ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಿಹಾರಕ್ಕೆ ಉಚಿತ ಲಸಿಕೆಯ ಆಮಿಷ: ಸಭ್ಯ ರಾಜಕಾರಣದ ಲಕ್ಷಣ ಅಲ್ಲ

Last Updated 23 ಅಕ್ಟೋಬರ್ 2020, 21:15 IST
ಅಕ್ಷರ ಗಾತ್ರ

ಚುನಾವಣೆಯು ಪ್ರಜಾಪ್ರಭುತ್ವದ ನೆಲೆಗಟ್ಟುಗಳಲ್ಲಿ ಒಂದು. ಆದರೆ, ನಮ್ಮ ದೇಶದಲ್ಲಿ ಚುನಾವಣೆಯೇ ಪ್ರಜಾಪ್ರಭುತ್ವದ ಅಣಕವಾಗುತ್ತಿರುವ ವಿರೋಧಾಭಾಸಕ್ಕೆ ಇತ್ತೀಚಿನ ವರ್ಷಗಳು ಸಾಕ್ಷಿಯಾಗಿವೆ. ಹಣಬಲ, ತೋಳ್ಬಲ, ಆಮಿಷ, ಜಾತಿ–ಧರ್ಮಗಳನ್ನು ಬಳಸಿಕೊಂಡು ಚುನಾವಣೆ ಗೆಲ್ಲಲಾಗುತ್ತದೆ ಎಂಬುದು ವ್ಯಾಪಕವಾಗಿ ಕೇಳಿಬರುತ್ತಿರುವ ಆರೋಪ. ನಮ್ಮ ಶಾಸನಸಭೆಗಳಲ್ಲಿ ಇರುವ ಅಪರಾಧಗಳ ಆಪಾದನೆ ಹೊತ್ತ ಜನಪ್ರತಿನಿಧಿಗಳ ಸಂಖ್ಯೆಯನ್ನು ಗಮನಿಸಿದರೆ ಈ ಆರೋಪದಲ್ಲಿ ಸತ್ಯವಿದೆ ಎಂದು ಅನ್ನಿಸದೇ ಇರದು. ಚುನಾವಣೆ ಗೆಲ್ಲುವ ಆಮಿಷಗಳ ಸಾಲಿಗೆ ಈ ಬಾರಿ ಕೋವಿಡ್‌–19ರ ಲಸಿಕೆ ಹೊಸ ಸೇರ್ಪಡೆ. ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯ ಮೊದಲ ಭರವಸೆಯೇ ಚುನಾವಣೆ ಗೆದ್ದರೆ ಬಿಹಾರದ ಎಲ್ಲರಿಗೂ ಕೋವಿಡ್‌ ಲಸಿಕೆ ಉಚಿತ ಎಂಬುದಾಗಿದೆ. ಮತ ಹಾಕಿದರೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂಬ ಭರವಸೆಯು ಆಮಿಷದ ಜತೆಗೆ ಬೆದರಿಕೆಯ ಧಾಟಿಯನ್ನೂ ಹೊಂದಿದೆ ಎಂದು ಮತದಾರರಿಗೆ ಅನಿಸಿದರೆ ಅದು ಅವರ ತಪ್ಪಲ್ಲ. ಏಕೆಂದರೆ, ಮತ ನೀಡದೇ ಇದ್ದರೆ ಜೀವರಕ್ಷಕ ಲಸಿಕೆ ದೊರೆಯದೇ ಇರಬಹುದು ಎಂದು ಜನರು ಭಾವಿಸುವ ಸಾಧ್ಯತೆ ಇದೆ. ಕೊರೊನಾ ಸೋಂಕಿನಿಂದಾಗಿ ಇಡೀ ಜಗತ್ತು ತಲ್ಲಣಿಸಿದೆ ಎಂಬುದು ನಿಜ. ಭಾರತವೂ ಇದಕ್ಕೆ ಹೊರತಲ್ಲ. ತ್ವರಿತವಾಗಿ ಹರಡುವ ಲಕ್ಷಣವನ್ನು ಹೊಂದಿರುವ ಮತ್ತು ಮಾರಕವೂ ಆಗಬಹುದಾದ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಭೀತಿ ಇದೆ. ರೋಗ ಮತ್ತು ಸಾವಿನ ಭಯವನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವುದು ಸಭ್ಯ ರಾಜಕಾರಣದ ಲಕ್ಷಣ ಅಲ್ಲ ಎಂದೇ ಹೇಳಬಹುದು. ಈ ರೀತಿಯ ಆಮಿಷವು ನೈತಿಕ ನಡವಳಿಕೆ ಕೂಡ ಅಲ್ಲ. ಅಷ್ಟಲ್ಲದೆ, ಇಂತಹ ಆಮಿಷವು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯೇ ಎಂಬುದನ್ನು ಚುನಾವಣಾ ಆಯೋಗವು ಪರಿಶೀಲನೆಗೆ ಒಳಪಡಿಸಬೇಕು. ಇದು ಉಲ್ಲಂಘನೆ ಹೌದು ಎಂದಾದರೆ ಸಂಬಂಧಿಸಿದ ಪಕ್ಷದ ವಿರುದ್ಧ ಕ್ರಮವನ್ನೂ ಕೈಗೊಳ್ಳಬೇಕು.

ಆರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೊಂದು ಈ ಭರವಸೆ ಕೊಟ್ಟಿದೆ ಎಂಬುದು ಇನ್ನಷ್ಟು ಕಳವಳಕಾರಿ ಅಂಶ. ಒಂದು ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂಬುದು ಇತರ ರಾಜ್ಯಗಳ ಜನರಿಗೆ ಮಾಡುವ ಅನ್ಯಾಯ ಎಂದೇ ಪರಿಗಣಿತವಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಸರಿ ಹೊಂದುವಂತಹ ನಿಲುವು ಅಲ್ಲ. ಕೇಂದ್ರದ ಮೂಲಕ ಜನರಿಗೆ ದೊರೆಯಬೇಕಾದ ಸೌಲಭ್ಯಗಳಿಗೆ ಯಾವುದೇ ತಾರತಮ್ಯ ಇರಬಾರದು. ಮತ ನೀಡಿದವರಿಗೆ ಒಂದು ರೀತಿ, ಮತ ನೀಡದವರಿಗೆ ಇನ್ನೊಂದು ರೀತಿಯ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸಿದರೆ ಅದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಅನ್ನಿಸುತ್ತದೆ. ಇಂತಹ ನಡೆಯು ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ಜನರನ್ನು ಭಾರಿ ಆತಂಕಕ್ಕೆ ತಳ್ಳಿದರೆ ಆಶ್ಚರ್ಯವಿಲ್ಲ. ಕೋವಿಡ್‌ ಸಾಂಕ್ರಾಮಿಕವು ಕಾಣಿಸಿಕೊಂಡ ಬಳಿಕಪ‍್ರಧಾನಿಯವರು ಹಲವು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈಗ ಮತ್ತೊಮ್ಮೆ ಮಾತನಾಡಿ, ಲಸಿಕೆ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಜನರಲ್ಲಿ ವಿಶ್ವಾಸ ತುಂಬಬೇಕಿದೆ. ಕೋವಿಡ್‌ ಲಸಿಕೆಗಾಗಿ ಇಡೀ ಜಗತ್ತು ಕಾಯುತ್ತಿದೆ. ಲಸಿಕೆ ಇನ್ನೂ ಬಳಕೆಗೆ ಲಭ್ಯ ಇಲ್ಲ. ಲಸಿಕೆಯು ಲಭ್ಯವಾದ ಬಳಿಕ ಅದನ್ನು ಹೇಗೆ ಬಳಸಬೇಕು ಎಂಬ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಕೆಲ ದಿನಗಳ ಹಿಂದೆ ಹೇಳಿತ್ತು. ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕೋವಿಡ್‌ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿ ಇರುವವರಿಗೆ ಮೊದಲಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದರು. ಕೋವಿಡ್‌ ಲಸಿಕೆಯು ಒಂದು ಪಕ್ಷ ಅಥವಾ ಒಂದು ಚುನಾವಣೆಗೆ ಸೀಮಿತವಾದ ವಿಚಾರ ಅಲ್ಲ. ಜಾಗತಿಕ ಮಟ್ಟದ ಕೆಲವು ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿವೆ; ಲಸಿಕೆ ತಯಾರಿಕೆಗೆ ಭಾರತದ ಕೆಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿವೆ. ಭಾರತದ ಕಂಪನಿಗಳೂ ಲಸಿಕೆ ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿವೆ. ಇದೊಂದು ಜಾಗತಿಕ ಸಹಭಾಗಿತ್ವದ ಕಾರ್ಯಾಚರಣೆ. ಯಾರಿಗೆ ಮೊದಲು ಲಸಿಕೆ ನೀಡಬೇಕು ಎಂಬುದು ವೈದ್ಯಕೀಯ ಅಗತ್ಯದ ಆಧಾರದಲ್ಲಿ ತೀರ್ಮಾನವಾಗಬೇಕಾದ ವಿಚಾರವೇ ವಿನಾ ರಾಜಕೀಯ ನಿರ್ಧಾರ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT