ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆ ವಿಳಂಬಕ್ಕೆ ಸಕಾರಣಗಳಿಲ್ಲ

Published : 20 ಆಗಸ್ಟ್ 2024, 0:35 IST
Last Updated : 20 ಆಗಸ್ಟ್ 2024, 0:35 IST
ಫಾಲೋ ಮಾಡಿ
Comments

ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಚುನಾವಣೆ ಘೋಷಣೆ ಮಾಡುವುದರೊಂದಿಗೆ ದೇಶವು ಮತ್ತೊಂದು ಸುತ್ತು ಚುನಾವಣೆಗೆ ಸಜ್ಜಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ದೀರ್ಘಕಾಲದಿಂದ ಹಿಂದೆಮುಂದೆ ನೋಡುತ್ತಿತ್ತು. ಹೀಗಾಗಿ, ಅಲ್ಲಿ ಚುನಾವಣೆ ನಡೆಯುವುದು ಅನಿಶ್ಚಿತವಾಗಿತ್ತು. ಅಲ್ಲಿ ಚುನಾವಣೆ ನಡೆದು ಹತ್ತು ವರ್ಷಗಳಾಗಿವೆ; ಜೊತೆಗೆ ಅಲ್ಲಿನ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಹೀಗಾಗಿ, ಅಲ್ಲಿ ಚುನಾವಣೆಯನ್ನು ಮತ್ತೆ ಮುಂದಕ್ಕೆ ಹಾಕಿದರೆ ವಿವರಣೆ ಕೊಡುವುದು ಕಷ್ಟವಿತ್ತು. ಸೆಪ್ಟೆಂಬರ್‌ 18, 25 ಮತ್ತು ಅಕ್ಟೋಬರ್‌ 1ರಂದು ಮತದಾನ  ನಡೆಯಲಿದೆ. ಮೂರೇ ಹಂತಗಳಲ್ಲಿ ಮತದಾನ ನಿಗದಿ ಮಾಡಿರುವುದು ಚುನಾವಣಾ ಆಯೋಗದ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಹಾಗಿದ್ದರೂ ಭದ್ರತೆಯು ದೊಡ್ಡ ಸವಾಲೇ ಆಗಿದೆ. ಜಮ್ಮು ಪ್ರದೇಶದಲ್ಲಿಯಂತೂ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನಾ ಚಟುವಟಿಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಚುನಾವಣಾ ಪ್ರಚಾರ ಮತ್ತು ಚುನಾವಣಾ ‍ಪ್ರಕ್ರಿಯೆಗೆ ಅಡ್ಡಿ ಉಂಟುಮಾಡುವ ಪ್ರಯತ್ನಗಳು ನಡೆಯಬಹುದು. ಈ ಎಲ್ಲವುಗಳ ಕುರಿತು ಚುನಾವಣಾ ಆಯೋಗವು ಹೆಚ್ಚು ಜಾಗೃತವಾಗಿ ಇರಬೇಕು. ಜಮ್ಮು–ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಿಕೆ ಕುರಿತು ಒಂದೇ ಒಂದು ಮಾತು ಈವರೆಗೆ ಬಂದಿಲ್ಲ ಎಂಬುದೂ ಗಮನಾರ್ಹ.  

ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 1ರಂದು ಮತದಾನ ನಡೆಯಲಿದೆ. ಜಮ್ಮು–ಕಾಶ್ಮೀರ ಮತ್ತು ಹರಿಯಾಣದ ಚುನಾವಣಾ ಫಲಿತಾಂಶವು ಅಕ್ಟೋಬರ್‌ 4ರಂದು ಪ್ರಕಟವಾಗಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮಹತ್ವ ಪಡೆದುಕೊಂಡಿದೆ. ಹರಿಯಾಣದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದ ಚಾಲಕ ಸ್ಥಾನದಲ್ಲಿಯೂ ಬಿಜೆಪಿ ಇದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಹಾಗಾಗಿ ಈ ರಾಜ್ಯಗಳ ವಿಧಾನಸಭೆ ಚುನಾವಣೆಯು ರಾಜಕೀಯವಾಗಿ ಆಸಕ್ತಿ ಕೆರಳಿಸಿದೆ. ಈ ಎರಡೂ ರಾಜ್ಯಗಳಲ್ಲಿ ಮಹಾ ವಿಕಾಸ್‌ ಆಘಾಡಿ ಮತ್ತು ಕಾಂಗ್ರೆಸ್‌ ಪಕ್ಷವು ಉತ್ತಮ ಸಾಧನೆ ಮಾಡಿವೆ. ಹಾಗಾಗಿಯೇ ಈ ರಾಜ್ಯಗಳ ಚುನಾವಣಾ ಫಲಿತಾಂಶವು ರಾಷ್ಟ್ರೀಯ ಮಹತ್ವ ಪಡೆದುಕೊಂಡಿದೆ.  

ಕಳೆದ ಬಾರಿ, ಅಂದರೆ 2019ರಲ್ಲಿ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಜೊತೆಯಾಗಿಯೇ ಚುನಾವಣೆ ನಡೆದಿತ್ತು. ಆದರೆ, ಈ ಬಾರಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಆಯೋಗವು ಪ್ರಕಟಿಸಿಲ್ಲ. ಜಮ್ಮು–ಕಾಶ್ಮೀರ ಮತ್ತು ಹರಿಯಾಣದ ಚುನಾವಣೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಿರುವುದರಿಂದ ಏಕಕಾಲಕ್ಕೆ ಒಂದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ಚುನಾವಣೆ ನಡೆಸಲು ಆಯೋಗವು ನಿರ್ಧರಿಸಿರಬಹುದು. ಜೊತೆಗೆ, ಮಹಾರಾಷ್ಟ್ರದಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ ಹಾಗೂ ಹಲವು ಹಬ್ಬಗಳು ಇವೆ. ಇವು ಕೂಡ ಇತರ ಕಾರಣಗಳು ಆಗಿರಬಹುದು. ಆದರೆ, ಇವು ನಂಬಲರ್ಹವಾದ ಕಾರಣಗಳೇನೂ ಅಲ್ಲ. ಮಹಾರಾಷ್ಟ್ರವು ರಾಜಕೀಯವಾಗಿ ಹರಿಯಾಣಕ್ಕಿಂತ ಹೆಚ್ಚು ಮಹತ್ವವಾದುದು. ಹಾಗಾಗಿಯೇ ಆಯೋಗದ ನಿರ್ಧಾರವು ಅಹಿತಕರವಾದ ಪ್ರಶ್ನೆಗಳನ್ನು ಎತ್ತುತ್ತದೆ. ಪ್ರಧಾನಿಯವರಿಗೆ ಪ್ರಚಾರಕ್ಕೆ ಹೆಚ್ಚು ಸಮಯ ಸಿಗುವ ರೀತಿಯಲ್ಲಿ ಅಥವಾ ಸರ್ಕಾರವು ಹೆಚ್ಚು ಹೆಚ್ಚು ಯೋಜನೆಗಳನ್ನು ಘೋಷಿಸಲು ಅನುಕೂಲ ಆಗುವ ರೀತಿಯಲ್ಲಿ ಚುನಾವಣಾ ವೇಳಾಪಟ್ಟಿ ಸಿದ್ಧಪಡಿಸಿದೆ ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಈ ಹಿಂದೆ ಟೀಕೆಗೆ ಒಳಗಾಗಿತ್ತು. ಮಹಾರಾಷ್ಟ್ರ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಘೋಷಿಸಲು ಅಥವಾ ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಸುಧಾರಿಸಲು ಚುನಾವಣೆ ಘೋಷಣೆಯಲ್ಲಿನ ವಿಳಂಬವು ಅವಕಾಶ ಕೊಟ್ಟಿದೆ ಎಂಬ ಟೀಕೆಗೆ ಈ ಬಾರಿಯೂ ಆಯೋಗವು ಗುರಿಯಾಗಬಹುದು. ‘ಒಂದು ದೇಶ, ಒಂದು ಚುನಾವಣೆ’ ದೇಶಕ್ಕೆ ಅಗತ್ಯವಾಗಿದೆ ಎಂದು ಪ್ರಧಾನಿಯವರು ಪ್ರತಿಪಾದನೆ ಮಾಡಿದ ಮೂರೇ ದಿನಕ್ಕೆ, ಒಂದು ಕೇಂದ್ರಾಡಳಿತ ಪ್ರದೇಶ ಮತ್ತು ಎರಡು ರಾಜ್ಯಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿರುವುದು ವಿರೋಧಾಭಾಸಕರವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT