ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸಂಬಂಧಿಸಿದಂತೆ ಪ್ರಸಕ್ತ ಆರ್ಥಿಕ ವರ್ಷದ ಮೊದಲ ಅಂದಾಜನ್ನು ಕೇಂದ್ರ ಸರ್ಕಾರವು ಬುಧವಾರ ಬಿಡುಗಡೆ ಮಾಡಿದ್ದು, ಇದುವರೆಗಿನ ಆರ್ಥಿಕ ಮುನ್ನೋಟಗಳಿಗಿಂತಲೂ ಹೆಚ್ಚಿನ ಆಶಾವಾದವನ್ನು ವ್ಯಕ್ತಪಡಿಸಲಾಗಿದೆ. ಜಿಡಿಪಿಯು ಶೇ 7.4ರಷ್ಟು ಬೆಳವಣಿಗೆ ಕಾಣಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ 7.3ರಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿಸಿತ್ತು. ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ 8ರಷ್ಟು ಬೆಳವಣಿಗೆ ಸಾಧಿಸಲಾಗಿದ್ದರೂ ದ್ವಿತೀಯಾರ್ಧದಲ್ಲಿ ಬೆಳವಣಿಗೆ ದರ ಕುಂಠಿತಗೊಳ್ಳಲಿದೆ ಎಂಬ ನಿರೀಕ್ಷೆ ಮೊದಲೇ ಇತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ಸುಂಕ ಸಮರ ಮತ್ತು ಸರ್ಕಾರ ಮಾಡುವ ವೆಚ್ಚದಲ್ಲಿ ಆಗುವ ಇಳಿಕೆಯಿಂದ ಆರ್ಥಿಕ ಬೆಳವಣಿಗೆ ದರ ಕುಂಠಿತಗೊಳ್ಳಲಿದೆ ಎಂಬ ಅಂದಾಜಿಗೆ ಆರ್ಥಿಕ ತಜ್ಞರು ಬಂದಂತಿತ್ತು. ಆದರೆ, ಜಿಡಿಪಿ ವೃದ್ಧಿಯ ಪ್ರಮಾಣ ಶೇ 7.4ರಷ್ಟು ಇರಲಿದೆ ಎನ್ನುವ ಅಂದಾಜು ಗಮನಾರ್ಹವಾದುದು. ಇದು ಕಳೆದ ಹಣಕಾಸು ವರ್ಷಕ್ಕಿಂತಲೂ (ಶೇ 6.5) ಅತ್ಯುತ್ತಮವಾದ ಸಾಧನೆ ಎನಿಸಲಿದೆ. ತಗ್ಗಿದ ಚಿಲ್ಲರೆ ಹಣದುಬ್ಬರ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಸಹ ಆರ್ಥಿಕ ಬೆಳವಣಿಗೆಯ ದರಕ್ಕೆ ವೇಗವನ್ನು ನೀಡಿವೆ. ಬಜೆಟ್ನ ನಿರೀಕ್ಷೆಯ ಪ್ರಮಾಣ ಶೇ 10.1ರಷ್ಟಕ್ಕೆ ಹೋಲಿಸಿದಾಗ, ಈಗಿನ ಬೆಳವಣಿಗೆ ದರ ಅತ್ಯಲ್ಪ ಎಂದೇ ಹೇಳಬೇಕು. ಸತತ ಎರಡನೇ ವರ್ಷದಲ್ಲಿಯೂ ಜಿಡಿಪಿ ವೃದ್ಧಿ ದರವು ಶೇ 10ಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಆರ್ಥಿಕ ಬೆಳವಣಿಗೆಯ ಕುಂಠಿತವು ಒಟ್ಟಾರೆ ಬಜೆಟ್ನ ರೂಪುರೇಷೆಯ ಮೇಲೆ ಪರಿಣಾಮವನ್ನೂ ಬೀರುತ್ತದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸೇವಾ ವಲಯದ ಪ್ರಗತಿ ಎದ್ದು ಕಾಣುವಂತಿದೆ. 2024–25ರಲ್ಲಿ ಶೇ 7.2ರಷ್ಟು ಬೆಳವಣಿಗೆ ಕಂಡಿದ್ದ ಆ ವಲಯವು ಈ ವರ್ಷದಲ್ಲಿ ಶೇ 9.1ರಷ್ಟು ಪ್ರಗತಿ ದಾಖಲಿಸಲಿದೆ ಎಂಬ ಅಂದಾಜು ಮಾಡಲಾಗಿದೆ. ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಸಂವಹನ, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವಾ ವಲಯಗಳೂ ಉತ್ತಮ ಸಾಧನೆ ತೋರಬಹುದು ಎಂದು ನಿರೀಕ್ಷಿಸಲಾಗಿದೆ. ಸುಂಕ ಏರಿಕೆಯಿಂದ ವ್ಯಾಪಾರ ವಲಯವು ಇದುವರೆಗೆ ಅಂತಹ ದೊಡ್ಡ ಸಂಕಷ್ಟವನ್ನು ಎದುರಿಸಿದಂತಿಲ್ಲ ಎಂದು ತೋರುತ್ತದೆ. ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ತಿರುವು ಮುರುವು ಆಗಬಹುದು. ಉತ್ಪಾದನಾ ವಲಯವು ಪ್ರಗತಿ ಕಾಣುತ್ತಿದ್ದು, ನಿರ್ಮಾಣ ಕ್ಷೇತ್ರದ ಬೆಳವಣಿಗೆ ಕುಂಠಿತಗೊಂಡಿದೆ. ಬಳಕೆ ಮತ್ತು ಹೂಡಿಕೆ ಚಟುವಟಿಕೆಗಳು ಇನ್ನೂ ಹೆಚ್ಚುವ ನಿರೀಕ್ಷೆ ಇದೆ.

ಜಿಡಿಪಿ ಅಂದಾಜುಗಳು ಲಭ್ಯವಿರುವ ನವೆಂಬರ್ವರೆಗಿನ ದತ್ತಾಂಶ ಹಾಗೂ ಸದ್ಯದ ವಿಧಾನಗಳನ್ನು ಅವಲಂಬಿಸಿವೆ. ಕೇಂದ್ರ ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯವು ಜಿಡಿಪಿಗೆ ಸಂಬಂಧಿಸಿದಂತೆ ಫೆಬ್ರುವರಿಯಲ್ಲಿ ಅಂದಾಜುಗಳ ಸರಣಿಯನ್ನು ಬಿಡುಗಡೆ ಮಾಡಲಿದೆ. ಆಗ ದತ್ತಾಂಶಗಳ ಗಾತ್ರ ಮತ್ತಷ್ಟು ಹಿಗ್ಗಿ, ಆರ್ಥಿಕ ಸ್ಥಿತಿಯ ಚಿತ್ರಣ ಇನ್ನೂ ಸ್ಪಷ್ಟಗೊಳ್ಳಲಿದೆ. ಗ್ರಾಹಕರ ಬೆಲೆ ಸೂಚ್ಯಂಕ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಕೂಡ ಬಿಡುಗಡೆ ಆಗಬೇಕಿದೆ. ಹೊಸ ವಿಧಾನಗಳು ಆರ್ಥಿಕ ಬೆಳವಣಿಗೆ ಗತಿಯನ್ನು ನಿಚ್ಚಳವಾಗಿ ಗುರುತಿಸುವ ಜತೆಗೆ ತಳಮಟ್ಟದಲ್ಲಿ ಆಗಿರುವ ಪ್ರಗತಿಗೂ ಕನ್ನಡಿ ಹಿಡಿಯಲಿವೆ. ಸದ್ಯದ ಜಾಗತಿಕ ವಿದ್ಯಮಾನಗಳು ದೇಶದ ಆರ್ಥಿಕತೆಗೆ ಬಹುದೊಡ್ಡ ಸವಾಲುಗಳಾಗಿವೆ. ಅಮೆರಿಕದ ಹೆಚ್ಚುವರಿ ಸುಂಕದ ತೂಗುಗತ್ತಿ ಬೇರೆ ತೂಗುತ್ತಿದ್ದು, ಆತಂಕದ ಅಲೆಯನ್ನು ಎಬ್ಬಿಸಿದೆ. ಈ ಆತಂಕವನ್ನು ದೂರಮಾಡುವ ನಿಟ್ಟಿನಲ್ಲಿ ಎರಡು ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲು ನಡೆದಿರುವ ಪ್ರಯತ್ನಗಳು ದೇಶದ ಆರ್ಥಿಕ ಸ್ಥಿರತೆಗೆ ಬಲು ಮುಖ್ಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.