ಮಂಗಳವಾರ, ಮೇ 24, 2022
26 °C

ಸಂಪಾದಕೀಯ| ಹಳಿ ತಪ್ಪಿದ ಬಿಡಿಎ ಆಡಳಿತ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಸತಿ ಸೌಲಭ್ಯ ಕಲ್ಪಿಸುವುದಕ್ಕೆಂದೇ 1976ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆರಂಭದಿಂದಲೂ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಸತಿ ನಿವೇಶನಗಳ ಅಕ್ರಮ ಹಂಚಿಕೆಯ ಆರೋಪಗಳಿಗೆ ಗುರಿಯಾಗಿದೆ. ರಾಜ್ಯ ರಾಜಧಾನಿಯನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸುವ ಮಹತ್ತರವಾದ ಹೊಣೆಗಾರಿಕೆಯನ್ನು ಹೊತ್ತಿರುವ ಈ ಸಂಸ್ಥೆಗೂ ಭ್ರಷ್ಟಾಚಾರದ ಆರೋಪಕ್ಕೂ ಬಿಡಿಸಲಾರದ ನಂಟು. ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನುಗಳ ಅಕ್ರಮ ಡಿನೋಟಿಫಿಕೇಷನ್‌, ನಿವೇಶನ, ಬದಲಿ ನಿವೇಶನ ಹಂಚಿಕೆಗಳಲ್ಲಿ ಅಕ್ರಮ, ಜಮೀನು ನೀಡಿದವರಿಗೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ ಸೇರಿದಂತೆ ಬಿಡಿಎ ಒಳಗಿನಿಂದ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರದ ಸುದ್ದಿಗಳು ಹೊರಬೀಳುತ್ತಲೇ ಇರುವುದು ಪ್ರಾಧಿಕಾರದ ಆಡಳಿತ ವ್ಯವಸ್ಥೆ ಹಳಿತಪ್ಪಿದೆ ಎಂಬುದನ್ನು ಖಾತರಿಪಡಿಸುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣಗಳು ಕೆಲವು ದಿನಗಳಿಂದ ಈಚೆಗೆ ಸರಣಿಯೋಪಾದಿಯಲ್ಲಿ ಹೊರಬರುತ್ತಿವೆ. ಪ್ರಾಧಿಕಾರದ ಅಧಿಕಾರಿಗಳೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಹಂಚಿಕೆ ಮಾಡಿರುವುದು, ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ಅನ್ಯರಿಗೆ ನೂರಾರು ನಿವೇಶನ ಮಂಜೂರು ಮಾಡಿರುವುದು, ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ಮುಚ್ಚಿಟ್ಟು, ಮಾರಾಟ ಮಾಡುತ್ತಿರುವ ಪ್ರಕರಣಗಳು ಕೆಲವೇ ದಿನಗಳ ಅಂತರದಲ್ಲಿ ಹೊರಬಿದ್ದಿವೆ. ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಹಂಚಿಕೆ ಮಾಡಿರುವ ಹಗರಣದಲ್ಲಿ ನಾಲ್ವರು ಕೆಎಎಸ್‌ ಅಧಿಕಾರಿಗಳು ಭಾಗಿಯಾಗಿರುವುದನ್ನು ಬಿಡಿಎ ಜಾಗೃತ ದಳ ಪತ್ತೆಮಾಡಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನುಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪರಿಹಾರ ಲಪಟಾಯಿಸಿರುವುದು ಕೆಎಎಸ್‌ ಅಧಿಕಾರಿ ಬಿ.ಸುಧಾ ವಿರುದ್ಧದ ಪ್ರಕರಣದಲ್ಲಿ ಎಸಿಬಿ ತನಿಖೆ ವೇಳೆ ಬಯಲಿಗೆ ಬಂದಿದೆ. ಇವೆಲ್ಲವೂ ಬಿಡಿಎಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ತುಣುಕುಗಳಷ್ಟೇ ಎಂಬುದು ಪ್ರಾಧಿಕಾರದ ಚಟುವಟಿಕೆಗಳನ್ನು ಬಲ್ಲವರಿಗೆ ಗೊತ್ತು.

ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ ಸುಮಾರು 300 ಎಕರೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳು ರಹಸ್ಯವಾಗಿಟ್ಟು, ಸರ್ಕಾರದ ಗಮನಕ್ಕೆ ಬಾರದಂತೆ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಗರಣ ₹ 3,000 ಕೋಟಿಗೂ ಹೆಚ್ಚು ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಬಿಡಿಎ ಕಚೇರಿಗೆ ಹೋಗಿ ಪರಿಶೀಲನಾ ಸಭೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ, ಭ್ರಷ್ಟಾಚಾರ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಪ್ರಕಟಿಸಿದ್ದರು. ‘ಇದು ಕೇವಲ ಒಂದು ತುಣುಕಷ್ಟೆ. ಇನ್ನೂ ಹತ್ತಾರು ಅಕ್ರಮಗಳು ನಡೆದಿವೆ. ಬಿಡಿಎ ಶುದ್ಧೀಕರಣಕ್ಕೆ ನಾಲ್ಕು ತಿಂಗಳು ಬೇಕು’ ಎಂದು ಅವರು ವಿಧಾನಸಭೆಯಲ್ಲೇ ಹೇಳಿಕೆ ನೀಡಿದ್ದಾರೆ. ಈಗಲೂ ದಿನಕ್ಕೊಂದು ಹಗರಣ ಬಿಡಿಎ ಒಳಗಿನಿಂದ ಹೊರಬರುತ್ತಲೇ ಇದೆ. ಬಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಮತ್ತು ಆಯುಕ್ತರಾಗಿರುವ ಐಎಎಸ್‌ ಅಧಿಕಾರಿ ಎಚ್‌.ಆರ್‌. ಮಹಾದೇವ ಅವರು ಹಗರಣಗಳ ವಿಚಾರದಲ್ಲಿ ನೇರವಾಗಿ ಆರೋಪ– ಪ್ರತ್ಯಾರೋಪಕ್ಕೆ ಇಳಿದಿರುವುದು ಹೊಸ ಬೆಳವಣಿಗೆ. ‘ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬದಲಿ ನಿವೇಶನದ ಹೆಸರಿನಲ್ಲಿ 12 ಎಕರೆ ಜಮೀನನ್ನು ಆಯುಕ್ತರು ಅಕ್ರಮವಾಗಿ ಹಂಚಿಕೆ ಮಾಡಲು ಮುಂದಾಗಿದ್ದಾರೆ’ ಎಂದು ವಿಶ್ವನಾಥ್‌ ಆರೋಪ ಮಾಡಿದ್ದಾರೆ. ಅದನ್ನು ಅಲ್ಲಗಳೆದಿರುವ ಮಹಾದೇವ, ಹಗರಣದಲ್ಲಿ ಭಾಗಿಯಾದವರ ರಕ್ಷಣೆಗೆ ವಿಶ್ವನಾಥ್‌ ಯತ್ನಿಸುತ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹಗರಣಗಳ ಕೂಪವಾಗಿರುವ ಬಿಡಿಎ ಆಡಳಿತ ಮತ್ತಷ್ಟು ಹದಗೆಡುವ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಾಧಿಕಾರದಲ್ಲಿ ನಡೆದಿರುವ ಹಗರಣಗಳನ್ನು ಸಂಪೂರ್ಣವಾಗಿ ಪತ್ತೆಹಚ್ಚಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕಾದ ದಿಸೆಯಲ್ಲಿ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕಿದೆ. ಬಿಡಿಎಯಲ್ಲಿ ಭದ್ರವಾಗಿ ಬೇರೂರಿರುವ ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿಯನ್ನು ಹೊರಗಟ್ಟುವ ಕೆಲಸವೂ ಆಗಬೇಕಿದೆ. ಅಧ್ಯಕ್ಷ ಮತ್ತು ಆಯುಕ್ತರು ಪ್ರಾಧಿಕಾರದ ಶುದ್ಧೀಕರಣಕ್ಕೆ ಮುಕ್ತ ಮನಸ್ಸಿನಿಂದ ಕೆಲಸ ಮಾಡಬೇಕೆ ಹೊರತು ಬೀದಿ ಜಗಳಕ್ಕೆ ನಿಲ್ಲುವುದು ಪರಿಹಾರ ಆಗಲಾರದು. ಹಗರಣಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಹಾಗೂ ಬಿಡಿಎ ಆಡಳಿತವನ್ನು ಶುದ್ಧೀಕರಿಸುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ
ಪ್ರದರ್ಶಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು