ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಲೈಂಗಿಕ ಕಾರ್ಯಕರ್ತೆಯರಿಗೆ ಘನತೆ ತಂದ ಕೋರ್ಟ್‌ ತೀರ್ಪು

Last Updated 2 ಜೂನ್ 2022, 21:00 IST
ಅಕ್ಷರ ಗಾತ್ರ

‘ವೇಶ್ಯಾವಾಟಿಕೆಯೂ ಒಂದು ವೃತ್ತಿ ಮತ್ತು ಲೈಂಗಿಕ ಕಾರ್ಯಕರ್ತೆಯರು ಕೂಡ ಕಾನೂನಿನ ಅಡಿಯಲ್ಲಿ ಘನತೆಯಿಂದ ಬದುಕಲು ಹಾಗೂ ಸಮಾನ ರಕ್ಷಣೆಯನ್ನು ಪಡೆಯಲು ಅರ್ಹರು’ ಎನ್ನುವ ಸುಪ್ರೀಂ ಕೋರ್ಟ್‌ನ ತೀರ್ಪು, ನಿಸ್ಸಂದೇಹವಾಗಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುವಂಥದ್ದು.
ಆದ್ದರಿಂದಲೇ ಈ ತೀರ್ಪನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕಿದೆ. ಲೈಂಗಿಕ ಕಾರ್ಯಕರ್ತೆಯರ
ಕುರಿತು ಸಮಾಜದಲ್ಲಿ ಬೇರೂರಿರುವ ತುಚ್ಛ ಭಾವನೆಯನ್ನು ಕೊನೆಗಾಣಿಸಿ, ಅವರಿಗೂ ಗೌರವ ಮತ್ತು ಘನತೆಯ ಬದುಕನ್ನು ರೂಪಿಸಿಕೊಡುವ ದಾರಿಯಲ್ಲಿ ಈ ತೀರ್ಪು ಒಂದು ಕೈದೀವಿಗೆಯಾಗಿ ಸಿಕ್ಕಂತಾಗಿದೆ. ಆ ದಿಸೆಯಲ್ಲಿ ಕಾಯ್ದೆ ರೂಪಿಸಬೇಕಾದ ಅಗತ್ಯವನ್ನೂ ಅದು ಗಟ್ಟಿಯಾಗಿ ಪ್ರತಿಪಾದಿಸುತ್ತಿದೆ.

ಲೈಂಗಿಕ ಕಾರ್ಯಕರ್ತೆಯರನ್ನು ಪೊಲೀಸರು ತುಂಬಾ ತುಚ್ಛವಾಗಿ ನಡೆಸಿಕೊಳ್ಳುವುದಲ್ಲದೆ ಅವರ ಶೋಷಣೆಗೂ ಕಾರಣರಾಗುತ್ತಿದ್ದಾರೆ ಎನ್ನುವ ದೂರೇನೂ ಇಂದು ನಿನ್ನೆಯದಲ್ಲ. ಹಾಗೆಯೇ ವೇಶ್ಯಾವಾಟಿಕೆಯಲ್ಲಿ ತೊಡಗಿದವರಿಂದ ಪೊಲೀಸರು ಹಣ ವಸೂಲಿ ಮಾಡುವ ಕುರಿತ ಆರೋಪಗಳೂ ಕೋರ್ಟ್‌ನ ಗಮನಕ್ಕೆ ಬಂದಿವೆ. ಆದ್ದರಿಂದಲೇ, ಸಮ್ಮತಿಯನ್ನು ವ್ಯಕ್ತಪಡಿಸಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಯನ್ನು ದಾಖಲಿಸುವಂತಿಲ್ಲ ಮತ್ತು ಅವರ ವೃತ್ತಿಯಲ್ಲಿ ಹಸ್ತಕ್ಷೇಪವನ್ನೂ ಮಾಡುವಂತಿಲ್ಲ ಎಂದು ತಾಕೀತು ಮಾಡಿದೆ. ‘ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ಪೊಲೀಸರ ವರ್ತನೆ ಕ್ರೂರ ಮತ್ತು ಹಿಂಸಾತ್ಮಕವಾಗಿರುವುದನ್ನು ನಾವು ಗಮನಿಸಿದ್ದೇವೆ. ಅವರ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲಾಗದು’
ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಹೇಳಿರುವುದು, ಈ ಶೋಷಿತ ಸಮುದಾಯದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ವೇಶ್ಯಾವಾಟಿಕೆ ಕಾರಣಕ್ಕಾಗಿ ದಾಳಿ, ಬಂಧನಗಳು ನಡೆದಾಗ ಲೈಂಗಿಕ ಕಾರ್ಯಕರ್ತೆಯರು ತೀವ್ರವಾದ ಅವಮಾನ, ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಮಾಧ್ಯಮಗಳೂ ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಅಸೂಕ್ಷ್ಮವಾಗಿ ನಡೆದುಕೊಂಡು ಮಹಿಳೆಯರ ಗುರುತು ಬಹಿರಂಗ ಪಡಿಸುವುದುಂಟು. ಪುರುಷರೂ ಭಾಗವಾಗದೆ ವೇಶ್ಯಾವಾಟಿಕೆ ನಡೆಯುವುದಿಲ್ಲ. ಆದರೆ, ಅವಮಾನ ಗೊಳ್ಳುವುದು ಮಾತ್ರ ಮಹಿಳೆಯರೇ ಆಗಿರುತ್ತಾರೆ. ಇಂತಹ ಸೂಕ್ಷ್ಮ ಪ್ರಕರಣಗಳ ವರದಿ ಮಾಡುವಾಗ ಮಾಧ್ಯಮದ ಹೊಣೆ ಏನೆಂಬುದನ್ನೂ ಕೋರ್ಟ್‌ ನೆನಪಿಸಿದೆ. ತಾಯಿ ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾಳೆ ಎನ್ನುವ ಕಾರಣಕ್ಕೆ ಅವಳಿಂದ ಮಗುವನ್ನು ಬೇರ್ಪಡಿಸುವಂತಿಲ್ಲ ಎನ್ನುವುದು ಕೂಡ ತೀರ್ಪಿನಲ್ಲಿರುವ ಅತ್ಯಂತ ಮಹತ್ವದ ಅಂಶವಾಗಿದೆ. ತಾಯಿಯ ಆರೈಕೆಯಿಂದ ದೂರವಾಗುವ ಮಕ್ಕಳನ್ನು ಬಾಲಕಾರ್ಮಿಕ ರಾಗಿಸುವ ಪ್ರಯತ್ನಗಳು ಇದರಿಂದ ತಪ್ಪುತ್ತವೆ.

ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ದೇಶದಲ್ಲೀಗ ಯಾವ ಕಾಯ್ದೆಯೂ ಇಲ್ಲ. ಖಾಸಗಿಯಾಗಿ ನಡೆಸುವ ವೇಶ್ಯಾವಾಟಿಕೆಯು ಅಪರಾಧವಲ್ಲವಾದರೂ ‘ಅನೈತಿಕ ಕಳ್ಳಸಾಗಣೆ (ತಡೆ) ಕಾಯ್ದೆ–1956’, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಬಾಲ ನ್ಯಾಯ ಕಾಯ್ದೆಯ ಕೆಲವು ನಿಯಮಗಳಲ್ಲಿ ವೇಶ್ಯಾವಾಟಿಕೆಯ ಪ್ರಸ್ತಾಪ ಬರುತ್ತದೆ. ಸಾರ್ವಜನಿಕವಾಗಿ ವೇಶ್ಯಾವಾಟಿಕೆಗೆ ಒತ್ತಾಯಿಸುವುದು, ವೇಶ್ಯಾಗೃಹವನ್ನು ನಡೆಸುವುದು ಮತ್ತು ಗ್ರಾಹಕರನ್ನು ಹುಡುಕಿಕೊಡುವುದನ್ನು ಐಪಿಸಿ ಕಲಂಗಳು ಅಪರಾಧ ಎಂದು ವ್ಯಾಖ್ಯಾನಿಸುತ್ತವೆ. ಲೈಂಗಿಕ ಕಾರ್ಯಕರ್ತೆಯರ ಶೋಷಣೆಯಲ್ಲಿ ಪೊಲೀಸರಿಗೆ ಈ ಕಲಂಗಳೇ ಅಸ್ತ್ರವಾಗಿ ಸಿಕ್ಕಿವೆ. ಈ ವಿಷಯ, 2011ರಲ್ಲೇ ಸುಪ್ರೀಂ ಕೋರ್ಟ್‌ನ ಗಮನಕ್ಕೆ ಬಂದಿದೆ. ಮಾನವ ಕಳ್ಳಸಾಗಣೆ ತಡೆಗಟ್ಟುವುದು, ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್‌ವಸತಿ ಕಲ್ಪಿಸುವುದು ಮತ್ತು ಅವರು ಘನತೆಯಿಂದ ಬದುಕುವಂತೆ ಮಾಡುವುದು, ಕೋರ್ಟ್‌ಗೆ ಆದ್ಯತೆಯಾಗಿ ಕಂಡಿದೆ. ಈ ಮೂರೂ ಉದ್ದೇಶಗಳನ್ನು ಈಡೇರಿಸಲು ಏನು ಮಾಡಬೇಕು ಎಂಬುದನ್ನು ಶಿಫಾರಸು ಮಾಡಲು ಸಮಿತಿಯನ್ನೂ ಅದು ರಚಿಸಿತ್ತು. ಆ ಸಮಿತಿಯ ಶಿಫಾರಸಿನ ಅನ್ವಯ ಕಾಯ್ದೆ ರೂಪಿಸುವುದಾಗಿ ಕೇಂದ್ರ ಸರ್ಕಾರ 2016ರಲ್ಲೇ ವಾಗ್ದಾನ ಮಾಡಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಯ್ದೆಯನ್ನು ರೂಪಿಸುವವರೆಗೆ ತನ್ನ ನಿರ್ದೇಶನಗಳನ್ನು ಪರಿಪಾಲನೆ ಮಾಡಬೇಕು ಎಂದು ಕೋರ್ಟ್‌, ಸರ್ಕಾರಕ್ಕೆ ಸೂಚನೆ ನೀಡಿದೆ. ಲೈಂಗಿಕ ಕಾರ್ಯಕರ್ತೆಯರ ವಿಷಯದಲ್ಲಿ ಅದು ಮೊದಲಿನಿಂದಲೂ ಕಳಕಳಿ ವ್ಯಕ್ತಪಡಿಸುತ್ತಲೇ ಬಂದಿದೆ. ಯಾವುದೇ ಗುರುತಿನ ಚೀಟಿಗೆ ಒತ್ತಾಯಿಸದೆ ಅವರಿಗೆ ಪಡಿತರವನ್ನು ವಿತರಿಸಬೇಕು ಎಂದು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 2020ರಲ್ಲೇ ಸೂಚನೆಯನ್ನು ನೀಡಿತ್ತು. ಇದೇ ವರ್ಷದ ಆರಂಭದಲ್ಲಿ, ಎಲ್ಲ ಲೈಂಗಿಕ ಕಾರ್ಯಕರ್ತೆಯರಿಗೆ
ಪಡಿತರ ಚೀಟಿ ಮತ್ತು ಮತದಾರರ ಚೀಟಿ ವಿತರಿಸುವ ಕಾರ್ಯವನ್ನು ಬೇಗ ಮುಗಿಸುವಂತೆಯೂ ತಾಕೀತು ಮಾಡಿತ್ತು. ಕಳೆದ ವಾರ ನೀಡಿದ ತೀರ್ಪು ಅದರ ಮುಂದುವರಿದ ಹೆಜ್ಜೆಯಾಗಿದೆ. ವಿಷಯದ ಗಾಂಭೀರ್ಯ ಅರಿತು, ಕೇಂದ್ರ ಸರ್ಕಾರವೂ ಬೇಗ ಕಾಯ್ದೆ ರೂಪಿಸುವತ್ತ ಗಮನಹರಿಸಬೇಕಿದೆ. ಕಾಯ್ದೆಯನ್ನು ರೂಪಿಸಿದ ಮಾತ್ರಕ್ಕೆ ಲೈಂಗಿಕ ಕಾರ್ಯಕರ್ತೆಯರಿಗೆ ಘನತೆ ದಕ್ಕಿಬಿಡುವುದಿಲ್ಲ. ಅದಕ್ಕೆ ಸಮಾಜದ ದೃಷ್ಟಿಕೋನವೂ ಬದಲಾಗುವ ಅಗತ್ಯವಿದೆ. ಆದರೆ, ಕಾಯ್ದೆಯನ್ನು ರೂಪಿಸುವುದು ಆ ದಾರಿಯಲ್ಲಿ ಮೊದಲ ಹೆಜ್ಜೆಯಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT