ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮುಸುಕಿನ ಗುದ್ದಾಟಕ್ಕೆ ಕೊನೆ;ಮುಂದಿನದು ಸವಾಲಿನ ನಡಿಗೆ

Last Updated 20 ಮೇ 2020, 2:03 IST
ಅಕ್ಷರ ಗಾತ್ರ

ಅತ್ತ ದರಿ, ಇತ್ತ ಪುಲಿ ಎನ್ನುವ ಮಾತು ಎಲ್ಲರ ಅನುಭವಕ್ಕೂ ಬರುವ ವಿಚಿತ್ರ ಸಂದರ್ಭವನ್ನು ರಾಜ್ಯ ಎದುರಿಸುತ್ತಿದೆ. ಕೊರೊನಾ ಸೋಂಕು ತಗುಲಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ವೈರಾಣುವಿನ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಬಹುತೇಕ ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿದೆ. ಈ ತೆರವಿನೊಂದಿಗೆ ಆತಂಕವನ್ನು ಬಗಲಿನಲ್ಲಿಟ್ಟುಕೊಂಡೇ ರಾಜ್ಯದ ಜನಜೀವನ ಸಹಜತೆಯತ್ತ ಸಾಗುತ್ತಿದೆ.

ಸಾರ್ವಜನಿಕ ಬಸ್‌ಗಳ ಸಂಚಾರ ಆರಂಭಗೊಳ್ಳುವುದರೊಂದಿಗೆ ಜಿಲ್ಲೆಗಳ ನಡುವೆ ಅಧಿಕೃತ ಸಂಪರ್ಕ ಸಾಧ್ಯವಾಗಿದೆ. ಆಟೊ, ಕ್ಯಾಬ್‌ಗಳ ಸಂಚಾರವೂ ಶುರುವಾಗಿದೆ. ವ್ಯಾಪಾರ– ವಹಿವಾಟುಗಳು ನಿಧಾನವಾಗಿ ಚುರುಕಾಗುತ್ತಿವೆ. ಮುಂಗಾರಿನ ಆಗಮನದ ನಿರೀಕ್ಷೆಯಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಿಗೆ ದಿನಾಂಕ ಗೊತ್ತುಪಡಿಸುವುದರೊಂದಿಗೆ ವಿದ್ಯಾರ್ಥಿಗಳು ರಜೆಯ ಗುಂಗಿನಿಂದ ಹೊರಬಂದಿದ್ದಾರೆ. ಮನೆಯಲ್ಲಿಯೇ ಉಳಿಯಬೇಕಾದ ಅನಿವಾರ್ಯದಿಂದ ಬೇಸತ್ತಿದ್ದ ಜನರು ಪ್ರಸ್ತುತ ನಿರ್ಬಂಧಗಳ ತೆರವಿನಿಂದಾಗಿ ತಂತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಸಹಜವೇ ಆಗಿದೆ.

ಸುಮಾರು ಎರಡು ತಿಂಗಳುಗಳ ಅವಧಿಯ ಲಾಕ್‌ಡೌನ್‌ನಿಂದಾಗಿ ಇಡೀ ದೇಶವೇ ಆರ್ಥಿಕ ಬಿಕ್ಕಟ್ಟಿನಿಂದ ಉಸಿರುಗಟ್ಟಿತ್ತು. ಜನಸಾಮಾನ್ಯರ ಪಾಲಿಗೆ ಬದುಕು ದುಸ್ತರ ಎನಿಸತೊಡಗಿತ್ತು. ಅನ್ನ ಹುಡುಕಿಕೊಂಡು ನಗರಗಳಿಗೆ ವಲಸೆ ಬಂದಿದ್ದ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ, ದುಡಿಮೆಯಿಲ್ಲದೆ ಕಂಗೆಟ್ಟಿದ್ದರು. ರೋಗಭೀತಿಗಿಂತಲೂ ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟಿನ ಆತಂಕ ಜನರನ್ನು ಬಾಧಿಸತೊಡಗಿತ್ತು. ಈ ಸಮಸ್ಯೆಗೆ ಲಾಕ್‌ಡೌನ್‌ ಶಾಶ್ವತ ಪರಿಹಾರವಲ್ಲ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಸರ್ಕಾರಕ್ಕೆ ದೊರೆಯುವ ಸಮಯಾವಕಾಶ. ಈ ಅವಧಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡು, ಬಳಿಕ ಸೋಂಕನ್ನು ಎದುರಿಸಲು ಸಜ್ಜಾಗುವುದು ಅನಿವಾರ್ಯ. ದೇಶ ಈಗ ಈ ಹಂತಕ್ಕೆ ಹೊರಳಿದೆ. ರೋಗಾಣುವಿನ ಪ್ರಾಬಲ್ಯ ಮುಂದುವರಿದಿದ್ದರೂ ಅದರೊಂದಿಗಿನ ಮುಸುಕಿನ ಗುದ್ದಾಟವನ್ನು ಕೈಬಿಟ್ಟು ನೇರವಾಗಿ ಹೋರಾಡುವ ಮಾರ್ಗವನ್ನು ಅನಿವಾರ್ಯವಾಗಿ ಆರಿಸಿಕೊಳ್ಳಲಾಗಿದೆ. ಈಗ ಉಳಿದಿರುವುದು, ಜೀವನಕ್ಕಾಗಿ ದುಡಿಯುತ್ತಲೇ ಜೀವವನ್ನೂ ಉಳಿಸಿಕೊಳ್ಳಲು ಪ್ರಯತ್ನಿಸುವುದು. ಆ ಪ್ರಯತ್ನದ ರೂಪದಲ್ಲಿಯೇ ಸಾರ್ವಜನಿಕ ಜೀವನವನ್ನು ಸಹಜತೆಯತ್ತ ತರುವ ಆಯ್ಕೆಯನ್ನು ಸರ್ಕಾರ ಒಪ್ಪಿಕೊಂಡು, ಜನರಿಗೆ ಮನೆಯಿಂದ ಹೊರಬರಲು ಅವಕಾಶ ಕಲ್ಪಿಸಿದೆ.

ಕೊರೊನಾ ವಿರುದ್ಧದ ನಮ್ಮ ಈವರೆಗಿನ ಹೋರಾಟಕ್ಕಿಂತ ಇನ್ನು ಮುಂದಿನ ಸಂಘರ್ಷ ಹೆಚ್ಚು ಸವಾಲಿನಿಂದ ಕೂಡಿದ್ದಾಗಿದೆ. ಸಾಗಬೇಕಾದ ದಾರಿ, ಈವರೆಗಿನ ಹೋರಾಟಕ್ಕಿಂತ ಹೆಚ್ಚಿನ ಜವಾಬ್ದಾರಿಯನ್ನೂ ಬದ್ಧತೆಯನ್ನೂ ಸಂಘಟಿತ ಪ್ರಯತ್ನವನ್ನೂ ಬಯಸುವಂತಹದ್ದಾಗಿದೆ.

ಇಲ್ಲಿಯವರೆಗಿನ ಹೋರಾಟದಲ್ಲಿ ಸರ್ಕಾರದ ಪಾತ್ರ ಮಹತ್ವದ್ದಾಗಿತ್ತು. ಜನರು ಮನೆಯಲ್ಲಿಯೇ ಉಳಿಯಲು ಕಾನೂನಿನ ನಿರ್ಬಂಧದ ಒತ್ತಡವೂ ಇತ್ತು. ಆದರೆ, ಮನೆಯಿಂದ ಹೊರಗೆ ಬಂದಿರುವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಸುರಕ್ಷತೆಯ ಯೋಚನೆಯನ್ನು ತಾವೇ ಮಾಡಬೇಕಾಗಿದೆ. ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಹ ಸಂದರ್ಭದಲ್ಲಿ, ಸ್ವಯಂ ಜಾಗರೂಕತೆಯೊಂದೇ ಕೇಡಿನಿಂದ ನಮ್ಮನ್ನು ದೂರವಿಡಬಲ್ಲದು. ಮುಖಗವುಸಿಲ್ಲದೆ ಮನೆಯಿಂದ ಹೊರಬರದಿರುವ ಎಚ್ಚರ ಹಾಗೂ ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗಿದೆ. ಇದಕ್ಕಿಂತಲೂ ಮುಖ್ಯವಾದುದು ಬೇಕು– ಬೇಡಗಳಿಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು. ನಮ್ಮ ಅಗತ್ಯಗಳು ಕಡಿಮೆಯಾದಷ್ಟೂ ಬದುಕು ಸರಳವಾಗುತ್ತದೆ, ರೋಗಭೀತಿಯೂ ಕಡಿಮೆಯಾಗುತ್ತದೆ.

ಉದ್ಯೋಗ ಮತ್ತು ಆರೋಗ್ಯದ ಕಾರಣಗಳನ್ನು ಹೊರತುಪಡಿಸಿ ಮನೆಯಿಂದ ಹೊರಗೆ ಹೋಗದಿರುವುದು ವೈಯಕ್ತಿಕವಾಗಿಯೂ ಒಳ್ಳೆಯದು, ಸಮಾಜಕ್ಕೂ ಹಿತ. ಮನೆಯಲ್ಲಿನ ಹಿರಿಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ. ಪ್ರಯಾಣ ಮತ್ತು ಉದ್ಯೋಗದ ಸಂದರ್ಭದಲ್ಲಿ ಭೌತಿಕ ಅಂತರವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಅಪಾಯಕ್ಕೆ ಅವಕಾಶ ಕಲ್ಪಿಸಿರುವ ಸರ್ಕಾರದ ಜವಾಬ್ದಾರಿಯೂ ದೊಡ್ಡದಿದೆ. ದುಡಿಮೆ ಇಲ್ಲದೆ ತತ್ತರಿಸಿರುವ ದುರ್ಬಲ ವರ್ಗಕ್ಕೆ ಬಲ ತುಂಬುವ ಪ್ರಾಮಾಣಿಕ ಪ್ರಯತ್ನಗಳನ್ನು ಸರ್ಕಾರ ಮಾಡಬೇಕಿದೆ. ಜೊತೆಗೆ, ಸೋಂಕಿನ ಪ್ರಮಾಣ ಹೆಚ್ಚಾದಲ್ಲಿ ಉಂಟಾಗಬಹುದಾದ ‘ಆರೋಗ್ಯ ತುರ್ತು ಪರಿಸ್ಥಿತಿ’ಯನ್ನು ನಿಭಾಯಿಸುವ ದಿಸೆಯಲ್ಲಿ ಅಗತ್ಯ ಸಿದ್ಧತೆಯನ್ನೂ ನಡೆಸಬೇಕಾಗಿದೆ. ಸ್ವಚ್ಛತೆಯ ಮಹತ್ವದ ಬಗ್ಗೆ ಸಮಾಜದ ಎಲ್ಲ ವರ್ಗಗಳಿಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT