ಗುರುವಾರ , ಜೂನ್ 4, 2020
27 °C
ಏಕಾಏಕಿ ದಿಗ್ಬಂಧನ ತೆರವು ಸಲ್ಲದು

ಸಂಪಾದಕೀಯ | ಸಾಂಕೇತಿಕ ಆಚರಣೆ ಸಾಕು ಕ್ರಿಯಾಯೋಜನೆ ಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ದೇಶವಾಸಿಗಳಿಗೆ ದಿಗ್ಬಂಧನ ವಿಧಿಸಿ ಎರಡು ವಾರಗಳು ಉರುಳಿವೆ. ಇದೀಗ ದಿಗ್ಬಂಧನವು ಮೂರನೇ ವಾರವನ್ನು ಪ್ರವೇಶಿಸಿದೆ. ಇದು ನಿರ್ಣಾಯಕ ಕಾಲಘಟ್ಟ. ಏಪ್ರಿಲ್‌ 14ರ ಬಳಿಕ ಈ ಲಾಕ್‌ಡೌನ್‌ ತೆರವಾಗಲಿದೆಯೇ ಎನ್ನುವುದು ಈಗ ಚರ್ಚೆಯ ವಿಷಯ.

‘ಕೊರೊನಾ ವೈರಾಣು ವಿರುದ್ಧದ ಹೋರಾಟ ಸುದೀರ್ಘವಾದುದು’ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ರೂಪದ ಸಂದೇಶವನ್ನು ಜನರಿಗೆ ನೀಡಿದ್ದಾರೆ. ಇದೇ ವೇಳೆ ಅವರು, ‘ದಿಗ್ಬಂಧನವನ್ನು ಹಂತ ಹಂತವಾಗಿ ತೆರವುಗೊಳಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಿ’ ಎಂದು ಸಚಿವ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ಆದರೆ, ಕೊರೊನಾ ವೈರಾಣು ವಿರುದ್ಧದ ಯುದ್ಧವನ್ನು ಜಯಿಸಿ ಆಗಿದೆ ಎಂದು ಹೇಳುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ; ಅದು ಹಾಗೆ ಹೇಳಿಲ್ಲ ಕೂಡ. ವೈರಾಣು ತೀವ್ರವಾಗಿ ಹರಡುವುದನ್ನು ತಡೆಯಲು ಹಾಗೂ ಸಮುದಾಯದ ನಡುವೆ ಸೋಂಕು ಹರಡುವ ಹಂತ ತಲುಪದಂತೆ ಮಾಡುವಲ್ಲಿ ಲಾಕ್‌ಡೌನ್‌ ತಕ್ಕಮಟ್ಟಿಗೆ ನೆರವಾಗಿದೆ. ಇಷ್ಟಾಗಿಯೂ ಕೋವಿಡ್‌–19 ಕಾಯಿಲೆಗೆ ಒಳಗಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ, ಲಾಕ್‌ಡೌನ್‌ ತೆರವು ವಿಚಾರದಲ್ಲಿ ಅತ್ಯಂತ ವಿವೇಕದ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ.

ದಿಗ್ಬಂಧನವನ್ನು ಏಕಾಏಕಿ ತೆರವು ಮಾಡುವುದು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು; ಜನಸಂಚಾರ ಆರಂಭವಾದರೆ ಕೊರೊನಾ ಸೋಂಕು ಹರಡುವಿಕೆ ವಿಪರೀತ ಮಟ್ಟಕ್ಕೆ ಹೋಗಬಹುದು ಎಂಬ ಆತಂಕವನ್ನು ಹಲವು ರಾಜ್ಯ ಸರ್ಕಾರಗಳು ಮತ್ತು ಪರಿಣತರ ಗುಂಪುಗಳು ಕೂಡ ವ್ಯಕ್ತಪಡಿಸಿವೆ. ದೇಶದ ಜನ ಕೆಲವು ಸಾಂಕೇತಿಕ ಆಚರಣೆಗಳನ್ನು ನಡೆಸಬೇಕು ಎಂದು ಮೋದಿ ಅವರು ಕರೆ ಕೊಡುವುದರ ಮೂಲಕ ಕೊರೊನಾ ವಿರುದ್ಧದ ಯುದ್ಧದಲ್ಲಿ ಜನರಲ್ಲಿನ ಹುಮ್ಮಸ್ಸು ಹೆಚ್ಚಿಸಲು ಯತ್ನಿಸಿದ್ದಾರೆ. ದೇಶದ ಜನರೆಲ್ಲ ಮನೆ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯಬೇಕು ಎಂದು ಎರಡು ವಾರಗಳ ಹಿಂದೆ ಅವರು ಕರೆ ನೀಡಿದ್ದರು. ಜನ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ಮೇಣದಬತ್ತಿ, ಹಣತೆ ಅಥವಾ ಮೊಬೈಲ್‌ ಟಾರ್ಚ್‌ ದೀಪ ಬೆಳಗಿಸಿ ಎನ್ನುವ ಮನವಿಯನ್ನೂ ಅವರು ಈಚೆಗೆ ಮಾಡಿದ್ದರು.

ಪ್ರಧಾನಿಯವರ ಮನವಿಯ ಹಿಂದಿನ ಅರ್ಥ ಏನು ಎಂಬುದು ಜನರಿಗೆ ಸ್ಪಷ್ಟವಾಗಿ ಮನವರಿಕೆ ಆಗಿಲ್ಲ ಎಂಬುದಕ್ಕೆ ಈ ಆಚರಣೆಗಳ ಸಂದರ್ಭದಲ್ಲಿ ಜನರು ಮಾಡಿದ ಎಡವಟ್ಟುಗಳೇ ಸಾಕ್ಷಿ. ಇವೆಲ್ಲಾ ಸಾಂಕೇತಿಕ ಆಚರಣೆಗಳು. ಇಂತಹ ಆಚರಣೆಗಳನ್ನು ಪಕ್ಕಕ್ಕೆ ಇಟ್ಟು, ಕೋವಿಡ್‌–19 ಕಾರಣದಿಂದ ಏಟು ತಿಂದಿರುವ ದೇಶದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರವು ತುರ್ತು ಗಮನ ಹರಿಸಬೇಕು. ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಬಿದ್ದಿರುವ ತೀವ್ರ ಹೊಡೆತವನ್ನು ಅಂದಾಜಿಸುವ ಯತ್ನಗಳನ್ನು ಮಾಡಬೇಕು. ವ್ಯಾಪಾರ, ಉದ್ಯಮ, ವಹಿವಾಟುಗಳನ್ನು ಶೀಘ್ರ ಪುನರಾರಂಭಿಸಲು ಸಾಧ್ಯವಾಗದಿದ್ದರೆ ಆರ್ಥಿಕತೆಯ ಮೇಲೆ ಉಂಟಾಗುವ ದುಷ್ಪರಿಣಾಮ ಊಹೆಗೂ ನಿಲುಕದು. ಈ ದಿಸೆಯಲ್ಲಿ ಪ್ರಾಯೋಗಿಕ ಕಾರ್ಯಯೋಜನೆಗಳನ್ನು ರೂಪಿಸುವ ಕೆಲಸ ಈಗ ಆಗಬೇಕಿದೆ.

ವೈರಾಣು, ದೇಶದ ಎಲ್ಲ ರಾಜ್ಯಗಳಲ್ಲೂ ಆತಂಕ ಉಂಟು ಮಾಡಿದ್ದರೂ ಶೇ 80ರಷ್ಟು ಕೋವಿಡ್‌–19 ಪ್ರಕರಣಗಳು ದೇಶದ ಒಟ್ಟು 62 ಜಿಲ್ಲೆಗಳಿಂದ ವರದಿಯಾಗಿವೆ ಎನ್ನುವುದು ಇಲ್ಲಿ ಗಮನಾರ್ಹ. ರಾಜ್ಯದಲ್ಲೂ 16 ಜಿಲ್ಲೆಗಳಲ್ಲಿ ಮಾತ್ರ ವೈರಾಣು ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಬೆಂಗಳೂರು ನಗರ, ಮೈಸೂರು, ದಕ್ಷಿಣ ಕನ್ನಡ, ಬೀದರ್‌ ಮುಂತಾದ 9 ಜಿಲ್ಲೆಗಳಲ್ಲಿ ವೈರಾಣು ಹರಡುವಿಕೆ ಪ್ರಮಾಣ ವೇಗವಾಗಿದೆ. ಈ ಜಿಲ್ಲೆಗಳಲ್ಲಿ ತಪಾಸಣೆ ಮತ್ತು ಚಿಕಿತ್ಸಾ ಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು. ಇನ್ನುಳಿದ ಜಿಲ್ಲೆಗಳಲ್ಲಿ ದಿಗ್ಬಂಧನವನ್ನು ಹಂತ ಹಂತವಾಗಿ ತೆರವುಗೊಳಿಸುವ ಸಾಧ್ಯತೆ ಮತ್ತು ಸಾಧಕ–ಬಾಧಕ ಕುರಿತು ಯೋಚಿಸಬೇಕು. ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಉತ್ಪಾದನೆ ಮತ್ತು ಸೇವಾ ಉದ್ದಿಮೆಗಳು ಲಾಕ್‌ಡೌನ್‌ನಿಂದಾಗಿ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಕೃಷಿ ವಲಯವನ್ನು ಈ ಹೊಡೆತದಿಂದ ರಕ್ಷಿಸುವ ದಿಸೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚಿಂತಿಸಬೇಕು. ಬೆಳೆದು ನಿಂತಿರುವ ಹಣ್ಣು, ತರಕಾರಿ ಮತ್ತಿತರ ಬೆಳೆಗಳ ಸುಗಮ ಸಾಗಾಣಿಕೆ ಮತ್ತು ಮಾರಾಟಕ್ಕೆ ಪೂರಕ ವಾತಾವರಣ ನಿರ್ಮಿಸುವತ್ತ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕು. ರಾಜ್ಯ ಸರ್ಕಾರಗಳಿಗೆ ಸಂಪನ್ಮೂಲದ ನೆರವನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಭಾವುಕ ಆಚರಣೆಗಳಿಂದ ರಾಜಕೀಯವಾಗಿ ಲಾಭ ಗಿಟ್ಟಿಸಿಕೊಳ್ಳಬಹುದು. ಆದರೆ, ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರ ಬದುಕಿಗೆ ಪುನಶ್ಚೇತನ ತುಂಬಲು ಸಾಧ್ಯವಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು