ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಸಡಿಲ ಮಾತಿನ ಬಗ್ಗೆ ಮೌನ ಸರಿಯಲ್ಲ, ಕ್ರಮ ಅಗತ್ಯ

Last Updated 28 ಫೆಬ್ರುವರಿ 2020, 20:12 IST
ಅಕ್ಷರ ಗಾತ್ರ

ಭಿನ್ನವಾದ ಸಿದ್ಧಾಂತ ಹೊಂದಿರುವ ಹಿರಿಯರು ಮತ್ತು ಪ್ರಜ್ಞಾವಂತರ ವಿರುದ್ಧ ಅಗೌರವದ ಮಾತುಗಳನ್ನಾಡುವುದನ್ನು ಬಿಜೆಪಿಯ ಕೆಲವು ಜನಪ್ರತಿನಿಧಿಗಳು ಚಾಳಿ ಮಾಡಿಕೊಂಡಂತಿದೆ. ಅಂಥವರ ಮಾತುಗಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ಬಿಜೆಪಿ ಉದಾಸೀನದಿಂದ ನಡೆದುಕೊಳ್ಳುತ್ತಿರುವುದೂ ಎದ್ದುಕಾಣುತ್ತಿದೆ. ಇದಕ್ಕೆ ಉದಾಹರಣೆಯಾಗಿ, ಶತಾಯುಷಿ ಎಚ್‌.ಎಸ್‌. ದೊರೆಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪಾಕಿಸ್ತಾನದ ಏಜೆಂಟ್‌ ಎಂದು ಜರೆದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಾತುಗಳನ್ನು ನೆನಪಿಸಿಕೊಳ್ಳಬಹುದು. ‘ಸಾವರ್ಕರ್‌ ಅವರಷ್ಟು ಲಾಠಿ ಏಟನ್ನು ದೊರೆಸ್ವಾಮಿ ತಿಂದಿದ್ದಾರಾ? ಅವರು ಆನೆಯೋ ಹಂದಿಯೋ ತಿಳಿಯದು...’ ಎನ್ನುವಂತಹ ಯತ್ನಾಳರ ಹೀನಾಯ ಮಾತುಗಳು ವ್ಯಕ್ತಿನಿಂದೆಯಷ್ಟೇ ಆಗಿರದೆ, ದೇಶದ ಸ್ವಾತಂತ್ರ್ಯ ಚಳವಳಿಯನ್ನು ಹಂಗಿಸಿದಂತೆ ಆಗಿದೆ.

ಯತ್ನಾಳರ ಮಾತುಗಳನ್ನು ಬೆಂಬಲಿಸುವಂತೆ ಮಾತನಾಡಿರುವ ವಸತಿ ಸಚಿವ ವಿ. ಸೋಮಣ್ಣ, ‘ಹಿರಿಯರಾದವರು ಅಳೆದು ತೂಗಿ ಮಾತನಾಡಬೇಕು. ಅವರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು’ ಎಂದು ದೊರೆಸ್ವಾಮಿ ಅವರಿಗೆ ಬುದ್ಧಿ ಹೇಳಿದ್ದಾರೆ. ದೊರೆಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಟು ಟೀಕಾಕಾರರು. ಆ ಕಾರಣಕ್ಕಾಗಿ ಅವರ ಮೇಲೆ ಮುಗಿಬೀಳುತ್ತಿರುವ ಬಿಜೆಪಿ ನಾಯಕರು, ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹಾಗೂ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲೂ ದೊರೆಸ್ವಾಮಿ ಅವರು ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ್ದರು ಎನ್ನುವುದನ್ನು ಮರೆಯಬಾರದು. ಉಕ್ಕಿನ ಸೇತುವೆ ನಿರ್ಮಾಣದ ಪ್ರಸ್ತಾವವನ್ನು ಕಟುವಾಗಿ ವಿರೋಧಿಸಿದ್ದ ಅವರು, ಬೆಂಗಳೂರಿನ ಕಸದ ತಿಪ್ಪೆಯನ್ನಾಗಿ ಮಂಡೂರು ಗ್ರಾಮವನ್ನು ಅವೈಜ್ಞಾನಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಅಂದಿನ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸಿದ್ದರು. ಸಮಾಜದ ಹಿತಚಿಂತನೆಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡ ಇಂಥ ಹಿರಿಯರನ್ನು ಸಿದ್ಧಾಂತದ ಕಾರಣಕ್ಕಾಗಿ ನಿಂದಿಸುವುದು ಯಾರಿಗೂ ಶೋಭೆಯಲ್ಲ.

ಕೆಲವು ದಿನಗಳ ಮೊದಲಷ್ಟೇ ಸಂಸದ ಅನಂತಕುಮಾರ ಹೆಗಡೆ, ‘ಉಪವಾಸಕ್ಕೆ ಹೆದರಿ ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟು ಓಡಿಹೋದರು ಎಂಬ ಇತಿಹಾಸದ ಪಾಠ ಕೇಳಿದರೆ ರಕ್ತ ಹೆಪ್ಪುಗಟ್ಟುತ್ತದೆ. ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡ ಒಂದು ವರ್ಗ ಕೂಡ ಇತ್ತು. ಲಾಠಿ ಏಟು ತಿನ್ನದವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲಾಯಿತು’ ಎಂದು ಹೇಳಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಇಂಥ ಪ್ರಜಾಪ್ರತಿನಿಧಿಗಳ ಮಾತುಗಳನ್ನು ಕೇಳಿದರೆ, ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಇವರಿಗೆ ಚಿಕ್ಕಾಸಿನ ಗೌರವವೂ ಇದ್ದಂತೆ ಕಾಣುವುದಿಲ್ಲ.

ಬಿಜೆಪಿ ಶಾಸಕರು, ಸಂಸದರ ಹೇಳಿಕೆಗಳನ್ನು ವೈಯಕ್ತಿಕ ಅಭಿಪ್ರಾಯಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ. ಒಂದು ವಲಯದ ಹಿರಿಯರನ್ನು, ಪ್ರಜ್ಞಾವಂತರನ್ನು ಉದ್ದೇಶಪೂರ್ವಕವಾಗಿ ನಿಂದಿಸುವುದನ್ನೇ ಕೆಲಸ ಮಾಡಿಕೊಂಡಿರುವ ಕೆಲವು ಶಾಸಕರು– ಸಂಸದರು ತಮ್ಮ ಬೆಂಬಲಿಗರಿಗೆ ಅಗ್ಗದ ರಂಜನೆಯನ್ನೊದಗಿಸುವ ಮಾತುಗಳನ್ನಾಡುತ್ತಾ ಚಾಲ್ತಿಯಲ್ಲಿರುವ ಪ್ರಯತ್ನ ನಡೆಸುತ್ತಿರುವಂತಿದೆ. ಜನಹಿತಕ್ಕೆ ಸಂಬಂಧಿಸಿದಂತೆ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಕುರಿತು ಗಂಭೀರವಾಗಿ ಮಾತನಾಡಬೇಕಾದ ಈ ನಾಯಕರು, ಮಾತುಗಳ ಮೂಲಕವೇ ಕ್ರಾಂತಿ ಮಾಡಲು ಹೊರಟಿದ್ದಾರೆ. ವಿಷಾದದ ಸಂಗತಿಯೆಂದರೆ, ಇಂಥ ನಾಯಕರ ಕಿವಿ ಹಿಂಡುವ ಕೆಲಸವನ್ನೂ ಅವರ ಪಕ್ಷ ಮಾಡುತ್ತಿಲ್ಲ. ಕೆಲವೊಮ್ಮೆ ಕಾಟಾಚಾರಕ್ಕೆ ವಿವರಣೆ ಕೇಳುವ ಮೂಲಕ ತಿಪ್ಪೆ ಸಾರಿಸುವ ಪ್ರಯತ್ನ ನಡೆಸಿದ್ದರೆ, ಮತ್ತೆ ಕೆಲವು ಬಾರಿ ವಿವಾದಕ್ಕೆ ಕಾರಣವಾದ ಹೇಳಿಕೆಗಳ ಬಗ್ಗೆ ಮೌನ ವಹಿಸಿದೆ. ಬಾಯಿಬಡುಕರಿಗೆ ಉತ್ತೇಜನ ನೀಡುವಂತಿರುವ ಈ ಮೌನವು ಸಮಾಜದಲ್ಲಿನ ಶಾಂತಿ–ಸೌಹಾರ್ದವನ್ನು ಕದಡುವಂತಹದ್ದು. ಬಿಜೆಪಿಯ ಉನ್ನತ ನಾಯಕರುಈಗಲಾದರೂ ಜಾಣಮೌನ–ಮರೆವಿನಿಂದ ಹೊರಬಂದು ತಮ್ಮ ಪಕ್ಷದ ಶಾಸಕರು, ಸಂಸದರಿಗೆ ಮಾತಿನ ಶಿಷ್ಟಾಚಾರ ಹೇಳಿಕೊಡಬೇಕಾಗಿದೆ. ಅಧಿಕಾರದಲ್ಲಿ ಇರುವವರು ತಮ್ಮ ಮಾತು–ಕೃತಿ ಉಳಿದವರಿಗೆ ಮಾದರಿಯಾಗುವಂತೆ ಎಚ್ಚರ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT