ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಎಣ್ಣೆ ರಫ್ತು ನಿಷೇಧ ಸಂಕಷ್ಟದ ಹೊತ್ತಿನ ಹೆಚ್ಚುವರಿ ಹೊರೆ

Last Updated 25 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ತಾಳೆ ಎಣ್ಣೆಯ ರಫ್ತನ್ನು ಏಪ್ರಿಲ್‌ 28ರಿಂದ ಜಾರಿಗೆ ಬರುವಂತೆ ನಿಷೇಧಿಸುವ ತೀರ್ಮಾನವನ್ನು
ಇಂಡೊನೇಷ್ಯಾ ಕೈಗೊಂಡಿರುವುದು ಭಾರತದ ಮಟ್ಟಿಗೆ ಆಘಾತಕಾರಿ. ಅಷ್ಟೇ ಅಲ್ಲ, ಇದು ಕುಟುಂಬಗಳ ಮಟ್ಟದಿಂದ ಆರಂಭಿಸಿ ದೇಶದ ಆಡಳಿತದ ಹೊಣೆ ಹೊತ್ತಿರುವ ನಾಯಕರ ಮಟ್ಟದವರೆಗೆ ಈಗಾಗಲೇ ಇರುವ ಕೆಲವು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಲಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರದಲ್ಲಿ ದೇಶಕ್ಕೆ ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ಪೆಟ್ಟು ಬಿದ್ದಿದೆ. ಭಾರತಕ್ಕೆ ಸೂರ್ಯಕಾಂತಿ ಎಣ್ಣೆಯನ್ನುಉಕ್ರೇನ್ ಮತ್ತು ರಷ್ಯಾ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದವು. ಯುದ್ಧದ ಪರಿಣಾಮವಾಗಿ ಸಹಜವಾಗಿಯೇ ಅಲ್ಲಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಇತರ ಅಡುಗೆ ಎಣ್ಣೆಗಳ ಬೆಲೆಯು ಹೆಚ್ಚಳ ಆಗಿದೆ. ಇದರ ನಡುವೆ, ತಾಳೆ ಎಣ್ಣೆ ರಫ್ತನ್ನು ನಿಷೇಧಿಸಲು ಇಂಡೊನೇಷ್ಯಾ ಸರ್ಕಾರ ತೀರ್ಮಾನ ಕೈಗೊಂಡಿದೆ. ದೇಶಿ ಮಾರುಕಟ್ಟೆಯಲ್ಲಿನ ಪರಿಸ್ಥಿತಿಗೆ ಸ್ಪಂದಿಸಿ, ಅಲ್ಲಿನ ಸರ್ಕಾರವು ಈ ತೀರ್ಮಾನ ಕೈಗೊಂಡಿದೆಯಾದರೂ ಅದರ ಪರಿಣಾಮವು ಭಾರತದಂತಹ ದೇಶಗಳ ಮೇಲೆ ದೊಡ್ಡ ಮಟ್ಟದಲ್ಲಿ ಇರಲಿದೆ. ರಷ್ಯಾ–ಉಕ್ರೇನ್ ಯುದ್ಧ ಆರಂಭವಾಗುವ ಮೊದಲು ಅಲ್ಲಿನ ಬಂದರುಗಳಿಂದ ಸೂರ್ಯಕಾಂತಿ ಎಣ್ಣೆ ಹೊತ್ತ ಒಂದಿಷ್ಟು ಹಡಗುಗಳು ಭಾರತದ ಕಡೆ ಹೊರಟಿದ್ದವು. ಹೀಗಾಗಿ ಮಾರ್ಚ್‌ನಲ್ಲಿ ಉಕ್ರೇನ್‌ನಿಂದ 1.27 ಲಕ್ಷ ಟನ್ ಹಾಗೂ ರಷ್ಯಾದಿಂದ 73,500 ಟನ್ ಸೂರ್ಯಕಾಂತಿ ಎಣ್ಣೆ ಭಾರತಕ್ಕೆ ಬಂದಿದೆ. ಆದರೆ, ಏಪ್ರಿಲ್‌ನಲ್ಲಿ ಉಕ್ರೇನ್‌ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆಯ ರಫ್ತು ಆಗಿಲ್ಲ ಎಂದು ಅಡುಗೆ ಎಣ್ಣೆಗಳ ವರ್ತಕರ ಸಂಘಟನೆಯಾದ ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. ಈಗ ಭಾರತಕ್ಕೆ ರಷ್ಯಾ ಮತ್ತು ಅರ್ಜೆಂಟೀನಾದಿಂದ ಸೂರ್ಯಕಾಂತಿ ಎಣ್ಣೆ ಬರಬೇಕು. ಉಕ್ರೇನ್‌ನಿಂದ ಮತ್ತೆ ಯಾವಾಗ ಸೂರ್ಯಕಾಂತಿ ಎಣ್ಣೆಯ ರಫ್ತು ಆರಂಭವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರವು ಯುದ್ಧ ಕೊನೆಗೊಳ್ಳುವುದನ್ನು ಆಧರಿಸಿದೆ. ಸೂರ್ಯಕಾಂತಿ ಎಣ್ಣೆ ದುಬಾರಿ ಆಗಿರುವ ಕಾರಣದಿಂದಾಗಿ ಗ್ರಾಹಕರಲ್ಲಿ ಒಂದು ವರ್ಗವು ಇತರ ಅಡುಗೆ ಎಣ್ಣೆಗಳ ಕಡೆ ಮುಖ ಮಾಡಿದೆ ಎಂಬ ವರದಿಗಳು ಇವೆ.

ದಕ್ಷಿಣ ಭಾರತದಲ್ಲಿ ಹಲವರು ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಶೇಂಗಾ ಎಣ್ಣೆ ಕಡೆ ಮುಖ ಮಾಡಿದ್ದಾರೆ. ಉತ್ತರ ಭಾರತದಲ್ಲಿ ಹಲವು ಗ್ರಾಹಕರು ರೈಸ್‌ಬ್ರಾನ್‌ ಎಣ್ಣೆ, ಸಂಸ್ಕರಿಸಿದ ಸಾಸಿವೆ ಎಣ್ಣೆ ಬಳಕೆ ಶುರುಮಾಡಿದ್ದಾರೆ. ಇದು ಎಲ್ಲ ಬಗೆಯ ಅಡುಗೆ ಎಣ್ಣೆಗಳ ದರ ಹೆಚ್ಚಳಕ್ಕೆ ಕಾರಣವಾಗಿದೆ. ಈಗ ಇಂಡೊನೇಷ್ಯಾ ದೇಶವು ತಾಳೆ ಎಣ್ಣೆಯ ರಫ್ತನ್ನು ನಿಷೇಧಿಸಲಿರುವುದರಿಂದ, ಒಂದಿಷ್ಟು ಗ್ರಾಹಕರು ಇತರ ಅಡುಗೆ ಎಣ್ಣೆಗಳ ಖರೀದಿಗೆ ಮುಂದಾಗಬಹುದು. ಆಗ, ಎಲ್ಲ ಬಗೆಯ ಅಡುಗೆ ಎಣ್ಣೆಗಳ ದರವು ಇನ್ನಷ್ಟು ದುಬಾರಿ ಆಗುವುದು ಬಹುತೇಕ ಖಚಿತ. 2021ರ ನವೆಂಬರ್‌ನಿಂದ ಈ ವರ್ಷದ ಮಾರ್ಚ್‌ ಅಂತ್ಯದವರೆಗಿನ ಅಂಕಿ–ಅಂಶಗಳ ಪ್ರಕಾರ, ಭಾರತಕ್ಕೆ ಆಮದಾಗುವ ತಾಳೆ ಎಣ್ಣೆ ಪ್ರಮಾಣದಲ್ಲಿ ಇಂಡೊನೇಷ್ಯಾದ ಪಾಲು ಶೇಕಡ 37ರಷ್ಟು. ಮಲೇಷ್ಯಾ ಮತ್ತು ಥಾಯ್ಲೆಂಡ್‌ ದೇಶಗಳಿಂದಲೂ ಭಾರತಕ್ಕೆ ತಾಳೆ ಎಣ್ಣೆ ಆಮದು ಆಗುತ್ತಿದ್ದರೂ, ಇಂಡೊನೇಷ್ಯಾದ ತೀರ್ಮಾನದಿಂದ ಆಗಲಿರುವ ಕೊರತೆಯನ್ನು ತುಂಬಿಕೊಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಅಡುಗೆ ಎಣ್ಣೆ ವರ್ತಕರಲ್ಲಿ ಇದೆ. ಹೀಗಾಗಿ, ಈಗಿನ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವೇ ಮುಂದಾಗಿ ಇಂಡೊನೇಷ್ಯಾ ಸರ್ಕಾರದ ಜೊತೆ ಮಾತುಕತೆ ನಡೆಸಬೇಕು. ಭಾರತಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ತಾಳೆ ಎಣ್ಣೆ ಲಭ್ಯವಾಗುವಂತೆ ಕೇಂದ್ರ ಸರ್ಕಾರ ಮಾತ್ರವೇ ನೋಡಿಕೊಳ್ಳಬಲ್ಲದು. ಮಾರ್ಚ್‌ ತಿಂಗಳಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6.95ಕ್ಕೆ ತಲುಪಿದೆ. ಇದರಲ್ಲಿ ಎಣ್ಣೆ ಮತ್ತು ಕೊಬ್ಬಿನ ಅಂಶದ ಪದಾರ್ಥಗಳ ಬೆಲೆ ಏರಿಕೆಯ ಕೊಡುಗೆಯೂ ದೊಡ್ಡಮಟ್ಟದಲ್ಲಿದೆ. ಇಂಡೊನೇಷ್ಯಾದ ತೀರ್ಮಾನದ ಪರಿಣಾಮವಾಗಿ ಅಡುಗೆ ಎಣ್ಣೆಗಳ ಬೆಲೆಯು ಜಾಸ್ತಿ ಆದರೆ, ಒಟ್ಟಾರೆ ಚಿಲ್ಲರೆ ಹಣದುಬ್ಬರ ಪ್ರಮಾಣದ ಮೇಲೆಯೂ ಅದರ ದುಷ್ಪರಿಣಾಮ ಇದ್ದೇ ಇರುತ್ತದೆ. ಅಂದರೆ, ದೇಶದ ಜನರ ತಿಂಗಳ ದಿನಸಿ ಖರ್ಚು ಇನ್ನಷ್ಟು ಹೆಚ್ಚಾಗುತ್ತದೆ. ಚಿಲ್ಲರೆ ಹಣದುಬ್ಬರ ದರವನ್ನು ನಿಯಂತ್ರಣದಲ್ಲಿ ಇರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ಹೆಣಗಾಟ ನಡೆಸಿರುವ ಹೊತ್ತಿನಲ್ಲಿ ಎದುರಾಗಿರುವ ಈ ಸಂಕಷ್ಟವು ತೀರಾ ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT