ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆಧಾರ್ ಸಂಖ್ಯೆ ದುರ್ಬಳಕೆ ಸಾಧ್ಯತೆ– ಸರ್ಕಾರವೇ ಹೊಣೆಗಾರ

Last Updated 3 ಜೂನ್ 2022, 19:30 IST
ಅಕ್ಷರ ಗಾತ್ರ

ಆಧಾರ್ ಸಂಖ್ಯೆಯನ್ನು ಹೊಂದಿರುವ ಚೀಟಿಯ ನಕಲು ಪ್ರತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಅದು ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ ಎಂದು ಕೇಂದ್ರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಈಚೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಇದರ ವಿಚಾರವಾಗಿ ವಿವಿಧ ವಲಯಗಳಿಂದ ಆತಂಕ ವ್ಯಕ್ತವಾದ ನಂತರದಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆಧಾರ್ ಸಂಖ್ಯೆ ಇರುವ ಗುರುತಿನ ಚೀಟಿಯ ನಕಲು ಪ್ರತಿಯನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ‘ಯಾವತ್ತೂ ಅನುಸರಿಸುವ ಎಚ್ಚರಿಕೆ’ಯ ಕ್ರಮಗಳನ್ನು ಮಾತ್ರ ಪಾಲಿಸಿದರೆ ಸಾಕು ಎಂದು ಹೇಳಿತು. ಯುಐಡಿಎಐ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯನ್ನು ಹಿಂಪಡೆಯುತ್ತಿರುವುದಾಗಿಯೂ ಸಚಿವಾಲಯ ಹೇಳಿತು. ಆಧಾರ್ ಸಂಖ್ಯೆ ಇರುವ ಗುರುತಿನ ಚೀಟಿಯ ನಕಲು ಪ್ರತಿಯನ್ನು ಹಂಚಿಕೊಳ್ಳುವ ವಿಚಾರದಲ್ಲಿನ ಈ ಎರಡು ಬೆಳವಣಿಗೆಗಳು, ಆಧಾರ್ ಹೆಸರಿನಲ್ಲಿ ಸಂಗ್ರಹಿಸಲಾಗಿರುವ ಪ್ರಜೆಗಳ ಮಾಹಿತಿಯ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಮಾಹಿತಿಯನ್ನು ಬಳಸಿ ಜನರ ಮೇಲೆ ಕಣ್ಗಾವಲು ಇರಿಸಬಹುದೇ ಎಂಬ ಕಳವಳವನ್ನೂ ಪುನಃ ಮೂಡಿಸಿವೆ. ಆಧಾರ್ ಗುರುತಿನ ಚೀಟಿಯ ನಕಲು ಪ್ರತಿಗಳನ್ನು ಯುಐಡಿಎಐ ಕಡೆಯಿಂದ ಪರವಾನಗಿ ಪಡೆದಿಲ್ಲದ ಹೋಟೆಲ್, ಸಿನಿಮಾ ಮಂದಿರ ಅಥವಾ ಇತರ ಯಾವುದೇ ಸಂಸ್ಥೆಯ ಜೊತೆ ಹಂಚಿಕೊಳ್ಳಬೇಡಿ ಎಂದು ಮೊದಲಿನ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಇ–ಆಧಾರ್ ಚೀಟಿಯನ್ನು ಡೌನ್‌ಲೋಡ್ ಮಾಡಿ ಕೊಳ್ಳಲು ಸಾರ್ವಜನಿಕ ಕಂಪ್ಯೂಟರ್ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳಬಾರದು ಎಂದೂ ಅದು ಎಚ್ಚರಿಕೆ ನೀಡಿತ್ತು. ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ತೋರಿಸುವ ಆಧಾರ್ ಕಾರ್ಡ್ ಬಳಸುವಂತೆಯೂ ಸಲಹೆ ನೀಡಿತ್ತು. ಇದು ಹಲವರಲ್ಲಿ ಆತಂಕಕ್ಕೆ ಕಾರಣವಾಯಿತು. ತಾವು ಆಧಾರ್ ಗುರುತಿನ ಚೀಟಿಯ ನಕಲು ಪ್ರತಿಯನ್ನು ಹಲವರಿಗೆ ಈಗಾಗಲೇ ನೀಡಿ ಆಗಿದೆ ಎಂದು ಅವರು ಹೇಳಿದರು. ಆದರೆ, ‘ತಪ್ಪು ವ್ಯಾಖ್ಯಾನಕ್ಕೆ ಗುರಿಯಾಗುವ ಸಾಧ್ಯತೆ ಇದೆ’ ಎಂಬ ಕಾರಣ ನೀಡಿ ಯುಐಎಡಿಐ ನೀಡಿದ್ದ ಎಚ್ಚರಿಕೆಯನ್ನು ಸಚಿವಾಲಯವು ಒಂದು ದಿನದ ನಂತರ ಹಿಂದಕ್ಕೆ ಪಡೆಯಿತು.

ಹನ್ನೆರಡು ಅಂಕಿಗಳ ಆಧಾರ್ ಸಂಖ್ಯೆಗೆ ನೀಡಿರುವ ಮಾಹಿತಿಯ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಹಿಂದಿನಿಂದಲೂ ಇವೆ. ಆದರೆ, ಮಾಹಿತಿಯು ಸಂಪೂರ್ಣ ಸುರಕ್ಷಿತ, ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಕಣ್ಗಾವಲು ಇರಿಸುವ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರವು ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದಿದೆ. ಹೀಗಿದ್ದರೂ, ಒಂದು ಎಚ್ಚರಿಕೆಯನ್ನು ನೀಡಿ, ಅದನ್ನು ಹಿಂದಕ್ಕೆ ಪಡೆದ ನಂತರದಲ್ಲಿ ಮೂಡಿರುವ ಪ್ರಶ್ನೆಗಳು ಹಲವು. ಯುಐಡಿಎಐ ಕಡೆಯಿಂದ ಮೊದಲು ಎಚ್ಚರಿಕೆ ಕೊಟ್ಟದ್ದು ಏಕೆ? ಅದನ್ನು ಹಿಂದಕ್ಕೆ ಪಡೆಯುವ ಪತ್ರಿಕಾ ಹೇಳಿಕೆಯಲ್ಲಿ ಇರುವ ‘ಮಾಮೂಲಿ ಎಚ್ಚರಿಕೆ’ ಅಂದರೆ ಏನು? ಅನಕ್ಷರಸ್ಥರು, ಡಿಜಿಟಲ್ ಸಾಕ್ಷರತೆ ಇಲ್ಲದವರು ಈ ಬಗೆಯ ಎಚ್ಚರಿಕೆಯನ್ನು ಹೇಗೆ ತೆಗೆದುಕೊಳ್ಳಬೇಕು? ಸ್ವಂತ ಕಂಪ್ಯೂಟರ್ ಹೊಂದಿಲ್ಲದಿರುವವರು ಆಧಾರ್ ಗುರುತಿನ ಚೀಟಿಯನ್ನು ಎಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು? ಆಧಾರ್ ಸಂಖ್ಯೆಯನ್ನು ಸರ್ಕಾರದ ಸೇವೆಗಳನ್ನು ತಲುಪಿಸಲು ಮಾತ್ರ ಬಳಕೆ ಮಾಡಿಕೊಳ್ಳಲಾಗುವುದು, ಅದನ್ನು ಗುರುತಿನ ಚೀಟಿಯಾಗಿ ಬಳಸಿಕೊಳ್ಳುವುದಿಲ್ಲ ಎಂದು ಮತ್ತೆ ಮತ್ತೆ ಹೇಳಲಾಗಿತ್ತು. ಆದರೆ ಈಗ ಖಾಸಗಿ ಸಂಸ್ಥೆಗಳು, ಕಂಪನಿಗಳು ಸಹ ಆಧಾರ್ ಸಂಖ್ಯೆಯನ್ನು ಬಹಳ ಸಹಜವಾಗಿ ಕೇಳುತ್ತಿವೆ. ಹಲವು ಸಂಸ್ಥೆಗಳಿಗೆ ಆಧಾರ್ ಸಂಖ್ಯೆಯನ್ನು ದೃಢೀಕರಿಸಲು ಸಾಧನಗಳು ಇಲ್ಲ, ಅನುಮತಿಯೂ ಇಲ್ಲ. ಹೀಗಿದ್ದರೂ ಅವು ಆಧಾರ್ ನಕಲು ಪ್ರತಿಯನ್ನು ಪಡೆದುಕೊಳ್ಳುತ್ತಿವೆ. ಇವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಇದ್ದೇ ಇವೆ.

ಆಧಾರ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಸಾಮಾಜಿಕ ಕಾರ್ಯಕರ್ತರು ಹಿಂದೆ ತೋರಿಸಿಕೊಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದು, ₹ 500 ಪಾವತಿಸಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಆಧಾರ್ ಸಂಖ್ಯೆ ಮತ್ತು ವೈಯಕ್ತಿಕ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ವರದಿ ಮಾಡಿತ್ತು. ಆಧಾರ್‌ನೊಂದಿಗೆ ಜೋಡಣೆಯಾಗಿರುವ ಬಯೊಮೆಟ್ರಿಕ್ ವಿವರಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದು ತೆಲಂಗಾಣ ಪೊಲೀಸರು ಈಚೆಗೆ ಒಂದಿಷ್ಟು ಮಂದಿಗೆ ಸೂಚಿಸಿದ್ದರು. ಆಧಾರ್‌ ಮಾಹಿತಿಯನ್ನು ಸಂಗ್ರಹಿಸುವ, ಅದನ್ನು ಹಂಚಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಆಮೂಲಾಗ್ರ ಪರಿಶೀಲನೆ ಆಗಬೇಕು ಎಂಬುದನ್ನು ಇಂತಹ ಪ್ರಕರಣಗಳು ಹೇಳುತ್ತಿವೆ. ದೇಶದ ಪ್ರಜೆಗಳ ಬೃಹತ್ ಪ್ರಮಾಣದ ಖಾಸಗಿ ಮಾಹಿತಿಯು ಈಗ ಸರ್ಕಾರದ ಬಳಿ ಇದೆ. ಹೀಗಾಗಿ, ಆ ಮಾಹಿತಿಯು ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಹೊಣೆಯೂ ಅದರ ಮೇಲೆಯೇ ಇದೆ. ದೇಶದಲ್ಲಿ ಖಾಸಗಿತನದ ಹಕ್ಕನ್ನು ರಕ್ಷಿಸುವ ಕಾಯ್ದೆಯೊಂದು ಇನ್ನೂ ಜಾರಿಗೆ ಬಂದಿಲ್ಲದಿರುವುದು ಮಾಹಿತಿ ದುರ್ಬಳಕೆಯ ಅಪಾಯ ಜಾಸ್ತಿಯಾಗುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT