ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಥುರಾದಲ್ಲಿ ಸರ್ವೆಗೆ ಆದೇಶ ಅಗಣಿತ ತಕರಾರುಗಳಿಗೆ ದಾರಿ

Last Updated 4 ಜನವರಿ 2023, 19:46 IST
ಅಕ್ಷರ ಗಾತ್ರ

ಮಥುರಾ ನಗರದಲ್ಲಿ ಇರುವ ಶಾಹಿ ಈದ್ಗಾ ಮಸೀದಿಯ ಸರ್ವೆ ನಡೆಸಲು ಕಂದಾಯ ಇಲಾಖೆಗೆ ಅಲ್ಲಿನ ಜಿಲ್ಲಾ ನ್ಯಾಯಾಲಯವೊಂದು ನೀಡಿರುವ ಅನುಮತಿಯು ಕೆಲವು ಕಳವಳಕಾರಿ ಪ್ರಶ್ನೆಗಳನ್ನು ಮೂಡಿಸುವಂಥದ್ದು. ಇದೇ ಬಗೆಯ ಪ್ರಶ್ನೆಗಳು ಹಿಂದಿನ ವರ್ಷದ ಆರಂಭದಲ್ಲಿ ವಾರಾಣಸಿಯಲ್ಲಿ ಸರ್ವೆ ನಡೆಸಲು ನ್ಯಾಯಾಲಯವೊಂದು ಅನುಮತಿ ನೀಡಿದ್ದಾಗಲೂ ಮೂಡಿದ್ದವು. ಬಾಲ ಕೃಷ್ಣನನ್ನು ತಾನು ಪ್ರತಿನಿಧಿಸುತ್ತೇನೆ ಎಂದು ಹೇಳಿಕೊಂಡಿರುವ ಹಿಂದೂ ಸೇನಾ ಎಂಬ ಸಂಘಟನೆಯು ಈದ್ಗಾ ಇರುವ ಜಮೀನಿನ ಮಾಲೀಕತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸರ್ವೆ ನಡೆಸಲು ಅನುಮತಿ ನೀಡಿದೆ. ಸರ್ವೆ ನಡೆಸಿ, ವರದಿಯನ್ನು ಜನವರಿ 20ರೊಳಗೆ ಸಲ್ಲಿಸಬೇಕು ಎಂದು ಇಲಾಖೆಗೆ ಕೋರ್ಟ್ ಸೂಚನೆ ನೀಡಿದೆ. ಶ್ರೀಕೃಷ್ಣನು ಹುಟ್ಟಿದ ಸ್ಥಳ ಎಂದು ಭಾವಿಸಲಾಗಿರುವ ಸ್ಥಳದ ಪಕ್ಕದಲ್ಲಿ ಈ ಈದ್ಗಾ ಇದೆ. ಕಾಶಿಯ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಜ್ಞಾನವಾಪಿ ಮಸೀದಿಯ ಸರ್ವೆಗೆ ನ್ಯಾಯಾಲಯವೊಂದು ಕಳೆದ ವರ್ಷ ಆದೇಶಿಸಿತು. ಅದರ ಮರುಕಳಿಕೆಯಂತೆ ಇದೆ ಮಥುರಾದಲ್ಲಿನ ವಿದ್ಯಮಾನ. ಕಾಶಿಯಲ್ಲಿನ ಸರ್ವೆಗೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿತು. ವಾರಾಣಸಿ ನ್ಯಾಯಾಲಯವು ಮಸೀದಿಯೊಳಗೆ ಹಿಂದೂಗಳಿಗೆ ಪೂಜೆ ಸಲ್ಲಿಸಲು ಕೂಡ ಅವಕಾಶ ನೀಡಿದೆ. ಮಸೀದಿಯ ವಿಚಾರವಾಗಿ ತಕರಾರು ಇದೆ ಎಂಬುದನ್ನು ಒಪ್ಪಿಕೊಂಡಂತಿದೆ ಕೋರ್ಟ್‌ನ ತೀರ್ಮಾನ. ಮಥುರಾದ ಪ್ರಕರಣ ಕೂಡ ಇದೇ ರೀತಿಯಲ್ಲಿ ಸಾಗುವ ಸಾಧ್ಯತೆ ಇಲ್ಲದಿಲ್ಲ.

ಪೂಜಾ ಸ್ಥಳಗಳ ಕಾಯ್ದೆ– 1991 ನಿರ್ದಿಷ್ಟವಾಗಿ ಇಂತಹ ಪರಿಸ್ಥಿತಿಗಳು ಸೃಷ್ಟಿಯಾಗುವುದನ್ನು ತಡೆಯುವ ಉದ್ದೇಶ ಹೊಂದಿದೆ. ದೇಶದ ಎಲ್ಲ ಪೂಜಾ ಸ್ಥಳಗಳು 1947ರ ಆಗಸ್ಟ್‌ 15ರಂದು ಧಾರ್ಮಿಕವಾಗಿ ಯಾವ ಸ್ಥಿತಿಯಲ್ಲಿ ಇದ್ದವೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು ಎಂದು ಕಾಯ್ದೆ ಹೇಳಿದೆ. 2019ರಲ್ಲಿ ನೀಡಿದ ರಾಮಜನ್ಮಭೂಮಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಈ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ. 1947ರ ಆಗಸ್ಟ್‌ 15ಕ್ಕೂ ಮೊದಲು ಕೂಡ ಮಸೀದಿಯಲ್ಲಿ ಪೂಜೆ ನಡೆಯುತ್ತಿತ್ತು ಎಂಬುದನ್ನು ಸಾಬೀತು ಮಾಡಿದರೆ, ಹಿಂದೂಗಳು ಸಲ್ಲಿಸಿರುವ ಅರ್ಜಿಯು ಕಾಲಮಿತಿಯನ್ನು ಮೀರಿದೆ ಎಂದು ಆಗುವುದಿಲ್ಲ ಎಂಬ ಮಾತನ್ನು ವಾರಾಣಸಿ ನ್ಯಾಯಾಲಯ ಹೇಳಿತು. ಮಥುರಾದಲ್ಲಿ ಕೂಡ ವಿವಾದಕ್ಕೆ ಮತ್ತೆ ಜೀವ ಕೊಡಲು, ವಿವಾದವನ್ನು ತೀವ್ರಗೊಳಿಸಲು ಲೋಪಗಳನ್ನು ಹುಡುಕಲಾಗುತ್ತಿದೆ. ಕಳೆದುಹೋದ ಕಾಲವೊಂದಕ್ಕೆ ಸೇರಿದ ಮಂದಿರ–ಮಸೀದಿ ವಿವಾದದ ಹೆಸರಿನಲ್ಲಿ ಮತ್ತೆ ಕೋಮು ಧ್ರುವೀಕರಣ ನಡೆಸಲು ಈ ಎರಡು ವಿವಾದಗಳನ್ನು ಈಗ ಬಳಸಲಾಗುತ್ತಿದೆ.

ಕೆಳ ಹಂತದ ನ್ಯಾಯಾಲಯಗಳು 1991ರ ಕಾಯ್ದೆಯ ಆಶಯಗಳನ್ನು ಪಾಲನೆ ಮಾಡುತ್ತಿಲ್ಲ. ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಅನುಮೋದಿಸಿದ್ದರೂ, ಕೆಳ ಹಂತದ ನ್ಯಾಯಾಲಯಗಳು ಅದನ್ನು ಅನುಸರಿಸುತ್ತಿಲ್ಲ. ‘ಧರ್ಮನಿರಪೇಕ್ಷ ತತ್ವಗಳೆಡೆ ನಾವು ಹೊಂದಿರುವ ಬದ್ಧತೆಯನ್ನು ಜಾರಿಗೆ ತರುವ ವಿಚಾರದಲ್ಲಿ ಈ ಕಾಯ್ದೆಯು ರಾಜಿಯಿಲ್ಲದ ಆದೇಶವೊಂದನ್ನು ನೀಡಿದೆ’ ಎಂದು ಕೋರ್ಟ್‌ ಹೇಳಿದೆ. ಈ ಕಾಯ್ದೆಯು ಸಮಾಜದ ಧರ್ಮನಿರಪೇಕ್ಷ ಗುಣವನ್ನು ಕಾಯುವ ಉದ್ದೇಶವನ್ನು ಹೊಂದಿದೆ. ಹೊಸದಾಗಿ ಹಕ್ಕು ಪ್ರತಿಪಾದಿಸುವುದರಿಂದ ಉಂಟಾಗುವ ಸಂಘರ್ಷ ಹಾಗೂ ಅನಿಶ್ಚಿತತೆಯ ರಾಜಕೀಯ ಲಾಭ ಪಡೆಯಲು 1991ರ ಕಾಯ್ದೆಯನ್ನು ಹೊಸ ಬಗೆಯಲ್ಲಿ ವ್ಯಾಖ್ಯಾನಿಸುವುದು ತಪ್ಪಾಗುತ್ತದೆ. ರಾಮಜನ್ಮಭೂಮಿ ಚಳವಳಿಯ ನೇತೃತ್ವ ವಹಿಸಿದ್ದವರು, ಬೇರೆ ಯಾವುದೇ ಪೂಜಾಸ್ಥಳದ ಮೇಲೆ ಹಕ್ಕು ಸಾಧಿಸಲು ಮುಂದಾಗುವುದಿಲ್ಲ ಎಂದು ಹೇಳಿದ್ದನ್ನು ಈಗ ನೆನಪಿಸಿಕೊಡಬೇಕು. ಆದರೆ ಈಗ ಬಲಪಂಥಕ್ಕೆ ಸೇರಿದ ಕೆಲವು ಸಣ್ಣ ಗುಂಪುಗಳು ವಿವಾದವನ್ನು ಸೃಷ್ಟಿಸುತ್ತಿವೆ. ಈ ವಿಚಾರವಾಗಿ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸದೇ ಇರುವುದು ದುರದೃಷ್ಟಕರ. ಪಕ್ಷಪಾತಿ, ವಿಧ್ವಂಸಕಾರಿ ಸಾಮಾಜಿಕ ಮತ್ತು ರಾಜಕೀಯ ಉದ್ದೇಶಗಳಿಗಾಗಿ ನ್ಯಾಯಾಂಗದ ವೇದಿಕೆಗಳನ್ನು ಯಾರೂ ಬಳಕೆ ಮಾಡಿಕೊಳ್ಳದಂತೆ ಸುಪ್ರೀಂ ಕೋರ್ಟ್‌ ನಿಗಾ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT