ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚುನಾವಣಾ ಬಾಂಡ್‌ ಯೋಜನೆ ರದ್ದತಿ; ಸುಪ್ರೀಂ ಕೋರ್ಟ್ ತೀರ್ಪು ಚಾರಿತ್ರಿಕ

Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ರಾಜಕೀಯ ಪಕ್ಷಗಳಿಗೆ ಮತ್ತು ಅವುಗಳ ಚುನಾವಣಾ ನಿರ್ವಹಣೆಗೆ ಹಣ ನೀಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳುವ ಮತದಾರನ ಹಕ್ಕನ್ನು ಈ ತೀರ್ಪು ಎತ್ತಿ ಹಿಡಿದಿದೆ

ಚುನಾವಣಾ ಬಾಂಡ್‌ ಯೋಜನೆಯು ಅಸಾಂವಿಧಾನಿಕ ಎಂದಿರುವ ಸುಪ್ರೀಂ ಕೋರ್ಟ್‌, ಅದನ್ನು ರದ್ದುಪಡಿಸಿದೆ. ರಾಜಕೀಯ ಪಕ್ಷಗಳಿಗೆ ಮತ್ತು ಅವುಗಳ ಚುನಾವಣಾ ನಿರ್ವಹಣೆಗೆ ಹಣ ನೀಡುತ್ತಿರುವ ವರು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಮತದಾರನಿಗೆ ಇದೆ ಎಂಬುದು ಚುನಾವಣಾ ಪ್ರಜಾತಂತ್ರದ ಮುಖ್ಯ ತತ್ವಗಳಲ್ಲಿ ಒಂದು. ಈಗಿನ ತೀರ್ಪು ಈ ವಿಚಾರದಲ್ಲಿ ಭಾರತದ ಜನರಿಗೆ ಬಹುದೊಡ್ಡ ವಿಜಯವನ್ನು ತಂದುಕೊಟ್ಟಿದೆ. ಚುನಾವಣಾ ಬಾಂಡ್‌ ಯೋಜನೆ ಕುರಿತು ವ್ಯಕ್ತವಾದ ಟೀಕೆ ಮತ್ತು ಕಳವಳಗಳೆಲ್ಲವೂ ಸಮಂಜಸವೇ ಆಗಿದ್ದವು ಎಂಬ ಮುದ್ರೆಯನ್ನು ಸುಪ್ರೀಂ ಕೋರ್ಟ್ ಒತ್ತಿದೆ.

ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠವು ಸರ್ವಸಮ್ಮತಿಯಿಂದ ಈ ಮಹತ್ವದ ತೀರ್ಪನ್ನು ನೀಡಿದೆ. ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ನೀಡಿರುವ ಮಾಹಿತಿ ಪಡೆದುಕೊಳ್ಳುವ ಹಕ್ಕನ್ನು
ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಘೋಷಿಸಿದೆ. ಚುನಾವಣಾ ಬಾಂಡ್‌ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರವು ಮುಂದಿರಿಸಿದ ಯಾವುದೇ ವಾದವನ್ನು ಕೋರ್ಟ್‌ ಒಪ್ಪಿಕೊಂಡಿಲ್ಲ. ಕೇಂದ್ರ ಸರ್ಕಾರವು 2017–18ರ ಬಜೆಟ್‌ನಲ್ಲಿ ಚುನಾವಣಾ ಬಾಂಡ್‌ ಯೋಜನೆಯನ್ನು ಪರಿಚಯಿಸಿತ್ತು. ಹಣಕಾಸು ಮಸೂದೆಯ ಭಾಗವಾಗಿದ್ದ ಈ ಯೋಜನೆಯು ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ತರಲಿದೆ ಎಂದು ಆಗ ವಾದಿಸಲಾಗಿತ್ತು.

ಬಾಂಡ್‌ ಯೋಜನೆಯ ಭಾಗವಾಗಿ ಉದ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅನಾಮಧೇಯವಾಗಿ ನೀಡಿದ ದೇಣಿಗೆಯ ಬಹುಭಾಗ ಎಂದರೆ, ₹ 13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವು ಆಡಳಿತಾರೂಢ ಬಿಜೆಪಿಯ ಬೊಕ್ಕಸವನ್ನೇ ಸೇರಿದೆ. ಆದಾಯ ತೆರಿಗೆ ಕಾಯ್ದೆ, ಜನಪ್ರಾತಿನಿಧ್ಯ ಕಾಯ್ದೆ ಮತ್ತು ಕಂಪನಿಗಳ ಕಾಯ್ದೆಗೆ ಮಾಡಿದ ತಿದ್ದುಪಡಿಗಳಿಂದಾಗಿ ರಾಜಕೀಯ ಪಕ್ಷಗಳಿಗೆ ವ್ಯಕ್ತಿಗಳು ಮತ್ತು ಉದ್ಯಮ ಸಂಸ್ಥೆಗಳು ಮಿತಿಯಿಲ್ಲದಷ್ಟು ದೇಣಿಗೆಯನ್ನು ಅನಾಮಧೇಯವಾಗಿ ನೀಡುವುದು ಸಾಧ್ಯವಾಗಿದೆ. ಈ ತಿದ್ದುಪಡಿಗಳ ಕಾರಣದಿಂದಾಗಿ, ದೇಣಿಗೆ ನೀಡುವವರು ಮತ್ತು ಪಡೆಯುವ ಪಕ್ಷಗಳಿಗೆ ತೆರಿಗೆಯಿಂದಲೂ ವಿನಾಯಿತಿ ನೀಡಲಾಗಿದೆ ಎಂಬುದೇ ಅಸಾಂವಿಧಾನಿಕ ಎಂದು ನ್ಯಾಯಾಲಯವು ಹೇಳಿದೆ.

ಪಾರದರ್ಶಕತೆಯೇ ಇಲ್ಲ ಎಂಬುದು ಈ ಯೋಜನೆಯ ಕುರಿತು ಇದ್ದ ಬಹುದೊಡ್ಡ ಟೀಕೆ ಆಗಿತ್ತು. ಈ ಟೀಕೆಯು ಮೌಲಿಕವೇ ಆಗಿತ್ತು ಎಂಬುದನ್ನು ನ್ಯಾಯಾಲಯವು ದೃಢಪಡಿಸಿದೆ. ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆಗಳು ಸಾರ್ವಜನಿಕ ವಲಯದಲ್ಲಿಯೇ ನಡೆಯುತ್ತವೆ. ಹಾಗಾಗಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳುವ ಎಲ್ಲ ಹಕ್ಕುಗಳೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಇವೆ. ಈ ಪಕ್ಷಗಳೇ ಸರ್ಕಾರ ರಚಿಸುತ್ತವೆ ಮತ್ತು ಸಾರ್ವಜನಿಕ ನೀತಿಯನ್ನು ರೂಪಿಸುತ್ತವೆ. ವಿರೋಧ ಪಕ್ಷಗಳು ಜನರ ಅಭಿಮತವನ್ನು ಪ್ರತಿನಿಧಿಸುತ್ತವೆ ಹಾಗೂ ನೀತಿಯ ಮೇಲೆ ಪ್ರಭಾವ ಬೀರುತ್ತವೆ.

ರಾಜಕೀಯ ಪಕ್ಷಗಳಿಗೆ ನೀಡುವ ಹಣಕಾಸು ಬೆಂಬಲವು ಪ್ರತಿಫಲಾಪೇಕ್ಷೆಯ ಉದ್ದೇಶದ್ದಾಗಿ ಬದಲಾಗಬಹುದು ಎಂದು ಕೋರ್ಟ್‌ ಹೇಳಿದೆ. ಸರ್ಕಾರ ತೆಗೆದುಕೊಳ್ಳುವ ನೀತಿ ನಿರ್ಧಾರಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವಂತಹವೇ ಅಥವಾ ಆಡಳಿತ ಪಕ್ಷಕ್ಕೆ ದೇಣಿಗೆ ನೀಡಿದವರ ಪರವಾಗಿ ಇರುವಂತಹವೇ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಪಾರದರ್ಶಕತೆ ತತ್ವವು ಚುನಾವಣಾ ಪ್ರಜಾತಂತ್ರದ ಕೇಂದ್ರಸ್ಥಾನದಲ್ಲಿದೆ. ಹಾಗಾಗಿ, ಮತದಾರರಿಗೆ ಮಾಹಿತಿ ನಿರಾಕರಿಸುವುದು ಈ ತತ್ವದ ಉಲ್ಲಂಘನೆ ಆಗುತ್ತದೆ. ಈ ಪ್ರಶ್ನೆಯನ್ನು ಸಾರ್ವಜನಿಕವಾಗಿ ಎತ್ತಲಾಗಿದ್ದರೂ ಸರ್ಕಾರವು ಇದನ್ನು ಕಿವಿಗೇ ಹಾಕಿಕೊಂಡಿರಲಿಲ್ಲ. ರಾಜಕೀಯದಲ್ಲಿ ಕಪ್ಪುಹಣದ ಪ್ರಭಾವವನ್ನು ತಗ್ಗಿಸಲು ಈ ಯೋಜನೆಯು ನೆರವಾಗಿದೆ ಎಂಬ ವಾದವನ್ನೂ ನ್ಯಾಯಾಲಯವು ಪುರಸ್ಕರಿಸಿಲ್ಲ. 

ದೇಣಿಗೆ ಸಂಗ್ರಹದ ವಿಚಾರದಲ್ಲಿ ವಿರೋಧ ಪಕ್ಷಗಳಿಗಿಂತ ಆಡಳಿತ ಪಕ್ಷವಾದ ಬಿಜೆಪಿಗೆ ಹೆಚ್ಚಿನ ಅನುಕೂಲ ಆಗಬೇಕು ಎಂಬ ರೀತಿಯಲ್ಲಿಯೇ ಈ ಯೋಜನೆಯನ್ನು ರೂಪಿಸಲಾಗಿದೆ. ದೇಣಿಗೆ ನೀಡಿದವರು ಯಾರು ಮತ್ತು ದೇಣಿಗೆಯ ಮೊತ್ತ ಎಷ್ಟು ಎಂಬುದನ್ನು ಆಡಳಿತ ಪಕ್ಷವು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮೂಲಕ ತಿಳಿದುಕೊಳ್ಳುವ ಸಾಧ್ಯತೆ ಇದೆ. ಆದರೆ, ವಿರೋಧ ಪಕ್ಷಗಳಿಗೆ ಈ ಅವಕಾಶ ಇಲ್ಲವೇ ಇಲ್ಲ. ರಾಜಕೀಯ ದೇಣಿಗೆ ಪಡೆದುಕೊಳ್ಳುವ ವಿಚಾರದಲ್ಲಿ ಆಡಳಿತ ಪಕ್ಷಕ್ಕೆ ಹೆಚ್ಚಿನ ಅನುಕೂಲ ಇರುವುದು ನಿಜ. ಆದರೆ, ಸಮತೋಲನವೇ ಇಲ್ಲದ ರೀತಿಯಲ್ಲಿ ದೇಣಿಗೆ ಸಂದಾಯ ಆಗಿರುವುದನ್ನು ಗಮನಿಸಿದರೆ, ಬಿಜೆಪಿ ನ್ಯಾಯಯುತವಲ್ಲದ ರೀತಿಯಲ್ಲಿ ಅನುಕೂಲ ಪಡೆದುಕೊಂಡಿದೆ ಎಂಬುದು ದೃಢಪಡುತ್ತದೆ.

ಚುನಾವಣಾ ಬಾಂಡ್‌ ನೀಡುವುದನ್ನು ನಿಲ್ಲಿಸಬೇಕು ಮತ್ತು ಎಲ್ಲ ದೇಣಿಗೆಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶನ ನೀಡಿದೆ. ಎಸ್‌ಬಿಐ ನೀಡಿದ ವಿವರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಮಾರ್ಚ್‌ 31ರೊಳಗೆ ಪ್ರಕಟಿಸಬೇಕು ಎಂದೂ ಪೀಠವು ಸೂಚಿಸಿದೆ. ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಮತ್ತು ನ್ಯಾಯಯುತ ನಡವಳಿಕೆ ಅತ್ಯಗತ್ಯ ಎಂಬುದನ್ನು ಎತ್ತಿ ಹಿಡಿದಿರುವ ಈ ತೀರ್ಪು ಚಾರಿತ್ರಿಕ. ಲೋಕಸಭೆಗೆ ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸೋಲು–ಗೆಲುವಿನ ಮೇಲೆ ಈ ತೀರ್ಪು ಯಾವುದೇ ಪರಿಣಾಮ ಬೀರದೇ ಇರಬಹುದು. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೈತಿಕತೆಯ ಕುರಿತು ಪ್ರಶ್ನೆ ಮೂಡುವಂತೆ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT