ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೊರೊನಾ ಸಂಕಷ್ಟ: ದ್ವೇಷದ ಉರಿ ನಂಜಿನ ಮಾತು ಅಪಾಯಕಾರಿ

Last Updated 9 ಏಪ್ರಿಲ್ 2020, 2:46 IST
ಅಕ್ಷರ ಗಾತ್ರ

ವೈರಾಣುವಿನಿಂದ ಸೃಷ್ಟಿಯಾಗಿರುವುದು ಆರೋಗ್ಯ ಬಿಕ್ಕಟ್ಟು. ಇದನ್ನು ಸಮುದಾಯಗಳ ನಡುವಿನ ಬಿಕ್ಕಟ್ಟನ್ನಾಗಿ ಪರಿವರ್ತಿಸಲು ಅವಕಾಶ ನೀಡಿದರೆ ಅಪಾಯ ಕಟ್ಟಿಟ್ಟಬುತ್ತಿ

ಕೊರೊನಾ ಸಂಕಷ್ಟದ ದವಡೆಯಿಂದ ಹೊರಬರಲು ದೇಶಕ್ಕೆ ದೇಶವೇ ಅಸಾಧಾರಣ ಒಗ್ಗಟ್ಟು ಹಾಗೂ ಸಂಯಮವನ್ನು ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಅಸಹನೆ ಮೂಡಿಸುವ ಮಾತುಗಳಲ್ಲಿ ಕೆಲವರು ತೊಡಗಿಕೊಂಡಿರುವುದು ಖಂಡನೀಯ.

ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ನಡೆದ ತಬ್ಲೀಗ್‌ ಸಂಘಟನೆಯ ಸಭೆಯಲ್ಲಿ ಭಾಗವಹಿಸಿದ್ದ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದನ್ನು ನೆಪವಾಗಿ ಬಳಸಿಕೊಂಡು, ನಿರ್ದಿಷ್ಟ ಸಮುದಾಯವು ರೋಗ ಪ್ರಸರಣದಲ್ಲಿ ತೊಡಗಿದೆ ಎಂದು ಹೇಳುವುದು ಹಾಗೂ ಜನರಿಗೆ ತಪ್ಪು ಮಾಹಿತಿ ನೀಡುವುದು ಅಮಾನವೀಯವೂ ಹೌದು, ಕಾನೂನುಬಾಹಿರ ಕೃತ್ಯವೂ ಹೌದು. ‘ಒಂದೆರಡು ಘಟನೆಗಳನ್ನು ಉಲ್ಲೇಖಿಸಿ ಇಡೀ ಮುಸ್ಲಿಂ ಸಮುದಾಯದ ಮೇಲೆ ಆರೋಪ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಕೆ ನೀಡಿರುವುದು ಸರಿಯಾಗಿಯೇ ಇದೆ. ಇತ್ತೀಚೆಗೆ ತಾವು ಕರೆದಿದ್ದ ಮುಸ್ಲಿಂ ಸಮುದಾಯದ ಪ್ರತಿನಿಧಿಗಳ ಸಭೆಯ ನಂತರ, ‘ಮುಸ್ಲಿಂ ಸಮುದಾಯದ ವಿರುದ್ಧ ಯಾರೊಬ್ಬರೂ ಮಾತನಾಡದಂತೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಎಲ್ಲಿಯೋ ನಡೆದ ಘಟನೆಯ ಹೊಣೆಯನ್ನು ಇಡೀ ಮುಸ್ಲಿಂ ಸಮುದಾಯದ ಮೇಲೆ ಹೊರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮುಖ್ಯಮಂತ್ರಿಯ ಈ ಎಚ್ಚರಿಕೆಯ ನಂತರವೂ ಅವರ ನಿಕಟವರ್ತಿಗಳೇ ಒಡಕು ಮಾತುಗಳನ್ನಾಡುವ ಮೂಲಕ ಪರಿಸ್ಥಿತಿಯನ್ನುಹದಗೆಡಿಸುವ ಕೆಲಸ ಮಾಡಿದ್ದಾರೆ. ‘ತಬ್ಲೀಗ್‌ ಸಭೆಗೆ ಹೋಗಿ ಬಂದು ಚಿಕಿತ್ಸೆಗೆ ಸಹಕರಿಸದೇ ಇರುವವರನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದರೆ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ತಬ್ಲೀಗ್‌ ಸಂಘಟನೆಯ ಸಮಾವೇಶ ‘ಕೊರೊನಾ ಜಿಹಾದ್‌’ನಂತೆ ಕಾಣಿಸಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾಜವನ್ನು ಸೌಹಾರ್ದಯುತವಾಗಿ ಮುನ್ನಡೆಸಬೇಕಾಗಿದ್ದ ಪ್ರತಿನಿಧಿಗಳು, ತಮ್ಮ ಎಂದಿನ ಮತಾಂಧತೆಯ ಮಾತುಗಾರಿಕೆಯಲ್ಲಿ ತೊಡಗಿರುವುದನ್ನುನೋಡಿದರೆ, ಒಂದೋ ಅವರಿಗೆ ಪರಿಸ್ಥಿತಿಯ ಸಂಕೀರ್ಣತೆ ಅರ್ಥವಾಗಿಲ್ಲ, ಇಲ್ಲವೇ ಬಿಕ್ಕಟ್ಟಿನ ಸಂದರ್ಭದಲ್ಲೂ ಪ್ರಜ್ಞಾಪೂರ್ವಕವಾಗಿ ಧಾರ್ಮಿಕ ಧ್ರುವೀಕರಣದ ರಾಜಕಾರಣ ಮಾಡುವುದನ್ನು ಬಿಟ್ಟಿಲ್ಲ ಎಂದೇ ಹೇಳಬೇಕಾಗುತ್ತದೆ.

ಇದೇ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಅಖಿಲ ಭಾರತೀಯ ಹಿಂದೂ ಮಹಾಸಭಾ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆ ಅವರನ್ನು ಲಖನೌನಲ್ಲಿ ಪೊಲೀಸರು ಬಂಧಿಸಿದ್ದಾರೆ. ತಬ್ಲೀಗ್‌ ಸಂಘಟನೆಯ ಸದಸ್ಯರಿಗೆ ಗುಂಡಿಕ್ಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂಜಾ ಪತ್ರ ಬರೆದು ಆಗ್ರಹಿಸಿದ್ದರು. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ತಮ್ಮದೇ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿಯನ್ನು ಯಡಿಯೂರಪ್ಪನವರೂ ಪ್ರದರ್ಶಿಸಬೇಕಾಗಿದೆ.

ಸೋಂಕಿನ ಪರೀಕ್ಷೆಯಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವವರು, ಚಿಕಿತ್ಸೆ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸುವವರು ಅಥವಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಕರಿಸದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ವಿವೇಕಿಗಳಾರೂ ವಿರೋಧಿಸಲಾರರು. ಆದರೆ, ಕೆಲವರ ಉಪದ್ವ್ಯಾಪಗಳಿಗೆ ಒಂದು ಸಮುದಾಯವನ್ನೇ ಹೊಣೆ ಮಾಡುವುದು ವಿವೇಚನೆಯ ನಡೆಯಲ್ಲ. ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕೆಲವರಿಗೆ ಸೋಂಕು ತಗುಲಿರುವುದು ನಿಜ. ಅಂತಹವರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಪ್ರಸಕ್ತ ಸಂದರ್ಭದ ಆದ್ಯತೆಯಾಗಬೇಕೇ ವಿನಾ, ಆ ನೆಪದಲ್ಲಿ ಸಮುದಾಯಗಳ ನಡುವೆ ಬೆಂಕಿ ಹಾಕುವ ಕೆಲಸವನ್ನು ಯಾರೂ ಮಾಡಬಾರದು.

ಕೊರೊನಾ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಜನಸಾಮಾನ್ಯರು ಜಾತಿ–ಧರ್ಮ ಮರೆತು ಒಂದಾಗಿ ದುಡಿಯುತ್ತಿದ್ದಾರೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಸಮಾಜದ ಸ್ವಾಸ್ಥ್ಯ ಕಾಪಾಡಲು ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. ಸೋಂಕು ಪ್ರಸರಣಕ್ಕೆ ಅವಕಾಶ ಕಲ್ಪಿಸಬಾರದೆಂದೇ, ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಐತಿಹಾಸಿಕ ಕರಗ ಉತ್ಸವ ರದ್ದಾಗಿದೆ. ಮಹಾವೀರ ಜಯಂತಿಯ ಆಚರಣೆ ಕೂಡ ಮನೆಗೆ ಸೀಮಿತವಾಗಿತ್ತು.

ಇದೇ ರೀತಿ, ಏಪ್ರಿಲ್ 9ರ ಷಬ್‌–ಎ–ಬರಾತ್‌ ಹಾಗೂ ಏ. 10ರ ಗುಡ್‌ ಫ್ರೈಡೆ ಆಚರಣೆಯನ್ನು ಮನೆಗಳಿಗೆ ಸೀಮಿತಗೊಳಿಸುವ ವಿವೇಕವನ್ನು ಆಯಾ ಸಮುದಾಯದವರು ಪ್ರದರ್ಶಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆಯನ್ನು ಕೈಬಿಟ್ಟು ಮನೆಗಳಲ್ಲಿಯೇ ಧಾರ್ಮಿಕ ಆಚರಣೆಗೆ ಮುಂದಾಗಿದ್ದಾರೆ. ಇಂಥ ಹೊಂದಾಣಿಕೆಯ ನಡುವೆಯೂ ಯಾರಾದರೂ ಕಾನೂನು ಉಲ್ಲಂಘಿಸಿದರೆ ಅವರನ್ನು ದಂಡನೆಗೆ ಗುರಿಪಡಿಸಬೇಕೇ ವಿನಾ, ಅವರ ಧರ್ಮವನ್ನಲ್ಲ. ಕೊರೊನಾ ವೈರಾಣುವಿನಿಂದಾಗಿ ಸೃಷ್ಟಿಯಾಗಿರುವುದು ಆರೋಗ್ಯ ಬಿಕ್ಕಟ್ಟು. ಇದನ್ನು ಸಮುದಾಯಗಳ ನಡುವಿನ ಬಿಕ್ಕಟ್ಟನ್ನಾಗಿ ಪರಿವರ್ತಿಸಲು ಅವಕಾಶ ನೀಡಿದರೆ ಅಪಾಯ ಕಟ್ಟಿಟ್ಟಬುತ್ತಿ.

ಇನ್ನಷ್ಟು...

(ಪ್ರತಿಕ್ರಿಯಿಸಿ:editpage@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT