ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಹಾರಾಷ್ಟ್ರ ಸರ್ಕಾರ ರಚನೆ ನಾಟಕ: ಪ್ರಜಾಪ್ರಭುತ್ವ, ಮತದಾರನ ಅಣಕ

Last Updated 25 ನವೆಂಬರ್ 2019, 3:00 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿನ ಸರ್ಕಾರ ರಚನೆಯ ಕಸರತ್ತುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೆಲ್ಲ ನಡೆಯಬಾರದೋ ಅಂಥವುಗಳಿಗೆ ನಿದರ್ಶನಗಳಂತಿವೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಸರ್ಕಾರ ರಚಿಸಲು ಸಂವಿಧಾನಬದ್ಧವಾದ ಪ್ರಕ್ರಿಯೆ ನಡೆಯಬೇಕೇ ಹೊರತು ಪ್ರಹಸನವಲ್ಲ.

ಜನಾದೇಶ ಇರುವ ಪಕ್ಷ ಅಥವಾ ಮೈತ್ರಿಕೂಟವು ಸರ್ಕಾರ ರಚಿಸಬೇಕು. ಈ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ಸಾಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯಪಾಲರು ಅಪಸ್ವರ, ಅನುಮಾನಗಳಿಗೆ ಆಸ್ಪದ ಇಲ್ಲದ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಬೇಕು. ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಇದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ಸಂವಿಧಾನಕ್ಕೆ ನಿಷ್ಠೆ, ನೈತಿಕ ನಿಲುವು ಮತ್ತು ಮತದಾರನಿಗೆ ಬದ್ಧವಾಗಿರುವುದು ರಾಜಕೀಯ ಪಕ್ಷಗಳ ಕರ್ತವ್ಯ.

ನಮ್ಮ ರಾಜಕೀಯ ಪಕ್ಷಗಳಿಗೆ ಈ ಯಾವುವೂ ಬೇಕಾಗಿಲ್ಲ ಎಂಬುದು ಪದೇ ಪದೇ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಚುನಾವಣಾಪೂರ್ವ ಮೈತ್ರಿ ಹೊಂದಿದ್ದ ಬಿಜೆಪಿ–ಶಿವಸೇನಾ ಸರ್ಕಾರ ರಚಿಸಬೇಕು ಎಂಬುದು ಜನರು ನೀಡಿರುವ ತೀರ್ಪು. ಅಧಿಕಾರ ಹಂಚಿಕೆಯಲ್ಲಿ ಸಹಮತ ಮೂಡಿಲ್ಲ ಎಂಬ ಒಂದೇ ಕಾರಣಕ್ಕೆ, ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತು ದಶಕಗಳಿಂದ ಜತೆಗೇ ಇರುವ ಈ ಪಕ್ಷಗಳು ಬೇರೆ ಬೇರೆ ಆಗಿರುವುದು ಮತದಾರನಿಗೆ ಮಾಡಿದ ಅವಮಾನ. ಮತದಾರನ ತೀರ್ಪನ್ನು ತಿರುಚಲು ರಾಜಕೀಯ ಪಕ್ಷಗಳಿಗೆ ಅವಕಾಶ ಇಲ್ಲ ಎಂಬ ಮೂಲಭೂತ ಸಂಗತಿಯನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಬಹುದು.

288 ಸದಸ್ಯ ಬಲದ ವಿಧಾನಸಭೆಯ 56 ಕ್ಷೇತ್ರಗಳಲ್ಲಿ ಗೆದ್ದಿರುವ ಶಿವಸೇನಾವು ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟದ್ದು, ಸಂಖ್ಯಾಬಲದ ದೃಷ್ಟಿಯಿಂದ ನೋಡಿದರೆ ನೈತಿಕವಲ್ಲ. ಆದರೆ, ಅತಿದೊಡ್ಡ ಪಕ್ಷವನ್ನು ಹಿಂದಿಕ್ಕಿ ಗೋವಾ ಮತ್ತು ಮಣಿಪುರದಲ್ಲಿ ಸರ್ಕಾರ ರಚಿಸಿರುವ, ಕರ್ನಾಟಕದಲ್ಲಿ ಬಹುಮತ ಹೊಂದಿದ್ದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಭಾಗವಾಗಿದ್ದ ಶಾಸಕರಿಂದ ರಾಜೀನಾಮೆ ಕೊಡಿಸಿ ತನ್ನ ನೇತೃತ್ವದಲ್ಲಿ ಸರ್ಕಾರ ಸ್ಥಾಪಿಸಿದ ಬಿಜೆಪಿಗೆ ಈ ನೀತಿಪಾಠವನ್ನು ಹೇಳುವ ಹಕ್ಕು ಇದೆಯೇ? ವಿರೋಧ ಪಕ್ಷದಲ್ಲಿ ಕೂರುವಂತೆ ಜನರು ಆದೇಶ ಕೊಟ್ಟಿದ್ದಾರೆ ಎಂದು ಹೇಳಿಕೊಂಡು, ಬಳಿಕ ಸಿದ್ಧಾಂತದ ಗೊಡವೆಯನ್ನೇ ಬಿಟ್ಟು ಶಿವಸೇನಾ ಜತೆಗೆ ಸರ್ಕಾರ ರಚಿಸಲು ಮುಂದಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಆದರ್ಶದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ?

ಎನ್‌ಸಿಪಿ ಮತ್ತು ಕಾಂಗ್ರೆಸ್‌ ಬೆಂಬಲದಿಂದ ಶಿವಸೇನಾ ನೇತೃತ್ವದ ಸರ್ಕಾರ ಇನ್ನೇನು ರಚನೆಯಾಗಲಿದೆ ಎಂಬ ಸನ್ನಿವೇಶ ಶುಕ್ರವಾರ ರಾತ್ರಿಯವರೆಗೆ ಇತ್ತು. ಆದರೆ, ಶನಿವಾರ ಬೆಳಿಗ್ಗೆ 7.50ಕ್ಕೆ ಬಿಜೆಪಿಯ ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿಯಾಗಿ, ಎನ್‌ಸಿಪಿಯ ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ಮೇಲೆ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಅದಕ್ಕೂ ಮೊದಲು, ಅಂದರೆ 5.47ಕ್ಕೆ ತೆಗೆಯಲಾಗಿದೆ. ಕೇಂದ್ರ ಸಚಿವ ಸಂಪುಟದ ಶಿಫಾರಸು ಕೂಡ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕ್ರಮ ಕೈಗೊಳ್ಳಲು ಪ್ರಧಾನಿಗೆ ಅವಕಾಶ ಇದೆ. ಆದರೆ, ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ನೇತೃತ್ವದ ಸರ್ಕಾರ ರಚನೆ ಮಾಡುವುದು ಇಂತಹ ತುರ್ತು ಅಗತ್ಯವೇ ಎಂಬ ಬಗ್ಗೆ ಪ್ರಧಾನಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಸರ್ಕಾರ ರಚನೆಯು ‘ಅಕ್ರಮ’ ಎಂದು ಆರೋ‍ಪಿಸಿ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌, ಸುಪ್ರೀಂ ಕೋರ್ಟ್‌ಗೆ ದೂರು ಕೊಟ್ಟಿವೆ. ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದ ಬೆಂಬಲ ಪತ್ರ, ರಾಜ್ಯಪಾಲರು ಕೊಟ್ಟ ಆಹ್ವಾನ ಪತ್ರವನ್ನು ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅಜಿತ್‌ ಅವರು ತಮ್ಮ ಸ್ಥಾನವನ್ನು ದುರುಪಯೋಗ ಮಾಡಿ ಬೆಂಬಲ ಪತ್ರ ಕೊಟ್ಟಿದ್ದಾರೆ ಎಂಬ ಆರೋಪ ಇದೆ. ಇದು ನಿಜವೇ ಆಗಿದ್ದರೆ, ವಂಚನೆ ಮತ್ತು ಅಪರಾಧ ಕೃತ್ಯ. ಎನ್‌ಸಿಪಿಯ ಉತ್ತರಾಧಿಕಾರಕ್ಕಾಗಿ ಶರದ್‌ ಪವಾರ್‌ ಕುಟುಂಬದಲ್ಲಿ ನಡೆಯುತ್ತಿರುವ ಸಂಘರ್ಷವೂ ಅಜಿತ್‌ ಅವರ ಈ ನಡೆಗೆ ಕಾರಣ ಆಗಿರಬಹುದು ಎಂಬ ವಿಶ್ಲೇಷಣೆಗಳಿವೆ.

ಕುಟುಂಬದೊಳಗಿನ ಸಂಘರ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಳಿತಪ್ಪಿಸುವುದು ಸರಿಯಲ್ಲ. ಮಹಾರಾಷ್ಟ್ರಕ್ಕೆ ಬಹುಮಟ್ಟಿಗೆ ಸೀಮಿತವಾದ ಶಿವಸೇನಾ ಮತ್ತು ಎನ್‌ಸಿಪಿ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪರಸ್ಪರರತ್ತ ಬೊಟ್ಟು ಮಾಡಿ ದೂಷಿಸುತ್ತಿವೆ. ಆದರೆ, ಈ ಯಾವ ಪಕ್ಷಕ್ಕೂ ನೈತಿಕ ನೆಲೆ ಇಲ್ಲ ಎಂಬುದು ಈಗಿನ ವಿದ್ಯಮಾನಗಳನ್ನು ಗಮನಿಸಿದರೆ ಮನದಟ್ಟಾಗುತ್ತದೆ. ಮತದಾರ ಎಲ್ಲವನ್ನೂ ಗಮನಿಸುತ್ತಿದ್ದಾನೆ ಮತ್ತು ತಕ್ಕ ಸಮಯದಲ್ಲಿ ಪಾಠ ಕಲಿಸುತ್ತಾನೆ ಎಂಬುದಷ್ಟೇ ಪ್ರಜಾಪ್ರಭುತ್ವದ ಉಳಿವಿಗೆ ಇರುವ ಆಶಾವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT