ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ

ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ
Published 9 ಜನವರಿ 2024, 19:28 IST
Last Updated 9 ಜನವರಿ 2024, 19:28 IST
ಅಕ್ಷರ ಗಾತ್ರ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶದ ಸಾಧನೆ ಮಾಡಿಯೇ ತೀರುವಂತೆ ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಮೇಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಕೆಲವು ಉಪನಿರ್ದೇಶಕರು ಹೇರುತ್ತಿರುವ ಒತ್ತಡ ಅನಾರೋಗ್ಯಕರವಾದುದು. 2023–24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ನೀಡುವುದಕ್ಕೆ ಬದ್ಧರಾಗಿರುತ್ತೇವೆ, ಕಳಪೆ ಫಲಿತಾಂಶ ಬಂದರೆ ಶಿಸ್ತುಕ್ರಮ ಅನುಭವಿಸುತ್ತೇವೆ ಎನ್ನುವ ಅರ್ಥದ ಮುಚ್ಚಳಿಕೆಯನ್ನು ಪಿಯು ಕಾಲೇಜುಗಳ ಪ್ರಾಂಶುಪಾಲರು ಮತ್ತು ವಿಷಯವಾರು ಉಪನ್ಯಾಸಕರಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಬರೆಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮುಚ್ಚಳಿಕೆ ಪತ್ರದ ನಮೂನೆಯನ್ನು ಉಪನಿರ್ದೇಶಕರ ಕಚೇರಿಯಿಂದಲೇ ಮುದ್ರಿಸಿ ಕಾಲೇಜುಗಳಿಗೆ ಕಳುಹಿಸಿಕೊಡ
ಲಾಗಿದೆ ಎಂದು ಹೇಳಲಾಗಿದೆ. ಕಾಲೇಜುಗಳಿಂದ ಉತ್ತಮ ಫಲಿತಾಂಶ ಅಪೇಕ್ಷಿಸುವುದು ಹಾಗೂ ನೂರಕ್ಕೆ ನೂರರಷ್ಟು ಫಲಿತಾಂಶ ಸಾಧನೆ ಮಾಡುವಂತೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಅಧಿಕಾರಿಗಳು ಪ್ರೇರೇಪಿಸುವುದು ತಪ್ಪೇನಲ್ಲ.

ಆದರೆ, ಉದ್ದೇಶ ಸಾಧನೆಗಾಗಿ ಅವರು ಅನುಸರಿಸುತ್ತಿರುವ ಮಾರ್ಗ ಅತಿರೇಕದ್ದಾಗಿದೆ ಹಾಗೂ ಶೇ 100ರ ಸಾಧನೆಯಷ್ಟೇ ಉತ್ತಮ ಫಲಿತಾಂಶದ ಮಾನದಂಡ ಎನ್ನುವ ಅವರ ನಂಬಿಕೆಯೂ ತಪ್ಪು ತಿಳಿವಳಿಕೆಯಿಂದ ಕೂಡಿದುದಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಸೃಜನಶೀಲತೆಯ ವಿಕಾಸಕ್ಕೆ ಪೂರಕವಾಗಿ ವಿದ್ಯಾಸಂಸ್ಥೆ ಗಳನ್ನು ರೂಪಿಸಬೇಕೇ ಹೊರತು, ಕಾಲೇಜುಗಳನ್ನು ಯುದ್ಧಭೂಮಿಗಳನ್ನಾಗಿ ಪರಿವರ್ತಿಸಬಾರದು. ಕಾಗದದ ಮೇಲಿನ ಫಲಿತಾಂಶದಿಂದ ವಿದ್ಯಾರ್ಥಿಗಳಿಗಾಗಲೀ ಸಮಾಜಕ್ಕಾಗಲೀ ಹೆಚ್ಚಿನ ಉಪಯೋಗ ಇಲ್ಲ. ಉತ್ತಮ ಫಲಿತಾಂಶ ಸಾಧನೆಯ ಹೆಸರಿನ ಅತಿ ರೇಕದ ಕ್ರಮಗಳು ಶಿಕ್ಷಣ ಕ್ಷೇತ್ರವನ್ನು ಹಾನಿಗೊಳಿಸುವ ಸಾಧ್ಯತೆಯೇ ಹೆಚ್ಚು. ಪ್ರತಿಶತ ನೂರರ ಫಲಿತಾಂಶ ಸಾಧಿಸಲೇಬೇಕೆನ್ನುವ ಒತ್ತಡವು ಕಾಲೇಜಿನ ಸಿಬ್ಬಂದಿ ಅಡ್ಡದಾರಿ ಹಿಡಿಯಲು ಕಾರಣವಾಗಬಹುದು. ಈ ಬಗೆಯ ಒತ್ತಡವು ಸಾಮೂಹಿಕ ನಕಲು ಮಾಡುವುದಕ್ಕೆ ಅವಕಾಶ ಕಲ್ಪಿಸಿರುವ ಬಹಳಷ್ಟು ಉದಾಹರಣೆಗಳಿವೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸವಲತ್ತುಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಉತ್ತಮ ಫಲಿತಾಂಶದ ಹೆಸರಿನಲ್ಲಿ ಅವರ ಮೇಲೆ ಒತ್ತಡ ಹೇರುವುದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಒತ್ತಡ ನಿರ್ವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಕಾಲೇಜುಗಳಿಂದ ವಿಮುಖರಾಗಲೂಬಹುದು.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿನ ದ್ವಿತೀಯ ಪಿಯು ಫಲಿತಾಂಶ ಆತಂಕಪಡುವಷ್ಟು ಕಳಪೆ ಆಗಿಯೇನೂ ಇಲ್ಲ. 2021–22ನೇ ಸಾಲಿನಲ್ಲಿ ಶೇ 61.88ರಷ್ಟು ಫಲಿತಾಂಶ ಬಂದಿದ್ದರೆ, 2022-23ರಲ್ಲಿ ಶೇ 74.67ರಷ್ಟು ಫಲಿತಾಂಶ ದಾಖಲಾಗಿದೆ. ಈ ಉತ್ತಮ ಫಲಿತಾಂಶಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳು ಕಾರಣವಾಗಿವೆ. ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಶ್ರಮವೂ ಉತ್ತಮ ಫಲಿತಾಂಶದ ಹಿಂದಿದೆ. ಈ ಫಲಿತಾಂಶವನ್ನು ಮತ್ತಷ್ಟು ಸುಧಾರಿಸುವ ದಿಸೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸ ಬೇಕಾಗಿದೆ. ಸದ್ಯದ ಪದವಿಪೂರ್ವ ಪರೀಕ್ಷಾ ಕ್ರಮ ವಿದ್ಯಾರ್ಥಿಸ್ನೇಹಿಯಾಗಿದೆ. ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿಕ್ಕೆಂದೇ ಶೈಕ್ಷಣಿಕ ವರ್ಷವೊಂದರಲ್ಲಿ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಈ ಪರೀಕ್ಷಾ ಪದ್ಧತಿಯ ಆಶಯಕ್ಕೆ ತದ್ವಿರುದ್ಧವಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ
ರನ್ನು ಅನಗತ್ಯ ಒತ್ತಡಕ್ಕೆ ದೂಡುವ ಪ್ರಯತ್ನಗಳು ಸರಿಯಾದುವಲ್ಲ. ಎಲ್ಲ ಪ್ರದೇಶಗಳಿಂದಲೂ
ಶೇ 100ರಷ್ಟು ಫಲಿತಾಂಶವನ್ನು ನಿರೀಕ್ಷಿಸುವುದು ಹಾಗೂ ಫಲಿತಾಂಶ ಸಾಧನೆಗಾಗಿ ಬೆದರಿಕೆಯ ಮಾರ್ಗ ಅನುಸರಿಸುವುದು ಯಾವ ರೀತಿಯಿಂದಲೂ ಸಮರ್ಥನೀಯವಲ್ಲ.

ಆತಂಕದಿಂದ ಕೂಡಿದ ಮನಃಸ್ಥಿತಿ ಯಲ್ಲಿ ಉತ್ತಮ ಬೋಧನೆ ಹಾಗೂ ಕಲಿಕೆ ಅಸಾಧ್ಯ. ಫಲಿತಾಂಶದ ಏರುಪೇರಿಗೆ ಬೋಧನೆಯ ಜೊತೆಗೆ ಸಾಮಾಜಿಕ ಸ್ಥಿತಿಗತಿಗಳೂ ಕಾರಣವಾಗುತ್ತವೆ. ಕಾಲೇಜುಗಳಲ್ಲಿರುವ ಸವಲತ್ತುಗಳು ಕೂಡ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ. ಪಿಯು ಫಲಿತಾಂಶ ಉತ್ತಮಗೊಳ್ಳಬೇಕಾದರೆ, ಪ್ರಾಥಮಿಕ ಶಿಕ್ಷಣದಲ್ಲಿ ಹೆಚ್ಚಿನ ಸುಧಾರಣೆಯಾಗಬೇಕಾಗಿದೆ. ಬೇರು ದುರ್ಬಲವಾಗಿರುವಾಗ, ಕೊಂಬೆರೆಂಬೆಗಳುಸದೃಢವಾಗಿರಬೇಕೆಂದು ನಿರೀಕ್ಷಿಸುವುದು ಹುಂಬತನ. ಸಾಮಾಜಿಕ ಹಾಗೂ ಶೈಕ್ಷಣಿಕ ತಾರತಮ್ಯಗಳನ್ನು ನಿವಾರಿಸುವುದು ಸರ್ಕಾರದ ಆದ್ಯತೆಯಾಗಬೇಕಾಗಿದೆ. ಈ ತರತಮಗಳು ನಿವಾರಣೆಗೊಂಡು, ಒಳ್ಳೆಯ ಶೈಕ್ಷಣಿಕ ಸೌಲಭ್ಯಗಳು ದೊರೆತಾಗ ಫಲಿತಾಂಶ ಸಹಜವಾಗಿಯೇ ಉತ್ತಮವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT