ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವಿದ್ಯುತ್‌ ದರ ಏರಿಕೆ– ಜನರ ಮೇಲೆ ಎಳೆದ ಬರೆ

Published 15 ಮೇ 2023, 19:55 IST
Last Updated 15 ಮೇ 2023, 19:55 IST
ಅಕ್ಷರ ಗಾತ್ರ

ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಪರಿಣಾಮವಾಗಿ ಸಾಮಾನ್ಯ ಜನ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಜನರ ಮೇಲೆ ಮತ್ತೆ ವಿದ್ಯುತ್‌ ದರ ಏರಿಕೆಯ ಭಾರವೂ ಬಿದ್ದಿದೆ. ವರಮಾನದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್‌ ದರವನ್ನು ₹1.39ರಷ್ಟು ಹೆಚ್ಚಿಸುವಂತೆ ರಾಜ್ಯದ ಐದು ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳ ಕುರಿತು ಆಯೋಗವು ಸಾರ್ವಜನಿಕ ವಿಚಾರಣೆಗಳನ್ನು ನಡೆಸಿತ್ತು. ಆಯೋಗದ ಎದುರು ಹಾಜರಾಗಿದ್ದ ಬಹುತೇಕ ಗ್ರಾಹಕರು ದರ ಹೆಚ್ಚಳದ ಪ್ರಸ್ತಾವಗಳನ್ನು ವಿರೋಧಿಸಿದ್ದರು. ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 70 ಪೈಸೆಯಷ್ಟು ಹೆಚ್ಚಳ ಮಾಡಲು ಅನುಮತಿ ನೀಡಿ ಮೇ 12ರಂದು ಕೆಇಆರ್‌ಸಿ ಆದೇಶ ಹೊರಡಿಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ ವಿದ್ಯುತ್‌ನ ದರವನ್ನು 35 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಅಕ್ಟೋಬರ್‌ನಲ್ಲಿಯೂ ಇಂಧನ ಹೊಂದಾಣಿಕೆ ಶುಲ್ಕದ ಪರಿಷ್ಕರಣೆಯ ಮೂಲಕ ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆಯವರೆಗೂ ದರ ಹೆಚ್ಚಳ ಮಾಡಲಾಗಿತ್ತು. ಡಿಸೆಂಬರ್‌ ತಿಂಗಳಿನಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಮತ್ತು ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಮಾತ್ರ ಇಂಧನ ಹೊಂದಾಣಿಕೆ ಶುಲ್ಕ ಪರಿಷ್ಕರಣೆ ಮಾಡಿ ದರ ಕಡಿಮೆ ಮಾಡಲಾಗಿತ್ತು. ಈಗ ಪುನಃ ದರ ಹೆಚ್ಚಳಕ್ಕೆ ಅನುಮತಿ ನೀಡಿರುವ ಕೆಇಆರ್‌ಸಿ, ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗುವಂತೆ ಹೊಸ ದರವನ್ನು ವಿಧಿಸುವುದಕ್ಕೂ ಒಪ್ಪಿಗೆ ನೀಡಿದೆ. ರಾಜ್ಯದ ಬಹುತೇಕ ಎಲ್ಲ ಕುಟುಂಬಗಳೂ ವಿದ್ಯುತ್‌ ಅನ್ನು ಬಳಸುತ್ತಿವೆ. ಕೆಇಆರ್‌ಸಿಯ ನಿರ್ಧಾರದಿಂದ ಅಂತಹ ಎಲ್ಲ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಆಯೋಗವೇ ಅಂದಾಜಿಸಿರುವಂತೆ, ಗ್ರಾಹಕರ ‍ಪ್ರತಿ ತಿಂಗಳ ವಿದ್ಯುತ್‌ ಶುಲ್ಕದ ಮೊತ್ತದಲ್ಲಿ ಶೇಕಡ 8.31ರಷ್ಟು ಹೆಚ್ಚಳ ಆಗಲಿದೆ. ಎಲ್‌ಪಿಜಿ ಸಿಲಿಂಡರ್‌ ದರ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು ಮತ್ತು ಸೇವೆಗಳ ದರ ಹೆಚ್ಚುತ್ತಲೇ ಇದೆ. ಇದರಿಂದಾಗಿ ಜನ ತತ್ತರಿಸಿದ್ದಾರೆ. ವಿದ್ಯುತ್‌ ದರ ಹೆಚ್ಚಳಕ್ಕೆ ಕೆಇಆರ್‌ಸಿ ಅನುಮೋದನೆ ನೀಡಿರುವುದನ್ನು ಜನವಿರೋಧಿ ನಡೆ ಎಂದೇ ಪರಿಗಣಿಸಬೇಕಾಗುತ್ತದೆ.

ರಾಜ್ಯದ ಐದೂ ಎಸ್ಕಾಂಗಳಿಗೆ 2023–24ನೇ ಆರ್ಥಿಕ ವರ್ಷಕ್ಕೆ ₹62,133.47 ಕೋಟಿ ವರಮಾನದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಕೊರತೆಯಾಗುವ ₹8,951.20 ಕೋಟಿಯನ್ನು ಭರಿಸುವುದಕ್ಕಾಗಿ ದರ ಹೆಚ್ಚಳ ಮಾಡುವಂತೆ ಎಸ್ಕಾಂಗಳು ಕೋರಿದ್ದವು. ಈ ಅರ್ಜಿಗಳ ವಿಚಾರಣೆಯನ್ನು ಫೆಬ್ರುವರಿಯಲ್ಲೇ ನಡೆಸಿದ್ದ ಕೆಇಆರ್‌ಸಿ, ನಿರ್ಧಾರ ಪ್ರಕಟಣೆಯನ್ನು ಬಾಕಿ ಇರಿಸಿಕೊಂಡಿತ್ತು. ಬೆಲೆ ಏರಿಕೆ ಈ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಿತ್ತು. ಜನರು ಮತ ಚಲಾವಣೆಯಲ್ಲೂ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಳಿಕ ಬೆಲೆ ಏರಿಕೆ ಹೆಚ್ಚಳ ಆಗಿದೆ ಎಂಬ ವಿರೋಧ ಪಕ್ಷಗಳ ವಾದವನ್ನು ಒಪ್ಪುವಂತೆ ಮತ ಚಲಾವಣೆಯಲ್ಲಿಯೂ ನಿಲುವು ತಳೆದಿದ್ದರು. ಮತದಾನದವರೆಗೂ ವಿದ್ಯುತ್‌ ದರ ಹೆಚ್ಚಳದ ಪ್ರಸ್ತಾವಗಳನ್ನು ಬಾಕಿ ಇರಿಸಿಕೊಂಡಿದ್ದ ಕೆಇಆರ್‌ಸಿ, ಮತ ಎಣಿಕೆಯ ಮುನ್ನಾದಿನ ಅನುಮೋದನೆ ನೀಡಿರುವ ನಡೆಯೇ ಅದು ಜನಜೀವನದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಸೂಚಿಸುವಂತಿದೆ. ಕಲ್ಲಿದ್ದಲು ಖರೀದಿ ಮತ್ತು ಸಾಗಣೆ ವೆಚ್ಚ, ವಿದ್ಯುತ್‌ ಖರೀದಿ ವೆಚ್ಚ, ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ, ಹೂಡಿಕೆ ಮತ್ತು ಬ್ಯಾಂಕ್‌ ಸಾಲದ ಮೇಲಿನ ಬಡ್ಡಿ, ಸವಕಳಿ ಪ್ರಮಾಣದಲ್ಲಿನ ಹೆಚ್ಚಳವನ್ನು ಸರಿದೂಗಿಸುವುದಕ್ಕೆ ವಿದ್ಯುತ್‌ ದರ ಏರಿಕೆ ಅನಿವಾರ್ಯ ಎಂದು ಕೆಇಆರ್‌ಸಿ ಸಮರ್ಥಿಸಿಕೊಂಡಿದೆ. ರಾಜ್ಯದ ಎಸ್ಕಾಂಗಳಲ್ಲಿ ವಿದ್ಯುತ್‌ ಪ್ರಸರಣ ಮತ್ತು ವಿತರಣಾ ನಷ್ಟದ ಪ್ರಮಾಣ ಶೇಕಡ 12.95ರಷ್ಟಿದೆ ಎಂಬುದನ್ನೂ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. ಇದಲ್ಲದೇ, ರೈತರ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಪೂರೈಸುವ ವಿದ್ಯುತ್‌, ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಿದ್ಯುತ್‌ ಬಿಲ್‌ ಮೊತ್ತವೂ ಸೇರಿದಂತೆ ಹತ್ತಾರು ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರವು ಎಸ್ಕಾಂಗಳಿಗೆ ಬಾಕಿ ಇರಿಸಿಕೊಂಡಿದೆ. ಈ ಎಲ್ಲವೂ ಎಸ್ಕಾಂಗಳು ಅನುಭವಿಸುತ್ತಿರುವ ನಷ್ಟ ಮತ್ತು ವರಮಾನದ ಕೊರತೆಗೆ ಕಾರಣ. ಈ ಸಮಸ್ಯೆಗಳನ್ನು ಪರಿಹರಿಸಿ, ನಷ್ಟವನ್ನು ತಡೆಯುವುದಕ್ಕೆ ಕೆಇಆರ್‌ಸಿ ಕ್ರಮ ಕೈಗೊಳ್ಳಬೇಕಿತ್ತು. ಪ್ರಸರಣ ಮತ್ತು ವಿತರಣಾ ನಷ್ಟ ತಡೆಯಲು ಸಾಧ್ಯವಾಗದಿರುವುದು ಎಸ್ಕಾಂಗಳ ವೈಫಲ್ಯ. ಅದರ ಹೊರೆಯನ್ನು ಏಕೆ ಗ್ರಾಹಕರ ಮೇಲೆ ವರ್ಗಾಯಿಸಬೇಕು? ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ ಪೂರೈಸುವ ಭರವಸೆಯನ್ನು ಕಾಂಗ್ರೆಸ್‌ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿತ್ತು. ಈಗ ಅದೇ ಪಕ್ಷ ಬಹುಮತ ಗಳಿಸಿದೆ. ಹೊಸ ಸರ್ಕಾರ ರಚನೆ ಆಗುವವರೆಗಾದರೂ ಕೆಇಆರ್‌ಸಿ ತನ್ನ ನಿರ್ಧಾರ ಪ್ರಕಟಣೆಯನ್ನು ತಡೆಹಿಡಿಯಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಇಂಧನ ಇಲಾಖೆಯು ಮಧ್ಯ ಪ್ರವೇಶಿಸಿ, ಎಸ್ಕಾಂಗಳು ದರ ಹೆಚ್ಚಳವನ್ನು ಜಾರಿ ಮಾಡುವುದನ್ನು ತಡೆಯಬೇಕು. ನೂತನ ಸಂಪುಟ ಅಸ್ತಿತ್ವಕ್ಕೆ ಬಂದ ಬಳಿಕ, ದರ ಹೆಚ್ಚಳದ ಬದಲಿಗೆ ಪರ್ಯಾಯ ಕ್ರಮಗಳನ್ನು ತೆಗೆದುಕೊಂಡು ಜನರನ್ನು ಆರ್ಥಿಕ ಹೊರೆಯಿಂದ ರಕ್ಷಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT