ದೇಶದ ಸಂವಿಧಾನದ ಪೀಠಿಕೆಯಲ್ಲಿ ಇರುವ ‘ಧರ್ಮನಿರಪೇಕ್ಷ’ ಮತ್ತು ‘ಸಮಾಜವಾದಿ’ ಎಂಬ ಪದಗಳನ್ನು ತೆಗೆಯಬೇಕು ಎಂಬ ಆಗ್ರಹವು ಸಂವಿಧಾನದ ಹೂರಣದಲ್ಲಿ ಏನಿದೆ ಎಂಬುದಕ್ಕಿಂತಲೂ ಹೆಚ್ಚಾಗಿ ಆ ಬಗೆಯ ಆಗ್ರಹ ಮಂಡಿಸುವವರ ಉದ್ದೇಶ ಏನು ಎಂಬುದನ್ನು ಹೇಳುತ್ತದೆ. ಈಚಿನ ದಿನಗಳಲ್ಲಿ ಈ ಆಗ್ರಹವನ್ನು ಮೊದಲು ಮಂಡಿಸಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು. ಈ ಪದಗಳು ‘ಭಾರತದ ಆತ್ಮದ ಮೇಲಿನ ಬರ್ಬರ ಹಲ್ಲೆ’ ಎಂದು ಅವರು ಹೇಳಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ‘ದೇಶದಲ್ಲಿ ಕಾರ್ಯನಿರತ ವಾದ ಸಂಸತ್ತು ಇಲ್ಲದಿದ್ದಾಗ, ಹಕ್ಕುಗಳು ಇಲ್ಲವಾಗಿದ್ದಾಗ, ನ್ಯಾಯಾಂಗ ಇಲ್ಲವಾಗಿದ್ದಾಗ’ ಈ ಪದಗಳನ್ನು ಸೇರಿಸಲಾಯಿತು, ಹೀಗಾಗಿ ಈ ಪದಗಳನ್ನು ಸೇರಿಸಿದ್ದರ ಬಗ್ಗೆ ಪುನರ್ ಪರಿಶೀಲನೆ ಆಗಬೇಕು ಎಂದು ಹೇಳಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೆಲವು ಸಚಿವರು ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಇದೇ ಬಗೆಯ ಆಗ್ರಹ ಮಂಡಿಸಿದ್ದಾರೆ. ಧರ್ಮನಿರಪೇಕ್ಷ ಪದವು ಸನಾತನ ಧರ್ಮಕ್ಕೆ ವಿರುದ್ಧ, ಅದು ಪಾಶ್ಚಿಮಾತ್ಯ ಪರಿಕಲ್ಪನೆ ಎಂದು ಹೇಳಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದಕ್ಕೆ 50 ವರ್ಷಗಳು ಸಂದ ಸಂದರ್ಭದಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪ ಆಗಿದೆಯಾದರೂ ಈ ಆಗ್ರಹವು ಹಳೆಯದು. ಮೂಲ ಪೀಠಿಕೆಯನ್ನು ಕೇಂದ್ರ ಸರ್ಕಾರವು ಈ ಹಿಂದೆ ಗಣರಾಜ್ಯೋತ್ಸವ ದಿನ ನೀಡಿದ ಜಾಹೀರಾತುಗಳಲ್ಲಿ ಬಳಸಿಕೊಂಡಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಸಂವಿಧಾನದ ಪೀಠಿಕೆಗೆ ಈ ಎರಡು ಪದಗಳನ್ನು 1976ರಲ್ಲಿ 42ನೇ ತಿದ್ದುಪಡಿ ಮೂಲಕ ಸೇರಿಸಲಾಯಿತು. ಈ ತಿದ್ದುಪಡಿಯು ಹಲವು ಮೂಲಭೂತ ಬದಲಾವಣೆಗಳನ್ನು ತಂದಿತು. ಆದರೆ ತುರ್ತು ಪರಿಸ್ಥಿತಿ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಜನತಾ ಪಕ್ಷ ನೇತೃತ್ವದ ಸರ್ಕಾರವು ಸಂವಿಧಾನದ ಮೂಲ ರೂಪವನ್ನು ಪುನರ್ಸ್ಥಾಪಿಸುವ ಕೆಲಸ ಮಾಡಿತಾದರೂ ಧರ್ಮನಿರಪೇಕ್ಷ ಮತ್ತು ಸಮಾಜವಾದಿ ಪದಗಳನ್ನು ಉಳಿಸಿಕೊಂಡಿತು. ಬಿಜೆಪಿಯ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರೂ ಈ ಸರ್ಕಾರದ ಭಾಗವಾಗಿದ್ದರು. ಅವರಿಗೆ ಈ ಎರಡು ಪದಗಳನ್ನು ತೆಗೆಯಬೇಕು ಎಂದು ಅನ್ನಿಸಲಿಲ್ಲ. ಧರ್ಮನಿರಪೇಕ್ಷತೆಯು ದೇಶದ ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು ಎಂದು 1994ರಲ್ಲಿ ಬೊಮ್ಮಾಯಿ ಪ್ರಕರಣ ದಲ್ಲಿ ಸುಪ್ರೀಂ ಕೋರ್ಟ್ ಸಾರಿತು. ಪೀಠಿಕೆಯಲ್ಲಿ ಈ ಎರಡು ಪದಗಳನ್ನು ಸೇರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ತಿರಸ್ಕರಿಸಿತ್ತು. ಈ ಎರಡು ಪದಗಳು ಸ್ವೀಕೃತಗೊಂಡಿವೆ, ಪದಗಳ ಅರ್ಥವು ಜನರಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಕೋರ್ಟ್ ಹೇಳಿತ್ತು. ‘ಧರ್ಮನಿರಪೇಕ್ಷ ಎಂಬ ಪದವು ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಗಣರಾಜ್ಯವನ್ನು ಸೂಚಿಸುತ್ತದೆ. ಸಮಾಜವಾದ ಪದವು ಎಲ್ಲ ಬಗೆಯ ಶೋಷಣೆಗಳನ್ನು– ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ– ಹೋಗಲಾಡಿಸಲು ಬದ್ಧವಾಗಿರುವ ಗಣರಾಜ್ಯವನ್ನು ಪ್ರತಿನಿಧಿಸುತ್ತದೆ’ ಎಂದು ಕೋರ್ಟ್ ವಿವರಿಸಿತ್ತು. ಈ ಎರಡು ಪದಗಳನ್ನು ತೆಗೆದುಹಾಕುವ ಉದ್ದೇಶವಿದ್ದ ಖಾಸಗಿ ಮಸೂದೆಯೊಂದಕ್ಕೆ ಸಂಸತ್ತಿನಲ್ಲಿ ಕೆಲವು ವರ್ಷಗಳ ಹಿಂದೆ ಸೋಲಾಗಿತ್ತು.

ನ್ಯಾಯಾಲಯವು ಹೇಳಿರುವಂತೆ ದೇಶವು ಈ ಎರಡು ಪದಗಳನ್ನು ತನ್ನದೇ ಬಗೆಯಲ್ಲಿ ಅರ್ಥವ್ಯಾಖ್ಯಾನಕ್ಕೆ ಒಳಪಡಿಸಿದೆ. ಧರ್ಮನಿರಪೇಕ್ಷತೆ ಅಂದರೆ ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡುವುದು. ವ್ಯಕ್ತಿಯು ಯಾವುದೇ ಧಾರ್ಮಿಕ ನಂಬಿಕೆಯನ್ನು ಹೊಂದಿದ್ದರೂ ಆ ಧಾರ್ಮಿಕ ನಂಬಿಕೆಗಳನ್ನು ಪ್ರತಿಪಾದಿಸಿದರೂ ಆ ಕಾರಣಕ್ಕಾಗಿ ಆ ವ್ಯಕ್ತಿಯು ದಂಡನೆಗೆ ಗುರಿಯಾಗುವುದಿಲ್ಲ ಎಂಬ ಭರವಸೆಯನ್ನು ನೀಡುವುದು. ಸಮಾಜವಾದ ಎಂಬ ಪದವು ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸಂಬಂಧಿಸಿದೆ. ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯ ಕಾರಣಕ್ಕಾಗಿ ಯಾವುದೇ ಪ್ರಜೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಖಾತರಿಯನ್ನು ಇದು ನೀಡುತ್ತದೆ. ಈ ಎರಡು ಪದಗಳನ್ನು ಪೀಠಿಕೆಯಿಂದ ತೆಗೆಯಬೇಕು ಎಂಬ ಆಗ್ರಹ ಅನಗತ್ಯ. ಏಕೆಂದರೆ, ಈ ಎರಡು ಪದಗಳು ಸಂವಿಧಾನದ ಒಟ್ಟು ಚೌಕಟ್ಟಿಗೆ ಹೊಸದಾಗಿ ಏನನ್ನೂ ಸೇರಿಸಿಲ್ಲ. ಸಂವಿಧಾನದಲ್ಲಿ ಅದಾಗಲೇ ಅಡಕವಾಗಿದ್ದ ಆಶಯಗಳಿಗೆ ಈ ಪದಗಳು ಅಭಿವ್ಯಕ್ತಿಯನ್ನು ನೀಡಿದವು. ಈ ಎರಡು ಪದಗಳನ್ನು ತೆಗೆಯಬೇಕು ಎಂಬ ಬೇಡಿಕೆಯು ಸಂವಿಧಾನದಲ್ಲಿನ ಆಶಯಗಳಿಗೆ ಇರುವ ವಿರೋಧವನ್ನು ತೋರಿಸುತ್ತದೆ. ದೇಶವು ಅರ್ಥ ಮಾಡಿಕೊಂಡಿರುವ ಬಗೆಯ ಧರ್ಮನಿರಪೇಕ್ಷತೆಯನ್ನು ಸಂವಿಧಾನವು ಪ್ರತಿಪಾದಿಸುವುದಿಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶದಿಂದ ಈಗ ಈ ಬೇಡಿಕೆಯನ್ನು ಇರಿಸಲಾಗಿದೆ. ಹೀಗಾಗಿ ಬೇಡಿಕೆಯನ್ನು ತಿರಸ್ಕರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.