ಗುರುವಾರ , ಜೂನ್ 24, 2021
22 °C

ಪ್ರಧಾನಿಗೆ ಪತ್ರ ಬರೆಯುವುದೂ‘ದೇಶದ್ರೋಹ’ದ ಕೃತ್ಯವೇ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಆಲೋಚನೆಗಳು ಮುಕ್ತವಾಗಿ ಹರಿಯಬೇಕಿರುವುದು ಜೀವಂತ ಹಾಗೂ ಚಲನಶೀಲವಾದ ಪ್ರಜಾತಂತ್ರ ವ್ಯವಸ್ಥೆಯ ಮೂಲಗುಣ. ಇದು ಸಾಧ್ಯವಾಗದಿದ್ದರೆ ಪ್ರಜಾತಂತ್ರಕ್ಕೆ ಹೆಚ್ಚಿನ ಅರ್ಥ ಇರುವುದಿಲ್ಲ, ಅಂತಹ ಪ್ರಜಾತಂತ್ರ ವ್ಯವಸ್ಥೆ ಪರಿಪೂರ್ಣವಾಗಿಯೂ ಇರುವುದಿಲ್ಲ. ಇದೇ ಮಾತನ್ನು ಸುಪ್ರೀಂ ಕೋರ್ಟ್‌, ಎಸ್. ಖುಷ್ಬೂ ಮತ್ತು ಕನ್ನಿಯಮ್ಮಾಳ್ ನಡುವಿನ ಪ್ರಕರಣದಲ್ಲಿ ಹೇಳಿದೆ. ‘ಸಮಾಜದಲ್ಲಿ ಚಿಂತನೆಗಳ ಹರಿವು ಮುಕ್ತವಾಗಿ ಇದ್ದಾಗ ಪ್ರಜೆಗಳ ಅರಿವು ಹೆಚ್ಚುತ್ತದೆ. ಇದರ ಪರಿಣಾಮವಾಗಿ ಆಡಳಿತ ವ್ಯವಸ್ಥೆ ಉತ್ತಮವಾಗುತ್ತದೆ’ ಎಂದು ಹೇಳಿದೆ.

ಇವೆಲ್ಲ ಸಾಧ್ಯವಾಗಬೇಕು ಎಂದಾದರೆ, ತಾವು ಆಡಿದ ಮಾತುಗಳಿಗೆ ತೀರಾ ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂಬ ಭೀತಿಯಲ್ಲಿ ಜನರನ್ನು ಇರಿಸಬಾರದು. ಆದರೆ, ಇತಿಹಾಸಕಾರ ರಾಮಚಂದ್ರ ಗುಹಾ, ಸಿನಿಮಾ ನಿರ್ದೇಶಕ ಮಣಿರತ್ನಂ ಸೇರಿದಂತೆ ಒಟ್ಟು 49 ಜನರ ವಿರುದ್ಧ ದಾಖಲಾಗಿರುವ ದೇಶದ್ರೋಹದ ಪ್ರಕರಣವು ಈ ಆಶಯಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ದೇಶದ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಗುರಿಯಾಗಿಸಿಕೊಂಡು ನಡೆದ ಕೆಲವು ಗುಂಪು ಹಲ್ಲೆ ಪ್ರಕರಣಗಳನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಗಣ್ಯರು ಬಹಿರಂಗ ಪತ್ರ ಬರೆದಿದ್ದರು.

‘ಜೈ ಶ್ರೀರಾಂ ಎನ್ನುವುದು ಉದ್ರೇಕಕಾರಿಯೂ ಉನ್ಮಾದವೂ ಆಗಿಬಿಟ್ಟಿದೆ’ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಈ ಪತ್ರವನ್ನು ಆಧರಿಸಿ, ವಕೀಲರೊಬ್ಬರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನ್ಯಾಯಾಲಯ ನೀಡಿದ ನಿರ್ದೇಶನದ ಅನುಸಾರ, ಬಿಹಾರದ ಮುಜಫ್ಫರ್‌ಪುರ ಜಿಲ್ಲೆಯಲ್ಲಿ ಈಗ ಇವರೆಲ್ಲರ ವಿರುದ್ಧ ದೇಶದ್ರೋಹ ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ.

ಗುಂಪುಹಲ್ಲೆಗಳು ಅಪರಾಧಿಕ ಕೃತ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಅಂತಹ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದವರ ವಿರುದ್ಧ ದೇಶದ್ರೋಹದ ‍ಪ್ರಕರಣ ದಾಖಲಾಗಿರುವುದು ಸಮಕಾಲೀನ ಸಂದರ್ಭದ ಚೋದ್ಯದಂತೆ ಭಾಸವಾಗುತ್ತಿದೆ! ದೇಶದ ಪ್ರತಿಷ್ಠೆಯನ್ನು ಹಾಳು ಮಾಡಿದ, ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿದ ಆರೋಪದ ಅಡಿ ಕೂಡ ಪ್ರಕರಣ ದಾಖಲಿಸಲಾಗಿದೆ.

ನಿರ್ದಿಷ್ಟ ಕಾಲಘಟ್ಟಗಳಲ್ಲಿ, ಬಹುಸಂಖ್ಯಾತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಅನಿಸಿಕೆ ವ್ಯಕ್ತಪಡಿಸಿದವರ ಮೇಲೆ ದೇಶದ್ರೋಹದ ಪ್ರಕರಣಗಳು ದಾಖಲಾಗುತ್ತಿರುವುದು ತೀರಾ ಹೊಸದೇನೂ ಅಲ್ಲ. ಆದರೆ, ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿಯ 124(ಎ) ಸೆಕ್ಷನ್‌ನ ಅಕ್ಷರಶಃ ವ್ಯಾಖ್ಯಾನ ಸರಿಯಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ.

ಯಾವುದೇ ಕ್ರಿಯೆ, ದೇಶದ್ರೋಹಕ್ಕೆ ಸಮ ಎಂಬುದಾಗಿ ಪರಿಗಣಿತ ಆಗಬೇಕಾದರೆ, ಅದು ಹಿಂಸಾ ಮಾರ್ಗ ಅನುಸರಿಸಿ ಸರ್ಕಾರವನ್ನು ಬುಡಮೇಲು ಮಾಡುವ ಪರಿಣಾಮ ಹೊಂದಿರಬೇಕು. ಹಿಂಸೆ ಸೃಷ್ಟಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂಥದ್ದಾಗಿರಬೇಕು. ಈ ಆಯಾಮಗಳನ್ನು ಹೊಂದಿಲ್ಲದ ಅನಿಸಿಕೆ, ಅಭಿಪ್ರಾಯಗಳು ದೇಶದ್ರೋಹದ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಕೇದಾರನಾಥ್‌ ಸಿಂಗ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹೀಗಿದ್ದರೂ ತನ್ನೆದುರು ಸಲ್ಲಿಕೆಯಾದ ಒಂದು ಅರ್ಜಿಯನ್ನು ಆಧರಿಸಿ, ಕೆಳ ಹಂತದ ನ್ಯಾಯಾಲಯವೊಂದು ಸಾರ್ವಜನಿಕ ಜೀವನದಲ್ಲಿರುವ ಈ ಎಲ್ಲ ವ್ಯಕ್ತಿಗಳ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲು ನಿರ್ದೇಶಿಸಿರುವುದು ವಿಷಾದಕರ.

ವಾಸ್ತವದಲ್ಲಿ ದೇಶದ ಪ್ರಧಾನಿಯನ್ನು ಟೀಕಿಸುವುದು ಕೂಡ ‘ದೇಶದ್ರೋಹ’ದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಜಾವೆದ್ ಹಬೀಬ್ ಮತ್ತು ದೆಹಲಿ ಸರ್ಕಾರದ ನಡುವಿನ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌, ‘ಪ್ರಧಾನಿಯವರ ವಿರುದ್ಧವಾಗಿ ಒಂದು ಅಭಿಪ್ರಾಯ ಹೊಂದಿರುವುದನ್ನು ಮತ್ತು ಸರ್ಕಾರದ ನಡೆ ಟೀಕಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಲಾಗದು. ಸರ್ಕಾರವನ್ನು ಟೀಕಿಸುವುದು ಪ್ರಜಾತಂತ್ರ ವ್ಯವಸ್ಥೆಯ ಹೆಗ್ಗುರುತು’ ಎಂದು ಹೇಳಿದೆ.

‘ದೇಶದ್ರೋಹ’ಕ್ಕೆ ಸಂಬಂಧಿಸಿದ ಇಷ್ಟೆಲ್ಲ ಸ್ಪಷ್ಟನೆಗಳು ಸಾರ್ವಜನಿಕ ಅವಗಾಹನೆಗೆ ಲಭ್ಯವಿದ್ದರೂ, ಟೀಕೆಯನ್ನು ದೇಶದ್ರೋಹದ ಆರೋಪಕ್ಕೆ ಸಮನಾಗಿ ಕಾಣುತ್ತಿರುವುದನ್ನು ಭಿನ್ನ ದನಿಗಳನ್ನು ಹತ್ತಿಕ್ಕುವ ಕೃತ್ಯದ ಮುಂದುವರಿಕೆಯ ಭಾಗವಾಗಿಯೇ ಗ್ರಹಿಸಬೇಕಾಗುತ್ತದೆ. ಹಾಗೆಯೇ, ಐಪಿಸಿಯ 124(ಎ) ಸೆಕ್ಷನ್‌ ಅನ್ನು ಅಭಿವ್ಯಕ್ತಿಗೆ ಅಡ್ಡಿಯಾಗಿರುವ ಕಾನೂನು ಎಂದು ನೋಡಬೇಕಾಗುತ್ತದೆ. ಇದರ ದುರ್ಬಳಕೆಗೆ ತಡೆ ಹಾಕುವ ಅಗತ್ಯ ಹಿಂದಿಗಿಂತ ಇಂದು ಹೆಚ್ಚಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು