ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ದೃಢ ನಿಲುವನ್ನು ಮುಖ್ಯಮಂತ್ರಿಯವರು ತೆಗೆದುಕೊಳ್ಳಬೇಕು

ರಾಜಕೀಯ ಎದುರಾಳಿಗಳನ್ನು ಹಣಿಯಲು ‘ಮಧುಬಲೆ’ಯನ್ನು (ಹನಿಟ್ರ್ಯಾಪ್) ಅಸ್ತ್ರವಾಗಿ ಬಳಸಿಕೊಳ್ಳುವ ಹೀನಾತಿಹೀನ ಚಾಳಿ ಕರ್ನಾಟಕದಲ್ಲಿ ಹೆಚ್ಚುತ್ತಿರುವುದು ರಾಜಕಾರಣದಲ್ಲಿ ಮೌಲ್ಯಗಳು ಪಾತಾಳಕ್ಕೆ ಕುಸಿದಿರುವುದಕ್ಕೆ ಸಾಕ್ಷಿ.

ಉನ್ನತ ಸಂಸದೀಯ ಪರಂಪರೆಯನ್ನು ಹೊಂದಿದ್ದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿತ್ತು. ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಕುಂದಾಗುತ್ತಲೇ ಇದೆ. ರಾಜ್ಯದಲ್ಲಿ ಸಚಿವರೊಬ್ಬರ ವಿರುದ್ಧವೇ ಈ ಅಸ್ತ್ರ ಬಳಸಲಾಗಿದೆ ಎಂಬ ವಿಚಾರ ಈಚೆಗೆ ವಿಧಾನಸಭೆಯಲ್ಲೇ
ಬಹಿರಂಗವಾಗಿ, ಕೋಲಾಹಲ ಸೃಷ್ಟಿಸಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸದನದಲ್ಲೇ ಈ ವಿಚಾರವನ್ನು ದೃಢಪಡಿಸಿದ್ದಾರೆ.

‘ನಾನೊಬ್ಬನೇ ಅಲ್ಲ. ರಾಜ್ಯ ಹಾಗೂ ಕೇಂದ್ರದ ಎಲ್ಲ ಪಕ್ಷಗಳ ನಾಯಕರೂ ಸೇರಿದಂತೆ 48 ಮಂದಿ ಮೇಲೆ ಈ ಅಸ್ತ್ರ ಬಳಸಿ, ಸಿ.ಡಿ. ಮಾಡಿಟ್ಟುಕೊಳ್ಳಲಾಗಿದೆ. ರಾಜ್ಯವು ಸಿ.ಡಿ., ಪೆನ್ಡ್ರೈವ್ ಕಾರ್ಖಾನೆಯಾಗಿದೆ ಎಂದು ಬಹಳ ಜನ ಹೇಳುತ್ತಿದ್ದಾರೆ’ ಎಂದು ಸಚಿವರೇ ಹೇಳಿರುವುದು ಕಂಪನಗಳನ್ನು ಎಬ್ಬಿಸಿದೆ. ಮಧುಬಲೆಯ ಸೂತ್ರಧಾರಿಗಳು ಯಾರೇ ಆಗಿರಲಿ ಅಂತಹವರ ಮುಖವಾಡ ಕಳಚಬೇಕು. ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಪದೇ ಪದೇ ಸದ್ದು ಮಾಡುತ್ತಿವೆ.

ಮಧುಬಲೆ ಪ್ರಕರಣವು 2013–18ರ ಅವಧಿಯಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಸಚಿವರೊಬ್ಬರ ರಾಜೀನಾಮೆಗೆ ಕಾರಣವಾಯಿತು. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಕೆಡವಲು ಕಾರಣರಾದ ಹಲವು ಶಾಸಕರು ಕೆಲವು ದಿನಗಳ ಮಟ್ಟಿಗೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಆ ವೇಳೆ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೊ ಇರುವ ಪೆನ್ಡ್ರೈವ್ಗಳನ್ನು ಕೆಲವು ನಾಯಕರು ತಮ್ಮ ಬಳಿ ಇರಿಸಿಕೊಂಡಿದ್ದಾರೆ ಎಂಬ ವದಂತಿಯು ರಾಜಕೀಯ ವಲಯದಲ್ಲಿ ಹಬ್ಬಿತ್ತು.

ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಪ್ರಭಾವಿ ಸಚಿವರೊಬ್ಬರ ಪದಚ್ಯುತಿಗೂ ಕಾರಣವಾಗಿದ್ದು ಇದೇ ಅಸ್ತ್ರ. ತಮ್ಮ ಮಾನಕ್ಕೆ ಹಾನಿ ತರುವ ವಿಡಿಯೊಗಳನ್ನು ಪ್ರಸಾರ ಮಾಡಬಾರದು ಎಂದು ರಾಜ್ಯದ 20ಕ್ಕೂ ಹೆಚ್ಚು ಜನಪ್ರತಿನಿಧಿಗಳು ನ್ಯಾಯಾಲಯಗಳಿಂದ ಪ್ರತಿಬಂಧಕಾಜ್ಞೆ ತಂದಿರುವುದು ಈ ಹಾವಳಿ ವಿಕೋಪಕ್ಕೆ ಹೋಗಿರುವುದನ್ನು ಸೂಚಿಸುತ್ತದೆ.

ಸಿರಿವಂತರನ್ನು ಮಧುಬಲೆಗೆ ಕೆಡವಿ ಸುಲಿಗೆ ಮಾಡುವ ಪ್ರಕರಣಗಳು ಬಹಳ ವರ್ಷಗಳಿಂದಲೂ ನಡೆಯುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಮತ್ತು ಪ್ರಭಾವಿ ಅಧಿಕಾರಿಗಳನ್ನು ಇಂತಹ ಕುತಂತ್ರದ ಮೂಲಕ ತಮ್ಮ ಹಿಡಿತದಲ್ಲಿರಿಸಿಕೊಂಡು ಲಾಭ ಪಡೆಯುವ ಜಾಲಗಳೂ ಸಕ್ರಿಯವಾಗಿವೆ. ಎದುರಾಳಿಗಳನ್ನು ಮಣಿಸಿ ಅಧಿಕಾರ ಹಿಡಿಯುವುದಕ್ಕೂ ಈ ಅಸ್ತ್ರ ಬಳಕೆಯಾಗುತ್ತಿದೆ ಎಂಬ ಆರೋಪ ಈಗ ಬಲವಾಗಿದೆ. ಇಂತಹ ಪ್ರಕರಣಗಳಲ್ಲಿ ಸಿಲುಕಿದವರ ಚಾರಿತ್ರ್ಯಹನನವಷ್ಟೇ ಆಗುವುದಿಲ್ಲ. ಅವರು ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿದು ನೀತಿ– ನಿರ್ಧಾರಗಳಲ್ಲಿ ರಾಜಿ ಮಾಡಿಕೊಳ್ಳುವ, ಆಡಳಿತದಲ್ಲಿನ ರಹಸ್ಯಗಳನ್ನು ಸೋರಿಕೆ ಮಾಡುವ, ಅಧಿಕಾರ ದುರ್ಬಳಕೆ ಮಾಡಿಕೊಂಡು ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವಂತಹ ತೀರ್ಮಾನಗಳನ್ನು ಕೈಗೊಳ್ಳುವುದಕ್ಕೂ ಎಡೆಮಾಡುತ್ತದೆ.

ಮಧುಬಲೆಗೆ ಸಿಲುಕಿಸಿ ಲಾಭ ಪಡೆಯುವ ಸಂಚು ಅಕ್ಷಮ್ಯ. ಸಾರ್ವಜನಿಕ ಜೀವನದಲ್ಲಿ ಇರುವವರ ಮೇಲೂ ಈ ವಿಷಯದಲ್ಲಿ ಹೆಚ್ಚು ಜವಾಬ್ದಾರಿಗಳಿರುತ್ತವೆ. ಯಾರೋ ಹೆಣೆದ ಇಂತಹ ಸಂಚಿಗೆ ಬಲಿ ಆಗದಂತೆ ಜಾಗರೂಕರಾಗಿ ಇರಬೇಕು. ಆಗ, ವಿಡಿಯೊ, ಫೋಟೊ ಪ್ರಸಾರ ಮಾಡದಂತೆ ಆದೇಶ ಕೋರಿ ನ್ಯಾಯಾಲಯದ ಮೆಟ್ಟಿಲೇರುವುದು, ಕುಟುಂಬ, ಪಕ್ಷ, ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವುದೂ ತಪ್ಪುತ್ತದೆ. ಒತ್ತಡಕ್ಕೆ ಮಣಿಯದೆ ಅಧಿಕಾರ ಚಲಾಯಿಸುವ ಸ್ವಾತಂತ್ರ್ಯವೂ ತಾನಾಗಿಯೇ ದೊರಕುತ್ತದೆ.

ವಿಧಾನಮಂಡಲದ ಈ ಬಾರಿಯ ಕಲಾಪದಲ್ಲಿ ಜನಹಿತಕ್ಕೆ ಸಂಬಂಧಿಸಿದ ವಿಚಾರಗಳಿಗಿಂತಲೂ ಹೆಚ್ಚಾಗಿ ಮಧುಬಲೆಯಂತಹ ವ್ಯಕ್ತಿ ನೆಲೆಯ ವಿಷಯಗಳು ಚರ್ಚೆ, ಧರಣಿ, ಗದ್ದಲಕ್ಕೆ ಕಾರಣವಾದವು. ರಾಜ್ಯದಲ್ಲಿ ಅಧಿಕಾರಸ್ಥರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಾಗಿಯೇ ತಂತ್ರ ಹೂಡಿ ಹನಿಟ್ರ್ಯಾಪ್ ಮಾಡುವಂತಹ ದೊಡ್ಡ ಜಾಲವೇ ಇದೆ ಎಂಬುದನ್ನು ವಿಧಾನಸಭೆಯ ಕೆಲವು ಸದಸ್ಯರು ಸದನದಲ್ಲೇ ಬಹಿರಂಗಪಡಿಸಿದ್ದಾರೆ. ಸಚಿವ ರಾಜಣ್ಣ ಮಾತ್ರವಲ್ಲ, ವಿಧಾನ ಪರಿಷತ್ನ ಸದಸ್ಯರೂ ಆಗಿರುವ ಅವರ ಮಗ ರಾಜೇಂದ್ರ ಅವರನ್ನೂ ಮಧುಬಲೆಗೆ ಕೆಡವುವ ಪ್ರಯತ್ನ ನಡೆದಿತ್ತು ಎಂಬುದನ್ನು ಅವರೇ ಈಗ ಹೊರಗೆಡವಿದ್ದಾರೆ. ಈ ಕುರಿತ ಬಲವಾದ ಸಾಕ್ಷ್ಯಗಳೂ ತಮ್ಮ ಬಳಿ ಇವೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಕೆಲವು ದಿನಗಳ ಹಿಂದೆಯೇ ವಿಷಯ ಬಂದಿತ್ತು. ಸಿದ್ದರಾಮಯ್ಯ ಅವರ ಪರವಾಗಿ ಬಲವಾಗಿ ಧ್ವನಿ ಎತ್ತಿರುವುದಕ್ಕಾಗಿಯೇ ರಾಜಕೀಯವಾಗಿ ರಾಜಣ್ಣ ಅವರನ್ನು ಮಣಿಸಲು ಈ ಅಸ್ತ್ರ ಹೂಡಲಾಗಿತ್ತು ಎಂದು ಅವರ ಸಂಪುಟದ ಕೆಲವು ಸದಸ್ಯರು ಹೇಳಿಕೆ ನೀಡಿದ್ದಾರೆ. ಇಂತಹ ಗಂಭೀರ ಪ್ರಕರಣದ ಕುರಿತು ರಾಜಣ್ಣ ಮತ್ತು ಅವರ ಮಗ ನೇರವಾಗಿ ಪೊಲೀಸರಿಗೆ ದೂರು ನೀಡಿ, ತನಿಖೆಗೆ ಮನವಿ ಮಾಡುವ ಅವಕಾಶ ಇತ್ತು. ಆದರೂ ಅವರು ವಿಷಯ ಬಹಿರಂಗಪಡಿಸುವುದಕ್ಕೆ ವಿಧಾನಮಂಡಲದ ಅಧಿವೇಶನವನ್ನು ಬಳಸಿಕೊಂಡಿದ್ದಾರೆ. ರಾಜಕೀಯವಾಗಿ ಎದುರಾಳಿಗಳಿಗೆ ಸಂದೇಶ ರವಾನಿಸುವುದು ಅವರ ಉದ್ದೇಶ ಆಗಿರಬಹುದು.

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸುವುದಾಗಿ ರಾಜಣ್ಣ ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. ಈ ವಿಚಾರದಲ್ಲಿ ಮತ್ತಷ್ಟು ವಿಳಂಬ ಮಾಡಬಾರದು. ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ದೃಢ ನಿಲುವನ್ನು ಮುಖ್ಯಮಂತ್ರಿಯವರು ತೆಗೆದುಕೊಳ್ಳಬೇಕು. ಮಧುಬಲೆಯ ಹಿಂದಿರುವ ಜಾಲವನ್ನು ಸಮಗ್ರವಾಗಿ ಪತ್ತೆಹಚ್ಚಿ, ಸಂಚುಕೋರರು, ಕಾರ್ಯಾಚರಣೆ ನಡೆಸುವವರ ವಿರುದ್ಧ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು. ಆ ಮೂಲಕ ದೇಶದಲ್ಲಿ ರಾಜ್ಯದ ಗೌರವವನ್ನು ಕಾಪಾಡುವ ಕೆಲಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.