ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚೆಸ್ ಬೆಳವಣಿಗೆಗೆ ಹೊಸ ಭರವಸೆ ತುಂಬಿದ ಗುಕೇಶ್ ಸಾಧನೆ

Published 7 ಆಗಸ್ಟ್ 2023, 23:31 IST
Last Updated 7 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಭಾರತದ ಚೆಸ್ ಕ್ರೀಡಾಕ್ಷೇತ್ರಕ್ಕೆ ಈಗ ಸುವರ್ಣ ಯುಗ. ಇಲ್ಲಿಯ ಯುವಪ್ರತಿಭೆಗಳು ವಿಶ್ವಮಟ್ಟದಲ್ಲಿ ಉನ್ನತ ಸಾಧನೆ ಮಾಡುತ್ತ ಚದುರಂಗ ಲೋಕದಲ್ಲಿ ಅಚ್ಚರಿ ಹಾಗೂ ಸಂತಸದ ಹೊನಲು ಹರಿಸುತ್ತಿವೆ. ಅವರಲ್ಲಿ ಚೆನ್ನೈನ ಹದಿನೇಳು ವರ್ಷದ ದೊಮ್ಮರಾಜು ಗುಕೇಶ್ ಮುಂಚೂಣಿಯಲ್ಲಿದ್ದಾರೆ. ತಮ್ಮ ಗುರು ವಿಶ್ವನಾಥನ್ ಆನಂದ್ ಅವರನ್ನೂ ಹಿಂದಿಕ್ಕಿ ದೇಶದ ಚೆಸ್‌ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 37 ವರ್ಷಗಳಿಂದ ಆನಂದ್ ಅವರು ಈ ಸ್ಥಾನದಲ್ಲಿ ರಾರಾಜಿಸಿದ್ದರು. 2016ರಲ್ಲಿ ಪಿ.ಹರಿಕೃಷ್ಣ ಅವರು ಅಲ್ಪಕಾಲ ಅಗ್ರಸ್ಥಾನ ಗಳಿಸಿದ್ದರು. ಅದು ಬಿಟ್ಟರೆ ಆನಂದ್ ಅವರದ್ದೇ ಪಾರುಪತ್ಯ. ಗುಕೇಶ್ ಸಾಧನೆಯಿಂದಾಗಿ ಭಾರತದಲ್ಲಿ ಚೆಸ್ ಜನಪ್ರಿಯತೆ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ. ಶ್ರದ್ಧೆ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮದಿಂದ ಸಣ್ಣ ವಯಸ್ಸಿನಲ್ಲಿಯೂ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಗುಕೇಶ್ ತೋರಿಸಿಕೊಟ್ಟಿದ್ದಾರೆ. ಆರನೇ ವಯಸ್ಸಿನಲ್ಲಿಯೇ ಚೆಸ್ ಆಟಕ್ಕೆ ಮನಸೋತ ಹುಡುಗ ಈಗ ವಿಶ್ವದ ಕ್ರೀಡಾಪ್ರಿಯರ ಮನಸ್ಸು ಗೆಲ್ಲುತ್ತಿದ್ದಾರೆ. ಈಚೆಗೆ ಅಜರ್‌ಬೈಜಾನ್‌ನಲ್ಲಿ ನಡೆದ ವಿಶ್ವಕಪ್ ಚೆಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸ್ಥಳೀಯ ಆಟಗಾರ ಮಿಸ್ರಾಟಿನ್ ಇಸ್ಕಂದರೊವ್ ಅವರನ್ನು ಸೋಲಿಸುವ ಮೂಲಕ ಫಿಡೆ ರೇಟಿಂಗ್‌ನಲ್ಲಿ ಮೊದಲ ಹತ್ತು ಆಟಗಾರರಲ್ಲಿ ಸ್ಥಾನ ಗಳಿಸುವುದು ಖಚಿತವಾಗಿದೆ. 1991ರಲ್ಲಿ ಆನಂದ್ ಮೊದಲ ಬಾರಿಗೆ ಫಿಡೆ ರ‍್ಯಾಂಕಿಂಗ್‌ ಅಗ್ರ ಹತ್ತರಲ್ಲಿ ಸ್ಥಾನ ಗಳಿಸಿ ಇತಿಹಾಸ ಬರೆದಿದ್ದರು. ಮಹಿಳೆಯರಲ್ಲಿ ಕೋನೇರು ಹಂಪಿ ವಿಶ್ವ ಶ್ರೇಯಾಂಕದಲ್ಲಿ ನಾಲ್ಕು ಮತ್ತು ದ್ರೋಣವಳ್ಳಿ ಹಾರಿಕಾ 12ನೇ ಸ್ಥಾನ ಪಡೆದ ಇತಿಹಾಸವೂ ಇದೆ.

ಗುಕೇಶ್ ಈಗ 2755.9 ಪಾಯಿಂಟ್ಸ್‌ ಹೊಂದಿದ್ದಾರೆ. ಆನಂದ್ ಖಾತೆಯಲ್ಲಿ 2754 ಅಂಕಗಳು ಇವೆ. ಇದರಿಂದಾಗಿ ಗುಕೇಶ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನಕ್ಕೆ ಏರಲಿದ್ದಾರೆ. ತಮ್ಮ 13ನೇ ವಯಸ್ಸಿನಲ್ಲಿಯೇ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಗಳಿಸಿದ್ದ ಗುಕೇಶ್ ಸಾಧನೆಯ ಪಯಣ ಏರುಗತಿಯಲ್ಲಿದೆ. ಹೋದ ವರ್ಷವಷ್ಟೇ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಟೂರ್ನಿಯೊಂದರಲ್ಲಿ ಸೋಲಿಸಿ ಜಗದ ಗಮನ ಸೆಳೆದಿದ್ದರು. ಹೋದ ವರ್ಷ ನಡೆದಿದ್ದ ಚೆಸ್ ಒಲಿಂಪಿಯಾಡ್‌ನಲ್ಲಿ ಅವರ ಅಜೇಯ ಆಟದ ದಾಖಲೆ ಕೂಡ ಸ್ಮರಣೀಯವಾಗಿದೆ.

ಅವರ ಸಾಧನೆಗಳು ಎಳೆಯ ಆಟಗಾರರಿಗೆ ಪ್ರೇರಣೆ ಯಾಗುತ್ತಿವೆ. ಅವರ ಹಾದಿಯಲ್ಲಿ ಸಾಗುತ್ತಿರುವ ಯುವ ಆಟಗಾರರು ವಿಶ್ವದ ಬಲಾಢ್ಯ ಆಟಗಾರರಿಗೆ ಸವಾಲೊಡ್ಡುತ್ತಿದ್ದಾರೆ. ಅವರಲ್ಲಿ ಪ್ರಜ್ಞಾನಂದ, ನಿಹಾಲ್ ಸರೀನ್, ಭಾಸ್ಕರನ್ ಅಧಿಬನ್ ಮತ್ತು ಅರ್ಜುನ್ ಇರಿಗೇಶಿ ಪ್ರಮುಖರು. ಸದ್ಯ ಜೂನಿಯರ್ ವಿಭಾಗದಲ್ಲಿ ವಿಶ್ವದ ಏಳು ಅಗ್ರಮಾನ್ಯ ಆಟಗಾರರಲ್ಲಿ ನಾಲ್ವರು ಭಾರತೀಯರು ಇದ್ದಾರೆ. ಜೂನಿಯರ್ ಬಾಲಕಿಯರ ಅಗ್ರ ಹತ್ತರಲ್ಲಿ ಭಾರತದ ಇಬ್ಬರಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವ ಚಾಂಪಿಯನ್ ಆಗುವ ಸಾಮರ್ಥ್ಯ ಅವರಲ್ಲಿದೆ. ಈಗ ಮಿಂಚುತ್ತಿರುವ ಬಹುತೇಕ ಆಟಗಾರರು ಚೆನ್ನೈನಿಂದ ಬಂದವರು. ಸರ್ಕಾರ ಮತ್ತು ಭಾರತ ಚೆಸ್ ಸಂಸ್ಥೆಯು ಇನ್ನುಳಿದ ರಾಜ್ಯಗಳಲ್ಲಿಯೂ ಸೂಕ್ತ ಸೌಲಭ್ಯಗಳನ್ನು ನೀಡಿ ಚೆಸ್ ಆಟದ ಬೆಳವಣಿಗೆಗೆ ಒತ್ತು ನೀಡಬೇಕು. ಶಾಲೆಗಳಲ್ಲಿ ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ಕಲಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭೆಗಳು ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಕೃತಕ ಬುದ್ಧಿಮತ್ತೆ ಆಧಾರಿತ ನೂತನ ತಂತ್ರಜ್ಞಾನಗಳ ಮೂಲಕವೂ ತರಬೇತಿ ನೀಡಲು ಸೌಲಭ್ಯಗಳು ಹೆಚ್ಚಬೇಕು. ಅದಕ್ಕಾಗಿ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು. ಆನಂದ್ ಅವರು ಗ್ರ್ಯಾಂಡ್ ಮಾಸ್ಟರ್‌ ಆದ ನಂತರ ದೇಶದಲ್ಲಿ ಚೆಸ್ ಬೆಳವಣಿಗೆ ಆಗಸಮುಖಿಯಾಗಿದೆ. ಆನಂದ್ ಮಾರ್ಗದಲ್ಲಿ ಈಗಿನ ಯುವಪೀಳಿಗೆ ಅಮೋಘ ಸಾಧನೆ ಮಾಡುತ್ತಿರುವುದರಿಂದ ಭವ್ಯ ಭವಿಷ್ಯದ ಭರವಸೆ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT