ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ದಿಗ್ಭ್ರಮೆ ಮೂಡಿಸಿದ ದುರಂತ, ಅವಘಡಕ್ಕೆ ಕಾರಣ ಪತ್ತೆಯಾಗಲಿ

Last Updated 9 ಡಿಸೆಂಬರ್ 2021, 19:39 IST
ಅಕ್ಷರ ಗಾತ್ರ

ಭಾರತದ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ (ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್‌ ಅವರು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ದುರ್ಮರಣಕ್ಕೀಡಾದ ಘಟನೆ ಇಡೀ ದೇಶವನ್ನು ದಿಗ್ಭ್ರಮೆಯಲ್ಲಿ ಮುಳುಗಿಸಿದೆ. ಆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದವರಲ್ಲಿ ಸಿಡಿಎಸ್‌, ಅವರ ಪತ್ನಿ ಹಾಗೂ ಹಿರಿಯ ಸೇನಾ ಅಧಿಕಾರಿಗಳೂ ಸೇರಿ ಒಟ್ಟು 13 ಜನ ಜೀವ ಕಳೆದುಕೊಂಡಿದ್ದಾರೆ. ಒಬ್ಬರಷ್ಟೇ ಬದುಕಿ ಉಳಿದಿದ್ದಾರೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಸೇನಾ ನಾಯಕರಾಗಿದ್ದರು ರಾವತ್‌. ಜಮ್ಮು–ಕಾಶ್ಮೀರ ಒಳಗೊಂಡಂತೆ ದೇಶದ ಹಲವು ಸೂಕ್ಷ್ಮ ಗಡಿಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಸಮರತಂತ್ರದ ವ್ಯಾಪಕ ಅನುಭವವನ್ನೂ ಹೊಂದಿದ್ದರು. ಅವರ ಅಕಾಲಿಕ ಸಾವು ಸೇನಾ ಪಡೆಗಳ ಪಾಲಿಗೆ ಬಲುದೊಡ್ಡ ನಷ್ಟ ಎನ್ನುವುದರಲ್ಲಿ ಎರಡನೇ ಅಭಿಪ್ರಾಯವಿಲ್ಲ.ಹೊರ ಜಗತ್ತನ್ನು ಮನಸ್ಸಿನಿಂದ ದೂರವಿಟ್ಟು ಸೇನಾ ಬ್ಯಾರಕ್‌ಗಳಲ್ಲಿ ಕಳೆದುಹೋಗುವ ಸಾಂಪ್ರದಾಯಿಕ ಸೈನಿಕ ಅವರಾಗಿರಲಿಲ್ಲ. ಸೇನೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದರೂ ದೇಶದ ಹಲವು ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವಲ್ಲಿ ಯಾವ ಹಿಂಜರಿಕೆಯನ್ನೂ ಅವರು ತೋರಿದವರಲ್ಲ. ಈ ಕಾರಣದಿಂದಾಗಿ ಅವರು ಟೀಕೆಯನ್ನೂ ಎದುರಿಸಿದ್ದಿದೆ. ಆದರೆ, ಇದು ಅವರ ಅಕಾಲಿಕ ಸಾವಿನ ಸಂದರ್ಭ. ಅಂತಹ ವಿವಾದಗಳ ಕುರಿತು ಚರ್ಚಿಸುವ ಸನ್ನಿವೇಶವಂತೂ ಅಲ್ಲವೇ ಅಲ್ಲ. ಸೇನಾ ಪಡೆಗಳ ಕಾರ್ಯವಿಧಾನದಲ್ಲಿ ಹೊಸತನ ತರಲು ಪ್ರಯತ್ನ ಮಾಡಿದಂತಹ ಜನರಲ್‌ ಅವರು. ಕೆಲವೊಂದು ನಿರ್ಧಾರಗಳನ್ನು ಕ್ಷಣಮಾತ್ರದಲ್ಲಿ ತೆಗೆದುಕೊಳ್ಳಬಲ್ಲ ಛಾತಿ ಹೊಂದಿದ್ದರು ಎಂದೂ ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಮೂರೂ ಸೇನಾ ಪಡೆಗಳ ಏಕೀಕೃತ ಕಮಾಂಡ್‌ ವ್ಯವಸ್ಥೆ ರೂಪುಗೊಳ್ಳಲು ಅತ್ಯಂತ ಉತ್ಸಾಹದಿಂದ ಕೆಲಸ ಮಾಡಿದರು. ಚೀನಾದೊಂದಿಗೆ ಗಡಿಯಲ್ಲಿ ಮುಖಾಮುಖಿಯಾಗುವ ಪ್ರಸಂಗಗಳು ಮೇಲಿಂದ ಮೇಲೆ ಎದುರಾದರೂ ಸೇನಾ ಪಡೆಗಳಲ್ಲಿ ಸುಧಾರಣಾ ಕ್ರಮಗಳು ವೇಗ ಕಳೆದುಕೊಳ್ಳದಂತೆ ಎಚ್ಚರಿಕೆಯನ್ನೂ ಅವರು ವಹಿಸಿದ್ದರು. ಈಗ, ಈ ಸೇನಾ ನಾಯಕನ ಅಗಲಿಕೆಯಿಂದ ಅಂತಹ ಕ್ರಮಗಳು ಕುಂಠಿತಗೊಳ್ಳದಂತೆ, ದಾರಿ ತಪ್ಪದಂತೆ ನೋಡಿಕೊಳ್ಳುವ ಗುರುತರ ಹೊಣೆ ಸರ್ಕಾರದ ಮೇಲಿದೆ.

ಸಿಡಿಎಸ್‌ ಮತ್ತು ಅವರ ತಂಡ ಪ್ರಯಾಣ ಮಾಡುತ್ತಿದ್ದುದು ಹೆಚ್ಚು ‘ಸುರಕ್ಷಿತ’ ಎಂದು ಜಗತ್ತಿನಲ್ಲಿಯೇ ಹೆಸರಾದ ರಷ್ಯಾ ನಿರ್ಮಿತ ‘ಎಂಐ–17 ವಿ5’ ಹೆಲಿಕಾಪ್ಟರ್‌ನಲ್ಲಿ. ಆದರೂ ದುರಂತ ಸಂಭವಿಸಿದೆ. ಈ ದುರ್ಘಟನೆಯು ರಾಷ್ಟ್ರೀಯ ಭದ್ರತೆಯ ಕುರಿತಂತೆಯೂ ಕೆಲವು ಪ್ರಶ್ನೆಗಳು ಏಳುವಂತೆ ಮಾಡಿದೆ. ದಟ್ಟಮಂಜು ಆವರಿಸಿದ್ದ ಕಾರಣ ಮುಂದಿದ್ದ ಏನೂ ಕಾಣದಂತಾಗಿ ಹೆಲಿಕಾಪ್ಟರ್‌ ಮರಕ್ಕೆ ಅಪ್ಪಳಿಸಿ, ದುರಂತ ಸಂಭವಿಸಿತು ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಪ್ರತಿಕೂಲ ಸನ್ನಿವೇಶದಲ್ಲಿ ವಾಯು ಸಂಚಾರವನ್ನು ಆಯ್ದುಕೊಂಡಿದ್ದೇಕೆ ಎಂಬ ಪ್ರಶ್ನೆ ಕೂಡ ಬೆನ್ನಹಿಂದೆಯೇ ಕೇಳಿಬಂದಿದೆ. ಏರ್‌ ಮಾರ್ಷಲ್‌ ನೇತೃತ್ವದ ವಾಯುಪಡೆ ತಂಡದ ತನಿಖೆಯಿಂದ ಇಂತಹ ಪ್ರಶ್ನೆಗಳಿಗೆ ಉತ್ತರಗಳು ಸಿಗುವ ಆಶಾವಾದವಿದೆ. ಘಟನಾ ಸ್ಥಳದಲ್ಲಿ ಸಿಕ್ಕಿರುವ ಬ್ಲ್ಯಾಕ್‌ ಬಾಕ್ಸ್‌ನಿಂದಲೂ ಕೆಲವು ಸುಳಿವುಗಳು ಸಿಗುವ ನಿರೀಕ್ಷೆ ಇದೆ. ‘ಎಂಐ–17 ವಿ5’ ಹೆಲಿಕಾಪ್ಟರ್‌ಗಳು ಸುರಕ್ಷತೆಗೆ ಹೆಸರಾಗಿದ್ದರೂ ಅವುಗಳು ಕೂಡ ಕೆಲವು ಅಪಘಾತಗಳನ್ನು ಕಂಡಿರುವುದು ಸುಳ್ಳಲ್ಲ. ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಎಂಐ–17 ಹೆಲಿಕಾಪ್ಟರ್‌ ಇತ್ತೀಚೆಗೆ ಪತನಗೊಂಡಿತ್ತು. ಆದರೆ, ಆಗ ಯಾವುದೇ ಸಾವು ಸಂಭವಿಸಿರಲಿಲ್ಲ. 2015ರಲ್ಲಿ ರಾವತ್‌ ಅವರು ಪ್ರಯಾಣಿಸುತ್ತಿದ್ದ ‘ಚೀತಾ’ ಹೆಲಿಕಾಪ್ಟರ್‌ ಕೂಡ ಪತನಗೊಂಡಿತ್ತು. ಆಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಈ ಸಲ ಅವರಿಗೆ ಅಂತಹ ಅದೃಷ್ಟ ಒಲಿಯಲಿಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್‌. ರಾಜಶೇಖರ ರೆಡ್ಡಿ, ಅರುಣಾಚಲಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಅವರೂ ಹೆಲಿಕಾಪ್ಟರ್‌ ದುರಂತಗಳಲ್ಲೇ ಸಾವನ್ನಪ್ಪಿದ ಕಹಿ ನೆನಪುಗಳು ಈಗಲೂ ಕಾಡುತ್ತಿವೆ. ಕೂನೂರು ಘಟನೆಯಂತೂ ದೇಶದ ಅಂತಃಕರಣವನ್ನೇ ಕಲಕಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಘಟನೆಗೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆಯನ್ನೇನೋ ನೀಡಿದ್ದಾರೆ. ಅವರ ಹೇಳಿಕೆಯು ಅವಘಡದ ಬಗ್ಗೆ ಹೊಸ ಬೆಳಕನ್ನೇನೂ ಚೆಲ್ಲಿಲ್ಲ. ಏರ್‌ ಮಾರ್ಷಲ್‌ ನೇತೃತ್ವದ ತನಿಖಾ ತಂಡ ನೀಡಲಿರುವ ವರದಿಯ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ರಾವತ್‌ ಅವರ ದುರ್ಮರಣದಿಂದಾಗಿ ಹೊಸ ಸಿಡಿಎಸ್‌ ನೇಮಕದ ತುರ್ತು ಕೂಡ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT