ಶುಕ್ರವಾರ, ಡಿಸೆಂಬರ್ 3, 2021
24 °C

ಸಂಪಾದಕೀಯ | ಆ್ಯಪ್‌ ಮೂಲಕ ಅಕ್ರಮ ಸಾಲ: ಶಾಸನಬದ್ಧ ನಿಯಂತ್ರಣ ವ್ಯವಸ್ಥೆ ಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಹಣಕಾಸು ತಂತ್ರಜ್ಞಾನವು ವೈಯಕ್ತಿಕ ಸಾಲ ಸಿಗುವುದನ್ನು ಬಹಳ ಸುಲಭವಾಗಿಸಿದೆ. ಬ್ಯಾಂಕ್‌ಗೆ ಹೋಗಿ ಅರ್ಜಿ ಸಲ್ಲಿಸಿ, ಹಲವು ಪ್ರಶ್ನೆಗಳಿಗೆ ವಿವರಣೆ ನೀಡಿ, ದಿನಗಟ್ಟಲೆ ಕಾಯ್ದು, ಸಾಲಕ್ಕೆ ಜಾಮೀನು ನೀಡಲು ಯಾರನ್ನಾದರೂ ಗೊತ್ತುಮಾಡಿಕೊಂಡು, ನಂತರ ಸಾಲ ಪಡೆಯಬೇಕಾದ ಅನಿವಾರ್ಯ ಈಗಿಲ್ಲ. ಕೆಲವು ಹಣಕಾಸು ತಂತ್ರಜ್ಞಾನ ಕಂಪನಿಗಳು ಒಂದೆರಡು ನಿಮಿಷಗಳಲ್ಲಿ ವೈಯಕ್ತಿಕ ಸಾಲ ಮಂಜೂರು ಮಾಡುತ್ತಿವೆ. ಸಾಲ ಕೋರಿದವನ ಖಾತೆಗೆ ಹಣವು ಕೆಲವೇ ಗಂಟೆಗಳಲ್ಲಿ ಜಮಾ ಆಗುತ್ತದೆ.

ಆದರೆ, ತೀರಾ ಸುಲಭವಾಗಿ ಸಿಗುವ ಇಂತಹ ಸಾಲ ಸೌಲಭ್ಯಗಳು ಕೆಲವೊಮ್ಮೆ ಒಂದಿಷ್ಟು ಸಮಸ್ಯೆಗಳನ್ನೂ ಹೊತ್ತು ತರುತ್ತಿವೆ. ಸಾಲ ಪಡೆದ ವ್ಯಕ್ತಿ ನಂತರದಲ್ಲಿ ಹಲವು ಬಗೆಯ ಕಷ್ಟಗಳಿಗೆ ಗುರಿಯಾಗಿದ್ದಿದೆ. ಸಾಲ ಮರುಪಾವತಿ ಕಂತುಗಳಲ್ಲಿ ತುಸು ವ್ಯತ್ಯಾಸ ಆದರೂ, ಸಾಲ ನೀಡಿದ ಆ್ಯಪ್‌ ಕಂಪನಿಯ ಕಡೆಯಿಂದ ಕಿರುಕುಳ ಎದುರಾದ ಬಗ್ಗೆ ವರದಿಗಳು ಇವೆ. ಕಿರುಕುಳಕ್ಕೆ ಗುರಿಯಾದ ಕೆಲವರು ಪೊಲೀಸರಲ್ಲಿಗೆ ದೂರು ಒಯ್ದಿದ್ದಾರೆ ಕೂಡ. ಹಿಂದಿನ ವರ್ಷದಲ್ಲಿ ಇಂತಹ ದೂರುಗಳ ಸಂಖ್ಯೆ ಹೆಚ್ಚಾದ ನಂತರದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿ, ಇಂತಹ ಆ್ಯಪ್‌ಗಳ ನಿಯಂತ್ರಣಕ್ಕೆ ಶಿಫಾರಸುಗಳನ್ನು ಸಲ್ಲಿಸಲು ಸೂಚಿಸಿತ್ತು.

ಈಗ ಈ ಸಮಿತಿಯು ಕೆಲವು ಶಿಫಾರಸುಗಳನ್ನು ಆರ್‌ಬಿಐಗೆ ಸಲ್ಲಿಸಿದೆ. ದೇಶದಲ್ಲಿ ಸ್ಮಾರ್ಟ್‌ಫೋನ್‌ ಮೂಲಕ ಸಾಲ ವಿತರಣೆ ಮಾಡುವ 1,100 ಆ್ಯಪ್‌ಗಳು ಲಭ್ಯವಿವೆ. ಈ ಪೈಕಿ 600ರಷ್ಟು ಆ್ಯಪ್‌ಗಳು ಅಕ್ರಮವಾಗಿ ಸಾಲ ನೀಡುತ್ತಿವೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ಆ್ಯಪ್‌ ಮೂಲಕ ಸಾಲ ನೀಡುವ ವ್ಯವಸ್ಥೆಯನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನಿನ ಅಗತ್ಯ ಇದೆ ಎಂದು ಸಮಿತಿಯು ಹೇಳಿದೆ.

ಈ ಆ್ಯಪ್‌ಗಳು ಗೂಗಲ್‌ನ ಪ್ಲೇಸ್ಟೋರ್‌ ಮಾತ್ರವೇ ಅಲ್ಲದೆ, ಬೇರೆ ಬೇರೆ ಆ್ಯಪ್‌ ಸ್ಟೋರ್‌ಗಳಲ್ಲಿಯೂ ಲಭ್ಯವಾಗುತ್ತಿವೆ. 600ರಷ್ಟು ಆ್ಯಪ್‌ಗಳು ಅಕ್ರಮವಾಗಿ ಸಾಲ ನೀಡುತ್ತಿವೆ ಎಂಬ ಮಾತು ಇವುಗಳಿಂದ ಸೃಷ್ಟಿಯಾಗಿರುವ, ಸೃಷ್ಟಿಯಾಗಬಹುದಾದ ಸಮಸ್ಯೆ ಎಷ್ಟು ವ್ಯಾಪಕವಾಗಿ ಇರಬಹುದು ಎಂಬುದನ್ನೂ ಸೂಚ್ಯವಾಗಿ ಹೇಳುತ್ತಿದೆ.

ಇಂತಹ ಆ್ಯಪ್‌ಗಳ ಬಗ್ಗೆ ದೂರು ನೀಡಲು ಆರ್‌ಬಿಐ, ಸಚೇತ ಎಂಬ ಪೋರ್ಟಲ್‌ ರೂಪಿಸಿದೆ. ಆ ಪೋರ್ಟಲ್‌ ಮೂಲಕ, 2020ರ ಜನವರಿಯಿಂದ 2021ರ ಮಾರ್ಚ್‌ವರೆಗಿನ ಅವಧಿಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ದೂರುಗಳ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕವು ಎರಡನೆಯ ಸ್ಥಾನದಲ್ಲಿ ಇದೆ. ವಿವಿಧ ವೇದಿಕೆಗಳ ಮೂಲಕ ಆ್ಯಪ್‌ಗಳನ್ನು ಜನರ ಬಳಕೆಗೆ ಮುಕ್ತವಾಗಿಸುವ ಪ್ರಕ್ರಿಯೆಯ ಮೇಲೆ ನಿಗಾ ಇರಿಸುವ ಶಾಸನಾತ್ಮಕ ವ್ಯವಸ್ಥೆ ದೇಶದಲ್ಲಿ ಇಲ್ಲ. ಅಧಿಕಾರಶಾಹಿಯ ನಿಯಂತ್ರಣ ಇಲ್ಲದಿರುವಿಕೆಯು
ಆ್ಯಪ್‌ ಜಗತ್ತಿನಲ್ಲಿ ಸೃಜನಶೀಲತೆಗೆ ವಿಪುಲ ಅವಕಾಶ ಸೃಷ್ಟಿಸಿರಬಹುದು. ಆದರೆ, ನಿಯಂತ್ರಣ ಇಲ್ಲದಿರುವಿಕೆಯು ಅಲ್ಲಿ ಇಷ್ಟೊಂದು ಸಂಖ್ಯೆಯ ಅಕ್ರಮ ಆ್ಯಪ್‌ಗಳು ಲಭ್ಯವಾಗುತ್ತಿರಲು ಕೂಡ ಒಂದು ಮುಖ್ಯ ಕಾರಣ ಎಂದರೆ ತಪ್ಪಾಗದು. ಆ್ಯಪ್‌ ಸ್ಟೋರ್‌ಗಳು ಹತ್ತು ಹಲವು ಬಗೆಯ ಆರ್ಥಿಕ ಚಟುವಟಿಕೆಗಳಿಗೆ ವೇದಿಕೆ ಕೂಡ ಹೌದು.

ಸುಲಭದಲ್ಲಿ ಸಾಲ ಕೊಡುತ್ತೇವೆ ಎಂದು ಹೇಳಿಕೊಳ್ಳುವ ಹಣಕಾಸು ತಂತ್ರಜ್ಞಾನ ಕಂಪನಿಗಳಿಗೆ ಜನರನ್ನು ತಲುಪಲು ಇರುವ ಸಂಪರ್ಕ ಸೇತುವೆ ಈ ಆ್ಯಪ್‌ ಸ್ಟೋರ್‌ಗಳು. ನ್ಯಾಯಬದ್ಧ ಕಂಪನಿಗಳಿಗೆ ವಂಚನೆ ಆಗದಂತೆ ನೋಡಿಕೊಳ್ಳಲು, ಜನಸಾಮಾನ್ಯರು ಸಾಲದ ಹೆಸರಿನಲ್ಲಿ ಕಿರುಕುಳಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಇಂತಹ ಆ್ಯಪ್‌ ಸ್ಟೋರ್‌ಗಳ ಮೇಲೆ ನಿಗಾ ಇರಿಸಬೇಕಾದ ಅಗತ್ಯ ಖಂಡಿತ ಇದೆ. ಸರ್ಕಾರ ಹಾಗೂ ಉದ್ಯಮದ ಪ್ರತಿನಿಧಿಗಳನ್ನು ಒಳಗೊಂಡ ಶಾಸನಬದ್ಧ ವ್ಯವಸ್ಥೆಯೊಂದನ್ನು ಈ ಉದ್ದೇಶಕ್ಕೆ ರೂಪಿಸಬಹುದು.

ಹಣಕಾಸು ತಂತ್ರಜ್ಞಾನ ಉದ್ಯಮ ವಲಯವು ದೇಶದಲ್ಲಿ ಭವಿಷ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಲ್ಲುವ ಭರವಸೆಯನ್ನು ಮೂಡಿಸಿದೆ. ಸಹಸ್ರಾರು ಜನರಿಗೆ ಉದ್ಯೋಗ ಸೃಷ್ಟಿಸುವ ಶಕ್ತಿ ಈ ಉದ್ಯಮಕ್ಕೆ ಇದೆ. ಇದರ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೆಲವು ರಾಜ್ಯಗಳು ಕಾರ್ಯಪಡೆ ರಚಿಸಿರುವುದೂ ಇದೆ. ಸಾಲ ನೀಡುವುದಾಗಿ ಹೇಳಿಕೊಳ್ಳುವ ಆ್ಯಪ್‌ ಆಧಾರಿತ ಕಂಪನಿಗಳು ಹಣಕಾಸು ತಂತ್ರಜ್ಞಾನ ವಲಯದವು.

ಇಲ್ಲಿ ಅಕ್ರಮವಾಗಿ ಸಾಲ ನೀಡುವ ಆ್ಯಪ್‌ಗಳು ಜಾಸ್ತಿ ಆದರೆ, ಉದ್ಯಮಕ್ಕೆ ಕೆಟ್ಟ ಹೆಸರು. ಸಾಲ, ಠೇವಣಿಯಂತಹ ಬ್ಯಾಂಕಿಂಗ್ ವಹಿವಾಟುಗಳು ಗ್ರಾಹಕರ ವಿಶ್ವಾಸವನ್ನೇ ನೆಚ್ಚಿಕೊಂಡು ನಡೆಯಬೇಕಾದವು. ಇಲ್ಲಿ ಇಂತಹ ಆ್ಯಪ್‌ಗಳು ತಲೆಎತ್ತುವುದು ಅಂದರೆ ಜನರ ವಿಶ್ವಾಸಕ್ಕೆ ಚ್ಯುತಿ ತರುವುದಕ್ಕೆ ಸಮ. ಇದು ಇಡೀ ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸಬಹುದು. ಹೊಸ ಕಾಲದ ತಂತ್ರಜ್ಞಾನಗಳು ಮನೆಯಿಂದಲೇ ಸಾಲಕ್ಕೆ ಅರ್ಜಿ ಸಲ್ಲಿಸುವ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮನೆಯಿಂದಲೇ ಪರಿಶೀಲನೆಗೆ ಒಪ್ಪಿಸುವ ಸಾಧ್ಯತೆಗಳನ್ನು ತೆರೆದಿರಿಸಿವೆ.

ಇಂಥವುಗಳಿಗೆ ಉತ್ತೇಜನ ನೀಡಬೇಕು. ಅಂದರೆ, ಇಲ್ಲಿ ಕಾನೂನುಬಾಹಿರವಾಗಿ ಯಾವುದೇ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ಇಲ್ಲಿನ ಪ್ರಕ್ರಿಯೆಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡರೆ, ಅವರು ಮತ್ತೆ ಭೌತಿಕವಾಗಿ ಬ್ಯಾಂಕ್‌ಗಳಿಗೆ ತೆರಳಿ ತಮ್ಮ ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆಯತ್ತ ಮುಖ ಮಾಡಬಹುದು. ಜನ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ಬರಬಾರದು. ಹೊಸ ತಂತ್ರಜ್ಞಾನದ ಸಾಧ್ಯತೆಗಳನ್ನು ಸೂಕ್ತ ಬಗೆಯಲ್ಲಿ ಬಳಸಿಕೊಳ್ಳಬೇಕು. ಅಕ್ರಮವಾಗಿ ಸಾಲ ನೀಡುವ ಆ್ಯಪ್‌ಗಳನ್ನು ಆದಷ್ಟು ಬೇಗ ಹತ್ತಿಕ್ಕಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು