ಬುಧವಾರ, ಮೇ 12, 2021
18 °C

ಸಂಪಾದಕೀಯ: ಕೋವಿಡ್ ತಡೆ ಹೋರಾಟಕ್ಕೆ ಬಿಸಿಸಿಐ ಕೈಜೋಡಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಎರಡನೇ ಅಲೆಯ ಅಟ್ಟಹಾಸಕ್ಕೆ ಇಡೀ ದೇಶ ತತ್ತರಿಸಿದೆ. ಕೊರೊನಾ ಸೋಂಕಿನಿಂದ ಅಮೂಲ್ಯ ಜೀವಗಳನ್ನೂ ಕಳೆದುಕೊಳ್ಳುತ್ತಿದ್ದೇವೆ. ಸಾವಿರಾರು ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಇಂತಹ ಹೊತ್ತಿನಲ್ಲಿ ದೇಶದ ಜನರೊಂದಿಗೆ ನಿಲ್ಲಬೇಕಿದ್ದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂದುಕೊಡುವ ವರಮಾನವೇ ಮುಖ್ಯವಾಗಿ ಕಂಡಿತ್ತು.

ಹೀಗಾಗಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಬದಲು, ಆಟಗಾರರ ಜೀವವನ್ನೂ ಅಪಾಯಕ್ಕೆ ಒಡ್ಡಿ ಐಪಿಎಲ್‌ ಟೂರ್ನಿಯನ್ನು ನಡೆಸುವ ತೀರ್ಮಾನವನ್ನು ಮಾಡಿತ್ತು. ಆದರೆ, ಜೀವಸುರಕ್ಷಾ (ಬಯೊಬಬಲ್) ಪರದೆಯೂ ಹರಿದು ಕೆಲವು ಆಟಗಾರರಿಗೆ ಸೋಂಕು ತಗುಲಿದ್ದರಿಂದ ತಡವಾಗಿ ಎಚ್ಚೆತ್ತುಕೊಂಡ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಕೋಲ್ಕತ್ತ ನೈಟ್ ರೈಡರ್ಸ್‌, ಚೆನ್ನೈ ಸೂಪರ್ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ಆಟಗಾರರು ಮತ್ತು ನೆರವು ಸಿಬ್ಬಂದಿಯಲ್ಲಿ ಕೆಲವರಿಗೆ ಕೋವಿಡ್ ಖಚಿತಪಟ್ಟಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ. ಐಪಿಎಲ್‌ನಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ ಮತ್ತು ಕೇನ್ ರಿಚರ್ಡ್ಸನ್ ಅವರು ವಾರದ ಹಿಂದೆ ತಂಡಗಳನ್ನು ತೊರೆದು ಸ್ವದೇಶಕ್ಕೆ ಮರಳಿದ್ದರು.

ಆಗಲೇ ಎಚ್ಚೆತ್ತುಕೊಳ್ಳಬೇಕಿದ್ದ ಬಿಸಿಸಿಐಗೆ ₹ 3,300 ಕೋಟಿ ವರಮಾನ ತಂದುಕೊಡುವ ಟೂರ್ನಿಯನ್ನು ಸ್ಥಗಿತಗೊಳಿಸಲು ಕಿಂಚಿತ್ತೂ ಮನಸ್ಸಿರಲಿಲ್ಲ ಎನ್ನುವುದು ವಿದಿತ. ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ರೂಪುಗೊಂಡ ಹತ್ತು ಹಲವು ಸಂಗತಿಗಳಲ್ಲಿ ಕ್ರೀಡೆಯೂ ಒಂದು. ಅಂತಹ ಮೌಲ್ಯಗಳನ್ನೆಲ್ಲ ಮರೆತು ತನ್ನ ಮೋಜಿನಲ್ಲಿ ತಾನು ಮುಳುಗುವುದು ಬಿಸಿಸಿಐಗೆ ಶೋಭೆ ತರುವಂತಹ ನಡೆಯಾಗಿರಲಿಲ್ಲ.

ಮೂರು ವಾರಗಳಿಂದ ದೇಶದಲ್ಲಿ ಸೋಂಕು ಪ್ರಮಾಣ ವೇಗವಾಗಿ ಏರುತ್ತಿದ್ದರೂ ಅತ್ತ ಸ್ವಲ್ಪವೂ ಗಮನಹರಿಸದೆ ಐಪಿಎಲ್‌ನ ಪಂದ್ಯಗಳನ್ನು ನಡೆಸಲು ಜಗತ್ತಿನ ಅತ್ಯಂತ ಸಿರಿವಂತ ಕ್ರೀಡಾ ಮಂಡಳಿಗಳಲ್ಲಿ ಒಂದೆನಿಸಿದ ಬಿಸಿಸಿಐಗೆ ಹೇಗಾದರೂ ಮನಸ್ಸು ಬಂತು? ಉಳಿದಿರುವ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸುವ ಯೋಚನೆಯೂ ಅದಕ್ಕೆ ಇದ್ದಂತಿದೆ. ಆದರೆ ಕ್ರೀಡಾಂಗಣಗಳಲ್ಲಿ ಕಿಕ್ಕಿರಿದ ಜನರೆದುರು ಆಡುವಂತಹ ಪರಿಸ್ಥಿತಿ ಮರಳಿ ಬರುವವರೆಗೂ ಕ್ರಿಕೆಟ್‌ಗೆ ವಿರಾಮ ನೀಡುವುದು ಒಳಿತು. ಹಾಗೆಯೇ ಬಯೊಬಬಲ್ ಒತ್ತಡದಲ್ಲಿ ಆಟಗಾರರನ್ನು ತಳ್ಳುವುದು ಸರಿಯಲ್ಲ.

ಕೋವಿಡ್‌ ಅಬ್ಬರದ ನಡುವೆಯೂ ಐಪಿಎಲ್‌ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುವ ಕನಸು ಕಾಣುತ್ತಿದ್ದ ಬಿಸಿಸಿಐಗೆ ಹಿನ್ನಡೆಯಾಗಿದೆ ನಿಜ. ಆದರೆ ಜನಮಾನಸದಲ್ಲಿ ಗೌರವ ಮತ್ತು ವಿಶ್ವಾಸ ಗಳಿಸಿಕೊಳ್ಳಲು ಅದು ಈಗ ಕಾರ್ಯಪ್ರವೃತ್ತವಾಗಬೇಕು.

ಐಪಿಎಲ್‌ನಿಂದ ಸಿಕ್ಕ ವರಮಾನದಲ್ಲಿ ಒಂದು ಪಾಲನ್ನು ದೇಶದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ವಿನಿಯೋಗಿಸಬೇಕು. ಆಮ್ಲಜನಕ ಪೂರೈಕೆ, ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಯಂತಹ ಕೆಲಸಗಳಿಗೆ ಕೈಜೋಡಿಸಬೇಕು. ಕೋವಿಡ್‌ಪೀಡಿತ ಕುಟುಂಬಗಳಿಗೆ ಆಸರೆಯಾಗಬೇಕು. ಅನಾಥರಾಗಿರುವ ಮಕ್ಕಳ ಶಿಕ್ಷಣ, ಪೋಷಣೆಗೆ ನೆರವಾಗಬೇಕು. ದುಡ್ಡಿನ ಕೊರತೆ ಇಲ್ಲದ ಬಿಸಿಸಿಐಗೆ ಇದಕ್ಕೆ ಇಚ್ಛಾಶಕ್ತಿ ಬೇಕು. ತನ್ನ ಸುಪರ್ದಿಯಲ್ಲಿರುವ ಕ್ರೀಡಾಂಗಣಗಳು ಮತ್ತು ಸೌಲಭ್ಯಗಳನ್ನು ತಾತ್ಕಾಲಿಕ ಐಸೊಲೇಷನ್ ಕೇಂದ್ರಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನೂ ಸಮರ್ಥವಾಗಿ ನಿಭಾಯಿಸಬೇಕು.

ಕ್ರಿಕೆಟ್ ತಾರೆಯರು ಕೂಡ ಒಂದಿಷ್ಟು ದೇಣಿಗೆ ನೀಡಿ ಸುಮ್ಮನಾಗಬಾರದು. ಜನಸಮೂಹದಲ್ಲಿ ಜಾಗೃತಿ ಮೂಡಿಸಬೇಕು. ತಮ್ಮ ಖ್ಯಾತಿ, ವರ್ಚಸ್ಸು ಬಳಸಿಕೊಂಡು ಸರ್ಕಾರಗಳ ಮೇಲೆ ಒತ್ತಡ ಹೇರಿ ಜನರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಕೊಡಿಸಲು ಶ್ರಮಿಸಬೇಕು. ತಾವು ತಾರೆಗಳಾಗಿ ಬೆಳೆಯಲು ಕಾರಣರಾದ ದೇಶದ ಜನರ ಋಣ ತೀರಿಸಬೇಕಾದ ಸಮಯ ಇದು. ಯುವಸಮೂಹದ ನಿಜವಾದ ಐಕಾನ್‌ಗಳಾಗಿ ಆಟಗಾರರು ಕೆಲಸ ಮಾಡಬೇಕು.

ಒಲಿಂಪಿಕ್ಸ್‌ನಂತಹ ದೊಡ್ಡ ಕ್ರೀಡಾಕೂಟವೇ ರದ್ದಾಗುವ ಸಾಧ್ಯತೆ ಇರುವ ಕಾಲದಲ್ಲಿ ಐಪಿಎಲ್‌ ಪಂದ್ಯಗಳನ್ನು ನಿಲ್ಲಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ. ಅಕ್ಟೋಬರ್‌ನಲ್ಲಿ ಕೋವಿಡ್ ಮೂರನೇ ಅಲೆ ಭಾರತದಲ್ಲಿ ದಾಳಿ ಮಾಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದ್ದರಿಂದ ಅದೇ ಸಂದರ್ಭದಲ್ಲಿ ಭಾರತದಲ್ಲಿ ಆಯೋಜನೆಗೊಳ್ಳಬೇಕಿರುವ ಟಿ20 ವಿಶ್ವಕಪ್ ಟೂರ್ನಿಯ ಕುರಿತು ಬಿಸಿಸಿಐ ಈಗಲೇ ನಿರ್ಧರಿಸುವುದು ಒಳಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು