2011ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷರಾಗಿದ್ದ ಗೋನಾಳ ಭೀಮಪ್ಪ ಮತ್ತು ಸದಸ್ಯರಾಗಿದ್ದ ಒಂಬತ್ತು ಮಂದಿಯ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರುವ (ಪ್ರಾಸಿಕ್ಯೂಷನ್) ಕಡತವನ್ನು ರಾಷ್ಟ್ರಪತಿಯವರಿಗೆ ಕಳುಹಿಸುವ ಪ್ರಸ್ತಾವವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಲಾಗಿದೆ. ಇದಲ್ಲದೇ ನಾಲ್ಕು ಪ್ರಕರಣಗಳಲ್ಲಿ ಭ್ರಷ್ಟಾಚಾರದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಕಾರಣದಿಂದ ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳೂ ಸೇರಿದಂತೆ ಎಂಟು ಮಂದಿ ನಿವೃತ್ತ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಮಾಡಿದ್ದ ಶಿಫಾರಸುಗಳನ್ನೂ ತಿರಸ್ಕರಿಸುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸರ್ಕಾರದ ಈ ತೀರ್ಮಾನಗಳು ಸದುದ್ದೇಶದಿಂದ ಕೂಡಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತವನ್ನು ನಿಯಂತ್ರಿಸಬೇಕಾದರೆ ಅವುಗಳನ್ನು ಕಿಂಚಿತ್ತೂ ಸಹಿಸುವುದಿಲ್ಲ ಎಂಬ ಕಠಿಣ ನಿಲುವನ್ನು ಸರ್ಕಾರ ತಾಳಬೇಕಾಗುತ್ತದೆ. ಅಕ್ರಮಗಳಲ್ಲಿ ಭಾಗಿಯಾದವರನ್ನು ಕಾನೂನಿನ ವ್ಯಾಪ್ತಿಯಲ್ಲಿ ಶಿಕ್ಷಿಸಲು ಇರುವ ಎಲ್ಲ ಅವಕಾಶಗಳನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ, ಸರ್ಕಾರ ಈಗ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ನಿಲುವನ್ನು ತಳೆದಿರುವುದು ದುರದೃಷ್ಟಕರ ಬೆಳವಣಿಗೆ.

362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಾ ಫಲಿತಾಂಶವನ್ನು 2013ರ ಮಾರ್ಚ್ 21ರಂದು ಪ್ರಕಟಿಸಲಾಗಿತ್ತು. ಆದರೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು 2013ರ ಮೇ ತಿಂಗಳಲ್ಲಿ ಅಡ್ವೊಕೇಟ್ ಜನರಲ್ ಕಚೇರಿಗೆ ದೂರು ಸಲ್ಲಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸಿಐಡಿಯು ತನಿಖೆಯನ್ನು ಪೂರ್ಣಗೊಳಿಸಿ ಸೆಪ್ಟೆಂಬರ್ನಲ್ಲಿ ತನಿಖಾ ವರದಿಯನ್ನು ಸಲ್ಲಿಸಿತ್ತು. ಕೆಪಿಎಸ್ಸಿಯ ಆಗಿನ ಅಧ್ಯಕ್ಷ ಮತ್ತು ಹಲವು ಸದಸ್ಯರು ಅಕ್ರಮಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದ್ದು, ಅವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಲು ಅನುಮತಿ ನೀಡಬೇಕು ಎಂದು ಸಿಐಡಿ ಶಿಫಾರಸು ಮಾಡಿತ್ತು. ಎಂಟು ವರ್ಷಗಳಾದರೂ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಪ್ರಾಸಿಕ್ಯೂಷನ್ಗೆ ಅನುಮತಿ ನೀಡದಿರಲು 2021ರ ಮೇ 27ರಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಆರೋಪಿಗಳ ವಿರುದ್ಧ ವಿಚಾರಣೆ ಆರಂಭಿಸಲು ಅನುಮತಿ ಕೋರಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಯವರಿಗೆ ಪ್ರಸ್ತಾವ ಸಲ್ಲಿಸುವ ನಿರ್ಧಾರವನ್ನು ಆಗ ಕೈಗೊಳ್ಳಲಾಗಿತ್ತು. ನೇಮಕಾತಿ ಅಧಿಸೂಚನೆಯನ್ನೇ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಆದರೆ, 2022ರಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕ ಕಾಯ್ದೆಯೊಂದನ್ನು ಜಾರಿಗೊಳಿಸಿ, ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿತ್ತು. ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ 2023ರ ಡಿಸೆಂಬರ್ನಲ್ಲಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. 2021ರ ಸಂಪುಟ ಸಭೆಯ ನಿರ್ಣಯವನ್ನು ಉಲ್ಲೇಖಿಸಿದ್ದ ರಾಜ್ಯಪಾಲರು, ಪ್ರಸ್ತಾವಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದ್ದರು. ಸಕ್ಷಮ ಪ್ರಾಧಿಕಾರಿಯಾದ ರಾಷ್ಟ್ರಪತಿಯವರ ಅನುಮತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬಹುದು ಎಂಬ ಷರಾದೊಂದಿಗೆ ಕಡತವನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಈಗ, ಆರೋಪಿಗಳು ನಿವೃತ್ತರಾಗಿದ್ದಾರೆ ಎಂಬ ಕಾರಣವನ್ನೇ ಮುಂದಿಟ್ಟುಕೊಂಡು, ವಿಚಾರಣೆಗೆ ಅನುಮತಿ ನಿರಾಕರಿಸುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಕೆಪಿಎಸ್ಸಿಗೂ ಅಕ್ರಮಗಳಿಗೂ ಬಿಡದ ನಂಟು ಎಂಬ ಪರಿಸ್ಥಿತಿ ಇದೆ. ನೇಮಕಾತಿ ಪರೀಕ್ಷೆಗಳು ನಡೆದಾಗಲೆಲ್ಲ ಅಕ್ರಮದ ಆರೋಪಗಳು ಕೇಳಿಬರುತ್ತಿವೆ. ಕೆಪಿಎಸ್ಸಿಯನ್ನು ಆಮೂಲಾಗ್ರವಾಗಿ ಶುದ್ಧೀಕರಿಸುವುದಾಗಿ ಘೋಷಿಸಿದ ಸರ್ಕಾರವೇ ಭ್ರಷ್ಟಾಚಾರದ ಆರೋಪಿಗಳ ರಕ್ಷಣೆಗೆ ನಿಲ್ಲುವ ನಿರ್ಣಯ ಕೈಗೊಂಡಿರುವುದು ವಿಪರ್ಯಾಸ. ಇಂತಹ ಪ್ರಕರಣಗಳಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ಧಾರ ಕೈಗೊಳ್ಳಬೇಕಾದ ಸಂವಿಧಾನಬದ್ಧ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಸಿಐಡಿ ವರದಿಯಲ್ಲಿನ ಶಿಫಾರಸಿನಂತೆ ತಪ್ಪಿತಸ್ಥರನ್ನು ಕಾನೂನಿನ ವ್ಯಾಪ್ತಿಯಲ್ಲಿ ವಿಚಾರಣೆಗೆ ಗುರಿಪಡಿಸುವ ಕೆಲಸ ಆಗಲೇಬೇಕು. ವಿಚಾರಣೆಗೆ ಅನುಮತಿ ನಿರಾಕರಿಸುವ ನಿರ್ಣಯವನ್ನು ಹಿಂಪಡೆದು, ಸರಿಯಾದ ಕ್ರಮದಲ್ಲಿ ರಾಷ್ಟ್ರಪತಿಯವರಿಗೆ ಪ್ರಸ್ತಾವ ಸಲ್ಲಿಸುವ ದೃಢ ನಿರ್ಧಾರವನ್ನು ಸರ್ಕಾರ ತಳೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.