ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಅಂಗನವಾಡಿಗಳಿಂದ ಮಕ್ಕಳು ದೂರ: ದಾಖಲಾತಿ ‍ಪ್ರಕ್ರಿಯೆ ಚುರುಕುಗೊಳ್ಳಲಿ

Last Updated 8 ಜುಲೈ 2022, 19:30 IST
ಅಕ್ಷರ ಗಾತ್ರ

ನಾಳಿನ ಪ್ರಜೆಗಳ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಪೂರಕವಾದ ಅಂಗನವಾಡಿ ಕೇಂದ್ರಗಳಿಂದ 9.87 ಲಕ್ಷ ಮಕ್ಕಳು ಹೊರಗುಳಿದಿರುವ ಸಂಗತಿ, ಶೈಕ್ಷಣಿಕ ಕ್ಷೇತ್ರದ ತಳಹದಿ ದುರ್ಬಲಗೊಂಡಿರುವುದರ ಸ್ಪಷ್ಟ ಸೂಚನೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯವನ್ನು ತೀವ್ರವಾಗಿ ಕಾಡಿದ ಕೊರೊನಾದ ಅಡ್ಡಪರಿಣಾಮಗಳಲ್ಲಿ ಮಕ್ಕಳು ಶಾಲೆಗಳಿಂದ ದೂರವಾಗಿರುವುದೂ ಒಂದು. 3 ವರ್ಷದೊಳಗಿನ 4.54 ಲಕ್ಷ ಮಕ್ಕಳು ಹಾಗೂ 4ರಿಂದ 6ರ ವಯೋಮಾನದ 5.33 ಲಕ್ಷ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಲ್ಲ. ಇದೇ ಅವಧಿಯಲ್ಲಿ 6ರಿಂದ 14 ವರ್ಷದ 15,338 ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಅಂಗನವಾಡಿ ಹಾಗೂ ಶಾಲೆಗಳಿಂದ ಹೊರಗುಳಿದಿರುವುದು ಕಳವಳ ಉಂಟುಮಾಡುವ ವಿದ್ಯಮಾನ. ಗ್ರಾಮೀಣ ಭಾಗಗಳಲ್ಲಿ 2021ರ ಅಕ್ಟೋಬರ್‌ನಲ್ಲಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2022ರ ಮಾರ್ಚ್‌ನಲ್ಲಿ ನಡೆಸಿರುವ ಸಮೀಕ್ಷೆ ದಾಖಲಿಸಿರುವ ಅಧಿಕೃತ ಅಂಕಿಅಂಶಗಳಿವು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ಅಂಕಿಅಂಶಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3 ವರ್ಷದೊಳಗಿನ 2.73 ಲಕ್ಷ ಹಾಗೂ 4ರಿಂದ 6 ವರ್ಷದ 3.02 ಲಕ್ಷ ಮಕ್ಕಳು ಅಂಗನವಾಡಿಗಳಿಗೆ ಸೇರ್ಪಡೆಯಾಗಿಲ್ಲ.

ಶಾಲಾಪೂರ್ವ ಶಿಕ್ಷಣದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ವಿಶೇಷ ಮಹತ್ವವಿದೆ. ಮಕ್ಕಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪರಿಚಯಿಸುವ ದಿಸೆಯಲ್ಲಿ ಅಂಗನವಾಡಿಗಳು ಪ್ರಯೋಗಶಾಲೆಗಳ ರೂಪದಲ್ಲಿ ಕಾರ್ಯ ನಿರ್ವಹಿಸು
ತ್ತವೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಕ್ಕಳನ್ನು ಸದೃಢಗೊಳಿಸುವ ಉದ್ದೇಶದಿಂದ ರೂಪುಗೊಂಡಿರುವ ಈ ಕೇಂದ್ರಗಳು, ಗ್ರಾಮೀಣ ಪ್ರದೇಶಗಳ ದುರ್ಬಲ ವರ್ಗಗಳ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಎಷ್ಟೋ ಊರುಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳ ಸ್ವರೂಪವನ್ನೂ ಪಡೆದುಕೊಂಡಿವೆ. ಅಂಗನವಾಡಿಗಳಿಂದ ಹೊರಗುಳಿಯುವುದರಿಂದ ಮಕ್ಕಳ ಕಲಿಕೆಗಷ್ಟೇ ಪೆಟ್ಟುಬೀಳುವುದಿಲ್ಲ, ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೂ ಅಡಚಣೆ ಉಂಟಾಗುತ್ತದೆ. ನಗರ
ಪ್ರದೇಶಗಳಲ್ಲಿನ ಕೊಳೆಗೇರಿ, ಪರಿಶಿಷ್ಟ ಸಮುದಾಯಗಳ ವಸತಿಪ್ರದೇಶ, ಅಲ್ಪಸಂಖ್ಯಾತರು, ಬುಡಕಟ್ಟು, ಆದಿವಾಸಿ ಸಮುದಾಯಗಳು ವಾಸವಾಗಿರುವ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಒತ್ತು ನೀಡಬೇಕು ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸು, ಬಡ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಶಿಕ್ಷಣ ಎರಡನ್ನೂ ಪೂರೈಸುವ ಅಕ್ಷಯಪಾತ್ರೆಗಳಾಗಿ ಅಂಗನವಾಡಿಗಳು ಪರಿಣಮಿಸಿರುವುದನ್ನು ಸೂಚಿಸುತ್ತಿರುವಂತಿದೆ.

ರಾಜ್ಯದಲ್ಲಿ ಶಾಲೆಗಳಿಂದ ದೂರ ಉಳಿದಿರುವ 14 ವರ್ಷದೊಳಗಿನ 10.12 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಂಗನವಾಡಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಂಗನವಾಡಿಗಳಿಂದ ದೊಡ್ಡ ಸಂಖ್ಯೆಯ ಮಕ್ಕಳು ದೂರ ಉಳಿದಿರುವುದನ್ನು ಶೈಕ್ಷಣಿಕ ನಷ್ಟದ ಜೊತೆಗೆ ಸಾಮಾಜಿಕ ಸಮಸ್ಯೆಯ ರೂಪದಲ್ಲೂ ಪರಿಗಣಿಸಬೇಕು. ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಕೊರೊನಾ ಕಾರಣದಿಂದಾಗಿ ಗಮನಾರ್ಹ ವ್ಯತ್ಯಾಸವಾಗಿದೆ. ಕೊರೊನಾದೊಂದಿಗೆ ಹೊಂದಿಕೊಂಡು ಜೀವನ ನಿರ್ವಹಣೆ ಮಾಡುವುದು ಅನಿವಾರ್ಯವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಅಂಗನವಾಡಿಗಳನ್ನು ಕೊರೊನಾಪೂರ್ವ ಸ್ಥಿತಿಗೆ ತರಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ನಡೆಸಬೇಕು. ಅಂಗನವಾಡಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಚುರುಕುಗೊಳಿಸುವುದು ಅಗತ್ಯ. ಮಕ್ಕಳನ್ನು ಶಾಲೆಗಳಿಗೆ ಮರಳಿ ಕರೆತರುವುದರ ಜೊತೆಗೆ, ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸುವುದು ಸರ್ಕಾರಕ್ಕೆ ಆದ್ಯತೆಯ ವಿಷಯವಾಗಬೇಕು. ನೌಕರರ ವೇತನ, ಕಟ್ಟಡಗಳ ಬಾಡಿಗೆ, ತರಕಾರಿ ಮತ್ತು ಮೊಟ್ಟೆಗಳ ಖರೀದಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿರುವ ಹಲವು ಪ್ರಕರಣಗಳು ರಾಜ್ಯದ ವಿವಿಧ ಭಾಗಗಳಿಂದ ವರದಿಯಾಗಿವೆ. ಇಂಥ ದೂರುಗಳಿಗೆ ಆಸ್ಪದ ಕೊಡದಂತೆ ಅಂಗನವಾಡಿಗಳನ್ನು ಬಲಪಡಿಸಲು ಸರ್ಕಾರ ಕ್ರಿಯಾಶೀಲವಾಗಬೇಕು ಹಾಗೂ ಶಾಲಾಪೂರ್ವ ಶೈಕ್ಷಣಿಕ ಚಟುವಟಿಕೆಗಳಿಗೆ ಅನುದಾನದ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT