ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಲುಷಿತ ನೀರಿನಿಂದ ಸಾವು–ನೋವು; ನಿರ್ಲಕ್ಷ್ಯಕ್ಕೆ ತಕ್ಕ ಶಾಸ್ತಿಯಾಗಲಿ

Last Updated 17 ಜೂನ್ 2022, 20:19 IST
ಅಕ್ಷರ ಗಾತ್ರ

ರಾಯಚೂರಿನಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ–ಭೇದಿ ಕಾಣಿಸಿಕೊಂಡು ಏಳು ಮಂದಿ ಮೃತಪಟ್ಟಿದ್ದಾರೆ. ಮೇ 29ರಿಂದ ಈಚೆಗೆ ಕಂಡುಬಂದಿರುವ ಈ ವಿದ್ಯಮಾನದಿಂದ ಈವರೆಗೆ 230ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 25 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊರರೋಗಿಗಳ ವಿಭಾಗದಲ್ಲಿ 800ಕ್ಕೂ ಹೆಚ್ಚು ಮಂದಿ ಔಷಧೋಪಚಾರ ಪಡೆದಿದ್ದಾರೆ. ಇಂತಹ ಆತಂಕಕಾರಿ ಘಟನೆಗೆ ನಗರಸಭೆ ಪೂರೈಸುತ್ತಿದ್ದ ಮಲಿನ ನೀರೇ ಕಾರಣ ಎಂಬುದು ಅತ್ಯಂತ ಆಘಾತಕಾರಿ.ಸ್ಥಳೀಯ ಸಂಸ್ಥೆಯೊಂದು ನಾಗರಿಕರ ಬಗ್ಗೆ ತೋರಬಹುದಾದ ಕೆಟ್ಟ ನಿರ್ಲಕ್ಷ್ಯ ಇದಾಗಿದೆ.

ಕೆರೆಯಿಂದ ಕುಡಿಯುವ ನೀರು ಸಂಗ್ರಹಿಸಲು ನಗರಸಭೆಯಿಂದ ನಿರ್ಮಿಸಲಾದ ಓವರ್‌ಹೆಡ್‌ ಟ್ಯಾಂಕ್‌ಗಳನ್ನು 20 ವರ್ಷಗಳಿಂದಲೂ ಸ್ವಚ್ಛಗೊಳಿಸದೇ ಇದ್ದುದು ಸ್ಥಳೀಯ ಆಡಳಿತದ ಅಗತ್ಯ ಮತ್ತು ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಿದೆ. ಸುಮಾರು 3 ಲಕ್ಷ ಜನಸಂಖ್ಯೆ ಹೊಂದಿರುವ ನಗರದ ಉತ್ತರಕ್ಕೆ ಕೃಷ್ಣಾ ಮತ್ತು ದಕ್ಷಿಣಕ್ಕೆ ತುಂಗಭದ್ರಾ ನದಿಗಳಿವೆ. ಕೃಷ್ಣಾ ನದಿಯಿಂದ 21 ವಾರ್ಡ್‌ಗಳಿಗೆ ಮತ್ತು ತುಂಗಭದ್ರಾ ನದಿಯಿಂದ 14 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ತುಂಗಭದ್ರಾ ನದಿ ನೀರನ್ನು ಕಾಲುವೆ ಮೂಲಕ ರಾಂಪೂರ ಕೆರೆಗೆ ತುಂಬಿಸಿಕೊಂಡು, ಅಲ್ಲಿರುವ ಎರಡು ಶುದ್ಧೀಕರಣ ಘಟಕಗಳ ಮೂಲಕ ಮನೆಮನೆಗೆ ಪೂರೈಸಲಾಗುತ್ತದೆ. ಆದರೆ ಈ ಶುದ್ಧೀಕರಣ ಘಟಕಗಳ ಪೈಕಿ ಹಳೆಯ ಘಟಕವನ್ನು 10 ವರ್ಷಗಳಿಂದಲೂ ಸ್ವಚ್ಛಗೊಳಿಸಿರಲಿಲ್ಲ.

ಹೀಗಾಗಿ ಅಲ್ಲಿ 8– 10 ಅಡಿಗಳಷ್ಟು ಹೂಳು ತುಂಬಿಕೊಂಡಿತ್ತು. ಶುದ್ಧೀಕರಣ ಘಟಕದಲ್ಲಿ ಈ ಕಾರಣಕ್ಕಾಗಿ ಇದ್ದ ಯಂತ್ರಗಳು ತುಕ್ಕು ಹಿಡಿದು ಕೂತಿವೆ. ಶುದ್ಧೀಕರಣ ಘಟಕದಲ್ಲಿ ಯಂತ್ರಗಳು ಸ್ಥಗಿತಗೊಂಡು ಹಲವು ವರ್ಷಗಳಾದರೂ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲದೇ ಇದ್ದುದಕ್ಕೆ ಕಾರಣವಾದರೂ ಏನು? ನೀರು ಸರಬರಾಜು ಉಸ್ತುವಾರಿಗೆ ನೇಮಿಸಲಾಗಿದ್ದ ನಗರಸಭೆ ತಾಂತ್ರಿಕ ವಿಭಾಗದ ಎಇಇ ಅವರು ವ್ಯವಸ್ಥೆ ಸುಧಾರಿಸುವುದಕ್ಕೆ ಮೇಲಧಿಕಾರಿಗಳಿಗೆ ಯಾವುದೇ ಬೇಡಿಕೆಯನ್ನೇ ಸಲ್ಲಿಸಿರಲಿಲ್ಲಎಂಬುದೂಇಲ್ಲಿಗಮನಾರ್ಹ.

ನೀರಿನ ಮೂಲವಾದ ತುಂಗಭದ್ರಾ ನದಿ ಸಹ ಮಲಿನಗೊಂಡಿದ್ದು ಜೊಂಡು, ಹೂಳಿನಿಂದ ಆವೃತವಾಗಿದೆ. ಕೆಲವೊಮ್ಮೆ ಅಗತ್ಯ ರಾಸಾಯನಿಕಗಳಿಂದ ಶುದ್ಧೀಕರಿಸದೆ, ಆ ನೀರನ್ನೇ ನೇರವಾಗಿ ಸರಬರಾಜು ಮಾಡಲಾಗುತ್ತಿತ್ತು ಎಂಬುದಂತೂ ನಿರ್ಲಕ್ಷ್ಯದ ಪರಮಾವಧಿ ಮಾತ್ರವಲ್ಲ ಅಮಾನವೀಯ ಕೃತ್ಯ ಸಹ. ಶುದ್ಧೀಕರಣ ಘಟಕದಲ್ಲಿ ಹೊರಗುತ್ತಿಗೆ ‘ಡಿ’ ದರ್ಜೆ ಸಿಬ್ಬಂದಿ ಇದ್ದು, ಶುದ್ಧೀಕರಿಸುವ ಬಗ್ಗೆ ಅವರಿಗೆ ತರಬೇತಿಯೇ ಇಲ್ಲ. ಕಣ್ಣಳತೆ ಆಧರಿಸಿ ನೀರಿಗೆ ಬ್ಲೀಚಿಂಗ್‌ ಪೌಡರ್‌ ಮಿಶ್ರಣ ಮಾಡುವುದನ್ನು ತನಿಖಾ ಸಮಿತಿ ಎದುರು ಸಿಬ್ಬಂದಿ ಒಪ್ಪಿಕೊಂಡಿದ್ದಾರೆ ಎಂಬ ಮಾತಿದೆ. ಕೆಲವೆಡೆ ನೀರು ಸರಬರಾಜು ಪೈಪ್‌ಗಳಲ್ಲಿ ಸೋರಿಕೆ ಸಹ ಕಂಡುಬಂದಿದೆ. ಕುಡಿಯುವ ನೀರಿಗೆ ಒಳಚರಂಡಿ ಮತ್ತು ತೆರೆದ ಚರಂಡಿ ನೀರು ಮಿಶ್ರಣವಾಗುತ್ತಿತ್ತು. ಆರು ಕಡೆ ದೊಡ್ಡ ಪ್ರಮಾಣದಲ್ಲಿ ಹೀಗೆ ನೀರು ಸೋರಿಕೆಯಾಗುತ್ತಿದ್ದುದನ್ನು ದುರಂತ ನಡೆದ ಬಳಿಕ ಪತ್ತೆಹಚ್ಚಲಾಗಿದೆ.

ವಿಪರ್ಯಾಸವೆಂದರೆ, ಕುಡಿಯುವ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ಸರಬರಾಜು ಮಾಡುವ ಸಲುವಾಗಿ 6 ಕಾರ್ಮಿಕರನ್ನು 3 ಪಾಳಿಯಲ್ಲಿ ಹಗಲು ಮತ್ತು ರಾತ್ರಿ ನಿಯೋಜಿಸಲಾಗಿತ್ತು! ಹಾಗಿದ್ದರೆ ಅವರೆಲ್ಲರೂ ಮಾಡುತ್ತಿದ್ದ ಕಾರ್ಯವಾದರೂ ಏನು? ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ವಿಷಯಗಳು ಬಹಿರಂಗಗೊಂಡಿವೆ. ನಗರಕ್ಕೆ ಸರಬರಾಜು ಆಗುತ್ತಿರುವ ಕುಡಿಯುವ ನೀರಿನ ಮಾದರಿಗಳನ್ನು ಆರೋಗ್ಯ ಇಲಾಖೆಯ ಬಳ್ಳಾರಿ ಘಟಕದಿಂದ ಪರಿಶೀಲನೆಗೆ ಒಳಪಡಿಸಲಾಗಿದೆ. 110 ಮಾದರಿಗಳ ಪೈಕಿ 24 ಮಾದರಿಗಳಲ್ಲಿನ ನೀರು ಕುಡಿಯಲು ಯೋಗ್ಯವೇ ಅಲ್ಲ ಎಂಬುದನ್ನು ಈ ಘಟಕದ ವರದಿ ಸ್ಪಷ್ಟಪಡಿಸಿದೆ. ಇದು, ಭಾರತೀಯ ಮಾನಕ ಬ್ಯೂರೊ (ಬಿಐಎಸ್‌) ಅನುಸಾರ ಇರಬೇಕಾದ ನೀರಿನ ಗುಣಮಟ್ಟದ ಮಾನದಂಡಕ್ಕೆ ಅತ್ಯಂತ ದೂರದಲ್ಲಿದೆ.

ನಗರಾಡಳಿತದ ನಿರ್ಲಕ್ಷ್ಯ, ಅಸಡ್ಡೆ ಬಯಲಾಗಲು ಏಳು ಅಮೂಲ್ಯ ಜೀವಗಳು ಬಲಿಯಾಗಿ ನೂರಾರು ಮಂದಿ ಅನಾರೋಗ್ಯದಿಂದ ನರಳಾಡಬೇಕಾಯಿತು ಎಂಬುದು ಅತ್ಯಂತ ನೋವಿನ ಸಂಗತಿ. ಸಾರ್ವಜನಿಕರಲ್ಲಿ ಅನಾರೋಗ್ಯ ಭುಗಿಲೆದ್ದ ಬಳಿಕವಷ್ಟೇ ಗಡಬಡಿಸಿ ಎದ್ದಿರುವ ನಗರಾಡಳಿತವು ರಾಂಪುರ ನೀರು ಶುದ್ಧೀಕರಣ ಘಟಕದ ಹೂಳನ್ನು ಈಗಷ್ಟೇ ತೆರವುಗೊಳಿಸಿದೆ. ಕೆಲವು ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಿದೆ. ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಿ, ನೀರು ಶುದ್ಧೀಕರಣ ರಾಸಾಯನಿಕವನ್ನು ಉಚಿತವಾಗಿ ವಿತರಿಸಿದೆ.

ಇವೆಲ್ಲವೂ ದುರಂತದ ತೀವ್ರತೆಯನ್ನು ತಣ್ಣಗಾಗಿಸುವ ಸಲುವಾಗಿ ನಡೆಸುವ ಕಣ್ಣೊರೆಸುವ ಕೃತ್ಯಗಳಂತೆ ಜನರಿಗೆ ಕಾಣಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅತ್ಯಂತ ಗಂಭೀರವಾದ ಪ್ರಕರಣ ಇದಾಗಿದ್ದು, ಸಾರ್ವಜನಿಕ ಆರೋಗ್ಯದೊಂದಿಗೆ ಚೆಲ್ಲಾಟ ಆಡಿದವರ ವಿರುದ್ಧ ಜರೂರಾಗಿ ಕಠಿಣ ಕ್ರಮ ಜರುಗಿಸಬೇಕು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT