ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅಧಿಕಾರ ವ್ಯಾಪ್ತಿ ಮೀರುವ ಕೆಲಸ; ಸರ್ಕಾರದೊಡನೆ ಸಂಘರ್ಷ ಬೇಡ

Published 23 ನವೆಂಬರ್ 2023, 0:30 IST
Last Updated 23 ನವೆಂಬರ್ 2023, 0:30 IST
ಅಕ್ಷರ ಗಾತ್ರ

ರಾಜ್ಯಪಾಲರಿಗೆ ಕೇಂದ್ರ ಸರ್ಕಾರದ ಬೆಂಬಲ ಇದ್ದಾಗ ಮಾತ್ರ ಅವರು ರಾಜ್ಯ ಸರ್ಕಾರದ ಜೊತೆ ಸಂಘರ್ಷಕ್ಕೆ ಮುಂದಾಗುತ್ತಾರೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಗಂಭೀರ ಅಪಾಯ ಕೂಡ ಹೌದು

ತಮಿಳುನಾಡಿನ ರಾಜ್ಯಪಾಲರನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ಕೇಳಿರುವ ಕಠಿಣ ಪ್ರಶ್ನೆಗಳು, ತಮ್ಮ ಮುಂದಿರುವ ಮಸೂದೆಗಳ ವಿಚಾರವಾಗಿ ತ್ವರಿತವಾಗಿ ಕ್ರಮ ಕೈಗೊಳ್ಳದಿರುವ ಇತರ ಕೆಲವು ರಾಜ್ಯಗಳ ರಾಜ್ಯಪಾಲರನ್ನು ಕೂಡ ಉದ್ದೇಶಿಸಿವೆ ಎಂದು ಭಾವಿಸಬಹುದು. ಮಸೂದೆಗಳ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ಸುಪ್ರೀಂ ಕೋರ್ಟ್‌, ತಮಿಳುನಾಡು ರಾಜ್ಯಪಾಲರಿಗೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದೆ.

ಕೋರ್ಟ್‌ನ ಪ್ರಶ್ನೆಗಳು ಯಾವುದೇ ಒಬ್ಬ ರಾಜ್ಯಪಾಲರನ್ನು ಉದ್ದೇಶಿಸಿಲ್ಲ, ರಾಜ್ಯಪಾಲ ಹುದ್ದೆಯನ್ನು ಉದ್ದೇಶಿಸಿವೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದಾರೆ. ತಮಿಳುನಾಡು ರಾಜ್ಯಪಾಲರು, ರಾಜ್ಯದ ವಿಧಾನಸಭೆಯ ಅಂಗೀಕಾರ ದೊರೆತಿರುವ ಕೆಲವು ಮಸೂದೆಗಳ ವಿಚಾರವಾಗಿ ಮೂರು ವರ್ಷಗಳಿಂದ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಇದೇ ಬಗೆಯ ಪರಿಸ್ಥಿತಿ ಕೇರಳದಲ್ಲಿಯೂ ಇದೆ. ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಎಂಟು ಮಸೂದೆಗಳ ವಿಚಾರವಾಗಿ ತೀರ್ಮಾನ ಕೈಗೊಳ್ಳಬೇಕಿದೆ.

ರಾಜ್ಯಪಾಲರ ಅಂಕಿತಕ್ಕಾಗಿ ರವಾನೆಯಾಗಿರುವ ಮಸೂದೆಗಳಲ್ಲಿ ಕೆಲವು ಮೂರು ವರ್ಷಗಳಿಂದ, ಇನ್ನು ಕೆಲವು ಏಳು ತಿಂಗಳುಗಳಿಂದ ಬಾಕಿ ಉಳಿದಿವೆ ಎಂದು ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಮಸೂದೆಗಳಲ್ಲಿ ಕೆಲವು, ರಾಜ್ಯಪಾಲರೇ ಹಿಂದೆ ಒಪ್ಪಿಗೆ ನೀಡಿ, ಅಧಿಸೂಚನೆಯಲ್ಲಿ ಪ್ರಕಟವಾದ ಸುಗ್ರೀವಾಜ್ಞೆಗಳ ಬದಲಿಗೆ ರೂಪಿಸಿದವು ಎಂಬುದು ಗಮನಾರ್ಹ. ಕೋವಿಡ್‌ ನಂತರದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಸಾರ್ವಜನಿಕ ಮಹತ್ವದ ಹಲವು ವಿಷಯಗಳನ್ನು ಕುರಿತಾದ ಮಸೂದೆಗಳು ಇವು.

ಕೇರಳ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಸುಪ್ರೀಂ ಕೋರ್ಟ್‌, ಕೇರಳ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿದೆ. ಇದೇ ಬಗೆಯ ನೋಟಿಸ್‌ ಅನ್ನು ಸುಪ್ರೀಂ ಕೋರ್ಟ್‌, ಈ ಹಿಂದೆ ತಮಿಳುನಾಡು ಸರ್ಕಾರವು ಅಲ್ಲಿನ ರಾಜ್ಯಪಾಲರ ನಿಷ್ಕ್ರಿಯತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾಗಲೂ ನೀಡಿತ್ತು.

ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ಕೋರ್ಟ್‌ನಿಂದ ನೋಟಿಸ್ ಬಂದ ನಂತರದಲ್ಲಿ ಎಲ್ಲ ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಇದಾದ ನಂತರ ತಮಿಳುನಾಡು ವಿಧಾನಸಭೆಯು ಆ ಎಲ್ಲ ಮಸೂದೆಗಳಿಗೆ ಮರು ಅಂಗೀಕಾರ ನೀಡಿ, ಅವುಗಳನ್ನು ಮತ್ತೆ ರಾಜ್ಯಪಾಲರ ಒಪ್ಪಿಗೆಗೆ ರವಾನಿಸಿದೆ. ತಮಿಳುನಾಡು ರಾಜ್ಯಪಾಲರ ನಡೆಯು ಕೋರ್ಟ್‌ ಕೆಲವು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ‘ರಾಜ್ಯಪಾಲರು ಮೂರು ವರ್ಷಗಳಿಂದ ಏನು ಮಾಡುತ್ತಿದ್ದರು’ ಎಂದು ಕೂಡ ಕೋರ್ಟ್ ಪ್ರಶ್ನಿಸಿದೆ. ರಾಜ್ಯಪಾಲ ಹುದ್ದೆಯು ಬಹಳ ದೊಡ್ಡ ಸಾಂವಿಧಾನಿಕ ಹುದ್ದೆ. ಇಂತಹ ಹುದ್ದೆಯಲ್ಲಿ ಇರುವವರಿಗೆ ಇಂತಹ ಪ್ರಶ್ನೆಯನ್ನು ಕೇಳಬೇಕಾಗಿ ಬಂದುದು ವಿಷಾದಕರ.

ರಾಜ್ಯಪಾಲರು ತಮ್ಮ ಸಾಂವಿಧಾನಿಕ ಹೊಣೆ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಕೋರ್ಟ್ ಮಾತಿನ ಅರ್ಥ. ನೋಟಿಸ್ ಜಾರಿಯಾದ ನಂತರವಷ್ಟೇ ರಾಜ್ಯಪಾಲರು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಕೋರ್ಟ್ ಹೇಳಿದೆ.

ಸರ್ಕಾರಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವವರೆಗೂ ರಾಜ್ಯಪಾಲರು ಸುಮ್ಮನೆ ಕುಳಿತಿರಬೇಕಾದ ಅಗತ್ಯ ಏನಿದೆ ಎಂದು ಕೋರ್ಟ್ ಕೇಳಿರುವ ಪ್ರಶ್ನೆಯು ಮಹತ್ವದ್ದಾಗುತ್ತದೆ. ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲೇ ಇಂತಹ ಸಮಸ್ಯೆಗಳು ಸೃಷ್ಟಿಯಾಗಿವೆ. ಅಲ್ಲಿ ರಾಜ್ಯಪಾಲರು ತಮಗೆ ರವಾನಿಸಿದ ಮಸೂದೆಗಳು ಹಾಗೂ ಕಡತಗಳ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಅವರು ಸರ್ಕಾರಗಳ ತೀರ್ಮಾನ ಮತ್ತು ನೀತಿಗಳನ್ನು ಸಾರ್ವಜನಿಕವಾಗಿ ವಿರೋಧಿಸುತ್ತಿದ್ದಾರೆ. ಆಡಳಿತದಲ್ಲಿ ಅಡಚಣೆ ಸೃಷ್ಟಿಸುತ್ತಿದ್ದಾರೆ.

ಇಂತಹ ದೂರು ಹೊತ್ತು ಪಂಜಾಬ್ ಮತ್ತು ತೆಲಂಗಾಣ ಕೂಡ ಕೋರ್ಟ್ ಮೆಟ್ಟಿಲೇರಿವೆ. ಸುಪ್ರೀಂ ಕೋರ್ಟ್‌ ಈ ಪ್ರಶ್ನೆಗಳನ್ನು ಕೇಳಿದ ದಿನವೇ ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ವಿಶ್ವವಿದ್ಯಾಲಯವೊಂದರ ಸೆನೆಟ್‌ ಅನ್ನು ಪುನರ್‌ ರಚಿಸಿದ್ದಾರೆ. ಆ ಮೂಲಕ, ಕುಲಪತಿಯ ಶಿಫಾರಸನ್ನು ಅನುಮೋದಿಸುವ ಸಂಪ್ರದಾಯವನ್ನು ಮೀರಿದ್ದಾರೆ. ರಾಜ್ಯಪಾಲರಿಗೆ ಕೇಂದ್ರ ಸರ್ಕಾರದ ಬೆಂಬಲ ಇದ್ದಾಗ ಮಾತ್ರ ಅವರು ರಾಜ್ಯ ಸರ್ಕಾರದ ಜೊತೆ ಸಂಘರ್ಷಕ್ಕೆ ಮುಂದಾಗುತ್ತಾರೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಗಂಭೀರ ಅಪಾಯ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT