ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ರಾಹುಲ್‌ ಅನರ್ಹತೆ: ವ್ಯವಸ್ಥೆಯ ವರ್ಚಸ್ಸು ಕುಗ್ಗಿಸಿದ ನಡೆ

Last Updated 24 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ದೇಶದ ಅತ್ಯಂತ ಮುಖ್ಯ ವಿರೋಧ ಪಕ್ಷದ ನಾಯಕನನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ; ಸಾಮಾನ್ಯ ಸಂದರ್ಭಗಳಲ್ಲಿ ಅವರ ಕೃತ್ಯವು ವ್ಯವಸ್ಥೆಯಿಂದ ಇಷ್ಟೊಂದು ಗಂಭೀರವಾದ ಶಿಕ್ಷೆಗೆ ಗುರಿಯಾಗುವಂಥದ್ದಲ್ಲ. ಇದು ವ್ಯವಸ್ಥೆಯ ವರ್ಚಸ್ಸು ಮತ್ತು ವಿಶ್ವಾಸಾರ್ಹತೆಯನ್ನು ತಗ್ಗಿಸುತ್ತದೆ. ವಿರೋಧ ಪಕ್ಷಗಳ ನಾಯಕರು ಮತ್ತು ಟೀಕಾಕಾರರನ್ನು ದಮನಿಸಲು, ಅವರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ತಡೆಯಲು ಕಾನೂನು ಮತ್ತು ಇತರ ಎಲ್ಲ ರೀತಿಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ನಿರಂಕುಶಾಧಿಪತ್ಯದ ದೇಶಗಳ ಸಾಲಿಗೆ ಭಾರತವನ್ನೂ ಸೇರಿಸುತ್ತದೆ. ಈ ಹಿಂದೆ ಮಹತ್ವದ ಅನರ್ಹತೆ ಪ್ರಕರಣ ನಡೆದದ್ದು 1975ರಲ್ಲಿ– ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಸಮಾನವಾದ ಒಂದು ತಪ್ಪಿಗೆ ಪ್ರಧಾನಿ ಹುದ್ದೆಯನ್ನೇ ಅವರು ಬೆಲೆಯಾಗಿ ತೆರಬೇಕಾಗಿತ್ತು. ರಾಹುಲ್‌ ಗಾಂಧಿ ಅವರು ಎಸಗಿದ್ದಾರೆ ಎಂದು ಹೇಳಲಾಗುವ ತಪ್ಪು ಅಷ್ಟೊಂದು ಗಂಭೀರವೂ ಅಲ್ಲ. ಇನ್ನೂ ಗಮನಿಸಬೇಕಾದ ವಿಚಾರ ಎಂದರೆ, ಈ ಪ್ರಕರಣದಲ್ಲಿ ಬಂದಿರುವ ಆದೇಶವು ಕಾನೂನಿನ ದೃಷ್ಟಿಯಲ್ಲಿ ಎಷ್ಟರಮಟ್ಟಿಗೆ ಸಶಕ್ತ ಎಂಬುದರ ಬಗ್ಗೆಯೇ ಪ್ರಶ್ನೆಗಳಿವೆ. ವಾಸ್ತವದಲ್ಲಿ ರಾಹುಲ್‌ ಅವರನ್ನು ಅನರ್ಹಗೊಳಿಸಲು ಅನುಸರಿಸಿದ ಪ್ರಕ್ರಿಯೆಯೇ ಪ್ರಶ್ನಾರ್ಹವಾಗಿದೆ.

ಮಾನನಷ್ಟ ಪ್ರಕರಣವೊಂದರಲ್ಲಿ ಸೂರತ್ ನ್ಯಾಯಾಲಯವೊಂದು ನೀಡಿದ ಆದೇಶದ ಆಧಾರದಲ್ಲಿ ರಾಹುಲ್‌ ಅವರನ್ನು ಅನರ್ಹಗೊಳಿಸಲಾಗಿದೆ. ಲೋಕಸಭೆಗೆ 2019ರಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಅವರು ಕೋಲಾರದಲ್ಲಿ ಆಡಿದ ಮಾತು ತಮ್ಮ ಮಾನಹಾನಿ ಮಾಡಿದೆ ಎಂದು ಸೂರತ್‌ನ ಶಾಸಕ ಪೂರ್ಣೇಶ್‌ ಮೋದಿ ಅವರು ದೂರು ದಾಖಲಿಸಿದ್ದರು. ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಏಕಿದೆ’ ಎಂದು ರಾಹುಲ್‌ ಪ್ರಶ್ನಿಸಿದ್ದರು. ಅದಕ್ಕೂ ಮೊದಲು, ದೇಶ ತೊರೆದು ಪರಾರಿಯಾಗಿದ್ದ ನೀರವ್‌ ಮೋದಿ ಮತ್ತು ಲಲಿತ್ ಮೋದಿ ಹಾಗೂ ರಫೇಲ್‌ ಯುದ್ಧವಿಮಾನ ಖರೀದಿ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದ್ದರು. ಮಾನಹಾನಿ ಪ್ರಕರಣದಲ್ಲಿ ನೀಡಬಹುದಾದ ಗರಿಷ್ಠ ಶಿಕ್ಷೆಯನ್ನು ಸೂರತ್‌ ನ್ಯಾಯಾಲಯವು ರಾಹುಲ್ ಅವರಿಗೆ ನೀಡಿದೆ. ಕಡಿಮೆ ಶಿಕ್ಷೆ ನೀಡುವುದರಿಂದ ಮಾನಹಾನಿಗೆ ಸಂಬಂಧಿಸಿದ ಕಾನೂನಿನ ಉದ್ದೇಶವೇ ಈಡೇರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀನವಲ್ಲದ ಕೃತ್ಯವನ್ನು ಮೊದಲ ಬಾರಿಗೆ ಎಸಗಿದವರಿಗೆ ನ್ಯಾಯಾಲಯಗಳು ಸಾಮಾನ್ಯವಾಗಿ ಗರಿಷ್ಠ ಶಿಕ್ಷೆ ನೀಡುವುದಿಲ್ಲ. ಗರಿಷ್ಠ ಅಂದರೆ ಎರಡು ವರ್ಷ ಶಿಕ್ಷೆ ನೀಡಿದ್ದರಿಂದಾಗಿ ಮಾತ್ರ ರಾಹುಲ್ ಅವರ ಸಂಸತ್‌ ಸದಸ್ಯತ್ವ ರದ್ದಾಗಿದೆ. ಎರಡು ವರ್ಷಕ್ಕಿಂತ ಕಡಿಮೆ ಶಿಕ್ಷೆ ಆಗಿದ್ದರೆ ಸದಸ್ಯತ್ವ ರದ್ದಾಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ರಾಹುಲ್‌ ಅವರಿಗೆ ಜಾಮೀನು ನೀಡಲಾಗಿದೆ ಮತ್ತು ಮೇಲ್ಮನವಿ ಸಲ್ಲಿಸುವುದಕ್ಕಾಗಿ ಶಿಕ್ಷೆ ಜಾರಿಗೆ ಒಂದು ತಿಂಗಳು ತಡೆ ನೀಡಲಾಗಿದೆ. ಆದರೆ, ಅಪರಾಧಿ ಎಂದು ಘೋಷಿಸಿದ್ದಕ್ಕೆ ತಡೆ ಇಲ್ಲದ ಕಾರಣ ಅನರ್ಹತೆ ಎದುರಾಗಿದೆ. ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಆದೇಶದ ಎಲ್ಲ ಅಂಶಗಳೂ ಬಹಿರಂಗ ಆಗಿಲ್ಲ ಮತ್ತು ತಿಳಿದುಬಂದ ಅಂಶಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಹೀಗಾಗಿಯೇ ಆತುರವಾಗಿ ಕೈಗೊಂಡ ಅನರ್ಹತೆ ನಿರ್ಧಾರವು ಗಮನ ಸೆಳೆದಿದೆ. ಮಾನಹಾನಿಗೆ ಸಂಬಂಧಿಸಿದ ಕಾನೂನಿಗೆ ನ್ಯಾಯಾಲಯವು ನೀಡಿದ ವ್ಯಾಖ್ಯೆಯ ಬಗ್ಗೆಯೇ ಕಾನೂನು ತಜ್ಞರ ವಲಯದಲ್ಲಿ ಪ್ರಶ್ನೆಗಳು ಇವೆ. ಸೂರತ್‌ನಲ್ಲಿ ಈ ದೂರು ದಾಖಲಿಸಲು ದೂರುದಾರರಿಗೆ ಕಾನೂನುಬದ್ಧ ಹಕ್ಕು ಇಲ್ಲ ಎಂಬ ನಿಲುವು ಕೂಡ ವ್ಯಕ್ತವಾಗಿದೆ. ಚುನಾವಣಾ ಪ‍್ರಚಾರದ ಬಿರುಸಿನಲ್ಲಿ ರಾಜಕಾರಣಿಗಳು ನೀಡಿದ ಹೇಳಿಕೆಗಳಿಗೆ ಮಾನಹಾನಿಗೆ ಸಂಬಂಧಿಸಿದ ಕಾನೂನನ್ನು ಅನ್ವಯ ಮಾಡುವ ವಿಚಾರದಲ್ಲಿ ನ್ಯಾಯಾಲಯಗಳು ಹಿಂದೆಲ್ಲ ಇಷ್ಟೊಂದು ಉತ್ಸಾಹ ತೋರಿದ್ದಿಲ್ಲ. ದುರುದ್ದೇಶದಿಂದ ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯ ಮಾನಹಾನಿ ಮಾಡಿದರೆ ಮಾತ್ರ ಮಾನನಷ್ಟ ಕಾನೂನು ಅನ್ವಯವಾಗುತ್ತದೆಯೇ ಹೊರತು ಒಂದು ಗುಂಪನ್ನು ಅವಹೇಳನ ಮಾಡಿದರೆ ಅದು ಅನ್ವಯ ಆಗದು ಎಂಬ ವಾದ ಇದೆ. ಮೋದಿ ಎಂಬ ಉಪನಾಮ ಹೊಂದಿರುವ ಎಲ್ಲರನ್ನೂ ರಾಹುಲ್‌ ಅವಮಾನಿಸಿದ್ದಾರೆ ಎಂಬುದು ಅತಿರೇಕದ ಚಿಂತನೆ. ರಾಹುಲ್ ಅವರ ಗುರಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದ ಇತರರು ಮಾತ್ರ. ಅವರು ಉಲ್ಲೇಖಿಸಿದ ಯಾವುದೇ ವ್ಯಕ್ತಿ ಮಾನನಷ್ಟ ಮೊಕದ್ದಮೆ ಹೂಡಿಲ್ಲ. ಭಾಷಣದ ಸಂದರ್ಭವು ಬಳಸಿದ ಮಾತುಗಳಿಗೆ ನಿರ್ದಿಷ್ಟ ಅರ್ಥ ಕೊಡುತ್ತದೆ. ಹಾಗಾಗಿ ಪ್ರಕರಣವನ್ನು ನ್ಯಾಯಾಲಯವು ಪರಿಶೀಲನೆಗೆ ಒಳಪಡಿಸುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು.

ಈ ದೇಶದಲ್ಲಿ ರಾಹುಲ್‌ ಅವರಷ್ಟು ಲೇವಡಿ ಮತ್ತು ಅವಹೇಳನಕ್ಕೆ ಒಳಗಾದ ಬೇರೊಬ್ಬ ರಾಜಕಾರಣಿ ಇಲ್ಲ; ಈಗ ಅವರೇ ಮಾನಹಾನಿ ಅಸ್ತ್ರದ ಸಂತ್ರಸ್ತರೂ ಆಗಿರುವುದು ಪರಿಸ್ಥಿತಿಯ ವ್ಯಂಗ್ಯ. ಅವರನ್ನು ಪಪ್ಪು, ಮೀರ್‌ ಜಾಫರ್‌, ದೇಶದ್ರೋಹಿ ಮತ್ತು ಇಂತಹ ಹಲವು ಹೆಸರುಗಳಿಂದ ಹಲವು ವರ್ಷಗಳಿಂದ ಕರೆಯಲಾಗುತ್ತಿದೆ. ಇನ್ನೊಂದು ವಿರೋಧಾಭಾಸವೆಂದರೆ, ರಾಹುಲ್‌ ಅವರನ್ನು ವಿಚಾರಣೆಗೆ ಒಳಪ‍ಡಿಸಿ, ಕಿರುಕುಳ ನೀಡಲಾಗಿದೆ. ಆದರೆ, ಅವರ ಹೇಳಿಕೆಗಿಂತ ಹೆಚ್ಚು ಗಂಭೀರವಾದ ಅಪರಾಧ ಎಸಗಿದವರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ರಾಜಕೀಯ ನಾಯಕರು ಮತ್ತು ಧಾರ್ಮಿಕ ನಾಯಕರು ಎಂದು ತಮ್ಮನ್ನು ಕರೆದುಕೊಳ್ಳುವವರು ನರಮೇಧಕ್ಕೆ ಕರೆ ನೀಡಿಯೂ ಯಾವ ಕ್ರಮವೂ ಇಲ್ಲದೆ ತಿರುಗಾಡಿಕೊಂಡಿದ್ದಾರೆ. ದ್ವೇಷ ಭಾಷಣ ಮಾಡಿದವರು, ಸಂಘರ್ಷಕ್ಕೆ ಕರೆ ಕೊಟ್ಟವರು, ಶಾಂತಿ ಮತ್ತು ಸಮಾಜದ ಸೌಹಾರ್ದವನ್ನು ಕೆಡಿಸುವ ಬೆದರಿಕೆ ಒಡ್ಡಿದವರ ಮೇಲೆ ಕೂಡ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಆದರೆ, ಸರ್ಕಾರವನ್ನು ಟೀಕಿಸಿದವರು, ಸರ್ಕಾರದ ಜೊತೆ ಭಿನ್ನಮತ ಇರುವವರಿಗೆ ವಿವಿಧ ಕಾನೂನುಗಳನ್ನು ಬಳಸಿಕೊಂಡು ಕಿರುಕುಳ ನೀಡಲಾಗಿದೆ. ಅತ್ಯಂತ ಕಠಿಣವಾದ ಕಾನೂನುಬಾಹಿರ ಕೃತ್ಯಗಳ ತಡೆ ಕಾಯ್ದೆಯನ್ನೂ ಅವರ ಮೇಲೆ ಹೇರಲಾಗಿದೆ. ದೂರದ ರಾಜ್ಯಗಳಲ್ಲಿ ಪ್ರಕರಣ ದಾಖಲಿಸಿ, ಬೇರೆ ರಾಜ್ಯಗಳ ಪೊಲೀಸರು ಬಂಧಿಸುವಂತೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳ ರಾಜಕಾರಣಿಗಳು ಮತ್ತು ಟೀಕಾಕಾರರ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಛೂಬಿಡಲಾಗುತ್ತಿದೆ. ವಿರೋಧ ಪಕ್ಷಗಳಿಗೆ ಕಿರುಕುಳ ನೀಡುವುದು ಮತ್ತು ವಿರೋಧ ಪಕ್ಷಗಳ ನಾಯಕರನ್ನು ಸುಮ್ಮನಾಗಿಸುವ ಕಾರ್ಯತಂತ್ರದ ಮುಂದುವರಿದ ಭಾಗವಾಗಿ ರಾಹುಲ್‌ ಅವರ ವಿರುದ್ಧ ಈಗ ಕ್ರಮ ಕೈಗೊಳ್ಳಲಾಗಿದೆ.

ರಾಹುಲ್ ಅವರು ಸಾರ್ವಜನಿಕ ವೇದಿಕೆಯೊಂದರಲ್ಲಿ ನೀಡಿದ ಹೇಳಿಕೆಯು ಸದಭಿರುಚಿಯದ್ದಲ್ಲ ಮತ್ತು ನಮ್ಮ ದೇಶದ ರಾಜಕೀಯ ಸಂವಾದವು ಯಾವ ಮಟ್ಟಕ್ಕೆ ಕುಸಿದಿದೆ ಎಂಬುದನ್ನು ಇದು ತೋರಿಸುತ್ತದೆ. ಸಾರ್ವಜನಿಕ ಸಂವಾದವನ್ನು ಪಾತಾಳಕ್ಕೆ ತಳ್ಳಿದ್ದರಲ್ಲಿ ಪ್ರಧಾನಿಯನ್ನೂ ಸೇರಿಸಿ ಎಲ್ಲ ರಾಜಕಾರಣಿಗಳು ತಪ್ಪಿತಸ್ಥರೇ ಆಗಿದ್ದಾರೆ. ಆದರೆ, ಕೆಲವರನ್ನು ಆಯ್ದು, ಅವರು ಬೆಲೆ ತೆರುವಂತೆ ಮಾಡಲಾಗಿದೆ. ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಮೋದಿ ಅವರನ್ನು ನಿರಂತರವಾಗಿ ಮತ್ತು ಕಠೋರವಾಗಿ ರಾಹುಲ್‌ ಅವರು ಟೀಕಿಸುತ್ತಿದ್ದ ಕಾರಣ ಅವರ ವಿರುದ್ಧ ಅನರ್ಹತೆ ಅಸ್ತ್ರವನ್ನು ಬಿಜೆಪಿಯು ಬಳಸಿದೆ. ರಾಹುಲ್ ಅವರು ಬಿಜೆಪಿಗೆ ಇತರ ಎಲ್ಲರಿಗಿಂತ ಮುಖ್ಯವಾದ ಗುರಿಯಾಗಿದ್ದಾರೆ. ವಿವಿಧ ರೀತಿಯಲ್ಲಿ ಅವರನ್ನು ಮೂಲೆಗುಂಪು ಮಾಡಲು ಬಿಜೆಪಿ ಯತ್ನಿಸಬಹುದು. ಸೆರೆಮನೆಗೆ ತಳ್ಳಿ ಅವರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗಿಯಾಗುವುದನ್ನು ತಡೆಯಲು ಯತ್ನಿಸಬಹುದು; 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ರಾಹುಲ್ ಅವರಿಗೆ ಶಿಕ್ಷೆ ಆಗಿರುವುದನ್ನೇ ಪ್ರಚಾರಕ್ಕೆ ಬಳಸಿಕೊಳ್ಳ‌ ಬಹುದು. ನ್ಯಾಯಾಲಯವು ಅದೇಶಕ್ಕೆ ತಡೆ ಕೊಡದೇ ಈಗಿನ ಸನ್ನಿವೇಶವೇ ಮುಂದುವರಿದರೆ ಲೋಕಸಭೆಗೆ 2024ರಲ್ಲಿ ನಡೆಯುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಲು ಸಾಧ್ಯವಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವದ ತಾಯಿ ಎಂದೆಲ್ಲ ಕರೆಸಿಕೊಳ್ಳುವ ದೇಶದ ಪ್ರಮುಖ ವಿರೋಧ ಪಕ್ಷದ ನಾಯಕನೊಬ್ಬ ಪ್ರಧಾನಿಯ ಕುರಿತು ಚುನಾವಣಾ ಪ್ರಚಾರ ಭಾಷಣದಲ್ಲಿ ನೀಡಿದ ಹೇಳಿಕೆಯಿಂದಾಗಿ ಸ್ಪರ್ಧಿಸಲು ಸಾಧ್ಯವಾಗದೆ ಸೆರೆಮನೆಯಲ್ಲಿ ಇರುವುದನ್ನು ಕಲ್ಪಿಸಿಕೊಳ್ಳಿ. ನಿರಂಕುಶಾಧಿ ಪತ್ಯದ ವ್ಯವಸ್ಥೆಯಲ್ಲಿ ಮಾತ್ರ ಇಂತಹುದು ನಡೆಯಲು ಸಾಧ್ಯ. ನಾವು ಪ್ರಜಾತಂತ್ರ ಕುರಿತ ಪಾಠವನ್ನು ರಷ್ಯಾದ ಪುಟಿನ್‌ ಅವರಿಂದ ಅಥವಾ ಲಂಗುಲಗಾಮು ಇಲ್ಲದ ದೇಶಗಳಿಂದ ಕಲಿಯುತ್ತಿದ್ದೇವೆಯೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT