ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಭಾರತ–ಶ್ರೀಲಂಕಾ ದೋಣಿ ಸೇವೆ: ನಂಟು ಬಲಪಡಿಸಲು ಪೂರಕ

Published 22 ಅಕ್ಟೋಬರ್ 2023, 23:19 IST
Last Updated 22 ಅಕ್ಟೋಬರ್ 2023, 23:19 IST
ಅಕ್ಷರ ಗಾತ್ರ

ಭಾರತ ಮತ್ತು ಶ್ರೀಲಂಕಾ ನಡುವೆ ಪ್ರಯಾಣಿಕ ದೋಣಿ ಸೇವೆಯನ್ನು ಪುನರಾರಂಭಿಸಲಾಗಿದೆ. ಇದರಿಂದಾಗಿ ಎರಡೂ ದೇಶಗಳ ನಡುವಣ ಸಂಬಂಧ ಮತ್ತು ಸಂಪರ್ಕ ಉತ್ತಮಗೊಳ್ಳಲಿದೆ. ತಮಿಳುನಾಡಿನ ನಾಗ‍ಪಟ್ಟಿಣಂ ಮತ್ತು ಜಾಫ್ನಾದ ಕಂಕೆಸಂತೊರೈ ನಡುವೆ ‘ಚೆರಿಯಪಾನಿ’ ಎಂಬ ದೋಣಿ ಸಂಚಾರವನ್ನು ಇತ್ತೀಚೆಗೆ ಆರಂಭಿಸಲಾಗಿದೆ. 50 ಜನರನ್ನು ಈ ದೋಣಿಯಲ್ಲಿ ಕರೆದೊಯ್ಯುವ ಮೂಲಕ ದೋಣಿ ಸೇವೆಗೆ ಚಾಲನೆ ನೀಡಲಾಗಿದೆ. ಎರಡೂ ದೇಶಗಳ ಮಧ್ಯೆ ಇಂತಹ ದೋಣಿ ಸೇವೆಯನ್ನು 1900ರ ಹೊತ್ತಿಗೇ ಆರಂಭಿಸಲಾಗಿತ್ತು. ಚೆನ್ನೈ–ತಲೈಮನ್ನಾರ್‌ ನಡುವಣ ದೋಣಿ–ರೈಲು ಸೇವೆ, ರಾಮೇಶ್ವರದಿಂದ ತಲೈಮನ್ನಾರ್‌ ಹಾಗೂ ತೂತ್ತುಕುಡಿಯಿಂದ ಕೊಲಂಬೊ ನಡುವೆ ದೋಣಿ ಸೇವೆ ಆಗಿನಿಂದಲೇ ಇತ್ತು. ಆದರೆ, ಶ್ರೀಲಂಕಾದಲ್ಲಿ 1980ರ ದಶಕದಲ್ಲಿ ಜನಾಂಗೀಯ ಕಲಹವು ತೀವ್ರಗೊಂಡಾಗ ಈ ಎಲ್ಲ ಸೇವೆಗಳು ಅಸ್ತವ್ಯಸ್ತಗೊಂಡು, ಬಳಿಕ ರದ್ದಾದವು. ವಾಯುಯಾನವು ಮಾತ್ರ ಎರಡೂ ದೇಶಗಳ ನಡುವಣ ಪ್ರಮುಖ ಸಂಪರ್ಕ ಕೊಂಡಿಯಾಗಿ ಉಳಿಯಿತು. ಕೊಲಂಬೊ ಮತ್ತು ತೂತ್ತುಕುಡಿ ನಡುವೆ ಹತ್ತು ವರ್ಷಗಳ ಹಿಂದೆ ದೋಣಿ ಸೇವೆಯನ್ನು ಆರಂಭಿಸಲಾಯಿತಾದರೂ ಅಲ್ಪಕಾಲದ ನಂತರ ಅದನ್ನು ನಿಲ್ಲಿಸಲಾಯಿತು. ಚೆನ್ನೈಯಿಂದ ಖಾಸಗಿ ದೋಣಿ ಸಂಚಾರ ಸೇವೆಯನ್ನು ನಾಲ್ಕು ತಿಂಗಳ ಹಿಂದೆ ಆರಂಭಿಸಲಾಯಿತು. ಇದಕ್ಕೆ ಜನರಿಂದ ಉತ್ತಮ ಸ್ಪಂದನ ಸಿಕ್ಕಿದೆ. ಈಗ ಆರಂಭಿ ಸಲಾಗಿರುವ ದೋಣಿ ಸೇವೆಯು ದೀರ್ಘಕಾಲ ಉಳಿಯುವ ಭರವಸೆ ಇದೆ. 

ಭಾರತ ಮತ್ತು ಶ್ರೀಲಂಕಾ ನಡುವಣ ಸಂಬಂಧವು ಈ ಹಿಂದೆ ಹಲವು ಏರಿಳಿತಗಳನ್ನು ಕಂಡಿದೆ. ಆರ್ಥಿಕ ನೆರವು ಮತ್ತು ಬಂಡವಾಳ ಹೂಡಿಕೆಯ ಮೂಲಕ ಶ್ರೀಲಂಕಾ ಜೊತೆಗಿನ ನಂಟನ್ನು ಚೀನಾ ಗಟ್ಟಿಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಂಧವು ಇನ್ನಷ್ಟು ಬಲಗೊಂಡಿದೆ. ದ್ವೀಪರಾಷ್ಟ್ರ ಶ್ರೀಲಂಕಾವನ್ನು ಜೊತೆಗೆ ಇರಿಸಿಕೊಳ್ಳಲು ಭಾರತ ಮತ್ತು ಚೀನಾ ನಡುವೆ ಪೈಪೋಟಿ ಇದ್ದಂತೆ ಕಾಣಿಸುತ್ತಿದೆ. ಶ್ರೀಲಂಕಾವು ಹಣಕಾಸಿನ ಗಂಭೀರ ಸಮಸ್ಯೆ ಎದುರಿಸಿ ಅರ್ಥ ವ್ಯವಸ್ಥೆಯು ಇನ್ನೇನು ಪೂರ್ಣವಾಗಿ ಕುಸಿದುಬೀಳಲಿದೆ ಎಂಬ ಸ್ಥಿತಿ ತಲುಪಿದಾಗ ಭಾರತವು ದೊಡ್ಡ ಮಟ್ಟದಲ್ಲಿ ನೆರವಾಗಿತ್ತು. ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರು ಭಾರತಕ್ಕೆ ಜುಲೈನಲ್ಲಿ ಭೇಟಿ ಕೊಟ್ಟಿದ್ದರು. ಹಲವು ಒಪ್ಪಂದಗಳಿಗೆ ಆ ಸಂದರ್ಭದಲ್ಲಿ ಸಹಿ ಹಾಕಲಾಗಿತ್ತು. ಎರಡೂ ದೇಶಗಳ ನಡುವಣ ಜಲಸಾರಿಗೆಯನ್ನು ಉತ್ತಮಪಡಿಸಬೇಕು ಮತ್ತು ಹಳೆಯ ಜಲಮಾರ್ಗಗಳನ್ನು ‍ಪುನರಾರಂಭಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ಆಗಿತ್ತು. ವ್ಯಾಪಾರ ವಹಿವಾಟು ಮತ್ತು ಇತರ ಸಂಪರ್ಕಗಳನ್ನು ಉತ್ತಮಪಡಿಸುವುದಕ್ಕಾಗಿ ಕೊಲಂಬೊ, ಕಂಕೆಸಂತೊರೈ ಮತ್ತು ಟ್ರಿಂಕಾಮಲಿ ಬಂದರುಗಳ ಅಭಿವೃದ್ಧಿಗೆ ನೆರವು ನೀಡುವುದಕ್ಕೆ ಭಾರತವು ಒಪ್ಪಿಕೊಂಡಿದೆ. ಹೀಗಾಗಿ, ದೋಣಿ ಸೇವೆಯ ಪುನರಾರಂಭವು ಮಹತ್ವವನ್ನು ಪಡೆದುಕೊಂಡಿದೆ. 

ಸಮುದ್ರ ಮಾರ್ಗವನ್ನು ಪುನರಾರಂಭಿಸಿರುವುದು ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗ
ಳನ್ನು ಬಲಪಡಿಸುವುದರ ಜೊತೆಗೆ ಜನರ ನಡುವಣ ಸಂಪರ್ಕ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೂ ಅವಕಾಶ ಕೊಡಲಿದೆ. ಎರಡೂ ದೇಶಗಳ ನಡುವೆ ಇಂತಹ ಸಂಬಂಧವು ಬಹಳ ಹಿಂದಿನಿಂದಲೂ ಇತ್ತು. ಈ ಬಂಧವು ಈಗ ಇನ್ನಷ್ಟು ಉತ್ತಮಗೊಂಡರೆ ಎರಡೂ ದೇಶಗಳು ಮತ್ತು ಜನರಿಗೆ ಅದರಿಂದ ಅನುಕೂಲಗಳು ಇವೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಇರುವ ಅಪಾರವಾದ ಅವಕಾಶಗಳನ್ನು ಎರಡೂ ದೇಶಗಳು ಬಳಸಿಕೊಳ್ಳಬಹುದು. ಹಿಂಗಾರು ಮಾರುತದ ಕಾರಣಕ್ಕಾಗಿ, ದೋಣಿ ಸೇವೆಯು ಮುಂದಿನ ವಾರದಿಂದ ಸ್ಥಗಿತಗೊಳ್ಳಲಿದೆ. ಜನವರಿಯಿಂದ ಮತ್ತೆ ಆರಂಭಗೊಳ್ಳಲಿದೆ. ಏಕಮುಖ ಸಂಚಾರಕ್ಕೆ ₹ 7,600 ದರ ನಿಗದಿ ಮಾಡಲಾಗಿದೆ. ಇದು ಅತಿಯಾಯಿತು. ಜಲಸಾರಿಗೆಯು ಇತರ ಸಾರಿಗೆಗಳಿಗಿಂತ ಅಗ್ಗವಾಗಿರಬೇಕು. ಆದರೆ, ‘ಚೆರಿಯಪಾನಿ’ ದೋಣಿಯ ಪ್ರಯಾಣ ದರವು ವಿಮಾನದ ದರಕ್ಕಿಂತಲೂ ಹೆಚ್ಚಾಗಿದೆ. ನಾಗಪಟ್ಟಿಣಂ ಬಂದರಿನಲ್ಲಿ ಪ್ರಯಾಣಿಕರಿಗೆ ಇರುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಉತ್ತಮಪಡಿಸಬೇಕಾದ ಅಗತ್ಯ ಇದೆ. ಈಗ ಆರಂಭಿಸಿರುವ ದೋಣಿ ಸೇವೆಯು ಸ್ಥಿರಗೊಂಡರೆ, ಇತ್ತೀಚಿನ ದಿನಗಳಲ್ಲಿ ನಿಲ್ಲಿಸಲಾದ ಇತರ ದೋಣಿ ಸೇವೆಗಳು ಕೂಡ ಪುನರಾರಂಭ ಆಗಬಹುದು. ಸಂ‍ಪರ್ಕವು ಉತ್ತಮಗೊಳ್ಳುವುದು ಎರಡೂ ದೇಶಗಳಿಗೆ ಪ್ರಯೋಜನಕಾರಿ ಆಗಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT