ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಮಾದಕ ವಸ್ತು ಜಾಲ ಸಮಗ್ರ ತನಿಖೆ ನಡೆಯಲಿ

Last Updated 7 ಸೆಪ್ಟೆಂಬರ್ 2020, 20:03 IST
ಅಕ್ಷರ ಗಾತ್ರ

ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆಯು ಬೆಂಗಳೂರಿಗೆ ಹೊಸದೇನೂ ಅಲ್ಲ. ಅಷ್ಟೇ ಅಲ್ಲದೆ, ಅದು ಸಿನಿಮಾ ಕ್ಷೇತ್ರ ಸೇರಿದಂತೆ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾದುದೂ ಅಲ್ಲ. ಡ್ರಗ್ಸ್ ಬಳಕೆಗೆ ಬಡವ–ಬಲ್ಲಿದ ಎಂಬ ಭೇದವೂ ಇಲ್ಲ. ‍ಪ್ರತಿವರ್ಷ ಇಲ್ಲಿ ನೂರಾರು ಪ್ರಕರಣಗಳು ವರದಿಯಾಗುತ್ತವೆ.ಆದರೆ, ಈ ಬಾರಿ ಚಿತ್ರನಟಿ ಮತ್ತು ಅವರ ಸಹವರ್ತಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿರುವುದರಿಂದ ಹೆಚ್ಚಿನ ಪ್ರಚಾರ ಪಡೆದುಕೊಂಡಿದೆ. ಡ್ರಗ್ಸ್ ಪೂರೈಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಬಂಧಿಸಿರುವ ಕಿರುತೆರೆ ನಟಿಯೊಬ್ಬರು ಬಹಿರಂಗಪಡಿಸಿದ್ದ ಮಾಹಿತಿಯ ಆಧಾರದಲ್ಲಿ ಬೆಂಗಳೂರು ನಗರದ ಸಿಸಿಬಿ ಪೊಲೀಸರು ನಟಿ ರಾಗಿಣಿ ಮತ್ತು ಇತರ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಗಿಣಿ ಮತ್ತು ಅವರ ಸ್ನೇಹಿತರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ತನಿಖಾ ತಂಡದಿಂದ ಸೋರಿಕೆಯಾಗುತ್ತಿರುವ ಸಂಗತಿಗಳೇ ಹೆಚ್ಚು ಪ್ರಚಾರ ಪಡೆಯುತ್ತಿವೆ. ರಾಜ್ಯದಲ್ಲಿನ ಸಿನಿಮಾ ನಟ–ನಟಿಯರು, ಸಂಗೀತ ಕಲಾವಿದರು, ಗಣ್ಯ ವ್ಯಕ್ತಿಗಳ ಮಕ್ಕಳು ಮತ್ತು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ ಎಂದು ಎನ್‌ಸಿಬಿ ಹೇಳಿದೆ. ಈಗ ಪತ್ತೆಯಾಗಿರುವ ಡ್ರಗ್ಸ್‌ ಪೂರೈಕೆ ಜಾಲದ ಹಿಂದೆ ‘ಪ್ರಭಾವಿ’ ವ್ಯಕ್ತಿಗಳಿದ್ದಾರೆ ಎಂದು ರಾಜ್ಯದ ಸಚಿವರೇ ಹೇಳಿದ್ದಾರೆ. ಆದರೆ, ಡ್ರಗ್ಸ್‌ ಪೂರೈಕೆ ಜಾಲವನ್ನು ನಿಯಂತ್ರಿಸುತ್ತಿರುವವರು ಮತ್ತು ಅದರಿಂದ ದೊಡ್ಡ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತಿರುವವರನ್ನು ಪತ್ತೆಮಾಡುವ ಪ್ರಯತ್ನವೇ ತನಿಖಾ ತಂಡದಿಂದ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಮಾದಕವಸ್ತು ಪೂರೈಕೆ, ಸಾಗಣೆ ಮತ್ತು ಸೇವನೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದನ್ನು ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿ ತನ್ನ 2019ರ ವರದಿಯಲ್ಲಿ ದೃಢಪಡಿಸಿದೆ. ಬೆಂಗಳೂರು ನಗರ ಸೇರಿದಂತೆ ಕರ್ನಾಟಕ ರಾಜ್ಯವೂ ಇದರಿಂದ ಹೊರತಾಗಿಲ್ಲ. ವಿದೇಶಗಳಿಂದ ಪೂರೈಕೆಯಾಗುವುದಕ್ಕಿಂತಲೂ ಹೆಚ್ಚು ಮಾದಕವಸ್ತುಗಳು ಭಾರತದೊಳಗೇ ಉತ್ಪಾದನೆಯಾಗುತ್ತಿವೆ ಎಂದು ಮಂಡಳಿ ಹೇಳಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳೆದ ಮಾರ್ಚ್‌ನಲ್ಲಿ ವಿಧಾನಮಂಡಲದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 2017ರಿಂದ 2019ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಮಾದಕವಸ್ತುಗಳಿಗೆ ಸಂಬಂಧಿಸಿದಂತೆ 1,408 ಅಪರಾಧ ಪ್ರಕರಣಗಳು ದಾಖಲಾಗಿವೆ. ಸಿನಿಮಾ ನಟ–ನಟಿಯರು ಅಥವಾ ಇನ್ನಿತರ ಗಣ್ಯ ವ್ಯಕ್ತಿಗಳು ಇಂತಹ ಪ್ರಕರಣದಲ್ಲಿ ಸಿಲುಕಿದಾಗ ಮಾತ್ರವೇ ಹೆಚ್ಚು ಸುದ್ದಿಯಾಗಿ, ಅಷ್ಟೇ ಬೇಗ ತೆರೆಮರೆಗೆ ಸರಿದುಬಿಡುತ್ತದೆ.

ಎಳೆಯ ಮಕ್ಕಳು, ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಕೇಂದ್ರೀಕರಿಸಿಕೊಂಡು ಡ್ರಗ್ಸ್‌ ಮಾರಾಟ ದಂಧೆ ನಡೆಯುತ್ತಿದೆ ಎಂಬುದು ಗಂಭೀರವಾಗಿ ಪರಿಗಣಿಸಬೇಕಾಗಿರುವ ಸಂಗತಿ. ಮಾದಕವಸ್ತುಗಳ ಪೂರೈಕೆ, ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ಸ್ಥಳೀಯ ಪೊಲೀಸ್‌ ಠಾಣೆಗಳ ಜತೆಗೆ ಎಲ್ಲ ನಗರಗಳು ಹಾಗೂ ಜಿಲ್ಲೆಗಳಲ್ಲಿ ಪ್ರತ್ಯೇಕ ಪೊಲೀಸ್‌ ಠಾಣೆಗಳನ್ನು ಆರಂಭಿಸಲಾಗಿದೆ. ಸಿಐಡಿ, ಸಿಸಿಬಿಯಲ್ಲೂ ಪ್ರತ್ಯೇಕ ಘಟಕಗಳಿವೆ. ಆದರೂ, ಈ ದಂಧೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಮಾದಕವಸ್ತುಗಳ ಜಾಲದ ನಿಯಂತ್ರಣಕ್ಕೆ ಸ್ಥಳೀಯ ಪೊಲೀಸರು ನಿರಾಸಕ್ತಿ ಹೊಂದಿರುವುದು ಹಾಗೂ ತನಿಖಾ ತಂಡಗಳಿಗೆ ಆರ್ಥಿಕ, ತಾಂತ್ರಿಕ ಬೆಂಬಲ ಇಲ್ಲದೇ ಇರುವುದು ಈ ವಿಚಾರದಲ್ಲಿ ಹಿನ್ನಡೆಯಾಗಲು ಕಾರಣ ಎಂಬ ಮಾತುಗಳು ಪೊಲೀಸ್‌ ಇಲಾಖೆಯೊಳಗಿನಿಂದಲೇ ಕೇಳಿಬರುತ್ತಿವೆ. ಯುವ ತಲೆಮಾರಿನ ಭವಿಷ್ಯವನ್ನೇ ಮುರುಟಿಸುವ ಮಾದಕ ವಸ್ತು ಪೂರೈಕೆ ಜಾಲವನ್ನು ಬಗ್ಗುಬಡಿಯುವ ವಿಚಾರದಲ್ಲಿ ಇಂತಹ ಅಸಡ್ಡೆ ಸರಿಯಲ್ಲ.

ಜಾಲವನ್ನು ಬಗ್ಗುಬಡಿಯುವುದರ ಜತೆಗೆ, ಯುವ ಜನರು ಡ್ರಗ್ಸ್‌ನತ್ತ ಹೋಗದಂತೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕಿದೆ. ಮಾದಕವಸ್ತು ನಿಯಂತ್ರಣ ಕುರಿತು ಅಧ್ಯಯನ ನಡೆಸಿ 2012ರಲ್ಲಿ ವರದಿ ಸಲ್ಲಿಸಿದ್ದ ವಿಧಾನಸಭೆಯ ಅಂದಿನ ಉಪಾಧ್ಯಕ್ಷ ಎನ್‌.ಯೋಗೀಶ್‌ ಭಟ್‌ ನೇತೃತ್ವದ ಸಮಿತಿ ಈ ಸಂಬಂಧ ಹಲವು ಶಿಫಾರಸುಗಳನ್ನು ಮಾಡಿತ್ತು. ಅವು ಇಂದಿಗೂ ಕಡತದಲ್ಲೇ ಉಳಿದಿವೆ. ಮಾದಕವಸ್ತುಗಳ ಬಳಕೆಯ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಶಾಲೆ, ಕಾಲೇಜುಗಳಲ್ಲಿ ಈ ಜಾಲ ತನ್ನ ಕರಾಳಹಸ್ತ ಚಾಚದಂತೆ ಎಚ್ಚರ ವಹಿಸಬೇಕಿದೆ. ಮಾದಕವಸ್ತುಗಳಿಗೆ ಸಂಬಂಧಿಸಿದಂತೆ ದಾಖಲಾಗುವ ಎಲ್ಲ ಪ್ರಕರಣಗಳಲ್ಲೂ ನಿಷ್ಪಕ್ಷಪಾತ ತನಿಖೆ ನಡೆಸಿ, ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಆಗ ಮಾತ್ರ ಡ್ರಗ್ಸ್‌ ಜಾಲದಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT