿದ್ದ ಪ್ರತಿಭೆಗಳಿಗೆ ಅವಕಾಶ ಸಿಕ್ಕಿತು. ಇನ್ನು ಕೆಲವರು ಗಾಯದ ನೋವಿನಲ್ಲಿಯೇ ಕಣಕ್ಕಿಳಿದರು. ಆಸ್ಟ್ರೇಲಿಯನ್ನರ ಹಳೆಯ ಚಾಳಿಯಾದ ಕೆಣಕಾಟಗಳಿಗೆ ಮತ್ತು ಕೆಲವು ಕಿಡಿಗೇಡಿ ಪ್ರೇಕ್ಷಕರ ಜನಾಂಗೀಯ ನಿಂದನೆಗೆ ಈ ಬಿಸಿರಕ್ತದ ಹುಡುಗರು ಸಭ್ಯ ಆಟದಿಂದಲೇ ಪ್ರತ್ಯುತ್ತರ ಕೊಟ್ಟರು.

ಅದರಲ್ಲೂ ಬ್ರಿಸ್ಬೇನ್‌ನಲ್ಲಿ ಮಂಗಳವಾರ ಮುಕ್ತಾಯವಾದ ಸರಣಿಯ ನಿರ್ಣಾಯಕ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಡಿದ 11 ಜನರಲ್ಲಿ ರಹಾನೆ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಮಯಂಕ್ ಅಗರವಾಲ್ ಮತ್ತು ರಿಷಭ್ ಪಂತ್ ಹತ್ತಕ್ಕೂ ಹೆಚ್ಚು ಟೆಸ್ಟ್‌ಗಳನ್ನು ಆಡಿರುವ ಅನುಭವಿಗಳು. ಉಳಿದ ಆರು ಆಟಗಾರರು ಮೊದಲ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದವರು. ಅಕ್ಟೋಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಆಡಿದ್ದ ಇವರು, ಭಾರತ ತಂಡದ ಕಾಯ್ದಿಟ್ಟ ಆಟಗಾರರಾಗಿ ವಿಮಾನ ಹತ್ತಿದವರು. ಈ ನವಪ್ರತಿಭೆಗಳು ಈಗ ಒಂದೇ ತಿಂಗಳಿನಲ್ಲಿ ದಂತಕಥೆಗಳಾಗಿ ಪರಿವರ್ತನೆಗೊಂಡಿದ್ದಾರೆ. ಪಂಜಾಬ್‌ನ ರೈತಕುಟುಂಬದ ಶುಭಮನ್ ಗಿಲ್, ಮಹಾರಾಷ್ಟ್ರದ ಪಾಲ್ಗರ್‌ನ ಶಾರ್ದೂಲ್ ಠಾಕೂರ್, ಚೆನ್ನೈನ ಟಿ. ನಟರಾಜನ್, ವಾಷಿಂಗ್ಟನ್ ಸುಂದರ್, ಹೈದರಾಬಾದಿನ ಮೊಹಮ್ಮದ್ ಸಿರಾಜ್, ದೆಹಲಿಯ ನವದೀಪ್ ಸೈನಿ ತಮ್ಮ ಆಟ ಮತ್ತು ಪ್ರಬುದ್ಧ ನಡವಳಿಕೆಯ ಮೂಲಕ ಶ್ಲಾಘನಾರ್ಹರಾದರು. ಇವರೆಲ್ಲರೂ ಜೂನಿಯರ್ ಹಂತದ ಕ್ರಿಕೆಟ್ ಆಡುವಾಗ ಕರ್ನಾಟಕದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಬೆಳೆದವರು. ತಮ್ಮ ಗುರುವಿನಿಂದ ಕಲಿತ ಗುಣಗಳಿಂದಲೇ ಸಾಧನೆಯ ಗುರಿ ಮುಟ್ಟಿದರು. ಈ ಸರಣಿ ಜಯದಲ್ಲಿ ರಹಾನೆ ನಾಯಕತ್ವ ಕೌಶಲದ ಪಾಲು ಕಡಿಮೆ ಏನಲ್ಲ. ಮೂರು ಟೆಸ್ಟ್‌ಗಳಲ್ಲಿಯೂ ಬೌಲರ್‌ಗಳನ್ನು ಸಮರ್ಥವಾಗಿ ನಿಯೋಜಿಸಿದ ಚಾಣಾಕ್ಷತೆಯನ್ನು ಮೆಚ್ಚಲೇಬೇಕು. ಟ್ವೆಂಟಿ–20 ಕ್ರಿಕೆಟ್‌ನ ಅಬ್ಬರದಲ್ಲಿ ಕಳೆದುಹೋಗಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಟೆಸ್ಟ್‌ ಮಾದರಿಯಲ್ಲಿಯೂ ರೋಚಕತೆ ಇದೆ. ನಿಜವಾದ ಕ್ರಿಕೆಟ್ ಇದೆ ಎಂದು ತೋರಿಸಿಕೊಟ್ಟ ಸರಣಿ ಇದು. ಉತ್ತಮ ಆಟಗಾರರು ಇರುವ ಆಸ್ಟ್ರೇಲಿಯಾ ತಂಡವು ಭಾರತದ ಎದುರು ಸತತ ಎರಡು ಬಾರಿ ಸೋತಿದೆ. ಭದ್ರಕೋಟೆಯಾಗಿದ್ದ ಗಾಬಾ ಕ್ರೀಡಾಂಗಣದಲ್ಲಿ 32 ವರ್ಷಗಳ ನಂತರ ಮೊದಲ ಸಲ ಆಸ್ಟ್ರೇಲಿಯಾ ಸೋಲಿನ ಕಹಿ ಉಂಡಿತು. ಅದರಿಂದಾಗಿ ಈಗ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ. ಹೊಸ ಕಾಲದ ಕ್ರಿಕೆಟ್‌ಗೆ ಬೇಕಾದ ನಡವಳಿಕೆಯನ್ನು ರೂಢಿಸಿಕೊಳ್ಳುವ ಅಗತ್ಯ ಅವರಿಗೆ ಇದೆ. ಫಲಿತಾಂಶ ಮತ್ತು ದಾಖಲೆಗಳು ಏನೇ ಇರಲಿ, ಕೊರೊನಾ ವೈರಸ್‌ ಹಾವಳಿಯಿಂದ ಜರ್ಝರಿತವಾಗಿದ್ದ ಮನಸ್ಸುಗಳಿಗೆ ಈ ಸರಣಿಯು ತಂಪೆರೆಯಿತು. ಟೆಸ್ಟ್ ಕ್ರಿಕೆಟ್ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT