ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | GDP ಬೆಳವಣಿಗೆ: ಎದ್ದುಕಾಣುವ ಸಾಧನೆ, ಮುಂದಿದೆ ಬೇಡಿಕೆ ಹೆಚ್ಚಿಸುವ ಸವಾಲು

Published 1 ಜೂನ್ 2023, 21:43 IST
Last Updated 1 ಜೂನ್ 2023, 21:43 IST
ಅಕ್ಷರ ಗಾತ್ರ

ಈ ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 6.1ರಷ್ಟು ಆಗಿದೆ. 2022ರ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 4.5ರಷ್ಟು ಇತ್ತು. ಮಾರ್ಚ್ ‌ತ್ರೈಮಾಸಿಕದಲ್ಲಿನ ಬೆಳವಣಿಗೆ ಪ್ರಮಾಣವು ನಿರೀಕ್ಷೆಗಿಂತ ಬಹಳ ಹೆಚ್ಚಿದೆ. ಅಲ್ಲದೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯು ಉತ್ತಮ ಪ್ರಮಾಣದಲ್ಲಿ ಬೆಳವಣಿಗೆ ಕಾಣಲಿದೆ ಎಂಬ ಆಶಾಭಾವನೆಯನ್ನು ಮೂಡಿಸಿದೆ. 2022–23ನೆಯ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 7.2ರಷ್ಟು ಆಗಿದೆ ಎಂಬುದನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ. ಇದು ಕೂಡ ನಿರೀಕ್ಷೆಗಿಂತ ತುಸು ಹೆಚ್ಚು. ಈ ಬೆಳವಣಿಗೆಯ ಕಾರಣದಿಂದಾಗಿ ಆರ್ಥಿಕ ಬೆಳವಣಿಗೆಯ ವಿಚಾರದಲ್ಲಿ ಭಾರತವು ಜಾಗತಿಕವಾಗಿ ಎದ್ದುಕಾಣುವಂತಹ ಸಾಧನೆ ತೋರಿದಂತಾಗಿದೆ. 2022–23ರ ಕೊನೆಯ ತ್ರೈಮಾಸಿಕದಲ್ಲಿ ದೇಶವು ಕಂಡ ಬೆಳವಣಿಗೆಯು ಇಡೀ ವರ್ಷದ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿನ ಮಟ್ಟಕ್ಕೆ ಒಯ್ದಿದೆ. ಅರ್ಥ ವ್ಯವಸ್ಥೆಯ ಬಹುತೇಕ ವಲಯಗಳಲ್ಲಿ ಏರಿಕೆ ದಾಖಲಾಗಿರುವುದನ್ನು ಅಂಕಿ–ಅಂಶಗಳು ತೋರಿಸುತ್ತಿವೆ. ಕೃಷಿ ವಲಯದಲ್ಲಿ ಶೇಕಡ 5.5ರಷ್ಟು ಬೆಳವಣಿಗೆ ದಾಖಲಾಗಿದೆ. ತಯಾರಿಕಾ ವಲಯದಲ್ಲಿ ಶೇ 4.5ರಷ್ಟು ಬೆಳವಣಿಗೆ ಕಂಡುಬಂದಿದೆ. ಈ ವಲಯದಲ್ಲಿ ಎರಡನೆಯ ಹಾಗೂ ಮೂರನೆಯ ತ್ರೈಮಾಸಿಕಗಳಲ್ಲಿ ಕುಸಿತ ದಾಖಲಾಗಿತ್ತು. ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ಆಗಿರುವುದು ಎದ್ದು ಕಾಣುವಂತೆ ಇದೆ. ನಿರ್ಮಾಣ ವಲಯ ಕೂಡ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿದೆ.

2022–23ರಲ್ಲಿ ಆಗಿರುವಂತಹ ಬೆಳವಣಿಗೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೂ (2023–24) ಆಗುತ್ತದೆ ಎಂದು ನಿರೀಕ್ಷಿಸುವುದು ಈ ಹಂತದಲ್ಲಿ ಸರಿಯಾಗಲಿಕ್ಕಿಲ್ಲ. ಅಲ್ಲದೆ, ಈಗ ದಾಖಲಾಗಿರುವ ಬೆಳವಣಿಗೆಗೆ ರಾಜಕೀಯ ಲೆಕ್ಕಾಚಾರಗಳ ಆಧಾರದಲ್ಲಿ ಹೆಗ್ಗಳಿಕೆ ಪಡೆದುಕೊಳ್ಳಲು ಮುಂದಾಗುವುದು ಕೂಡ ಈ ಹಂತದಲ್ಲಿ ಸರಿಯಲ್ಲ. ಇಡೀ ವರ್ಷದ ಬೆಳವಣಿಗೆ ಪ್ರಮಾಣದ ಮೇಲೆ ಮೊದಲ ಎರಡು ತ್ರೈಮಾಸಿಕಗಳಲ್ಲಿ ಆಗಿದ್ದ ಹೆಚ್ಚಿನ ಪ್ರಮಾಣದ ಬೆಳವಣಿಗೆಯ ಪ್ರಭಾವ ಜಾಸ್ತಿ ಇದೆ. ಮೊದಲ ಎರಡು ತ್ರೈಮಾಸಿಕಗಳಲ್ಲಿ ಬೆಳವಣಿಗೆ ಪ್ರಮಾಣವು ಹೆಚ್ಚಾಗಿದ್ದುದಕ್ಕೆ, ಆ ಎರಡು ತ್ರೈಮಾಸಿಕಗಳನ್ನು ಹೋಲಿಸಿ ನೋಡುವ ಮಟ್ಟ ಕಡಿಮೆ ಇದ್ದುದೂ ಒಂದು ಕಾರಣ ಎಂಬುದನ್ನು ಕಡೆಗಣಿಸಲಾಗದು. 2022–23ರ ದ್ವಿತೀಯಾರ್ಧದಲ್ಲಿ ಆಗಿರುವ ಜಿಡಿಪಿ ಬೆಳವಣಿಗೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ಯಾವ ಮಟ್ಟದಲ್ಲಿ ಆಗಬಹುದು ಎಂಬ ಬಗ್ಗೆ ಹೆಚ್ಚು ಸ್ಪಷ್ಟವಾದ ನೋಟವೊಂದನ್ನು ಕೊಡಬಲ್ಲದು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ 6.5ರಷ್ಟು ಬೆಳವಣಿಗೆ ಕಾಣಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಅಂದಾಜು ಮಾಡಿದೆ. ಆದರೆ, ಹಲವು ಕಾರಣಗಳಿಂದಾಗಿ ಈ ಮಟ್ಟದ ಬೆಳವಣಿಗೆ ಕೂಡ ಕಷ್ಟಸಾಧ್ಯವಾಗಬಹುದು. 

ಮಾರುಕಟ್ಟೆಯಲ್ಲಿ ಜನಸಾಮಾನ್ಯರಿಂದ ಬರುವ ಬೇಡಿಕೆಯ ಪ್ರಮಾಣವು ದೊಡ್ಡ ಮಟ್ಟದ ಬೆಳವಣಿಗೆ ಕಾಣದೆ ಇರುವುದು ಒಳ್ಳೆಯ ಸೂಚನೆ ಅಲ್ಲ. ನಾಲ್ಕನೆಯ ತ್ರೈಮಾಸಿಕದಲ್ಲಿ ಇದು ಶೇ 2.8ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಇದು ಮೂರನೆಯ ತ್ರೈಮಾಸಿಕದಲ್ಲಿ ಶೇ 2.2ರಷ್ಟು ಏರಿಕೆ ದಾಖಲಿಸಿತ್ತು. ಹೆಚ್ಚಿನ ಬೆಳವಣಿಗೆ ಸಾಧ್ಯವಾಗಬೇಕು ಎಂದಾದರೆ ಬೇಡಿಕೆ ಹೆಚ್ಚಬೇಕಿರುವುದು ಅನಿವಾರ್ಯ. ಆದರೆ ಚಿಲ್ಲರೆ ಹಣದುಬ್ಬರವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಮಟ್ಟಕ್ಕೆ ಇನ್ನೂ ಇಳಿಕೆ ಆಗದಿರುವ ಕಾರಣ ಬೇಡಿಕೆಯು ಹೆಚ್ಚಾಗುತ್ತದೆ ಎಂದು ಖಚಿತವಾಗಿ ಹೇಳಲಾಗದು. ಚಿಲ್ಲರೆ ಹಣದುಬ್ಬರವು ಶೇ 5.2ರಷ್ಟು ಆಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಆದರೆ ಇದು ಸ್ವತಃ ಆರ್‌ಬಿಐ ನಿಗದಿ ಮಾಡಿಕೊಂಡಿರುವ ಶೇ 4ಕ್ಕಿಂತ ಹೆಚ್ಚು. ಹೀಗಾಗಿ, ಬಡ್ಡಿ ದರವನ್ನು ಕಡಿಮೆ ಮಾಡಿ, ಬೇಡಿಕೆ ಹೆಚ್ಚಿಸುವುದಕ್ಕೆ ಹೆಚ್ಚು ಅವಕಾಶಗಳು ಇದ್ದಂತಿಲ್ಲ. ಬಡ್ಡಿ ದರವು ಹೆಚ್ಚಿನ ಮಟ್ಟದಲ್ಲಿಯೇ ಉಳಿಯುವ ಸಾಧ್ಯತೆ ಇದೆ. ಆಗ ಸಾಲ ನೀಡಿಕೆ ಪ್ರಮಾಣ ಹೆಚ್ಚಾಗುವುದಕ್ಕೆ ಅವಕಾಶಗಳು ಕಡಿಮೆಯಾಗಿರುತ್ತವೆ. ಹೂಡಿಕೆಗಳು ಹಿಂದಿನ ವರ್ಷದಲ್ಲಿ ಏರಿಕೆ ಕಂಡಿದ್ದರೂ, ಅವು ಈ ವರ್ಷದಲ್ಲಿಯೂ ಅದೇ ಮಟ್ಟದಲ್ಲಿರುತ್ತವೆ ಎನ್ನಲಾಗದು. ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ಮಂದಗತಿ ಮತ್ತು ಬಿಗಿ ಹಣಕಾಸಿನ ನಿಲುವು ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು. ಮುಂಗಾರು ಮಳೆಯು ವಾಡಿಕೆಯಂತೆ ಸುರಿದರೆ ಗ್ರಾಮೀಣ ಪ್ರದೇಶಗಳಲ್ಲಿ ಚಟುವಟಿಕೆಗಳು ಗರಿಗೆದರುತ್ತವೆ. ಆದರೆ, ಮುಂಗಾರಿನಲ್ಲಿ ವ್ಯತ್ಯಾಸವಾದರೆ ಅದರ ಅಡ್ಡಪರಿಣಾಮಗಳು ಆರ್ಥಿಕತೆಗೆ ಪೆಟ್ಟು ಕೊಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT